

ಅಮೆರಿಕ, ಯುಕೆ ಮತ್ತು ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿನ ರೀಟೇಲ್ ವಿಭಾಗಗಳಲ್ಲಿ ಅಮೆಜಾನ್ ಉದ್ಯೋಗ ಕಡಿತ.
ರೀಟೇಲ್ ವಿಭಾಗದಲ್ಲಿ ಸಾವಿರಕ್ಕೂ ಹೆಚ್ಚು ಉದ್ಯೋಗಿಗಳ ಹುದ್ದೆಗೆ ಕುತ್ತು.
ಮೆಕ್ಸಿಕೋ ಮತ್ತು ಯುರೋಪಿನ ಇತರ ಭಾಗದಲ್ಲಿಯೂ ಹೆಚ್ಚಿದ ಉದ್ಯೋಗ ಕಡಿತದ ಆತಂಕ.
Amazon Layoffs: ಅಮೆಜಾನ್ ಮತ್ತೆ ಜಾಗತಿಕ ಮಟ್ಟದಲ್ಲಿ ತನ್ನ ಉದ್ಯೋಗಿಗಳಿಗೆ ಶಾಕ್ ಕೊಟ್ಟಿದೆ. ಭಾರತ, ಯುಎಸ್ ಮತ್ತು ಯುಕೆ ಸೇರಿದಂತೆ ಹಲವು ದೇಶಗಳಲ್ಲಿರುವ ತನ್ನ ರೀಟೇಲ್ ಸೇರಿದಂತೆ ಹಲವು ವಿಭಾಗದಲ್ಲಿ ಮತ್ತೊಂದು ಸುತ್ತಿನ ಉದ್ಯೋಗ ಕಡಿತವನ್ನು ಖಚಿತಪಡಿಸಿದೆ. ಇದರಿಂದ 1,000 ಕ್ಕಿಂತ ಕಡಿಮೆ ನೌಕರರು ಬಾಧಿತರಾಗಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.
ಅಮೆಜಾನ್ ಉದ್ಯೋಗಿಯೊಬ್ಬರ ಪ್ರಕಾರ ಸಾವಿರಕ್ಕಿಂತ ಕಡಿಮೆ ವೈಟ್ ಕಾಲರ್ ಉದ್ಯೋಗಿಗಳನ್ನು ಲೇ ಆಫ್ ಮಾಡಲಾಗಿದೆ ಎಂದು ಹೇಳಿಕೊಂಡಿರುವ ಬಗ್ಗೆ 'ಬಿಸಿನೆಸ್ ಇನ್ಸೈಡರ್' ವರದಿ ಮಾಡಿದೆ. ಆದರೆ ಈ ಬಗ್ಗೆ ಅಮೆಜಾನ್ ಯಾವುದೇ ನಿಖರವಾದ ಸಂಖ್ಯೆಯನ್ನು ಪ್ರಕಟಿಸಿಲ್ಲ.
ದೈತ್ಯ ಇ-ಕಾಮರ್ಸ್ ಕಂಪನಿ ಅಮೆಜಾನ್ ಉದ್ಯೋಗಿಗಳು ಮಂಗಳವಾರದಂದು ತಮ್ಮ ಉದ್ಯೋಗ ಕಡಿತವಾದ ಬಗ್ಗೆ ಇಮೇಲ್ ರಿಸೀವ್ ಮಾಡಿಕೊಂಡಿದ್ದಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲು ಶುರುವಿಟ್ಟುಕೊಂಡರು.
ರಾಯ್ಟರ್ಸ್ ಮತ್ತು ಬಿಸಿನೆಸ್ ಇನ್ಸೈಡರ್ ವರದಿಗಳ ಪ್ರಕಾರ, ಅಮೆಜಾನ್ ಸ್ಟೋರ್ಸ್ ವ್ಯವಹಾರದ ಉದ್ಯೋಗಿಗಳು ಲೇ ಆಫ್ಗೊಳಗಾಗಿದ್ದಾರೆ. ನಮ್ಮ ಪ್ರಾಮುಖ್ಯತೆ ತಕ್ಕಂತೆ ಕಾರ್ಯನಿರ್ವಹಿಸಲು ಸ್ಟೋರ್ಸ್ ವ್ಯವಹಾರದ ಕೆಲವು ಭಾಗಗಳಲ್ಲಿ ಬದಲಾವಣೆ ಮಾಡಿದ್ದೇವೆ ಎಂದು ಅಮೆಜಾನ್ ವಕ್ತಾರರು ರಾಯ್ಟರ್ಸ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನು ಈ ಪ್ರಕ್ರಿಯೆಯಿಂದ ಅದೆಷ್ಟು ಮಂದಿ ಬಾಧಿತರಾಗಿದ್ದಾರೆ ಎನ್ನುವ ಮಾಹಿತಿಯನ್ನು ದೈತ್ಯ ಇ ಕಾಮರ್ಸ್ ಕಂಪನಿ ಮಾಹಿತಿ ಹಂಚಿಕೊಂಡಿಲ್ಲ.
ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್, ಅವರು ಫಾಕ್ಸ್ ನ್ಯೂಸ್ನೊಂದಿಗೆ ಮಾತನಾಡಿ, ಕೋವಿಡ್ ಸಮಯದಲ್ಲಿ ಜನರು ಮನೆಯಲ್ಲಿದ್ದುಕೊಂಡು ಹೆಚ್ಚು ಆರ್ಡರ್ ಮಾಡಿಕೊಳ್ಳುತ್ತಿದ್ದರು. ಹೀಗಾಗಿ ಹೆಚ್ಚು ಜನರನ್ನು ನಾವು ಉದ್ಯೋಗಕ್ಕೆ ನೇಮಕ ಮಾಡಿಕೊಂಡಿದ್ದೆವು. ಈಗ ಅಷ್ಟೆಲ್ಲ ಅನಿವಾರ್ಯವಿಲ್ಲ. ಹೀಗಾಗಿ ಉದ್ಯೋಗ ಕಡಿತ ಅನಿವಾರ್ಯ ಎಂದು ಹೇಳಿದ್ದಾರೆ.
ದಸರಾ, ಪ್ರೈಮ್ ಬಿಗ್ ಡೀಲ್ ಡೇಸ್ ಸೇಲ್ ಹಾಗೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಟ್ಟೆ, ದಿನಸಿ ಸೇರಿದಂತೆ ಹಲವು ವಸ್ತುಗಳನ್ನು ಜನರು ಖರೀದಿ ಮಾಡುತ್ತಾರೆ. ಹೆಚ್ಚೆಚ್ಚು ಆರ್ಡರ್ ಮಾಡಿಕೊಳ್ಳುತ್ತಾರೆ. ದೀಪಾವಳಿ ಸಾಮಾಗ್ರಿಗಳು ಹೆಚ್ಚು ಸೇಲ್ ಆಗುತ್ತವೆ. ಇಂತಹ ಸಂದರ್ಭದಲ್ಲಿ ಉದ್ಯೋಗ ಕಡಿತ ಅನಿವಾರ್ಯವಿತ್ತೇ ಎನ್ನುವ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
ಉದ್ಯೋಗ ಕಡಿತದ ಬಗ್ಗೆ ಮೂಲಕ ತಿಳಿಸಲಾಗಿದೆ. ಮೆಕ್ಸಿಕೋ ಮತ್ತು ಯುರೋಪಿನ ಇತರ ಭಾಗಗಳಿಗೂ ಈ ಕಡಿತ ವಿಸ್ತರಿಸಲಿದೆಯೇ ಎಂಬ ಆತಂಕವನ್ನು ಕೆಲ ಉದ್ಯೋಗಿಗಳು ವ್ಯಕ್ತಪಡಿಸಿದ್ದಾರೆ. ಗ್ರಾಹಕ ಸೇವೆ, ಮಾರಾಟ ಪಾಲುದಾರ ಸೇವೆಗಳು, ಮಾರ್ಕೆಟ್‌ಪ್ಲೇಸ್ ಸಪೋರ್ಟ್ ಹಾಗೂ ರೀಟೇಲ್ ವಿಭಾಗದ ಇಂಜಿನಿಯರಿಂಗ್ ವಿಭಾಗ ಸೇರಿದಂತೆ ವಿವಿಧ ತಂಡಗಳ ಮೇಲೆ ಈ ಉದ್ಯೋಗ ಕಡಿತದ ಪ್ರಭಾವ ಬೀರಿದೆ ಎಂದು ಸಂದೇಶಗಳು ಸೂಚಿಸುತ್ತವೆ, (ಏಜೆನ್ಸೀಸ್).