'ಹಾಯ್​ ಚೆನ್ನಾಗಿದ್ದೀಯಾ, ಕಾಫಿಗೊಮ್ಮೆ ಸಿಗ್ತೀಯಾ' ಅಂತ ಮಾಜಿ ಸಂಗಾತಿಗೆ ಲಾಸ್ಟ್ ಮೆಸೇಜ್​ ಮಾಡ್ಬೇಕಾ?; ಹಾಗಾದ್ರೆ ಈ ವಿಶೇಷ ದಿನ ನಿಮಗಾಗಿಯೇ ಇದೆ!

National Text Your Ex Day
National Text Your Ex Day
Published on: 
  • ನೀವು ನಿಮ್ಮ ಎಕ್ಸ್​ಗೆ ಲಾಸ್ಟ್​ ಮೆಸೇಜ್​ವೊಂದನ್ನು ಕಳುಹಿಸಬೇಕು ಎಂದಿದ್ದೀರಾ?.

  • ನ್ಯಾಷನಲ್ ಟೆಕ್ಸ್ಟ್ ಯುವರ್ ಎಕ್ಸ್ ಡೇ ದಿನ ನಿಮ್ಮ ಹಳೆಯ ಪ್ರೇಮದ ದಿನ ತಿರುವಿ ಹಾಕಿ.

  • ನಿಮ್ಮ ಮಾಜಿ ಸಂಗಾತಿಗೆ ಕೊನೆಯ ಮೆಸೇಜ್ ಕಳುಹಿಸುವ ಮುನ್ನ ಈ ವಿಚಾರ ನೆನಪಿರಲಿ.

National Text Your Ex Day: ಮಾಜಿ ಸಂಗಾತಿಗೆ ಒಂದು 'ಲಾಸ್ಟ್ ಮೆಸೇಜ್' ಕಳುಹಿಸಬೇಕು, ಒಂದು ಬಾರಿ ಸಾರಿ ಕೇಳಬೇಕು ಅನ್ನಿಸ್ತಿದೆಯಾ? ಹಳೆಯ ಅಧ್ಯಾಯವನ್ನು ಮತ್ತೆ ತಿರುವಿ ಹಾಕಬೇಕೋ ಅಥವಾ ಸಂಪರ್ಕವಿಲ್ಲದೆ ಮೌನವಾಗಿಯೇ ಇರಬೇಕೋ ಎನ್ನುವ ಗೊಂದಲದಲ್ಲಿದ್ದೀರಾ? ಹಾಗಿದ್ರೆ ಆ ಗೊಂದಲಕ್ಕೆ ಗುಡ್‌ಬೈ ಹೇಳಿ, ಯಾಕಂದ್ರೆ ನಿಮಗಾಗಿ ಇದೆ ಅ.30ರಂದು ಆಚರಿಸುವ National Text Your Ex Day. ಈ ದಿನ ನಿಮ್ಮ ಎಕ್ಸ್‌ಗೆ ಟೆಕ್ಸ್ಟ್ ಮಾಡುವ ಮುನ್ನ ನೀವು ನಿಜವಾಗಿಯೂ ಏನನ್ನು ಬಯಸುತ್ತಿದ್ದೀರಿ ಎಂಬುದನ್ನು ಒಮ್ಮೆ ಪ್ರಶ್ನಿಸಿಕೊಳ್ಳಿ.

ಅಕ್ಟೋಬರ್​ 30ರಂದು ರಾಷ್ಟ್ರೀಯ ಪಠ್ಯ ನಿಮ್ಮ ಮಾಜಿ ದಿನ (National Text Your Ex Day)ಯು ಸೋಶಿಯಲ್​ ಮೀಡಿಯಾದ ಒಂದು ಪ್ರಕ್ರಿಯೆಯಾಗಿದೆ. ಹೆಚ್ಚಾಗಿ ಯುನೈಟೆಡ್​ ಕಿಂಗ್ಡಮ್​ ಹಾಗೂ ಯುನೈಟೆಡ್​ ಸ್ಟೇಟ್ಸ್​ನಲ್ಲಿ ಈ ದಿನವನ್ನು ಸರಿಯಾಗಿ ಬಳಕೆ ಮಾಡುತ್ತಾರೆ. ಈ ದಿನ ನೀವು ನಿಮ್ಮ ಮಾಜಿ ಸಂಗಾತಿಯ ಚಾಟ್‌ಗಳನ್ನು ಸ್ಕ್ರೋಲ್ ಮಾಡಲು ಮತ್ತು ಇನ್ನೊಮ್ಮೆ ಅವರನ್ನು ಸಂಪರ್ಕಿಸಿದರೆ ಏನಾಗಬಹುದು ಎಂದು ಯೋಚಿಸಲು, ಯೋಗಕ್ಷೇಮ ವಿಚಾರಿಸಲು, ಮತ್ತೆ ಹಳೆಯ ಅಧ್ಯಾಯವನ್ನು ಹೊಸದಾಗಿ ಶುರು ಮಾಡಲು ಇರುವ ಸುದಿನ ಇದು.

ಮೂರು ಪ್ರಶ್ನೆ ಕೇಳಿಕೊಳ್ಳಿ

ನೀವು ನಿಮ್ಮ ಎಕ್ಸ್​ಗೆ ಮೆಸೇಜ್ ಮಾಡುವ ಮುನ್ನ ಮೂರು ಪ್ರಶ್ನೆಗಳನ್ನು ನಿಮಗೆ ನೀವೆ ಕೇಳಿಕೊಳ್ಳಿ. ಇದಕ್ಕೆ ತಕ್ಕುದಾದ ಉತ್ತರ ಸಿಕ್ಕ ನಂತರ ನಿಮ್ಮ ಮಾಜಿ ಸಂಗಾತಿ ಜೊತೆಗೆ ಟೆಕ್ಷ್ಟ್​ನಲ್ಲಿ ಮಾತಿಗೆ ಇಳಿಯಿರಿ. ಆ ಮೂರು ಪ್ರಶ್ನೆ ಯಾವುದು ಎನ್ನುವುದನ್ನು ಇಲ್ಲಿ ಉಲ್ಲೇಖಿಸಲಾಗಿದೆ.

Also Read
ಬ್ರೇಕಪ್​ ಭಯ; ಕಿರಿಕಿರಿಯಿಲ್ಲದ ಡೇಟಿಂಗ್‌ಗಾಗಿ AI ಸಲಹೆ ಕೇಳುತ್ತಿರುವ Gen Z, ಇಂಟರ್ನೆಟ್​ನಲ್ಲೊಂದು ಹೊಸ ಟ್ರೆಂಡ್​​
National Text Your Ex Day

ಪ್ರತಿಕ್ರಿಯೆ ಇಲ್ಲದಿದ್ರೂ ನಾನು ಓಕೆ ಆಗಿರ್ತೀನಾ?

ನೀವು ನಿಮ್ಮ ಮನಸ್ಸಿನಾಳದಲ್ಲಿ ನಿಮ್ಮ ಮಾಜಿ ಸಂಗಾತಿಗಾಗಿ ಕಳುಹಿಸಬೇಕಾದ ಎಲ್ಲ ಪದಗಳನ್ನು ಪೋಣಿಸಿ ಅವರಿಗೆ ಮೆಸೇಜ್​ ಅನ್ನು ಸೆಂಡ್ ಮಾಡುವ ಮುನ್ನ ಒಮ್ಮೆ ಯೋಚಿಸಿ..ನಿಮ್ಮಿಂದಾದ ಗಾಯದಿಂದ ಅವರು ಈಗಷ್ಟೇ ಚೇತರಿಸಿಕೊಂಡು ನಿಮ್ಮ ಬಳಿ ಮಾತನಾಡುವುದನ್ನೇ ನಿಲ್ಲಿಸಿದ್ದರೆ, ಅವರಿಂದ ಪ್ರತಿಕ್ರಿಯೆ ಬರುವುದು ಕೊಂಚ ಕಷ್ಟವಾಗಬಹುದು. ಹೀಗಾಗಿ ಅವರಿಂದ ಯಾವುದೇ ಪ್ರತಿಕ್ರಿಯೆ ನೀರಿಕ್ಷಿಸದೆ ನಿಮ್ಮ ಸಮಾಧಾನಕ್ಕೆ ಮೆಸೇಜ್ ಕಳುಹಿಸುತ್ತಿದ್ದೀರಾ ಎನ್ನುವ ದೃಢ ನಿರ್ಣಯ ನಿಮ್ಮಲ್ಲಿ ಇರಲಿ. ಅಕಸ್ಮಾತ್​ ಅವರಿಂದ ಬರದ ಉತ್ತರದಿಂದ ನಿಮ್ಮ ಮನಸ್ಸಿಗೆ ನೋವು, ಮಾನಸಿಕವಾಗಿ ಕುಗ್ಗಿಸುವಂತಿದ್ದರೆ ಮತ್ತೆ ಅವರೊಂದಿಗೆ ಸಂಪರ್ಕ ಬೆಳಸದೆ ಇರುವುದು, ಮೆಸೇಜ್ ಮಾಡದೆ ನಿಮ್ಮ ನೆಮ್ಮದಿ ನೀವು ಕಂಡುಕೊಳ್ಳುವುದು ಉತ್ತಮ ಆಯ್ಕೆ.

ನೀವು ನಿಮ್ಮ ಎಕ್ಸ್​​​ ಇಲ್ಲದೆ ಕಂಗಲಾಗಿದ್ದೀರಾ?

ನೀವಾಗಿಯೇ ಅವರೊಂದಿಗೆ ಬ್ರೇಕಪ್​ ಮಾಡಿಕೊಂಡ ನಂತರವೂ, ಅವರು ಜೊತೆಗಿಲ್ಲದೆ ಅಥವಾ ಬೇರೆ ಜೊತೆಗಾರನು ಸಿಗದೆ ಒಂಟಿತನ ಎದುರಿಸುತ್ತಿದ್ದರೆ, ಒಂದು ವಿಷಯವನ್ನು ಸ್ಪಷ್ಟಪಡಿಸಿಕೊಳ್ಳಿ. ನನ್ನ ಜೊತೆ ಓಡಾಡಲು, ಮಾತನಾಡಲು, ಕಷ್ಟ ಹೇಳಿಕೊಳ್ಳಲು ಜೊತೆಯಲ್ಲಿ ಯಾರು ಇಲ್ಲ..ನನ್ನ ಸಂಗಾತಿ ಇರಬೇಕು ಎನ್ನುವುದು ಮುಖ್ಯವಲ್ಲ. ಈಗಾಗಲೇ ಬೇಡ ಎಂದುಕೊಂಡ ವ್ಯಕ್ತಿ ಜೊತೆ ಮತ್ತೆ ಯಾಕಾಗಿ ಬದುಕಬೇಕು?, ಅವರ ಸಾಮಿಪ್ಯದಿಂದ ಸಿಗುವ ಲಾಭವೇನು, ಆ ವ್ಯಕ್ತಿ ನಿಮ್ಮ ಜೀವನದಲ್ಲಿ ನಿಜವಾಗಿಯೂ ಎಷ್ಟು ಮುಖ್ಯ ಎನ್ನುವುದನ್ನು ನಿಮಗೆ ನೀವು ಕೇಳಿಕೊಳ್ಳಿ. ಕಾಟಾಚಾರಕ್ಕೆ ಮೆಸೇಜ್​ ಮಾಡಿ ನಂತರ ಸಮಸ್ಯೆಯ ಸುಳಿಯಲ್ಲಿ ಸಿಲುಕುವುದನ್ನು ತಪ್ಪಿಸುವುದು ಮುಖ್ಯ.

ನೀವು ಬ್ರೇಕಪ್​ ಬಗ್ಗೆ ಸ್ಪಷ್ಟನೆ ನೀಡಲು ಬಯಸಿದ್ದೀರಾ?

ನೀವು ನಿಮ್ಮ ಎಕ್ಸ್​ ಜೊತೆ ಮಾತನಾಡಲು ಬಯಸುತ್ತಿರುವ ಹಿಂದಿನ ಕಾರಣ ಏನು? ಅವರಿಂದ ನೀವು ಏನನ್ನು ನಿರೀಕ್ಷಿಸಲು ಹೊರಟಿದ್ದೀರಿ?, ನಿಮ್ಮನ್ನು ಕಾಡುತ್ತಿರುವ ಯಾವುದೋ ಪ್ರಶ್ನೆಯನ್ನೋ, ಅಥವಾ ಬ್ರೇಕಪ್​ ಮಾಡಿಕೊಂಡ ವಿಚಾರಕ್ಕೆ ಸ್ಪಷ್ಟನೆ ನೀಡುತ್ತಿದ್ದೀರಾ ಎನ್ನುವುದನ್ನು ಕಂಡುಕೊಳ್ಳಿ. ನೀವು ಪ್ರಾಮಾಣಿಕವಾಗಿರಿ. ಕೇವಲ ಒಂದು ಮೆಸೇಜ್ ಹಿಂದೆ ತಪ್ಪಾದ ಎಲ್ಲವನ್ನೂ ಮ್ಯಾಜಿಕ್‌ನಂತೆ ಸರಿಪಡಿಸುತ್ತದೆ ಎನ್ನುವ ಗ್ರಹಿಕೆಯಿಂದ ಹೊರ ಬನ್ನಿ. ನಿಮ್ಮ ನಿರ್ಧಾರದ ಬಗ್ಗೆ ಮರುಚಿಂತನೆ ನಡೆಸುವುದು ಒಳ್ಳೆಯದು. ಸಂಬಂಧದ ಅಂತ್ಯದ ಸ್ಪಷ್ಟತೆ ಯಾವಾಗಲೂ ಇನ್ನೊಬ್ಬ ವ್ಯಕ್ತಿಯಿಂದಲೇ ಸಿಗಬೇಕಿಲ್ಲ. ಕೆಲವೊಮ್ಮೆ, ಆ ಸಂಬಂಧದ ಅವಧಿ ಮುಗಿದಿದೆ ಎಂದು ಒಪ್ಪಿಕೊಳ್ಳುವುದೇ ನೀವು ಹುಡುಕುತ್ತಿರುವ ಉತ್ತರವಾಗಿರುತ್ತದೆ.

ಒಟ್ಟಾರೆಯಾಗಿ ನಿಮ್ಮ ಮಾಜಿ ಸಂಗಾತಿ ಅಥವಾ ಪ್ರೇಮಿಯೊಂದಿಗೆ ಮೊದಲಿನಂತೆ ಅಲ್ಲದೇ ಹೋದರು, ಮಾತು ಮುಂದುವರೆಸುವುದು ಕೆಟ್ಟ ಆಲೋಚನೆಯೇನಲ್ಲ. ಹಲವರ ಸಂಬಂಧ ಬ್ರೇಕಪ್​ ನಂತರ ಮತ್ತಷ್ಟು ಗಟ್ಟಿಯಾಗತ್ತೆ. ಕೆಲವೊಮ್ಮೆ ಒಂದು ಸಂಭಾಷಣೆ ಸ್ಪಷ್ಟತೆಯನ್ನು ತರಬಹುದು. ಕೆಲವೊಂದು ಇಕ್ಕಟ್ಟಿಗೆ ತಳ್ಳಬಹುದು. ನೀವು ತಿಂಗಳುಗಟ್ಟಲೆ ಕಷ್ಟಪಟ್ಟು ಪಡೆದ ಮಾನಸಿಕ ನೆಮ್ಮದಿಯನ್ನು ಹಾಳುಮಾಡಿಕೊಳ್ಳಬೇಡಿ, (ಏಜೆನ್ಸೀಸ್).