ಬೆಳಗ್ಗೆ ಎದ್ದ ತಕ್ಷಣವೇ ಐದಾರೂ ಸೀನು ಹಾಕ್ತೀರಾ! ಇದು ನೆಗಡಿಗಲ್ಲ, ಇದರ ಹಿಂದಿದೆ ನಿಮಗೆ ಗೊತ್ತಿಲ್ಲದ ಕಾರಣ | Constant Sneeze

 Constant Sneeze
ಬೆಳಗ್ಗೆ ಎದ್ದ ತಕ್ಷಣವೇ ಐದಾರೂ ಸೀನು ಹಾಕ್ತೀರಾ! ಇದು ನೆಗಡಿಗಲ್ಲ, ಇದರ ಹಿಂದಿದೆ ನಿಮಗೆ ಗೊತ್ತಿಲ್ಲದ ಕಾರಣ | Constant Sneeze
Published on: 

Constant Sneeze: ಅನೇಕರಿಗೆ ಬೆಳಗ್ಗೆ ಎದ್ದ ಕೂಡಲೇ ಐದರಿಂದ ಆರು ಸೀನು ಬರುವುದರ ಜತೆಗೆ ಮೂಗು ಸೋರುವುದು, ಕಣ್ಣುಗಳಲ್ಲಿ ತುರಿಕೆ ಕಾಣಿಸಿಕೊಳ್ಳುತ್ತದೆ. ಇದು ಯಾವುದೋ ಒಂದು ದಿನ ಕಾಡಿದರೆ ಓಕೆ, ಆದರೆ, ಪದೇ ಪದೇ ಬೆಳಗಿನ ಸಮಯದಲ್ಲೇ ಹೆಚ್ಚಾಗಿ ಕಾಣಿಸಿಕೊಂಡು, ನಿದ್ದೆಯನ್ನು ಹಾಳು ಮಾಡುವುದಲ್ಲದೇ, ಉಸಿರಾಡಲು ಕಿರಿಕಿರಿಯನ್ನುಂಟು ಮಾಡುತ್ತದೆ. ಅಸಲಿಗೆ ಇದು ನೆಗೆಡಿಯಲ್ಲ ಅಂದಮೇಲೆ ಇನ್ಯಾವ ಸಮಸ್ಯೆ? ಎಂಬುದಕ್ಕೆ ಇಲ್ಲಿದೆ ನೋಡಿ ಕಾರಣ.

ಅಲರ್ಜಿಕ್ ರೈನೈಟಿಸ್‌?

ಅಲರ್ಜಿಕ್ ರೈನೈಟಿಸ್ ಎನ್ನುವುದು ಧೂಳು, ಧೂಳಿನ ಸಣ್ಣ ಕಣಗಳು, ಹೂವಿನ ಪರಾಗಕಣಗಳಂತಹ ಅಲರ್ಜಿಕಾರಕ ವಸ್ತುಗಳಿಂದ ಮೂಗಿನ ಒಳಪದರದಲ್ಲಿ ಉಂಟಾಗುವ ಅಲರ್ಜಿಯ ರಿಯಾಕ್ಷನ್​. ವಿಶೇಷವಾಗಿ ರಾತ್ರಿ ಮಲಗುವಾಗ ಬಳಸುವ ದಿಂಬು, ಬೆಡ್‌ಶೀಟ್ ಮತ್ತು ಹೊದಿಕೆಗಳಲ್ಲಿ ಸಂಗ್ರಹವಾಗಿರುವ ಧೂಳು ಬೆಳಗ್ಗೆ ಎದ್ದಾಗ ಸೀನು ಬರುವುದಕ್ಕೆ ಕಾರಣವಾಗಬಹುದು.

ಇದನ್ನು ಕಂಟ್ರೋಲ್ ಮಾಡಿಕೊಳ್ಳುವ ಸಲುವಾಗಿ ಪದೇ ಪದೇ ಅಲರ್ಜಿ ಮಾತ್ರೆಗಳನ್ನು ತೆಗೆದುಕೊಳ್ಳುವುದಕ್ಕಿಂತ, ದಿನನಿತ್ಯದ ಜೀವನದಲ್ಲಿ ಕೆಲವು ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕವೂ ಇಂತಹ ಅಲರ್ಜಿಯ ತೊಂದರೆಯಿಂದ ನೀವು ಮುಕ್ತರಾಗಬಹುದು. ಅದು ಹೇಗೆ ಅಂತೀರಾ? ನಾವಿಲ್ಲಿ ತಿಳಿಸಿರುವ ಒಂದಷ್ಟು ಉಪಯುಕ್ತ ಮಾಹಿತಿಯನ್ನು ಫಾಲೋ ಮಾಡಿ.

ಉಪ್ಪು ನೀರಿನಿಂದ ಮೂಗು ಸ್ವಚ್ಛ

ಸಲೈನ್ ನಾಸಲ್ ರಿನ್ಸ್ ಬಳಸಿ ಮೂಗನ್ನು ಸ್ವಚ್ಛಗೊಳಿಸುವುದರಿಂದ ಒಳಗೆ ಸಂಗ್ರಹವಾಗಿರುವ ಧೂಳು ಮತ್ತು ಅಲರ್ಜಿಕಾರಕ ಅಂಶಗಳನ್ನು ಹೊರಹಾಕಲು ಸಹಾಯವಾಗುತ್ತದೆ. ಇದರಿಂದ ಮೂಗಿನ ಕಿರಿಕಿರಿ, ಕಟ್ಟುವಿಕೆ ಮತ್ತು ಸ್ರವಿಸುವಿಕೆ ಕಡಿಮೆಯಾಗಬಹುದು. ಇದಕ್ಕಾಗಿ ಸುರಕ್ಷಿತವಾಗಿ ತಯಾರಿಸಿದ ಸಲೈನ್ ದ್ರಾವಣ ಅಥವಾ ವೈದ್ಯರು ಸೂಚಿಸಿದ ವಿಧಾನವನ್ನೇ ಬಳಸುವುದು ಉತ್ತಮ.

ದಿಂಬಿನ ಕವರ್, ಹೊದಿಕೆ ತೊಳೆಯಿರಿ

ನಾವು ಪ್ರತಿದಿನ ಬಳಸುವ ದಿಂಬಿನ ಕವರ್ ಮತ್ತು ಹೊದಿಕೆಗಳಲ್ಲಿ ಧೂಳು ಸಂಗ್ರಹವಾಗಬಹುದು. ಆದ್ದರಿಂದ ವಾರಕ್ಕೊಮ್ಮೆ ಅವುಗಳನ್ನು ಚೆನ್ನಾಗಿ ತೊಳೆಯುವುದು ಉತ್ತಮ. ಬಟ್ಟೆಯ ಆರೈಕೆ ಸೂಚನೆಗಳಿಗೆ ಅನುಗುಣವಾಗಿ ಬಿಸಿ ನೀರಿನಲ್ಲಿ ತೊಳೆಯುವುದರಿಂದ ಧೂಳಿನ ಕಣಗಳು ಮತ್ತು ಧೂಳಿನ ಹುಳಗಳ ಅಂಶಗಳನ್ನು ನಿಯಂತ್ರಿಸಲು ಸಹಾಯ ಆಗಬಹುದು.

Also Read
10 ದಿನ ಹುಚ್ಚಾಸ್ಪತ್ರೆಯಲ್ಲಿ ರಹಸ್ಯ ಕಾರ್ಯಾಚರಣೆ! 72 ದಿನಗಳಲ್ಲಿ ವಿಶ್ವ ಪರ್ಯಟನೆ; ಜಗತ್ತನ್ನೇ ಬೆರಗುಗೊಳಿಸಿದ ದಿಟ್ಟ ಪತ್ರಕರ್ತೆ ಈಕೆ | Nellie Bly
 Constant Sneeze

ಹೊಗೆ, ಧೂಪದ ಹೊಗೆಯಿಂದ ದೂರವಿರಿ

ಅಡುಗೆ ಮಾಡುವಾಗ ಹೊರಬರುವ ಹೊಗೆ, ಊದುಬತ್ತಿ, ಸಾಂಬ್ರಾಣಿ, ಸೊಳ್ಳೆಬತ್ತಿ ಮತ್ತು ಸಿಗರೇಟ್ ಹೊಗೆ ಮೂಗಿನ ಅಲರ್ಜಿಯನ್ನು ಹೆಚ್ಚಿಸಬಹುದು. ಹೀಗಾಗಿ, ಅಡುಗೆ ಮನೆಯಲ್ಲಿ ಎಕ್ಸಾಸ್ಟ್ ಫ್ಯಾನ್ ಬಳಸಿ. ಪೂಜಾ ಕೋಣೆ ಸೇರಿದಂತೆ ಮನೆಯೊಳಗೆ ಸರಿಯಾದ ಗಾಳಿಯ ಸಂಚಾರ ಇರುವಂತೆ ನೋಡಿಕೊಳ್ಳಿ.

ನೆಲ ಗುಡಿಸುವ ಬದಲು ಒರೆಸಿ

ಮನೆಯ ನೆಲವನ್ನು ಒಣಗಿರುವ ಪೊರಕೆಯಿಂದ ಗುಡಿಸಿದಾಗ ಧೂಳು ಗಾಳಿಯಲ್ಲಿ ಹರಡಬಹುದು. ಅದರ ಬದಲು ಒದ್ದೆ ಬಟ್ಟೆ ಅಥವಾ ಮಾಪ್‌ನಿಂದ ನೆಲವನ್ನು ಒರೆಸುವುದು ಉತ್ತಮ. ಇದರಿಂದ ಧೂಳು ಮತ್ತೆ ಗಾಳಿಯಲ್ಲಿ ಹರಡುವುದನ್ನು ತಡೆಗಟ್ಟಬಹುದು.

ಬಟ್ಟೆ ಬದಲಿಸಿ

ಹೊರಗಿನಿಂದ ಮನೆಗೆ ಮರಳಿದಾಗ ಬಟ್ಟೆ, ಚರ್ಮ ಮತ್ತು ಕೂದಲಿಗೆ ಧೂಳು ಹಾಗೂ ಪರಾಗಕಣಗಳು ಅಂಟಿಕೊಂಡಿರಬಹುದು. ಆದ್ದರಿಂದ, ಮನೆಗೆ ಬಂದ ಬಳಿಕ ಬಟ್ಟೆ ಬದಲಾಯಿಸಿ, ಅಗತ್ಯವಿದ್ದರೆ ಸ್ನಾನ ಮಾಡಿ. ಹೊರಗೆ ಪ್ರಯಾಣಿಸುವಾಗ ಮಾಸ್ಕ್ ಧರಿಸುವುದೂ ನಿಮ್ಮನ್ನು ಇಂತಹ ಅಲರ್ಜಿ ಸಮಸ್ಯೆಯಿಂದ ಹೊರತರಬಹುದು.

Also Read
ಪೇಪರ್​ನಲ್ಲಿ ಕಟ್ಟಿದ ಬಿಸಿ ಬಿಸಿ ಬಜ್ಜಿ, ಬೋಂಡಾ ತಿಂತೀರಾ? ಇದಕ್ಕಿಂತ ಡೇಂಜರೆಸ್​ ಮತ್ತೊಂದಿಲ್ಲ ಅನ್ನೋದಕ್ಕೆ ಇವೇ ನೋಡಿ ಕಾರಣ
 Constant Sneeze

ಪ್ರತಿದಿನ ವ್ಯಾಯಾಮ ಮಾಡಿ

ಪ್ರತಿದಿನ ವಾಕಿಂಗ್, ಯೋಗ ಮತ್ತು ಧ್ಯಾನದಂತಹ ಚಟುವಟಿಕೆಗಳಿಗೆ ಸಮಯ ಮೀಸಲಿಡಿ. ನಿಯಮಿತ ದೈಹಿಕ ಚಟುವಟಿಕೆ ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನಕಾರಿ. ಆದರೆ, ವ್ಯಾಯಾಮವೊಂದರಿಂದಲೇ ಅಲರ್ಜಿಕ್ ರೈನೈಟಿಸ್ ಗುಣವಾಗುತ್ತದೆ ಎಂದರ್ಥವಲ್ಲ. ಈ ಎಲ್ಲವನ್ನೂ ಸರಿಯಾಗಿ ಫಾಲೋ ಮಾಡುವ ಮೂಲಕ ಹಂತ ಹಂತವಾಗಿ ಗುಣ ಪಡಿಸಿಕೊಳ್ಳಬಹುದು.

ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?

ಬೆಳಗ್ಗೆ ಸತತವಾಗಿ ಸೀನು ಬರುವುದು, ಮೂಗು ಸೋರುವುದು ಮತ್ತು ಕಣ್ಣುಗಳಲ್ಲಿ ತುರಿಕೆ ಕಾಣಿಸಿಕೊಳ್ಳುವುದು ಹೀಗೆ ಮುಂದುವರಿದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಸೂಕ್ತ ಪರೀಕ್ಷೆಯ ಮೂಲಕ ಸಮಸ್ಯೆಯ ಕಾರಣ ತಿಳಿದುಕೊಂಡು ಚಿಕಿತ್ಸೆ ಪಡೆಯಬಹುದು. ದೈನಂದಿನ ಅಭ್ಯಾಸಗಳಲ್ಲಿ ಬದಲಾವಣೆ ಮಾಡಿಕೊಳ್ಳುವುದರ ಜತೆಗೆ ವೈದ್ಯರ ಸಲಹೆ ಪಾಲಿಸುವುದೂ ಮುಖ್ಯ,(ಏಜೆನ್ಸೀಸ್).