Gooseberry: ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಪೌಷ್ಟಿಕಾಂಶಯುಕ್ತ ಪದಾರ್ಥಗಳನ್ನು ಸೇರಿಸಿಕೊಳ್ಳುವುದು, ದೇಹದ ನೈಸರ್ಗಿಕ ರೋಗನಿರೋಧಕ ವ್ಯವಸ್ಥೆಯು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಪ್ರಮುಖ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ, ದೇಹಕ್ಕೆ ಅಗತ್ಯವಿರುವ ವಿವಿಧ ಪೋಷಕಾಂಶಗಳನ್ನು ಒದಗಿಸುವ ನೈಸರ್ಗಿಕ ಆಹಾರಗಳ ಪೈಕಿ ಬೆಟ್ಟದ ನೆಲ್ಲಿಕಾಯಿ ಅಥವಾ ಆಮ್ಲ ವಿಶಿಷ್ಟ ಸ್ಥಾನವನ್ನು ಹೊಂದಿದೆ.
ಆಕಾರದಲ್ಲಿ ಚಿಕ್ಕದಾಗಿದ್ದರೂ ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ, ಪಾಲಿಫೆನಾಲ್ಗಳು, ಫ್ಲೇವನಾಯ್ಡ್ಗಳು ಮತ್ತು ಟ್ಯಾನಿನ್ಗಳಂತಹ ನಮ್ಮ ದೇಹಕ್ಕೆ ಬೇಕಾದ ಹತ್ತು ಹಲವು ಪ್ರಯೋಜನಕಾರಿ ಸಂಯುಕ್ತಗಳು ಸಮೃದ್ಧವಾಗಿವೆ. ವಿವರಿಸಿ ಹೇಳುವುದಾದರೆ, ವಿಟಮಿನ್ ಸಿ ದೇಹದ ರೋಗನಿರೋಧಕ ವ್ಯವಸ್ಥೆಯು ಸಹಜವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಚರ್ಮ ಮತ್ತು ಅಂಗಾಂಶಗಳ ಆರೋಗ್ಯವನ್ನು ನೆಲ್ಲಿ ಸುಧಾರಿಸುತ್ತದೆ. ಗಾಯಗಳು ಬೇಗ ಗುಣವಾಗಲು ನೆರವಾಗುತ್ತದೆ ಮತ್ತು ದೇಹವು ಕಬ್ಬಿಣಾಂಶವನ್ನು ಹೀರಿಕೊಳ್ಳಲು ಸಹಕರಿಸುತ್ತದೆ.
ಇಷ್ಟಲ್ಲದೇ, ನೆಲ್ಲಿಕಾಯಿಯಲ್ಲಿರುವ ಆ್ಯಂಟಿಆಕ್ಸಿಡೆಂಟ್ ಗುಣಲಕ್ಷಣಗಳನ್ನು ಹೊಂದಿರುವ ಸಸ್ಯಜನ್ಯ ಸಂಯುಕ್ತಗಳು, ದೇಹದ ಜೀವಕೋಶಗಳಿಗೆ ಹಾನಿಯುಂಟುಮಾಡಬಲ್ಲ 'ಆಕ್ಸಿಡೇಟಿವ್ ಸ್ಟ್ರೆಸ್' (Oxidative Stress) ಅನ್ನು ಹತೋಟಿಗೆ ತರುವಲ್ಲಿ ಸಹಾಯ ಮಾಡುತ್ತವೆ. ಈ ರೀತಿಯಾಗಿ, ಜೀವಕೋಶಗಳ ಆರೋಗ್ಯವನ್ನು ರಕ್ಷಿಸುವಲ್ಲಿ ಮತ್ತು ದೇಹದ ಸಹಜ ಕಾರ್ಯಚಟುವಟಿಕೆಗಳನ್ನು ಕಾಪಾಡಿಕೊಳ್ಳುವಲ್ಲಿ ನೆಲ್ಲಿಕಾಯಿ ಅತ್ಯಂತ ಉಪಯುಕ್ತ.
ಅದೇ ರೀತಿ, ನೆಲ್ಲಿಕಾಯಿಯಲ್ಲಿರುವ ಪೋಷಕಾಂಶಗಳು ಬಿಳಿ ರಕ್ತ ಕಣಗಳ (White Blood Cells) ಸಾಮಾನ್ಯ ಕಾರ್ಯನಿರ್ವಹಣೆಯನ್ನು ಬೆಂಬಲಿಸುತ್ತವೆ. ಇವು ರೋಗನಿರೋಧಕ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕೇವಲ ನೆಲ್ಲಿಯನ್ನು ಸೇವಿಸುವುದರಿಂದಲೇ ತಕ್ಷಣವೇ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಅಥವಾ ಡೆಂಗ್ಯೂನಂತಹ ಸೋಂಕುಗಳು ತಡೆಗಟ್ಟಲ್ಪಡುತ್ತವೆ ಎಂಬುದು ನಿಜವಲ್ಲ.
ಸಮತೋಲಿತ ಆಹಾರ, ಸಾಕಷ್ಟು ನಿದ್ರೆ, ವ್ಯಾಯಾಮ ಮತ್ತು ಆರೋಗ್ಯಕರ ಜೀವನಶೈಲಿಯೊಂದಿಗೆ ಒಟ್ಟಾಗಿ ರೋಗನಿರೋಧಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಾಗಾದರೆ, ನೆಲ್ಲಿಕಾಯಿಯನ್ನು ಕೇವಲ ಪ್ರತ್ಯೇಕವಾಗಿ ಸೇವಿಸುವ ಬದಲು, ಇತರ ಪೌಷ್ಟಿಕ ಆಹಾರಗಳೊಂದಿಗೆ ಸೇರಿಸಿ ತಿಂದರೆ ಹೆಚ್ಚುವರಿ ಪೌಷ್ಟಿಕಾಂಶದ ಪ್ರಯೋಜನಗಳನ್ನು ಪಡೆಯಬಹುದಾ? ಎಂಬ ಗೊಂದಲ ಹಾಗೂ ಪ್ರಶ್ನೆಗಳಿಗೆ ಹೀಗಿದೆ ನೋಡಿ ಉತ್ತರ.
ಈ ಹಿನ್ನೆಲೆಯಲ್ಲಿ, ನೆಲ್ಲಿಕಾಯಿಯೊಂದಿಗೆ ಯಾವ ಆಹಾರಗಳನ್ನು ಸೇವಿಸುವುದು ಸೂಕ್ತ, ಅವುಗಳನ್ನು ಒಟ್ಟಿಗೆ ಸೇವಿಸುವುದರಿಂದ ದೇಹಕ್ಕೆ ಸಿಗುವ ಪ್ರಯೋಜನಗಳೇನು ಮತ್ತು ಇವುಗಳನ್ನು ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಹೇಗೆ ಸೇರಿಸಿಕೊಳ್ಳಬಹುದು ಎಂಬುದರ ಕುರಿತು ವಿವರವಾಗಿ ನೋಡೋಣ.
ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಜೇನುತುಪ್ಪವು ಗಂಟಲು ನೋವನ್ನು ಶಮನಗೊಳಿಸಲು ಮತ್ತು ದೇಹಕ್ಕೆ ಶಕ್ತಿಯನ್ನು ಒದಗಿಸುವಲ್ಲಿ ಉತ್ತಮ. ಇವೆರಡನ್ನೂ ಒಟ್ಟಿಗೆ ಸೇವಿಸುವುದರಿಂದ ದೇಹದ ನೈಸರ್ಗಿಕ ರೋಗನಿರೋಧಕ ಕಾರ್ಯಕ್ಕೆ ಪುಷ್ಠಿ ಸಿಗುತ್ತದೆ. 1 ಟೀ ಚಮಚ ನೆಲ್ಲಿಕಾಯಿ ಪುಡಿ ಅಥವಾ ರಸವನ್ನು 1 ಟೀ ಚಮಚ ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಿ.
ನೆಲ್ಲಿಕಾಯಿಯಲ್ಲಿರುವ ವಿಟಮಿನ್ ಸಿ ಮತ್ತು ಅರಿಶಿಣದಲ್ಲಿರುವ 'ಕರ್ಕ್ಯುಮಿನ್' (curcumin) ಎರಡೂ ಆ್ಯಂಟಿಆಕ್ಸಿಡೆಂಟ್ ಗುಣಲಕ್ಷಣಗಳನ್ನು ಹೊಂದಿವೆ. ಇವು ದೇಹವನ್ನು 'ಆಕ್ಸಿಡೇಟಿವ್ ಸ್ಟ್ರೆಸ್'ನಿಂದ ರಕ್ಷಿಸಲು ಮತ್ತು ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಬೆಚ್ಚಗಿನ ನೀರಿನಲ್ಲಿ 1 ಟೀ ಚಮಚ ನೆಲ್ಲಿ ಪುಡಿ ಮತ್ತು ಒಂದು ಚಿಟಿಕೆ ಅರಿಶಿಣ ಪುಡಿಯನ್ನು ಬೆರೆಸಿ ಕುಡಿಯಬಹುದು.
ಶುಂಠಿ ಮತ್ತು ನೆಲ್ಲಿಕಾಯಿಯಲ್ಲಿರುವ ನೈಸರ್ಗಿಕ ಸಂಯುಕ್ತಗಳು ದೇಹದ ಆರೋಗ್ಯವನ್ನು ಕಾಪಾಡುತ್ತದೆ. ನೆಲ್ಲಿಯು ವಿಟಮಿನ್ ಸಿ ಅನ್ನು ಒದಗಿಸಿದರೆ, ಶುಂಠಿಯು ಜೀರ್ಣಕ್ರಿಯೆಗೆ ಸಹಕಾರಿ. 2 ಟೇಬಲ್ ಚಮಚ ನೆಲ್ಲಿಕಾಯಿ ರಸ ಮತ್ತು ಅರ್ಧ ಟೀ ಚಮಚ ತುರಿದ ಶುಂಠಿಯನ್ನು ಬೆಚ್ಚಗಿನ ನೀರಿನಲ್ಲಿ ಬೆರೆಸಿ, ಬೇಕಿದ್ದರೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ ಕುಡಿಯಬಹುದು.
ನೆಲ್ಲಿಕಾಯಿ ಮತ್ತು ನಿಂಬೆ ಎರಡರಲ್ಲೂ ವಿಟಮಿನ್ ಸಿ ಇದೆ. ಇವುಗಳಲ್ಲಿರುವ ಆ್ಯಂಟಿಆಕ್ಸಿಡೆಂಟ್ಗಳು ದೇಹದ ನೈಸರ್ಗಿಕ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತವೆ. ಇವು ಚರ್ಮದ ಆರೋಗ್ಯಕ್ಕೂ ಸಹಕಾರಿಯಾಗಿವೆ. 2 ಟೇಬಲ್ ಚಮಚ ನೆಲ್ಲಿಕಾಯಿ ರಸ ಮತ್ತು ಅರ್ಧ ನಿಂಬೆ ಹಣ್ಣಿನ ರಸವನ್ನು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯಬಹುದು.
ತುಳಸಿಯಲ್ಲಿ ಆ್ಯಂಟಿಆಕ್ಸಿಡೆಂಟ್ ಗುಣಗಳಿವೆ. ನೆಲ್ಲಿಕಾಯಿಯಲ್ಲಿರುವ ವಿಟಮಿನ್ ಸಿ ದೇಹದ ನೈಸರ್ಗಿಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ಸಂಯೋಜನೆಯು ಉಸಿರಾಟದ ಆರೋಗ್ಯ ಮತ್ತು ಒಟ್ಟಾರೆ ಆರೋಗ್ಯಕ್ಕೆ ಉತ್ತಮವಾಗಿದೆ. ಸ್ವಲ್ಪ ತುಳಸಿ ಎಲೆಗಳನ್ನು ನೀರಿನಲ್ಲಿ ಕೆಲವು ನಿಮಿಷಗಳ ಕಾಲ ಕುದಿಸಿ, ಅದನ್ನು ಸೋಸಿಕೊಳ್ಳಿ. ನಂತರ ಅದಕ್ಕೆ 1 ಟೀ ಚಮಚ ನೆಲ್ಲಿಕಾಯಿ ಪುಡಿಯನ್ನು ಸೇರಿಸಿ. ಬೇಕಿದ್ದರೆ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ಕುಡಿಯಬಹುದು.