More

    ಅಭ್ಯರ್ಥಿಗಳ ವಿರುದ್ಧದ ಬಾಕಿ ಇರುವ ಕ್ರಿಮಿನಲ್ ಕೇಸ್​ಗಳ ವಿವರವನ್ನು ವೆಬ್​ಸೈಟ್​ಗೆ ಅಪ್ಲೋಡ್ ಮಾಡಿ: ರಾಜಕೀಯ ಪಕ್ಷಗಳಿಗೆ ಸುಪ್ರೀಂ ಸೂಚನೆ

    ನವದೆಹಲಿ: ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ವಿರುದ್ಧ ಬಾಕಿ ಇರುವ ಕ್ರಿಮಿನಲ್ ಕೇಸ್​ಗಳ ಎಲ್ಲ ವಿವರಗಳನ್ನು ಆಯಾ ಪಕ್ಷಗಳು ತಮ್ಮ ವೆಬ್​ಸೈಟ್​ನಲ್ಲಿ ಅಪ್ಲೋಡ್​ ಮಾಡಬೇಕು. ಅದೇ ರೀತಿ, ಕ್ರಿಮಿನಲ್ ಕೇಸ್​ ಬಾಕಿ ಇರುವ ಆ ಅಭ್ಯರ್ಥಿಯನ್ನು ಚುನಾವಣಾ ಕಣಕ್ಕೆ ಇಳಿಸಿರುವುದಕ್ಕೆ ಸಕಾರಣವನ್ನೂ ಅಲ್ಲೇ ಪ್ರಕಟಿಸಬೇಕು ಎಂದು ಸುಪ್ರೀಂ ಕೋರ್ಟ್​ ಗುರುವಾರ ರಾಜಕೀಯ ಪಕ್ಷಗಳಿಗೆ ಸೂಚಿಸಿದೆ.

    ಅಶ್ವಿನಿ ಕುಮಾರ್ ಉಪಾಧ್ಯಾಯ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ರೋಹಿಂಟನ್​ ಫಾಲಿ ನಾರಿಮನ್ ಮತ್ತು ಎಸ್​. ರವೀಂದ್ರ ಭಟ್ ಅವರನ್ನು ಒಳಗೊಂಡ ದ್ವಿಸದಸ್ಯ ನ್ಯಾಯಪೀಠ ಈ ನಿರ್ದೇಶನ ನೀಡಿದ್ದು, ಕೇವಲ ಗೆಲ್ಲುವ ಅಭ್ಯರ್ಥಿ ಎಂಬ ಕಾರಣ ಮುಂದಿಟ್ಟು ಕ್ರಿಮಿನಲ್ ಕೇಸ್ ಬಾಕಿ ಇರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಸರಿಯಲ್ಲ. ಇದಕ್ಕೆ ಸಕಾರಣ ಎಂದರೆ, ಸೂಕ್ತ ಆಧಾರದೊಂದಿಗೆ ಅವರ ಅರ್ಹತೆಯನ್ನು ಮತ್ತು ಧನಾತ್ಮಕ ಅಂಶಗಳನ್ನು ಒಳಗೊಂಡ ವಿವರಣೆಯನ್ನು ಅಂಥವರನ್ನು ಆಯ್ಕೆ ಮಾಡಿದ ಪಕ್ಷ ತನ್ನ ವೆಬ್​ಸೈಟ್​ನಲ್ಲಿ ಪ್ರಕಟಿಸಬೇಕು. ಅಲ್ಲದೆ ಸಾಮಾಜಿಕ ಜಾಲತಾಣ, ಟಿವಿ ಹಾಗೂ ಪತ್ರಿಕೆಗಳಲ್ಲೂ ಇದು ಪ್ರಸಾರವಾಗುವಂತೆ ನೋಡಿಕೊಳ್ಳಬೇಕು ಎಂದು ವಿವರಿಸಿದೆ.

    ಚುನಾವಣೆಯಲ್ಲಿ ಪಾರದರ್ಶಕತೆ ಹಾಗೂ ಹೊಣೆಗಾರಿಕೆಯನ್ನು ತರುವ ಹಿನ್ನೆಲೆಯಲ್ಲಿ ಈ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ಅಪರಾಧ ಚಟುವಟಿಕೆಗಳ ಹಿನ್ನೆಲೆ ಹೊಂದಿದ್ದರೇ ಮಾಹಿತಿಯನ್ನು ಒಂದು ಸ್ಥಳೀಯ, ಒಂದು ರಾಷ್ಟ್ರೀಯ ಪತ್ರಿಕೆ, ಫೇಸ್​ಬುಕ್​, ಟ್ವಿಟರ್​ಗಳಲ್ಲಿ ನಾಮಪತ್ರ ಸಲ್ಲಿಸಿದ 48 ಗಂಟೆಯಲ್ಲಿ ಮಾಹಿತಿ ಪ್ರಕಟಿಸಬೇಕು. ಅಲ್ಲದೆ ಅವರ ಅಪರಾಧದ ಸ್ವರೂಪ ಹಾಗೂ ಕೇಲವ ಆರೋಪ ಮಾತ್ರ ಹೊರಿಸಲಾಗಿದೆಯೇ ಎಂಬುದನ್ನು ಕೂಡ ಪ್ರಕಟಿಸಬೇಕು ಎಂದು ಕೋರ್ಟ್​ ಸೂಚಿಸಿದೆ.

    ಕ್ರಿಮಿನಲ್​ ಹಿನ್ನೆಲೆ ಹೊಂದಿರುವ ಅಭ್ಯರ್ಥಿಗಳ ಮಾಹಿತಿಯನ್ನು ಯಾವ ಪತ್ರಿಕೆ ಹಾಗೂ ಸುದ್ದಿವಾಹಿನಿಗಳಲ್ಲಿ ಪ್ರಕಟಿಸಬೇಕು ಎನ್ನುವ ಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿಲ್ಲ. ಈ ಲಾಭವನ್ನು ರಾಜಕೀಯ ಪಕ್ಷಗಳು ಬಳಸಿಕೊಳ್ಳುತ್ತಿವೆ. ಕೇವಲ ಜನಪ್ರಿಯ ಅಲ್ಲದ ಪತ್ರಿಕೆ ಹಾಗೂ ವಾಹಿನಿಗಳಲ್ಲಿ ಮಾತ್ರ ಮಾಹಿತಿ ಪ್ರಕಟಿಸಿ ತಪ್ಪಿಸಿಕೊಳ್ಳುವ ಅಪಾಯ ಇದೆ. ಹೀಗಾಗಿ ಯಾವ ಪತ್ರಿಕೆ ಹಾಗೂ ವಾಹಿನಿಗಳಲ್ಲಿ ಮಾಹಿತಿ ನೀಡಬೇಕು ಎನ್ನುವ ಪಟ್ಟಿಯನ್ನು ಚುನಾವಣಾ ಆಯೋಗ ತಯಾರಿಸುವಂತೆ ಕೋರ್ಟ್​ ಸೂಚನೆ ನೀಡಬೇಕು ಎಂದು ವಕೀಲರು ಗಮನ ಸೆಳೆದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts