More

    ಜಾನುವಾರು ಕಳ್ಳಸಾಗಾಟ ವ್ಯಾಪಕ

    ಶಿರಸಿ: ಜಿಲ್ಲಾದ್ಯಂತ ಅಕ್ರಮವಾಗಿ ಜಾನುವಾರು ಸಾಗಾಟ ಪ್ರಕರಣಗಳು ಹೆಚ್ಚಾಗುತ್ತಿದೆ. ಜಾನುವಾರು ಕಳ್ಳರ ಜಾಲ ಬೇಧಿಸುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.
    ಜಿಲ್ಲೆಯಲ್ಲಿ ಈ ವರ್ಷ 30ಕ್ಕೂ ಹೆಚ್ಚು ಜಾನುವಾರು ಅಕ್ರಮ ಸಾಗಾಟ, ಕಳ್ಳತನ, ಮಾಂಸ ಸಾಗಾಟ ಪ್ರಕರಣಗಳು ದಾಖಲಾಗಿವೆ. ಅದರಲ್ಲೂ ಲಾಕ್​ಡೌನ್ ಅವಧಿಯಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಜಾನುವಾರು ಕಳ್ಳತನ ಪ್ರಕರಣಗಳು ಹೆಚ್ಚು ದಾಖಲಾಗಿದೆ. ಬಿಡಾಡಿ ದನಗಳನ್ನು ಕದ್ದು ಸಾಗಾಟ ಮಾಡುವುದು ಕಳೆದ ಕೆಲ ವರ್ಷಗಳಿಂದ ಜಾಸ್ತಿಯಾಗಿದೆ. ಕರೊನಾ ನಡುವೆ ಗೋ ಕಳ್ಳರು ದನಗಳನ್ನು ಕದ್ದು ಕಂಟೈನರ್, ಕಾರ್, ಜೀಪ್​ಗಳಲ್ಲಿ ಸಾಗಾಟ ಮಾಡುತ್ತಿದ್ದಾರೆ. ತಡ ರಾತ್ರಿ ಜಾನುವಾರುಗಳ ಕಳ್ಳತನ, ಅಕ್ರಮ ಸಾಗಾಟ ನಡೆಯುತ್ತಿರುವ ಕಾರಣ ಪೊಲೀಸರೂ ಇಂಥ ಪ್ರಕರಣ ತನಿಖೆಯಿಂದ ಹೈರಾಣಾಗುತ್ತಿದ್ದಾರೆ.
    ವ್ಯವಸ್ಥಿತ ಜಾಲ: ಜಾನುವಾರುಗಳನ್ನು ಕಾಡುಗಳಲ್ಲಿ ಹತ್ಯೆ ಮಾಡಲಾಗುತ್ತದೆ. ಪಾರ್ಸೆಲ್​ಗಳ ರೂಪದಲ್ಲಿ ಪ್ಯಾಕ್ ಮಾಡಿ ದನದ ಮಾಂಸವನ್ನು ಬಸ್​ಗಳು, ಮೀನಿನ ಲಾರಿಯ ಮಧ್ಯದಲ್ಲಿ, ಸ್ಕಾರ್ಪಿಯೊದಲ್ಲಿ ಸಾಗಾಟ ಮಾಡುವುದು ಇತ್ತೀಚಿನ ವರ್ಷಗಳಲ್ಲಿ ಬೆಳಕಿಗೆ ಬಂದಿದೆ. ವಾರದಿಂದೀಚೆ ಶಿರಸಿಯಲ್ಲಿ ಮೂರ್ನಾಲ್ಕು ಬಿಡಾಡಿ ದನಗಳನ್ನು ಒಮ್ಮೆಲೇ ಹಿಡಿದು ವಾಹನಕ್ಕೆ ತುಂಬಿ ಕೊಂಡೊಯ್ದ ಘಟನೆ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ. ತನ್ನ ಮನೆಯ ಜಾನುವಾರನ್ನು ಕಳೆದುಕೊಂಡ ಕೃಷಿಕ ಪೊಲೀಸ್ ಠಾಣೆಯ ಮೇಟ್ಟಿಲೇರಿ ಕೋರ್ಟ್ ಕಚೇರಿ ಅಲೆದಾಡಲು ಹಿಂಜರಿಯುತ್ತಾನೆ. ಹೀಗೆ ಸುಮ್ಮನಿದ್ದ 50ಕ್ಕೂ ಹೆಚ್ಚು ಪ್ರಕರಣಗಳಿವೆ. ಆದರೆ, ಬಿಡಾಡಿ ದನಗಳ ಲೆಕ್ಕ ಯಾರಿಗೂ ಇರುವುದಿಲ್ಲ. ಅಂತಹ ದನಗಳನ್ನು ಕದ್ದು ಹತ್ಯೆ ಮಾಡುವವರ ತಂಡ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದೆ.
    ಮುಖ, ಮೈ ಮುಚ್ಚಿಕೊಂಡು, ನಂಬರ್ ಇಲ್ಲದ ವಾಹನದಲ್ಲಿ ಜಾನುವಾರು ಸಾಗಿಸುವ 30ಕ್ಕೂ ಹೆಚ್ಚು ಪ್ರಕರಣ ಜಿಲ್ಲೆಯಲ್ಲಿ ನಡೆದಿದೆ. ಕೆಲವು ಕಡೆ ಈ ಘಟನೆ ದೃಶ್ಯ ಸಿಸಿ ಟಿವಿಗಳಲ್ಲಿ ದಾಖಲಾಗಿದೆ. ಹೀಗಾಗಿ ಇಂಥ ಪ್ರಕರಣ ಪತ್ತೆ ಹಚ್ಚುವುದು ಪೊಲೀಸ್ ಇಲಾಖೆಗೆ ಕಷ್ಟವಾಗಿದೆ.
    ದಲ್ಲಾಳಿಗಳ ಸಾಥ್: ಜಿಲ್ಲೆಯ ಮುಂಡಗೋಡ, ಶಿರಸಿ, ಯಲ್ಲಾಪುರ, ಭಟ್ಕಳ, ಕುಮಟಾ ಸೇರಿದಂತೆ ಬಹುತೇಕ ತಾಲೂಕುಗಳಲ್ಲಿ ಜಾನುವಾರುಗಳನ್ನು ಕದ್ದು ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುವ ಜಾಲ ಕಾರ್ಯ ನಿರ್ವಹಿಸುತ್ತಿದೆ. ದನದ ಮಾಂಸವನ್ನು ಹಾನಗಲ್, ಹಾವೇರಿ, ಮಂಗಳೂರು ಭಾಗಕ್ಕೆ ಹೆಚ್ಚಾಗಿ ರವಾನೆ ಮಾಡಲಾಗುತ್ತಿದೆ. ಇದರ ಜತೆ, ಜಾನುವಾರುಗಳನ್ನು ಮನೆಯವರ ಬಳಿ ಕೊಂಡುಕೊಂಡು ಹಾಗೂ ಕೆಲವು ಗೋವುಗಳನ್ನು ಕದ್ದು ನಿಗದಿತ ಸ್ಥಳದಲ್ಲಿ ಒಟ್ಟು ಸೇರಿಸಿ ಕಂಟೈನರ್, ಲಾರಿಗಳಲ್ಲಿ ಸಾಗಿಸುವ ಕೆಲಸವನ್ನು ಕೆಲ ದಲ್ಲಾಳಿಗಳು ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಇಂಥ ದಲ್ಲಾಳಿಗಳ ವಿರುದ್ಧ ಜಿಲ್ಲೆಯ ಅನೇಕ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.
    ಕಠಿಣ ಶಿಕ್ಷೆ ಇಲ್ಲ: ಅಕ್ರಮ ಗೋ ಸಾಗಾಟ ಪ್ರಕರಣಗಳು ಹೆಚ್ಚುತ್ತಿದ್ದಂತೆ ಜಿಲ್ಲೆಯ ಗಡಿ ಭಾಗಗಳಲ್ಲಿ ಮತ್ತು ತೀರ ಗ್ರಾಮೀಣ ಪ್ರದೇಶದಲ್ಲಿ ಪೊಲೀಸ್ ಇಲಾಖೆ ವತಿಯಿಂದ ತಪಾಸಣೆ ಬಿಗಿಗೊಳಿಸಲಾಗಿದೆ. ಆದರೂ ಕೆಲವು ಕಡೆ ದಲ್ಲಾಳಿಗಳ ಮತ್ತು ಚೆಕ್​ಪೋಸ್ಟ್​ನ ಬಗ್ಗೆ ಮಾಹಿತಿ ಅರಿತವರ ಸಹಕಾರದಿಂದ ಪೊಲೀಸರ ಕಣ್ಣು ತಪ್ಪಿಸಿ ಜಾನುವಾರುಗಳ ಸಾಗಾಟ ನಡೆದಿದೆ. ಜಾನುವಾರು ಕಳ್ಳತನ ಅಥವಾ ಅಕ್ರಮ ಸಾಗಾಟ ಮಾಡುವವರಿಗೆ ಇನ್ನು ಕೂಡ ಯಾವುದೆ ಕಠಿಣ ಶಿಕ್ಷೆ ವಿಧಿಸದಿರುವುದು ಇಂತಹ ಪ್ರಕರಣಗಳು ದಿನ ಕಳೆದಂತೆ ಏರಿಕೆಯಾಗುತ್ತಿವೆ. ಈ ಆರೋಪಿಗಳಿಗೆ ಸ್ಟೇಷನ್ ಬೇಲ್ ನೀಡಲಾಗುತ್ತದೆ. ಇವರು ದನಗಳನ್ನು ಕೋರ್ಟ್​ನಲ್ಲಿ ಬಿಡಿಸಿಕೊಂಡು ಮಾಂಸಕ್ಕಾಗಿ ಉಪಯೋಗಿಸುತ್ತಾರೆ. ಹೀಗಾಗಿ ಆರೋಪಿಗಳು ಇಂದಿಗೂ ರಾಜಾರೋಷವಾಗಿ ಜಾನುವಾರು ಕಳ್ಳತನದಲ್ಲಿ ಮುಂದುವರಿಯುತ್ತಿದ್ದಾರೆ ಎಂಬುದು ಸಾರ್ವಜನಿಕರ ಅಭಿಪ್ರಾಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts