More

    ಲಾಕ್‌ಡೌನ್ ಜಾರಿಗೊಳಿಸುವಲ್ಲಿ ಪೊಲೀಸರಿಗೆ ಹಿನ್ನಡೆ

    ಗುಬ್ಬಿ: ಲಾಕ್‌ಡೌನ್ ಜಾರಿಗೊಳಿಸುವಲ್ಲಿ ಗುಬ್ಬಿ ತಾಲೂಕು ಪೊಲೀಸರ ಕಾರ್ಯಕ್ಕೆ ಹಿನ್ನಡೆಯಾಗಿದೆ. ಗ್ರಾಮೀಣ ಭಾಗದಲ್ಲಿ ಎಲ್ಲ ಅಂಗಡಿ ಮುಂಗಟ್ಟು ತೆರೆದು ಎಂದಿನಂತೆ ಜನಸಂದಣಿ ಕಾಣುತ್ತಿದೆ. ಕೂಡಲೇ ಜಿಲ್ಲಾಡಳಿತ ಕ್ರಮವಹಿಸಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದೆಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಎಚ್ಚರಿಕೆ ನೀಡಿದರು.

    ತಾಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ತಾಲೂಕುಮಟ್ಟದ ಅಧಿಕಾರಿಗಳ ತುರ್ತುಸಭೆಯಲ್ಲಿ ಮಾತನಾಡಿದ ಅವರು, ನಿತ್ಯ ನಾನೇ ಖುದ್ದು ಗಮನಿಸಿದ್ದೇನೆ. ಲಾಕ್‌ಡೌನ್ ಬಗ್ಗೆ ಸಾರ್ವಜನಿಕರಲ್ಲಿ ಭಯವಿಲ್ಲವಾಗಿದೆ. ಸಾಮಾಜಿಕ ಅಂತರ ಹಾಗೂ ಕರೊನಾ ಭೀತಿ ಇಲ್ಲವಾಗಿದೆ. ಎಲ್ಲ ವಾಹನಗಳು ಓಡಾಡುತ್ತಿರುವುದು ಕಂಡರೆ ಪೊಲೀಸ್ ಇಲಾಖೆ ವೈಲ್ಯ ಎದ್ದುಕಾಣುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ನಿಟ್ಟೂರಿನಲ್ಲಿ ಟೀ ಅಂಗಡಿಗಳು ತೆಗೆದಿವೆ. ಕೊಂಡ್ಲಿ, ದೊಡ್ಡಗುಣಿ, ಕಳ್ಳಿಪಾಳ್ಯ ಹೀಗೆ ಹೆದ್ದಾರಿ ಬದಿಯ ಗ್ರಾಮಗಳಲ್ಲಿ ಜಾಗೃತಿ ಕಾಣುತ್ತಿಲ್ಲ. ಸಾರ್ವಜನಿಕರಲ್ಲಿ ಪೊಲೀಸರ ಭಯವಂತೂ ಇಲ್ಲವೇ ಇಲ್ಲ. ಸುಮ್ಮನೇ ಊರು ಸುತ್ತಲು ಬರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು, ಜೂಜಾಟ, ಮದ್ಯ ಮಾರಾಟದ ವಿರುದ್ಧ ಸಾಕಷ್ಟು ದೂರುಗಳಿವೆ. ಈ ಬಗ್ಗೆ ಪೊಲೀಸ್ ಮತ್ತು ಅಬಕಾರಿ ಇಲಾಖೆ ಕ್ರಮ
    ವಹಿಸುವಂತೆ ತಾಕೀತು ಮಾಡಿದರು. ಕೃಷಿ ಪರಿಕರ, ಪಂಪ್, ಮೋಟಾರ್ ಸಂಬಂಧಿಸಿದಂತೆ ವಿದ್ಯುತ್ ಉಪಕರಣ ಖರೀದಿಗೆ ಅವಕಾಶ ಮಾಡಿಕೊಡಬೇಕು. ಆದರೆ ಅಲ್ಲಿಯೂ ಸಾಮಾಜಿಕ ಅಂತರ ಕಾಪಾಡಬೇಕು. ರೈತರಿಗೆ ವಸ್ತುಗಳು ನೀಡಿದ ಬಳಿಕ ಅಂಗಡಿ ಮುಚ್ಚಿಸುವಂತೆ ಸಚಿವರು ಸೂಚಿಸಿದರು. ತೋಟಗಾರಿಕೆ ಇಲಾಖೆ ರೈತರು ಬೆಳೆದ ತರಕಾರಿ, ಹಣ್ಣು ಖರೀದಿಸುವ ವ್ಯವಸ್ಥೆ ಮಾಡಬೇಕು. ಇಲ್ಲವೆ
    ವ್ಯಾಪಾರಸ್ಥರನ್ನು ಸಂಪರ್ಕಿಸುವಂತಹ ಕೆಲಸವನ್ನಾದರೂ ಮಾಡುವಂತೆ ಸಚಿವರು ಸಲಹೆ ನೀಡಿದರು.

    ಊಟದ ವ್ಯವಸ್ಥೆ ಮಾಡಿ: ಎತ್ತಿನಹೊಳೆ ಯೋಜನೆಯ ಕಾರ್ಮಿಕರು ಸೇರಿ ಇನ್ನಿತರ ಕಾರ್ಖಾನೆಯ ಕಾರ್ಮಿಕರಿಗೆ ವಸತಿ, ಆಹಾರ ಪೊರೈಕೆ, ನಿರ್ಗತಿಕರಿಗೆ ಊಟದ ವ್ಯವಸ್ಥೆಯಲ್ಲಿ ಲೋಪವಾಗಬಾರದು, ಬಿಪಿಎಲ್ ಕಾರ್ಡ್ ಇಲ್ಲವದರನ್ನು ಗುರುತಿಸಿ ಪಡಿತರ ವಿತರಣೆ ಮಾಡುವಂತೆ ತಾಲೂಕು ಆಡಳಿತಕ್ಕೆ ಸಚಿವರು ಸೂಚಿಸಿದರು.

    ಕ್ವಾರಂಟೈನ್‌ನಲ್ಲಿರುವವರ ಬಗ್ಗೆ ನಿಗಾ ವಹಿಸಿ: ತಾಲೂಕಿನಲ್ಲಿ 350ಕ್ಕೂ ಹೆಚ್ಚು ಮಂದಿ ಜ್ವರದಿಂದ ಬಳಲುತ್ತಿದ್ದರು. ಆದರೆ ಎಲ್ಲಿಯೂ ಕೋವಿಡ್ 19 ಶಂಕಿತರು ಪತ್ತೆಯಾಗಿಲ್ಲ, ಆದರೂ ಶಿರಾ ತಾಲೂಕಿನ ಗಡಿಭಾಗವಾದ ಕಾರಣ ಅವಶ್ಯ ಕ್ರಮವಹಿಸಬೇಕಿದೆ. ಕ್ವಾರಂಟೈನ್‌ನಲ್ಲಿರುವವರ ಬಗ್ಗೆ ನಿಗಾವಹಿಸಬೇಕು. ಅವರ ಸಂಪರ್ಕದಲ್ಲಿರುವವರನ್ನೂ ಆರೋಗ್ಯ ತಪಾಸಣೆ ಮಾಡಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಾಧುಸ್ವಾಮಿ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts