ತೈಲದಿಂದ ಅಭ್ಯಂಗ ಸ್ನಾನ ಮುಗಿಯಿತು, ಮುಂದೇನು?

ತೈಲದಿಂದ ಅಭ್ಯಂಗ ಸ್ನಾನ ಮುಗಿಯಿತು, ಮುಂದೇನು?
ತೈಲದಿಂದ ಅಭ್ಯಂಗ ಸ್ನಾನ ಮುಗಿಯಿತು, ಮುಂದೇನು?
Published on: 

ದೀಪಾವಳಿಯ ನರಕ ಚತುರ್ದಶಿಯಂದು ಪ್ರಾತಃಕಾಲ ಬ್ರಾಹ್ಮ ಮುಹೂರ್ತದಲ್ಲೇ ಅಭ್ಯಂಜನ ಸ್ನಾನ ಮಾಡಬೇಕೆಂಬುದಾಗಿ ಶಾಸ್ತ್ರಗಳು ನಿರ್ದೇಶಿಸಿವೆ. ಪ್ರತಿಯೋರ್ವರೂ ನಿತ್ಯವೂ ಅಭ್ಯಂಗಸ್ನಾನ ಮಾಡಬೇಕೆಂಬುದು ಆಯುರ್ವೆದದ ಸಲಹೆ. ಆದರೂ ದೀಪಾವಳಿಯ ದಿನ ಅಭ್ಯಂಜನ ಮಾಡಬೇಕೆಂದು ವಿಶೇಷವಾಗಿ ಹೇಳಿರುವುದು ಏಕೆ?. ಇದು ಅಭ್ಯಂಗ ಪ್ರಕ್ರಿಯೆಗೆ ಗೌರವ ಸಲ್ಲಿಕೆ! ಜೀವನಪೂರ್ತಿ ಪೂಜ್ಯಭಾವದಿಂದ ತಾಯಿಯನ್ನು ನೋಡಿದರೂ ವರ್ಷದಲ್ಲೊಂದು ದಿನ ತಾಯಂದಿರ ದಿನಾಚರಣೆ ಇರುವುದಲ್ಲ, ಅಂತೆಯೇ ಅಭ್ಯಂಗ! ಸಾಲುಸಾಲು ಹಬ್ಬಗಳಿರುವಾಗ ದೀಪಾವಳಿಯೊಂದಿಗೆ ಏಕೆ?. ಮಳೆಗಾಲದಲ್ಲಿ ವಾತದೋಷವು ತನ್ನ ಪ್ರಾಬಲ್ಯದಿಂದ ರೋಗಗಳನ್ನು ಹುಟ್ಟ್ಟುಹಾಕುವ ಕಾಲ. ಮಳೆಗಾಲ ಕಳೆದಂತೆ ವಾತದೋಷವು ಶಮನಗೊಳ್ಳುತ್ತಾ ಹೋಗುತ್ತದೆ. ವರ್ಷಋತು ಕಳೆದು ಮಳೆಪೂರ್ತಿ ನಿಲ್ಲುವ ಹೊತ್ತಿಗೆ ಬರುವ ಹಬ್ಬ ದೀಪಾವಳಿ. ಆ ದೀಪಾವಳಿಯ ಮೊದಲ ದಿನವಾದ ನರಕ ಚತುರ್ದಶಿಯಂದೇ ಅಭ್ಯಂಗ ಸ್ನಾನವನ್ನು ಮಾಡಿ ವಾತವನ್ನು ಪೂರ್ಣಪ್ರಮಾಣದಲ್ಲಿ ಶಾಂತಗೊಳಿಸುವ ಸಂಕೇತವಾಗಿ ಅಭ್ಯಂಗ ಸ್ನಾನಕ್ಕೆ ಆ ದಿನವೇ ವಿಶೇಷ ಮನ್ನಣೆ!

ಎಪ್ಪತ್ತು ವರ್ಷ ಪ್ರಾಯವಾದ ಕೆಲವು ಹಿರಿಯರು ಐವತ್ತರ ಯುವಕರಂತೆ ಗೋಚರಿಸುತ್ತಾರೆ. ಇನ್ನು ಕೆಲವರು ಪ್ರಾಯ ನಲವತ್ತು ವರ್ಷ ಆದಾಗಲೇ ಅರವತ್ತು ವರುಷ ದಾಟಿ ಬಳಲಿ ಬೆಂಡಾದಂತೆ ಕಾಣುತ್ತಾರೆ! ವಯಸ್ಸಾಗುವ ಗತಿಯನ್ನು ನಿಧಾನಗೊಳಿಸಲು ವ್ಯಕ್ತಿಗೆ ಬೇಕಾದ ಪ್ರಮುಖ ಅಸ್ತ್ರವೇ ತೈಲಾಭ್ಯಂಗ. ಮುಪ್ಪು ನಿಧಾನಗೊಳಿಸುವುದು, ಸುಸ್ತು ನಿವಾರಣೆ, ವಾತ ಕಡಿಮೆಗೊಳಿಸುವುದು, ಕಣ್ಣಿನ ಶಕ್ತಿವರ್ಧನೆ, ದೇಹ ಪೋಷಣೆ, ದೀರ್ಘಾಯಸ್ಸು, ಒಳ್ಳೆಯ ನಿದ್ರೆ, ಕಾಂತಿಯುತ ತ್ವಚೆ, ದೇಹ ದಾರ್ಢ್ಯತೆ ಎಲ್ಲವುಗಳಿಂದ ಅಪ್ರತಿಮ ರೀತಿಯಲ್ಲಿ ಶರೀರವನ್ನು ಸಲಹುವ ಆಚರಣೆಯೇ ತೈಲಾಭ್ಯಂಗ.

ಶಿಶುಗಳಿಗೆ ಪ್ರತಿನಿತ್ಯ ಎಣ್ಣೆ ಹಚ್ಚಿ ಸ್ನಾನ ಮಾಡಿಸುತ್ತೇವೆ. ಪುಟ್ಟಮಕ್ಕಳಿಗೂ ಈ ಆರೈಕೆ ಮುಂದುವರಿಸುತ್ತೇವೆ. ಬಾಲ್ಯ ದಾಟುತ್ತಿದ್ದಂತೆ ಮರೆತು ಬಿಡುತ್ತೇವೆ. ಜೀವಮಾನವಿಡೀ ಅಭ್ಯಂಗ ಮಾಡುತ್ತಾ ದೇಹದ ಆರೈಕೆ ಮಾಡುವುದರಲ್ಲಿ ಸ್ವಾಸ್ಥ್ಯದ ತಿರುಳು ಅಂತರ್ಗತವಾಗಿದೆ. ಎಣ್ಣೆ ಹಚ್ಚಿದರೆ ಚರ್ಮದೊಳಕ್ಕೆ ಹೋಗುವುದೇ ಇಲ್ಲ, ಅಭ್ಯಂಜನ ಅವೈಜ್ಞಾನಿಕ ಎಂದೆನ್ನುವವರು ಮೂರ್ನಾಲ್ಕು ದಶಕಗಳ ಹಿಂದಿನ ತನಕವೂ ಇದ್ದರು. ಬಿದ್ದು ಯಾವುದೋ ದೇಹ ಭಾಗಕ್ಕೆ ನೋವಾದಾಗ ಅಲ್ಲಿಗೆ ತೈಲವನ್ನು ಸವರಿದರೆ ಬಹುಬೇಗನೆ ಚರ್ಮವು ಹೀರಿ ಒಣಗಿಬಿಡುತ್ತದೆ. ದೇಹದ ಉಳಿದ ಭಾಗಗಳಿಂದ ವೇಗವಾಗಿ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆಯನ್ನು ಅಲ್ಲಿಯ ಚರ್ಮವು ಹೀರಿಕೊಳ್ಳುವುದನ್ನು ನೋಡಿರುತ್ತೀರಿ. ಸ್ಥಾನಿಕವಾಗಿ ವಾತವು ಹೆಚ್ಚಾದರೆ ಹಚ್ಚಲು ಹೆಚ್ಚು ಎಣ್ಣೆ ಬೇಕು! ಏಕೆಂದರೆ ವಾತ ಶಮನಗೊಳಿಸುವ ಶ್ರೇಷ್ಠ ದ್ರವ್ಯ ತೈಲ. 300ರಿಂದ 900 ಮಾತ್ರಾಕಾಲಗಳಲ್ಲಿ ಬಾಹ್ಯವಾಗಿ ಸವರಿದ ತೈಲವು ಶರೀರವನ್ನು ಸಂಪೂರ್ಣವಾಗಿ ಆವರಿಸಿಕೊಳ್ಳುತ್ತದೆ ಎಂದಿದೆ ಆಯುರ್ವೆದ. ಕೂದಲಿನ ಬುಡಕ್ಕೆ ತಲುಪಲು 95 ಸೆಕೆಂಡುಗಳು, ಚರ್ಮದೊಳಗೆ ಪ್ರವೇಶಿಸಲು 127, ರಕ್ತದೊಳಗೆ ಸೇರಲು 159, ಮಾಂಸ ತಲುಪಲು 127, ಮೇದೋಧಾತುವಿಗೆ 222, ಮೂಳೆಗಳಿಗೆ 253, ಮಜ್ಜೆ ಹಾಗೂ ನರತಂತುಗಳಿಗೆ 285 ಸೆಕೆಂಡುಗಳಲ್ಲಿ ಸೇರಿ ಬಳಿಕ ಶುಕ್ರಧಾತುವಿಗೆ ಪ್ರವೇಶಿಸುತ್ತದೆ. ಒಟ್ಟು 5 ರಿಂದ 6 ನಿಮಿಷಗಳಲ್ಲಿ ದೇಹ ವ್ಯಾಪಿಸುತ್ತದೆ ಎಂಬ ವೈಜ್ಞಾನಿಕ ವಿಶ್ಲೇಷಣೆಯಿದೆ.

ದೇಹಕ್ಕೆ ಎಣ್ಣೆ ಹಚ್ಚುವುದಕ್ಕೆ ಅಭ್ಯಂಜನ ಎಂದೂ, ತೈಲ ಹಚ್ಚಿ ಕ್ರಮಬದ್ಧವಾಗಿ ಮರ್ದನ ಮಾಡುವುದಕ್ಕೆ ಅಭ್ಯಂಗ ಎಂದೂ ಹೆಸರು. ದೇಹಕ್ಕೆ ಸರಿಯಾಗಿ ತೈಲವನ್ನು ಆರಿಸಿಕೊಂಡರೆ ಮೌಲ್ಯವರ್ಧನೆ ಮಾಡಿಕೊಂಡಂತೆ. ದೇಹದ ಪ್ರಕೃತಿಗೆ ಅನುಸಾರವಾಗಿ ವಾತಪ್ರಕೃತಿಯವರಿಗೆ ನಾರಾಯಣ ತೈಲ, ಮಹಾನಾರಾಯಣ ತೈಲ, ಅಶ್ವಗಂಧಾದಿ ತೈಲ, ಕ್ಷೀರಬಲಾ ತೈಲ ಪ್ರಶಸ್ತ. ಪಿತ್ತದೇಹಿಗಳಿಗೆ ಮಂಜಿಷ್ಠಾದಿ ತೈಲ, ಯಷ್ಟಿಮಧು ತೈಲ, ಚಂದನಾದಿ ತೈಲ, ಹಿಮಸಾಗರ ತೈಲ, ಉಶೀರಾದಿ ತೈಲ ಸೂಕ್ತ. ಕಫ ಶರೀರಿಗಳಿಗೆ ಧನ್ವಂತರಿ ತೈಲ, ಕರ್ಪರಾದಿ ತೈಲ, ಲವಣ ತೈಲ, ಬೃಹತ್ ಸೈಂಧವಾದಿ ತೈಲ ಹಿತಕಾರಿ. ದೇಹ ಪ್ರಕೃತಿ ತಿಳಿಯದವರು ಎಳ್ಳೆಣ್ಣೆ ಬಳಸಬಹುದು. ಜ್ವರ, ಅಜೀರ್ಣ, ಆಮವಾತ, ಕಣ್ಣು, ಹಲ್ಲು, ಕಿವಿಯ ತೀವ್ರ ಬಾಧೆಗಳು, ಕಫರೋಗವು ತೀವ್ರವಾಗಿದ್ದಾಗ ಮಾತ್ರ ಅಭ್ಯಂಗ ಮಾಡುವಂತಿಲ್ಲ. ಆಯಾಸ ಪರಿಹಾರಕ್ಕಾಗಿ, ಆರಾಮಕ್ಕಾಗಿ, ಮನೋಲ್ಲಾಸಕ್ಕಾಗಿ, ಚಿಕಿತ್ಸೆಯ ಭಾಗವಾಗಿ ಮಾಡುವ ಅಭ್ಯಂಗಕ್ಕೆ ನಲವತ್ತೈದು ನಿಮಿಷಬೇಕು. ನಿತ್ಯದ ಅಭ್ಯಂಗಕ್ಕೆ ಕೇವಲ ಹತ್ತು ನಿಮಿಷ ಸಾಕು! ಕೀಲು, ಎದೆ, ಉದರ ಭಾಗಗಳಿಗೆ ವೃತ್ತಾಕಾರವಾಗಿ, ಉಳಿದೆಡೆ ರೋಮಗಳ ದಿಕ್ಕಿಗೆ ನೀವಬೇಕು. ಉಗುರು

ಬೆಚ್ಚಗಿನ ತೈಲವನ್ನು ಐದು ನಿಮಿಷಗಳಲ್ಲಿ ದೇಹಕ್ಕೆ ಹಚ್ಚಿ

ಇನ್ನೈದು ನಿಮಿಷ ದೇಹದೊಳಗೆ ಹೋಗಲು ಸಮಯ ನೀಡಿ ತದನಂತರ ಸ್ನಾನಕ್ಕೆ ಮುಂದಾಗಬೇಕು. ಹಬ್ಬಕ್ಕೆ ಅಭ್ಯಂಜನಸ್ನಾನ, ನಿತ್ಯವೂ ಅಭ್ಯಂಗಸ್ನಾನ!

/////////////