ಅಂಡಾಣುಗಳ ಕೊರತೆಯ ನಡುವೆಯೂ ತಾಯ್ತನದ ಕನಸು ಸಾಕಾರ

ವೈಯಕ್ತೀಕರಿಸಿದ 'ಐವಿಎಫ್' ಹಾಗೂ ಫಲವತ್ತತೆ ಸಂರಕ್ಷಣೆ ಚಿಕಿತ್ಸೆಯ ಮೂಲಕ ಮಿಲನ್ ಆಸ್ಪತ್ರೆಯ ಯಶಸ್ಸು
ಮಿಲನ್ ಫರ್ಟಿಲಿಟಿ-ಬರ್ತಿಂಗ್ ಆಸ್ಪತ್ರೆಯ ನಿರ್ದೇಶಕಿ ಅಂಜಲಿ ಅಜಯ್‌ಕುಮಾರ್; ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಹಿರಿಯ ಸಲಹೆಗಾರ್ತಿ ಡಾ. ವಾರಿಣಿ ಎನ್. ಸಂತಾನೋತ್ಪತ್ತಿ ಔಷಧ ಮತ್ತು ಸ್ತ್ರೀರೋಗ ಶಾಸ್ತ್ರದ ಸಲಹೆಗಾರ್ತಿ ಡಾ. ಟಿ. ಶಿಲ್ಪಾ ರೆಡ್ಡಿ, ಭ್ರೂಣಶಾಸ್ತ್ರದ ವೈಜ್ಞಾನಿಕ ನಿರ್ದೇಶಕ ಮತ್ತು ಮುಖ್ಯಸ್ಥ ಡಾ. ಮೊಹಮ್ಮದ್ ಅಶ್ರಫ್ ಸಿ. ಮತ್ತು ಸಂತಾನೋತ್ಪತ್ತಿ ಔಷಧದ ಜೂನಿಯರ್ ಸಲಹೆಗಾರ್ತಿ ಡಾ. ಮೋನಿಷಾ ರವಿ.
ಮಿಲನ್ ಫರ್ಟಿಲಿಟಿ-ಬರ್ತಿಂಗ್ ಆಸ್ಪತ್ರೆಯ ನಿರ್ದೇಶಕಿ ಅಂಜಲಿ ಅಜಯ್‌ಕುಮಾರ್; ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಹಿರಿಯ ಸಲಹೆಗಾರ್ತಿ ಡಾ. ವಾರಿಣಿ ಎನ್. ಸಂತಾನೋತ್ಪತ್ತಿ ಔಷಧ ಮತ್ತು ಸ್ತ್ರೀರೋಗ ಶಾಸ್ತ್ರದ ಸಲಹೆಗಾರ್ತಿ ಡಾ. ಟಿ. ಶಿಲ್ಪಾ ರೆಡ್ಡಿ, ಭ್ರೂಣಶಾಸ್ತ್ರದ ವೈಜ್ಞಾನಿಕ ನಿರ್ದೇಶಕ ಮತ್ತು ಮುಖ್ಯಸ್ಥ ಡಾ. ಮೊಹಮ್ಮದ್ ಅಶ್ರಫ್ ಸಿ. ಮತ್ತು ಸಂತಾನೋತ್ಪತ್ತಿ ಔಷಧದ ಜೂನಿಯರ್ ಸಲಹೆಗಾರ್ತಿ ಡಾ. ಮೋನಿಷಾ ರವಿ.ಏಜೆನ್ಸಿ
Published on: 

ಬೆಂಗಳೂರು: ಪದೇಪದೇ ಮರುಕಳಿಸುತ್ತಿದ್ದ ಅಪರೂಪದ ಅಂಡಾಶಯದ ಗೆಡ್ಡೆಯಿಂದ ಬಳಲುತ್ತಿದ್ದ 32 ವರ್ಷದ ಮಹಿಳೆಯೊಬ್ಬರು, ಬೆಂಗಳೂರಿನ ಮಿಲನ್ ಫರ್ಟಿಲಿಟಿ ಮತ್ತು ಬರ್ತಿಂಗ್ ಆಸ್ಪತ್ರೆಯ ತಜ್ಞರ ತಂಡದ ನೆರವಿನೊಂದಿಗೆ ಯಶಸ್ವಿಯಾಗಿ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದಾರೆ. ಅತ್ಯಂತ ಯೋಜಿತ ಫಲವತ್ತತೆ ಸಂರಕ್ಷಣೆ ಹಾಗೂ ಐವಿಎಫ್ ಚಿಕಿತ್ಸಾ ವಿಧಾನವು ಆಕೆಯ ತಾಯ್ತನದ ಕನಸನ್ನು ಸಾಕಾರಗೊಳಿಸಿದೆ.

ಮಿಲನ್ ಆಸ್ಪತ್ರೆಯ ರಿಪ್ರೊಡಕ್ಟಿವ್ ಮೆಡಿಸಿನ್ ಅಂಡ್ ಗೈನಾಕಾಲಜಿ ವಿಭಾಗದ ಕನ್ಸಲ್ಟೆಂಟ್ ಡಾ. ಶಿಲ್ಪಾ ರೆಡ್ಡಿ, ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಹಿರಿಯ ಕನ್ಸಲ್ಟೆಂಟ್ ಡಾ. ವಾರಿಣಿ ಎನ್., ಎಂಬ್ರಿಯಾಲಜಿ ವಿಭಾಗದ ಮುಖ್ಯಸ್ಥ ಹಾಗೂ ಸೈಂಟಿಫಿಕ್ ಡೈರೆಕ್ಟರ್ ಡಾ. ಮೊಹಮ್ಮದ್ ಅಶ್ರಫ್ ಸಿ. ಮತ್ತು ರಿಪ್ರೊಡಕ್ಟಿವ್ ಮೆಡಿಸಿನ್ ಜೂನಿಯರ್ ಕನ್ಸಲ್ಟೆಂಟ್ ಡಾ. ಮೋನಿಷಾ ರವಿ ಅವರ ನೇತೃತ್ವದಲ್ಲಿ ಈ ಸಂಕೀರ್ಣ ಚಿಕಿತ್ಸೆ ನೆರವೇರಿದೆ. ಮಹಿಳೆ ಈ ಹಿಂದೆಯೇ ಬೇರೊಂದು ಆಸ್ಪತ್ರೆಯಲ್ಲಿ ಎರಡು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರಿಂದ, ಅಂಡಾಶಯದ ಅಂಗಾಂಶ ಗಣನೀಯವಾಗಿ ಕ್ಷೀಣಿಸಿತ್ತು ಹಾಗೂ ಅಂಡಾಣುಗಳ ಸಂಖ್ಯೆಯೂ ತೀರಾ ಇಳಿಮುಖವಾಗಿತ್ತು. ಇಷ್ಟೆಲ್ಲಾ ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ, ತನ್ನದೇ ಅಂಡಾಣುಗಳ ಮೂಲಕ ಮಗು ಪಡೆಯಬೇಕೆಂಬ ಆಕೆಯ ಅದಮ್ಯ ಇಚ್ಛಾಶಕ್ತಿಯನ್ನು ವೈದ್ಯರ ತಂಡ ಯಶಸ್ವಿಯಾಗಿ ಕೈಗೂಡಿಸಿದೆ.

ಮಹಿಳೆಗೆ 30 ವರ್ಷ ವಯಸ್ಸಿದ್ದಾಗ ಬೇರೊಂದು ಆಸ್ಪತ್ರೆಯಲ್ಲಿ ಆಕೆಯ ಬಲ ಅಂಡಾಶಯದಲ್ಲಿ 11.2 × 7.6 × 8 ಸೆಂ.ಮೀ ಗಾತ್ರದ ದೊಡ್ಡ ಸಿಸ್ಟ್ ಹಾಗೂ ಎಡ ಅಂಡಾಶಯದಲ್ಲಿ ಸಣ್ಣ ಎಂಡೊಮೆಟ್ರಿಯೋಟಿಕ್ ಸಿಸ್ಟ್ ಇರುವುದು ಪತ್ತೆಯಾಗಿತ್ತು. 'ಮಿನಿಮಲಿ ಇನ್ವೇಸಿವ್ ಸರ್ಜರಿ'ಗೆ ಒಳಗಾಗಿದ್ದ ಆಕೆಗೆ, 'ಬಾರ್ಡರ್‌ಲೈನ್ ಸೆರೋಮ್ಯುಸಿನಸ್ ಓವೇರಿಯನ್ ಟ್ಯೂಮರ್ ವಿತ್ ಮೈಕ್ರೋಇನ್ವೇಷನ್' ಎಂಬ ಅಪರೂಪದ ಗೆಡ್ಡೆಯಿರುವುದು ದೃಢಪಟ್ಟಿತ್ತು. ಇದು ಸಂಪೂರ್ಣವಾಗಿ ಕ್ಯಾನ್ಸರ್ ಆಗಿರದಿದ್ದರೂ, ಅಸಹಜ ಜೀವಕೋಶಗಳು ಅಂಡಾಶಯದ ಸುತ್ತಲಿನ ಅಂಗಾಂಶವನ್ನು ಪ್ರವೇಶಿಸುವ ಆರಂಭಿಕ ಲಕ್ಷಣಗಳು ಗೋಚರಿಸಿದ್ದವು. ಅಲ್ಲದೆ, ಹೊಟ್ಟೆಯ ಅಂಗಗಳ ಸುತ್ತಲಿನ ದ್ರವದಲ್ಲೂ ಅಸಹಜ ಜೀವಕೋಶಗಳು ಪತ್ತೆಯಾಗಿದ್ದರಿಂದ ನಿರಂತರ ಅಲ್ಟ್ರಾಸೌಂಡ್ ನಿಗಾದಲ್ಲಿ ಇರಿಸಲಾಗಿತ್ತು.

ಮೊದಲ ಶಸ್ತ್ರಚಿಕಿತ್ಸೆಯ ಹದಿನೈದು ತಿಂಗಳ ಬಳಿಕ ನಡೆಸಿದ ಎಂಆರ್‌ಐ ಸ್ಕ್ಯಾನಿಂಗ್‌ನಲ್ಲಿ, ಎಡ ಅಂಡಾಶಯದಲ್ಲಿ 15 x 10 ಸೆಂ.ಮೀ. ಗಾತ್ರದ ದೊಡ್ಡ ಸಿಸ್ಟ್ ಇರುವುದು ಪತ್ತೆಯಾಯಿತು. ಇದಕ್ಕಾಗಿ ಮರು ಶಸ್ತ್ರಚಿಕಿತ್ಸೆ ನಡೆಸಿದಾಗ, ಅಸಹಜ ಜೀವಕೋಶಗಳ ಬೆಳವಣಿಗೆಗೆ ಕಾರಣವಾಗುವ ಅಪಾಯಕಾರಿ ಅಂಶವಾದ 'ಮೈಕ್ರೋಇನ್ವೇಸಿವ್ ಸೆರೋಮ್ಯುಸಿನಸ್ ಬಿಒಟಿ' ದೃಢಪಟ್ಟಿತ್ತು.

ದುರದೃಷ್ಟವಶಾತ್, ಕೇವಲ ಮೂರು ತಿಂಗಳ ಅಂತರದಲ್ಲಿ ಅದೇ ಎಡ ಅಂಡಾಶಯದಲ್ಲಿ ಮತ್ತೆ ಗೆಡ್ಡೆ ಕಾಣಿಸಿಕೊಂಡಿತು. ಈ ಹಂತದಲ್ಲಿ, ಕ್ಯಾನ್ಸರ್ ಅಥವಾ ತತ್ಸಂಬಂಧಿ ಪರಿಸ್ಥಿತಿಗಳಿರುವ ರೋಗಿಗಳಲ್ಲಿ ಫಲವತ್ತತೆಯನ್ನು ಕಾಪಾಡುವಲ್ಲಿ ಪರಿಣತಿ ಹೊಂದಿರುವ 'ಮಿಲನ್ ಆಸ್ಪತ್ರೆ'ಯ ವಿಶೇಷ ಆಂಕೊಫರ್ಟಿಲಿಟಿ ವಿಭಾಗಕ್ಕೆ ಅವರನ್ನು ಉನ್ನತ ಚಿಕಿತ್ಸೆಗಾಗಿ ಶಿಫಾರಸು ಮಾಡಲಾಯಿತು.

ಮಿಲನ್ ಆಸ್ಪತ್ರೆಯಲ್ಲಿ ಇಮೇಜಿಂಗ್ ಸ್ಕ್ಯಾನಿಂಗ್ ನಡೆಸಿದಾಗ, ಎಡ ಅಂಡಾಶಯದಲ್ಲಿ 11.3 × 7.4 × 7.4 ಸೆಂ.ಮೀ ಅಳತೆಯ ಸಂಕೀರ್ಣ ಸಿಸ್ಟ್ ಇರುವುದು ಹಾಗೂ ಕೇವಲ ಎರಡು ಫಾಲಿಕಲ್ಸ್ (ಅಂಡಾಣುಗಳನ್ನು ಹೊಂದಿರುವ ರಚನೆಗಳು) ಮಾತ್ರ ಇರುವುದು ಕಂಡುಬಂತು. ಬಲ ಅಂಡಾಶಯ ಸಂಪೂರ್ಣವಾಗಿ ಅಗೋಚರವಾಗಿತ್ತು. ಆಕೆಯ AMH ಮಟ್ಟ 0.6 ng/ml ಗೆ ಕುಸಿದಿದ್ದು, ಅಂಡಾಣುಗಳ ಉತ್ಪಾದನಾ ಸಾಮರ್ಥ್ಯ ತೀರಾ ಕ್ಷೀಣಿಸಿರುವುದನ್ನು ಸ್ಪಷ್ಟಪಡಿಸುತ್ತಿತ್ತು.

ಈ ಸಂಕೀರ್ಣ ಪ್ರಕರಣವನ್ನು ರಿಪ್ರೊಡಕ್ಟಿವ್ ಮೆಡಿಸಿನ್, ಗೈನಾಕಾಲಜಿಕ್ ಆಂಕೊಲಾಜಿ ಹಾಗೂ ಪೆಥಾಲಜಿ ತಜ್ಞರ ತಂಡ ಕೂಲಂಕಷವಾಗಿ ಪರಿಶೀಲಿಸಿತು. ರೋಗಿಯ ದೀರ್ಘಕಾಲೀನ ಸುರಕ್ಷತೆಯ ದೃಷ್ಟಿಯಿಂದ, ಎರಡೂ ಅಂಡಾಶಯಗಳು, ಫಾಲೋಪಿಯನ್ ಟ್ಯೂಬ್‌ಗಳು ಮತ್ತು ಹೊಟ್ಟೆಯ ಅಂಗಗಳನ್ನು ಆವರಿಸುವ ಕೊಬ್ಬಿನ ಅಂಗಾಂಶದ ಪದರವಾದ 'ಒಮೆಂಟಮ್' ಅನ್ನು ಸಂಪೂರ್ಣವಾಗಿ ತೆಗೆದುಹಾಕುವುದೇ ಸೂಕ್ತ ಪರಿಹಾರ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು. ಆದರೆ, ವೈದ್ಯಕೀಯ ಸವಾಲುಗಳ ನಡುವೆಯೂ ದಂಪತಿಯು ಸ್ವಂತ ಅಂಡಾಣುಗಳ ಮೂಲಕವೇ ಜೈವಿಕ ಮಗುವನ್ನು ಪಡೆಯುವ ಆಶಯ ವ್ಯಕ್ತಪಡಿಸಿದ್ದರು.

ದಂಪತಿಗೆ ವಿಸ್ತೃತ ಕೌನ್ಸೆಲಿಂಗ್ ನಡೆಸಿದ ತಜ್ಞರ ತಂಡವು, ಎರಡು ಹಂತದ ನಿಖರ ಚಿಕಿತ್ಸಾ ಯೋಜನೆಯನ್ನು ರೂಪಿಸಿತು. ಮೊದಲ ಹಂತದಲ್ಲಿ, ಉಳಿದಿರುವ ಅಂಡಾಶಯದ ಅಂಗಾಂಶವನ್ನು ಸಂರಕ್ಷಿಸುತ್ತಲೇ ಮರುಕಳಿಸುತ್ತಿದ್ದ ಗೆಡ್ಡೆಗೆ ಶಸ್ತ್ರಚಿಕಿತ್ಸೆ ಮಾಡುವುದು. ತರುವಾಯ, ನಿಯಂತ್ರಿತ ಓವೇರಿಯನ್ ಸ್ಟಿಮ್ಯುಲೇಶನ್ ಮೂಲಕ ಅಂಡಾಣುಗಳನ್ನು ಹೊರತೆಗೆದು ಅಂತಿಮ ಚಿಕಿತ್ಸೆಗೆ ಸಜ್ಜಾಗಲು ನಿರ್ಧರಿಸಲಾಯಿತು.

ಅದರಂತೆ, ರೋಗಿಯ ಅಂಡಾಶಯದ ಹಾನಿಗೊಳಗಾದ ಅಂಗಾಂಶವನ್ನು ತೆಗೆದುಹಾಕಲು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಬಯಾಪ್ಸಿ ಪರೀಕ್ಷೆಯಲ್ಲಿ ಇದು 'ಬಾರ್ಡರ್‌ಲೈನ್ ಸೆರೋಮ್ಯುಸಿನಸ್ ಓವೇರಿಯನ್ ಟ್ಯೂಮರ್ ವಿತ್ ಮೈಕ್ರೋಇನ್ವೇಷನ್' ಎಂದು ಮರುದೃಢಪಟ್ಟರೂ, ಗೆಡ್ಡೆಯು ಸುತ್ತಲಿನ ಅಂಗಾಂಶಗಳಿಗೆ ಹರಡಿರಲಿಲ್ಲ ಎಂಬುದು ವೈದ್ಯರ ತಂಡಕ್ಕೆ ಬಹುದೊಡ್ಡ ನಿರಾಳತೆ ನೀಡಿತ್ತು.

ಶಸ್ತ್ರಚಿಕಿತ್ಸೆಯ ಬಳಿಕ, ಈಸ್ಟ್ರೊಜೆನ್ ಹಾರ್ಮೋನ್ ಪರಿಣಾಮವನ್ನು ಕನಿಷ್ಠ ಮಟ್ಟದಲ್ಲಿರಿಸುವ ಉದ್ದೇಶದಿಂದ ಫರ್ಟಿಲಿಟಿ ತಂಡವು ಐವಿಎಫ್ ಪ್ರಕ್ರಿಯೆಗೆ ಚಾಲನೆ ನೀಡಿತು. ಉಳಿದಿರುವ ಅಂಗಾಂಶದಲ್ಲಿ ಅಂಡಾಣು ಉತ್ಪಾದನೆಯನ್ನು ಪ್ರಚೋದಿಸಲು 'ಲೋ-ಈಸ್ಟ್ರೊಜೆನ್ ಸ್ಟಿಮ್ಯುಲೇಶನ್ ಪ್ರೋಟೋಕಾಲ್' ಅಳವಡಿಸಲಾಯಿತು. ಆದಾಗ್ಯೂ, ಮೊದಲ ಭ್ರೂಣ ವರ್ಗಾವಣೆ ವಿಫಲವಾಯಿತು. ಈ ಹಿನ್ನೆಲೆಯಲ್ಲಿ ಹಿಸ್ಟರೊಸ್ಕೋಪಿ ಮತ್ತು ವಿಶೇಷ ಪರೀಕ್ಷೆಗಳ ಮೂಲಕ ಗರ್ಭಾಶಯವನ್ನು ಮೌಲ್ಯಮಾಪನ ಮಾಡಿದಾಗ, ಗರ್ಭಾಶಯದ ಒಳಪದರದಲ್ಲಿ ದೀರ್ಘಕಾಲದ ಉರಿಯೂತ ಇರುವುದು ಪತ್ತೆಯಾಯಿತು. ತಕ್ಷಣವೇ ಆ್ಯಂಟಿಬಯೋಟಿಕ್ಸ್ ಮತ್ತು ಪ್ರೋಬಯೋಟಿಕ್ಸ್ ಮೂಲಕ ಚಿಕಿತ್ಸೆ ನೀಡಿ ಗರ್ಭಾಶಯವನ್ನು ಗರ್ಭಧಾರಣೆಗೆ ಪೂರಕವಾಗಿ ಸಜ್ಜುಗೊಳಿಸಲಾಯಿತು.

ಮುಂದಿನ ಪ್ರಯತ್ನದಲ್ಲಿ, ಕೃತಕ ಹಾರ್ಮೋನುಗಳ ಪ್ರಭಾವವನ್ನು ತಪ್ಪಿಸಲು ವೈದ್ಯರ ತಂಡವು 'ನ್ಯಾಚುರಲ್-ಸೈಕಲ್ ಫ್ರೋಜನ್ ಎಂಬ್ರಿಯೋ ಟ್ರಾನ್ಸ್‌ಫರ್' ವಿಧಾನವನ್ನು ಅನುಸರಿಸಿತು. ಈ ಬಾರಿ ಗರ್ಭಾಶಯದ ಒಳಪದರ ಅತ್ಯುತ್ತಮವಾಗಿ ಅಭಿವೃದ್ಧಿಗೊಂಡಿದ್ದರಿಂದ, ಉತ್ತಮ ಗುಣಮಟ್ಟದ ಒಂದೇ ಒಂದು '4AA ಬ್ಲಾಸ್ಟೊಸಿಸ್ಟ್' ಅನ್ನು ಯಶಸ್ವಿಯಾಗಿ ವರ್ಗಾಯಿಸಲಾಯಿತು.

ಭ್ರೂಣ ವರ್ಗಾವಣೆಯಾದ ಹದಿನಾಲ್ಕು ದಿನಗಳ ನಂತರ ನಡೆಸಿದ ಗರ್ಭಧಾರಣಾ ಪರೀಕ್ಷೆಯಲ್ಲಿ ಪಾಸಿಟಿವ್ ಫಲಿತಾಂಶ ಹೊರಬಿದ್ದಿತ್ತು. ಏಳನೇ ವಾರದ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್‌ನಲ್ಲಿ ಆರೋಗ್ಯಕರ ಗರ್ಭಧಾರಣೆ ಖಚಿತವಾಯಿತು. ಗರ್ಭಾವಸ್ಥೆಯ ಆರೈಕೆಯ ಜೊತೆಜೊತೆಗೆ ನಿಯಮಿತ ಕ್ಯಾನ್ಸರ್ ನಿಗಾ ವಹಿಸಿದ್ದರ ಫಲವಾಗಿ, ರೋಗಿಯು ಕಡೆಗೂ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದರು. ಮಹಿಳೆಯ ಸುರಕ್ಷತೆಯನ್ನು ಕೇಂದ್ರಬಿಂದುವಾಗಿರಿಸಿಕೊಂಡು, ಫರ್ಟಿಲಿಟಿ-ಪ್ರಿಸರ್ವಿಂಗ್ ಶಸ್ತ್ರಚಿಕಿತ್ಸೆ, ಲೋ-ಈಸ್ಟ್ರೊಜೆನ್ ಸ್ಟಿಮ್ಯುಲೇಶನ್, ಎಂಬ್ರಿಯೋ ಪೂಲಿಂಗ್ ಹಾಗೂ ನಿಖರವಾದ ಭ್ರೂಣ ವರ್ಗಾವಣೆಯಂತಹ ನವೀನ ತಂತ್ರಜ್ಞಾನಗಳ ಸಮ್ಮಿಲನದೊಂದಿಗೆ ವೈದ್ಯರ ತಂಡ ಈ ಅಪರೂಪದ ತಾಯ್ತನವನ್ನು ಸಾಕಾರಗೊಳಿಸಿದೆ.

ಈ ಬಗ್ಗೆ ಮಿಲನ್ ಆಸ್ಪತ್ರೆಯ ರಿಪ್ರೊಡಕ್ಟಿವ್ ಮೆಡಿಸಿನ್ ಅಂಡ್ ಗೈನಾಕಾಲಜಿ ವಿಭಾಗದ ಕನ್ಸಲ್ಟೆಂಟ್ ಡಾ. ಟಿ. ಶಿಲ್ಪಾ ರೆಡ್ಡಿ ಪ್ರತಿಕ್ರಿಯಿಸಿ, “ಹಾರ್ಮೋನುಗಳ ಪರಿಣಾಮವನ್ನು ಕನಿಷ್ಠ ಮಟ್ಟದಲ್ಲಿಟ್ಟುಕೊಂಡು ಮಹಿಳೆಯ ಫಲವತ್ತತೆಯನ್ನು ಕಾಪಾಡುವುದು ನಮ್ಮ ಮೊದಲ ಆದ್ಯತೆಯಾಗಿತ್ತು. ನಮ್ಮ ವೈಯಕ್ತೀಕರಿಸಿದ ಐವಿಎಫ್ ವಿಧಾನ ಮತ್ತು ನ್ಯಾಚುರಲ್-ಸೈಕಲ್ ಎಂಬ್ರಿಯೋ ಟ್ರಾನ್ಸ್‌ಫರ್ ಈ ಯಶಸ್ವಿ ಗರ್ಭಧಾರಣೆಗೆ ಕಾರಣವಾಯಿತು” ಎಂದು ತಿಳಿಸಿದರು.

ಮಿಲನ್ ಆಸ್ಪತ್ರೆಯ ರಿಪ್ರೊಡಕ್ಟಿವ್ ಮೆಡಿಸಿನ್ ವಿಭಾಗದ ಜೂನಿಯರ್ ಕನ್ಸಲ್ಟೆಂಟ್ ಡಾ. ಮೋನಿಷಾ ರವಿ ಮಾತನಾಡಿ, “ಪದೇಪದೇ ಮರುಕಳಿಸುತ್ತಿದ್ದ ಸಂಕೀರ್ಣ ಕಾಯಿಲೆ ಮತ್ತು ಅತ್ಯಂತ ಕ್ಷೀಣಿಸಿದ್ದ ಅಂಡಾಣುಗಳ ನಡುವೆಯೂ, ರೋಗಿಯ ಸುರಕ್ಷತೆಗೆ ಯಾವುದೇ ಚ್ಯುತಿ ಬಾರದಂತೆ ಆಕೆಯ ಜೈವಿಕ ತಾಯ್ತನದ ಕನಸನ್ನು ನನಸು ಮಾಡುವಲ್ಲಿ ನಾವು ಯಶಸ್ವಿಯಾಗಿದ್ದೇವೆ” ಎಂದರು.

ಮಿಲನ್ ಆಸ್ಪತ್ರೆಯ ನಿರ್ದೇಶಕಿ ಅಂಜಲಿ ಅಜಯ್‌ಕುಮಾರ್ ವಿವರಿಸುತ್ತಾ, “ವೈದ್ಯಕೀಯ ಸವಾಲುಗಳು ಸಂಕೀರ್ಣವಾಗಿವೆ ಎಂಬ ಏಕೈಕ ಕಾರಣಕ್ಕೆ ಮಹಿಳೆಯೊಬ್ಬರು ತಾಯಿಯಾಗುವ ಅವಕಾಶವನ್ನು ಕಡೆಗಣಿಸಬಾರದು. ಅದರಲ್ಲೂ ವಿಶೇಷವಾಗಿ ಅಂಡಾಶಯದ ಗಂಭೀರ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುವಾಗ ಭವಿಷ್ಯದ ಸಂತಾನೋತ್ಪತ್ತಿಯ ಮೇಲಾಗುವ ಪರಿಣಾಮಗಳನ್ನು ಅವಲೋಕಿಸಿ, ಫಲವತ್ತತೆ ಸಂರಕ್ಷಣೆಯ ಬಗ್ಗೆ ಮುಂಚಿತವಾಗಿಯೇ ನಿರ್ಧರಿಸುವುದು ಅತ್ಯಗತ್ಯ ಎಂಬುದನ್ನು ಈ ಪ್ರಕರಣ ಸಾಬೀತುಪಡಿಸಿದೆ. ಗುಣಮಟ್ಟದ ಫರ್ಟಿಲಿಟಿ ಆರೈಕೆ ಎಂದರೆ ಕೇವಲ ಸದ್ಯದ ಸಮಸ್ಯೆಗೆ ಚಿಕಿತ್ಸೆ ನೀಡುವುದಷ್ಟೇ ಅಲ್ಲ, ಭವಿಷ್ಯದ ಸಾಧ್ಯತೆಗಳನ್ನು ತೆರೆದಿಡುವುದು ಎಂದು ಮಿಲನ್‌ನಲ್ಲಿ ನಾವು ದೃಢವಾಗಿ ನಂಬಿದ್ದೇವೆ. ಪ್ರತಿಯೊಂದು ಪ್ರಕರಣವೂ ತನ್ನದೇ ಆದ ಸವಾಲುಗಳನ್ನು ಹೊಂದಿದ್ದರೂ, ಪರಿಣತರ ಸೂಕ್ತ ಮಾರ್ಗದರ್ಶನ, ಸಕಾಲಿಕ ನಿರ್ಧಾರಗಳು ಮತ್ತು ವೈಯಕ್ತೀಕರಿಸಿದ ಚಿಕಿತ್ಸಾ ವಿಧಾನವು ಅತ್ಯದ್ಭುತ ಫಲಿತಾಂಶ ನೀಡಬಲ್ಲದು. ಮಹಿಳೆಯರು ತಮ್ಮ ಸುರಕ್ಷತೆ ಅಥವಾ ಅಗತ್ಯ ಚಿಕಿತ್ಸೆಯಲ್ಲಿ ರಾಜಿ ಮಾಡಿಕೊಳ್ಳದೆ, ತಮ್ಮ ಫಲವತ್ತತೆಯ ಬಗ್ಗೆ ನಿಖರವಾದ ಹಾಗೂ ಜಾಗೃತ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗುವುದೇ ನಮ್ಮ ಪ್ರಮುಖ ಗುರಿಯಾಗಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net