More

    ಸಿದ್ಧತೆ ಹಿಂದಕ್ಕೆ.. ಅಕ್ಷರ ಜಾತ್ರೆ ಮುಂದಕ್ಕೆ..

    ಹಾವೇರಿ: ಹಾವೇರಿಯಲ್ಲಿ ಫೆ. 26ರಿಂದ 3 ದಿನ ಕಾಲ ನಡೆಸಲು ಉದ್ದೇಶಿಸಿದ್ದ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಿರೀಕ್ಷೆಯಂತೆ ಮುಂದೂಡಲಾಗಿದೆ. ಅಚ್ಚುಕಟ್ಟಾದ ಸಿದ್ಧತೆಯಾಗದೆ ಇರುವುದೇ ಅಕ್ಷರ ಜಾತ್ರೆಗೆ ತಾತ್ಕಾಲಿಕವಾಗಿ ಮುಂದೂಡಲು ಮೂಲ ಕಾರಣವಾಗಿದೆ.

    ಶುಕ್ರವಾರ ವಿಧಾನಸೌಧದಲ್ಲಿ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ, ಕೃಷಿ ಸಚಿವ ಬಿ.ಸಿ. ಪಾಟೀಲ, ತೋಟಗಾರಿಕೆ ಸಚಿವ ಆರ್. ಶಂಕರ, ಶಾಸಕ ನೆಹರು ಓಲೇಕಾರ, ಕಸಾಪ ಅಧ್ಯಕ್ಷ ಮನು ಬಳಿಗಾರ, ಕಸಾಪ ಜಿಲ್ಲಾ ಪದಾಧಿಕಾರಿಗಳು, ಎಡಿಸಿ ಅವರೊಂದಿಗೆ ಸಭೆ ನಡೆಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯ ನಂತರ ಸಚಿವ ಅರವಿಂದ ಲಿಂಬಾವಳಿ ಅವರು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಮಾ. 9ರಂದು ಮತ್ತೊಂದು ಸುತ್ತಿನ ಸಭೆ ನಡೆಸಿ ಸಮ್ಮೇಳನದ ದಿನಾಂಕ ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ.

    ಸಭೆಯಲ್ಲಿ ಸಮ್ಮೇಳನವನ್ನು ನಿಗದಿತ ದಿನಾಂಕಕ್ಕೆ ನಡೆಸಲು ಇರುವ ಸಾಧ್ಯತೆಗಳ ಬಗೆಗೆ ರ್ಚಚಿಸಲಾಯಿತು. ಕಸಾಪ ಕೇಂದ್ರ ಕಾರ್ಯಕಾರಿ ಸಮಿತಿಯು ಡಿಸೆಂಬರ್​ನಲ್ಲಿಯೇ ಸಮ್ಮೇಳನಕ್ಕೆ ದಿನಾಂಕ ನಿಗದಿಗೊಳಿಸಿತ್ತು. ಆದರೆ ಕರೊನಾ ಮಾರ್ಗಸೂಚಿಗಳ ಪಾಲನೆಯ ಹಿನ್ನೆಲೆಯಲ್ಲಿ ಲಕ್ಷಾಂತರ ಜನರನ್ನು ಸೇರಿಸಿ ನಡೆಸುವ ಸಮ್ಮೇಳನಕ್ಕೆ ಅವಕಾಶ ಸಿಗುವ ಕುರಿತು ಅನುಮಾನ ಎದ್ದಿತ್ತು. ಆದರೂ ಜಿಲ್ಲಾ ಉಸ್ತುವಾರಿ ಸಚಿವರು 2 ಸಭೆ ನಡೆಸಿ ಸಮ್ಮೇಳನಕ್ಕೆ ಅಗತ್ಯವಿರುವ ಖರ್ಚು ವೆಚ್ಚವಿಲ್ಲದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸೂಚಿಸಿದ್ದರು. ಅದರಂತೆ ಕಸಾಪ ಪದಾಧಿಕಾರಿಗಳು, ಜಿಲ್ಲಾಡಳಿತದಿಂದ ಪಿಬಿ ರಸ್ತೆಯಲ್ಲಿರುವ ಸುವರ್ಣಕಾರರ ಸಂಘದ ಖಾಲಿ ನಿವೇಶನ ಹಾಗೂ ರೈತರ ಜಮೀನಿನಲ್ಲಿ ಸಮ್ಮೇಳನ ನಡೆಸಲು ಜಾಗೆ ಗುರುತಿಸಿದ್ದರು. ಇದರ ಜೊತೆಗೆ ಸಮ್ಮೇಳನ ಆಯೋಜನೆಗೆ ಅಗತ್ಯವಿರುವ 19 ಸಮಿತಿಗಳನ್ನು ರಚಿಸಿತ್ತು. ಅದರಲ್ಲಿ 17 ಸಮಿತಿಗಳು ಒಂದು ಸುತ್ತಿನ ಚರ್ಚೆಯನ್ನು ನಡೆಸಿ, ತಮ್ಮ ಸಮಿತಿಯ ಖರ್ಚು ವೆಚ್ಚದ ಅಂದಾಜು ವಿವರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದವು. ಇದರ ಹೊರತು ಭೌತಿಕವಾದ ಯಾವ ಸಿದ್ಧತೆಗಳನ್ನು ಜಿಲ್ಲಾಡಳಿತ ಹಾಗೂ ಕಸಾಪ ಈವರೆಗೂ ಕೈಗೊಂಡಿರಲಿಲ್ಲ.

    ಕೋವಿಡ್ ಮಾರ್ಗಸೂಚಿ ಗೊಂದಲ: ಸಾಹಿತ್ಯ ಸಮ್ಮೇಳನಕ್ಕೆ ಇಂತಿಷ್ಟೇ ಜನರನ್ನು ಸೇರಿಸಬೇಕು ಎಂಬ ನಿಯಮ ಮಾಡುವುದು ಸಾಧ್ಯವಿಲ್ಲ. ಪ್ರತಿ ಸಮ್ಮೇಳನದಲ್ಲಿಯೂ ಕನಿಷ್ಠ 1ಲಕ್ಷ ಜನ ಸೇರುವುದು ವಾಡಿಕೆ. ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಕನ್ನಡದ ಮನಸ್ಸುಗಳಿಗೆ ಕರೊನಾ ನೆಪದಲ್ಲಿ ಬೇಲಿ ಹಾಕಲು ಸಾಧ್ಯವಿಲ್ಲ. ಹೀಗಾಗಿ ಸರ್ಕಾರ ಸಮ್ಮೇಳನಕ್ಕೆ ಕೋವಿಡ್ ಮಾರ್ಗಸೂಚಿಯಲ್ಲಿ ಬದಲಾವಣೆ ತರುವ ನಿರೀಕ್ಷೆ ಕಸಾಪ ಪದಾಧಿಕಾರಿಗಳಿಗಿತ್ತು. ಹೀಗಾಗಿ ಫೆಬ್ರುವರಿಯಲ್ಲಿ ಬಿಡುಗಡೆಗೊಳ್ಳುವ ಕೋವಿಡ್ ಮಾರ್ಗಸೂಚಿಯನ್ನು ಗಮನಿಸಿ ಮುಂದಿನ ಸಿದ್ಧತೆಗಳನ್ನು ನಡೆಸಲು ಜಿಲ್ಲಾ ಉಸ್ತುವಾರಿ ಸಚಿವರು ನಿರ್ಧರಿಸಿದ್ದರು. ಆದರೆ ಈ ಮಾರ್ಗಸೂಚಿಯಲ್ಲಿಯೂ 500ಕ್ಕಿಂತ ಹೆಚ್ಚು ಜನ ಸೇರಿ ಸಮಾವೇಶ ಮಾಡುವಂತಿಲ್ಲ ಎಂಬ ಸಂದೇಶ ಬಂದಿದ್ದು, ಸಮ್ಮೇಳನ ಮುಂದೂಡಲು ಪ್ರಮುಖ ಕಾರಣವಾಗಿದೆ. ಇದರ ಜೊತೆಗೆ ಸಮ್ಮೇಳನದ ಮುಖ್ಯ ವೇದಿಕೆ ನಿರ್ವಣದ ಜಾಗೆ ಸಮತಟ್ಟು ಹಾಗೂ ಸ್ವಚ್ಛತೆಯಂತಹ ಭೌತಿಕ ಸಿದ್ಧತೆಗೆ ಸರ್ಕಾರದಿಂದ ಈವರೆಗೂ ಯಾವುದೇ ಅನುದಾನ ಬಿಡುಗಡೆಗೊಳ್ಳದೇ ಇರುವುದು ಸಿದ್ಧತೆಯಲ್ಲಿ ಹಿಂದೆ ಬೀಳಲು ಕಾರಣವಾಗಿದೆ.

    ಸಭೆಗೆ ಸೀಮಿತವಾದ ಸಮಿತಿಗಳು: ಸಮ್ಮೇಳನ ಆಯೋಜನೆಗೆ ರಚಿಸಿದ 19 ಸಮಿತಿಗಳಲ್ಲಿ ಆರಂಭದಲ್ಲಿ 17 ಸಮಿತಿಗಳು ನಿಗದಿತ ದಿನಾಂಕಕ್ಕೆ ಸಮ್ಮೇಳನ ನಡೆಸಲು ಉತ್ಸುಕವಾಗಿದ್ದವು. ಅದರಂತೆ ಸಮಿತಿ ರಚನೆಯಾದ ಕೂಡಲೇ ಸಭೆಗಳನ್ನು ನಡೆಸಿ ಏನೇನು ಸಿದ್ಧತೆಗಳನ್ನು ಕೈಗೊಳ್ಳಬೇಕು. ಎಷ್ಟು ಅನುದಾನ ವೆಚ್ಚವಾಗಲಿದೆ ಎಂಬ ಅಂದಾಜು ಲೆಕ್ಕಾಚಾರವನ್ನು ಹಾಕಲಾಗಿತ್ತು. ಆದರೂ ಸರ್ಕಾರದಿಂದ ಅನುದಾನ ಬಿಡುಗಡೆಯ ಯಾವುದೇ ಸೂಚನೆ ಸಿಗದೆ ಇದ್ದರಿಂದ ಸಮಿತಿಗಳ ಅಧ್ಯಕ್ಷರು, ಸದಸ್ಯರು ಮತ್ತೊಂದು ಸುತ್ತಿನ ಸಭೆ ನಡೆಸಲು ನಿರಾಸಕ್ತಿ ತೋರಿದವು. ಸಭೆಗಳನ್ನು ನಡೆಸಿ ಬರೀ ಚರ್ಚೆ ನಡೆಸಿದರೆ ಪ್ರಯೋಜನವಿಲ್ಲ. ಟೀ, ಬಿಸ್ಕತ್ ಖರ್ಚು ಅಧಿಕಾರಿಗಳು ಸಮಿತಿ ಅಧ್ಯಕ್ಷರಿಗೆ ಬೀಳುತ್ತದೆ ಎಂದು ಯಾವ ಸಮಿತಿಗಳು 2ನೇ ಸುತ್ತಿನ ಸಭೆ ನಡೆಸಲು ಮುಂದಾಗಲೆ ಇಲ್ಲ.

    ಏಪ್ರಿಲ್​ನಲ್ಲಿ ಸಮ್ಮೇಳನ ಆಯೋಜನೆ?

    ಮಾರ್ಚ್ 9ರಂದು ಮತ್ತೊಂದು ಸುತ್ತಿನ ಸಭೆ ನಡೆಸಿ ಸಮ್ಮೇಳನ ದಿನಾಂಕ ನಿಗದಿಗೆ ಸಚಿವರು ತಿಳಿಸಿದ್ದು, ಅಷ್ಟರೊಳಗೆ ಸಮ್ಮೇಳನಕ್ಕೆ ಅನುದಾನ ಘೊಷಣೆಯಾದರೆ ಭೌತಿಕ ಸಿದ್ಧತೆಗಳು ಆರಂಭಗೊಳ್ಳಲಿವೆ. ಇಲ್ಲವಾದರೆ ಆ ಸಭೆಯಲ್ಲಿಯೂ ಕನಿಷ್ಟ 1ತಿಂಗಳ ಕಾಲಾವಕಾಶವಿಟ್ಟು ದಿನಾಂಕ ಘೊಷಣೆ ಅನಿವಾರ್ಯವಾಗಲಿದೆ. ಹೀಗಾಗಿ ಏಪ್ರಿಲ್ 2ನೇ ವಾರದಲ್ಲಿ ಸಮ್ಮೇಳನಕ್ಕೆ ದಿನಾಂಕ ಘೊಷಣೆಯಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಒಂದೊಮ್ಮೆ ಜಿಪಂ, ತಾಪಂ ಚುನಾವಣೆಗೆ ಆಯೋಗವೂ ಸಿದ್ಧತೆ ನಡೆಸಿದ್ದು, ನೀತಿ ಸಂಹಿತೆಯ ಗುಮ್ಮವೂ ಸಮ್ಮೇಳನಕ್ಕೆ ಕಾಡುವುದು ನಿಶ್ಚಿತವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts