More

    ರೈತರಿಗೆ ಲೋಡ್ ಶೆಡ್ಡಿಂಗ್ ಬಿಸಿ

    ಹುಣಸೂರು: ತಾಲೂಕಿನಾದ್ಯಂತ ಕಳೆದೊಂದು ವಾರದಿಂದ ರೈತರ ಪಂಪ್‌ಸೆಟ್‌ಗಳಿಗೆ ಅನಿಯಮಿತ ಲೋಡ್ ಶೆಡ್ಡಿಂಗ್ ಆರಂಭಗೊಂಡಿದ್ದು, ರೈತರು ಬೆಳೆ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.

    ಭೀಕರ ಬರಗಾಲದಿಂದ ಜನ ಜಾನುವಾರುಗಳಿಗೆ ನೀರಿನ ಸಮಸ್ಯೆ ಎದುರಾಗಿರುವ ಈ ಸಂದರ್ಭದಲ್ಲಿ ಇದ್ದ ನೀರನ್ನು ಬಳಸಿಕೊಂಡು ಕೃಷಿ ಕಾರ್ಯ ಕೈಗೊಂಡಿರುವ ರೈತರಿಗೆ ಸೆಸ್ಕ್‌ನ ಈ ನೀತಿಯಿಂದಾಗಿ ‘ಬಾಣಲೆಯಿಂದ ಬೆಂಕಿಗೆ’ ಬಿದ್ದಂತಾಗಿದೆ.

    ರೈತರ ಪಂಪ್ ಸೆಟ್‌ಗಳಿಗೆ ದಿನಕ್ಕೆ 7 ಗಂಟೆ ವಿದ್ಯುತ್ ನೀಡುವುದಾಗಿ ಸರ್ಕಾರ ಭರವಸೆ ನೀಡಿದೆ. ಹಗಲಿನಲ್ಲಿ 4 ಗಂಟೆ ಮತ್ತು ರಾತ್ರಿ ವೇಳೆ 3 ಗಂಟೆ ವಿದ್ಯುತ್ ಪೂರೈಕೆ ಮಾಡುವುದಾಗಿ ಸರ್ಕಾರ ತಿಳಿಸಿದೆ. ಆದರೆ ಕಳೆದೊಂದು ತಿಂಗಳಿನಿಂದ ರೈತರ ಪಂಪ್‌ಸೆಟ್‌ಗಳಿಗೆ ಸರ್ಕಾರ ಘೋಷಿಸಿರುವ ಅವಧಿಯ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಅದರಲ್ಲೂ ವಿದ್ಯುತ್ ಯಾವಾಗ ಬರುತ್ತದೆ ಎಂದು ದಿನವಿಡೀ ರೈತರು ಜಮೀನಿನಲ್ಲೇ ಕಾಲ ಕಳೆಯುವ ಪರಿಸ್ಥಿತಿ ಎದುರಾಗಿದೆ. ಇದೀಗ ಕಳೆದೊಂದು ವಾರದಿಂದ ದಿನಕ್ಕೆ ಒಂದೂವರೆಯಿಂದ ಎರಡು ಗಂಟೆ ಮಾತ್ರ ವಿದ್ಯುತ್ ಪೂರೈಸಲಾಗುತ್ತಿದೆ. ಕೆಲವು ಕಡೆಗಳಲ್ಲಿ ಕಳೆದ ಮೂರು ದಿನಗಳಿಂದ ವಿದ್ಯುತ್ ಪೂರೈಕೆಯೇ ಆಗಿಲ್ಲವೆಂದು ರೈತರು ದೂರುತ್ತಿದ್ದಾರೆ.

    ಏನೇನು ಬೆಳೆದಿದ್ದಾರೆ?: ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆ ತಂಬಾಕು ಕೃಷಿಕಾರ್ಯ ಈಗಾಗಲೇ ಪೂರ್ಣಗೊಂಡು ಹರಾಜು ಮಾರುಕಟ್ಟೆಯೂ ಕಾರ್ಯಾರಂಭವಾಗಿದೆ. ತಂಬಾಕಿನ ನಂತರ ರೈತರು ಶುಂಠಿ, ಮುಸುಕಿನ ಜೋಳ, ರಾಗಿ, ಅವರೆ, ಅಲಸಂದೆ ಹಾಕಿದ್ದಾರೆ. ಬಿಳಿಕೆರೆ ಹೋಬಳಿ ವ್ಯಾಪ್ತಿಯಲ್ಲಿ ಹೂವು ಮತ್ತು ತರಕಾರಿ ಹೆಚ್ಚಾಗಿ ಬೆಳೆಯುತ್ತಾರೆ. ತಾಲೂಕಿನಲ್ಲಿ 7450 ಹೆಕ್ಟೇರ್ ಪ್ರದೇಶದಲ್ಲಿ(ಶೇ.67,7) ಬಿತ್ತನೆ ಕಾರ್ಯ ನಡೆದಿದೆ. ಈವರೆಗೆ 845 ಕ್ವಿಂಟಾಲ್ ಮುಸುಕಿನ ಜೋಳ ಮತ್ತು ದ್ವಿದಳಧಾನ್ಯಗಳ ದೃಢೀಕೃತ ಬಿತ್ತನೆಬೀಜಗಳು ಸರಬರಾಜಾಗಿದ್ದು, ರೈತ ಸಂಪರ್ಕ ಕೇಂದ್ರಗಳ ಮೂಲಕ 772.24 ಕ್ವಿಂಟಾಲ್ ಬಿತ್ತನೆ ಬೀಜಗಳನ್ನು 15,964 ರೈತರಿಗೆ ಸರಬರಾಜು ಮಾಡಲಾಗಿದೆ.

    ತಾಲೂಕಿನಲ್ಲಿ ಶೇ.19ರಷ್ಟು ಮಳೆ ಕೊರತೆಯಿದ್ದು, ಕೆರೆಕಟ್ಟೆಗಳು ಬಹುತೇಕ ಬರಿದಾಗಿವೆೆ. ಪ್ರಸ್ತುತ ಬೋರ್‌ವೆಲ್‌ಗಳನ್ನು ಬಳಸಿಕೊಂಡು ಅಲ್ಪಸ್ವಲ್ಪ ಪ್ರಮಾಣದ ಬೆಳೆಯನ್ನಾದರೂ ಬೆಳೆಯೋಣವೆಂದುಕೊಂಡಿರುವ ರೈತರಿಗೆ ಸರ್ಕಾರದ ವಿದ್ಯುತ್ ಪೂರೈಕೆ ನೀತಿ ‘ಮರಣಶಾಸನ’ವನ್ನೇ ಬರೆಯುತ್ತಿದೆ ಎಂದು ಅನ್ನದಾತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

    ಏರಿದ ತಾಪಮಾನ, ಬರಿದಾದ ನೀರಿನ ಒಡಲು: ರೈತರ ಪಂಪ್‌ಸೆಟ್‌ಗಳಿಗೆ ಅನಿಯಮಿತ ಲೋಡ್ ಶೆಡ್ಡಿಂಗ್ ಮಾಡಲು ಮಳೆ ಕೊರತೆಯೇ ಪ್ರಮುಖ ಕಾರಣವಾಗಿದೆ. ರಾಜ್ಯದ ಬಹುತೇಕ ಜಲಾಶಯಗಳಲ್ಲಿ ನೀರಿನ ಅಭಾವದ ಜತೆಗೆ ಏರಿದ ತಾಪಮಾನದಿಂದ ವಿದ್ಯುತ್ ನಿಗಮ ಕಂಗಲಾಗಿದೆ. ಮೈಸೂರು ಜಿಲ್ಲೆಯಲ್ಲೇ ಅತಿಹೆಚ್ಚು ಪಂಪ್‌ಸೆಟ್ ಸಂಪರ್ಕ ಹೊಂದಿರುವ ತಾಲೂಕು ಹುಣಸೂರಾಗಿದ್ದು, ಹುಣಸೂರು ವಿಭಾಗದಲ್ಲಿ 17,200 ಪಂಪ್‌ಸೆಟ್‌ಗಳು ಮತ್ತು ಬಿಳಿಕೆರೆ ವಿಭಾಗದಲ್ಲಿ 8000 ಪಂಪ್‌ಸೆಟ್‌ಗಳು(ಒಟ್ಟು 25200) ಚಾಲ್ತಿಯಲ್ಲಿವೆ. ಈ ಎಲ್ಲ ಪಂಪ್‌ಸೆಟ್‌ಗಳಿಗೆ ದಿನಂಪ್ರತಿ 7 ಗಂಟೆಗಳ ವಿದ್ಯುತ್ ಪೂರೈಕೆ ಕಷ್ಟಸಾಧ್ಯವಾಗಿದೆ ಎಂದು ನಿಗಮದ ಹಿರಿಯ ಅಧಿಕಾರಿಗಳು ತಿಳಿಸುತ್ತಾರೆ.

    ಒಣಗುತ್ತಿವೆ ಬೆಳೆಗಳು: ಕಳೆದೊಂದು ವಾರದಿಂದ ಸತತವಾಗಿ ತಾಲೂಕಿನ ಕಸಬಾ, ಗಾವಡಗೆರೆ ಮುಂತಾದ ಹೋಬಳಿ ವ್ಯಾಪ್ತಿಯಲ್ಲಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆಯಾಗಿಲ್ಲ. ಇನ್ನೊಂದು ವಾರ ಇದೇ ರೀತಿ ಮುಂದುವರಿದರೆ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ಶುಂಠಿ ಸಂಪೂರ್ಣ ಒಣಗಲಿದೆ. ‘ಬಿಟ್ಟಿ ಭಾಗ್ಯ’ಗಳನ್ನು ಕೊಟ್ಟ ರಾಜ್ಯ ಸರ್ಕಾರ ಇದೀಗ ‘ರೈತರ ಬದುಕಿಗೆ ಕೊಳ್ಳಿ ಇಡುವ ಗ್ಯಾರಂಟಿ ನೀಡುತ್ತಿದೆ’ ಎಂದು ಸೋಮನಹಳ್ಳಿಯ ಯುವರೈತ ಬಾಬು ಆಕ್ರೋಶ ವ್ಯಕ್ತಪಡಿಸುತ್ತಾರೆ.

    ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದು ನಿಜ. ವಿದ್ಯುತ್ ಉತ್ಪಾದನೆಯಲ್ಲಿನ ಇಳಿಕೆ ಮತ್ತು ಬೇಡಿಕೆಯಲ್ಲಿನ ಏರಿಕೆಯೇ ಮೂಲ ಕಾರಣವಾಗಿದ್ದು, ನಿಗಮದ ಹಿರಿಯ ಅಧಿಕಾರಿಗಳ ಸಭೆ ತುರ್ತಾಗಿ ನಡೆಯಲಿದೆ. ಸಮಸ್ಯೆಗೆ ಶೀಘ್ರ ಪರಿಹಾರ ದೊರಕಲಿದೆ. ರೈತರು ಸಹಕರಿಸಬೇಕು.
    ಸಿದ್ದಪ್ಪ, ಎಇಇ, ಸೆಸ್ಕ್, ಹುಣಸೂರು

    ಇದ್ದಕ್ಕಿದ್ದಂತೆ ಅನಿಯಮಿತ ಲೋಡ್‌ಶೆಡ್ಡಿಂಗ್ ಮಾಡುವ ಮೂಲಕ ಸೆಸ್ಕ್ ನಿಗಮ ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ. ಸಾಲ ಮಾಡಿ ಕಷ್ಟಪಟ್ಟು ಬೆಳೆದ ಬೆಳೆಗಳು ನೀರಿಲ್ಲದೆ ಒಣಗಿ ಹೋಗುತ್ತಿದ್ದು, ರೈತರು ಆತ್ಮಹತ್ಯೆ ದಾರಿ ತುಳಿದರೆ ಯಾರು ಹೊಣೆ? ಬಿಟ್ಟಿ ಗ್ಯಾರಂಟಿ ಕೊಟ್ಟು ತಮ್ಮ ಕೆಲಸವಾಯಿತು ಎಂದು ಕುಳಿತಿರುವ ಸರ್ಕಾರ, ಸಮಸ್ಯೆ ಪರಿಹರಿಸದಿದ್ದರೆ ರೈತರ ಆಕ್ರೋಶದ ಬಿಸಿ ಎದುರಿಸಬೇಕಾದೀತು.
    ಸತ್ಯಪ್ಪ, ಅಧ್ಯಕ್ಷ, ಸತ್ಯ ಎಂಎಎಸ್ ಫೌಂಡೇಷನ್, ಹುಣಸೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts