ಕಾರಿನ ಬಾನೆಟ್​ನಲ್ಲಿ ದಿಢೀರ್​ ಹೊಗೆ ಕಾಣಿಸಿಕೊಂಡ್ರೆ ಈ ಮಿಸ್ಟೇಕ್​ಗಳನ್ನು ಮಾತ್ರ ಮಾಡಬೇಡಿ! Car Bonnet Smoke

 Car Bonnet Smoke
ಕಾರಿನ ಬಾನೆಟ್​ನಲ್ಲಿ ದಿಢೀರ್​ ಹೊಗೆ ಕಾಣಿಸಿಕೊಂಡ್ರೆ ಈ ಮಿಸ್ಟೇಕ್​ಗಳನ್ನು ಮಾತ್ರ ಮಾಡಬೇಡಿ! Car Bonnet Smoke
Published on: 

Car Bonnet Smoke: ಸಾಮಾನ್ಯವಾಗಿ ಕಾರಿನಲ್ಲಿ ಪ್ರಯಾಣಿಸುವಾಗ ಮುಂಭಾಗಕ್ಕೆ ಡಿಕ್ಕಿಯಾದರೆ ಅಥವಾ ಏನಾಗದೆ ಇದ್ದರೂ ಏಕಾಏಕಿ ಬಾನೆಟ್‌ನಲ್ಲಿ ದಟ್ಟವಾದ ಹೊಗೆ ಕಾಣಿಸಿಕೊಳ್ಳುತ್ತದೆ. ಇದನ್ನು ನೋಡಿದಾಗ ಯಾವ ಡ್ರೈವರ್​ಗಾದರೂ ಒಂದು ನಿಮಿಷ ಗಾಬರಿ ಆಗುವುದಂತು ಸತ್ಯ ಬಿಡಿ. ಅಷ್ಟಕ್ಕೂ ಹೀಗಾಗುವುದು ಏಕೆ? ಇಂತಹ ಸಂದರ್ಭಗಳಲ್ಲಿ ಆತಂಕಕ್ಕೆ ಒಳಗಾಗುವ ಬದಲು ಮೊದಲು ಏನು ಮಾಡಬೇಕು ಎಂಬುದರ ವಿವರ ಹೀಗಿದೆ ನೋಡಿ.

ಕಾರಿನಲ್ಲಿ ಹೊಗೆ ಕಾಣಿಸಿಕೊಂಡರೆ ಪ್ರಯಾಣ ಅರ್ಧಕ್ಕೆ ನಿಲ್ಲಿಸೋದಾ ಅಥವಾ ಸ್ವಲ್ಪ ಸಮಯ ಕಾರನ್ನು ನಿಲ್ಲಿಸಿ, ಆ ನಂತರ ಓಡಿಸುವುದು ಸರಿನಾ? ಎಂಬ ಹತ್ತು ಹಲವು ಪ್ರಶ್ನೆಗಳು ಹಲವರಲ್ಲಿದೆ. ಆದರೆ, ಇಂತಹ ಸಂದರ್ಭದಲ್ಲಿ ಗಾಬರಿಯಿಂದ ತಪ್ಪು ನಿರ್ಧಾರ ತೆಗೆದುಕೊಂಡರೆ ಕಾರಿನ ಇಂಜಿನ್‌ಗೆ ಮಾತ್ರವಲ್ಲ, ಒಳಗಿರುವ ಅಮೂಲ್ಯ ಜೀವಗಳಿಗೂ ಅಪಾಯ ಎದುರಾಗುವ ಸಾಧ್ಯತೆಗಳು ಹೆಚ್ಚು.

ಮೊದಲು ಮಾಡಬೇಕಾದ ಕೆಲಸವೇನು?

ಚಲಿಸುತ್ತಿರುವ ಕಾರಿನ ಬಾನೆಟ್‌ನಿಂದ ಹೊಗೆ ಬರುತ್ತಿರುವುದು ಗಮನಕ್ಕೆ ಬಂದ ತಕ್ಷಣ ಗಾಬರಿಗೊಳ್ಳದೆ, ವಾಹನವನ್ನು ರಸ್ತೆಯ ಬದಿಯಲ್ಲಿರುವ ಸುರಕ್ಷಿತ ಸ್ಥಳದಲ್ಲಿ ನಿಲ್ಲಿಸಿ. ಕೂಡಲೇ ಹಜಾರ್ಡ್ ಲೈಟ್‌ಗಳನ್ನು ಆನ್ ಮಾಡಿ, ಇಂಜಿನ್ ಆಫ್ ಮಾಡಿ. ಕಾರಿನಲ್ಲಿರುವ ಎಲ್ಲರೂ ಕೆಳಗಿಳಿದು ವಾಹನದಿಂದ ಸುರಕ್ಷಿತ ಅಂತರದಲ್ಲಿ ನಿಲ್ಲುವುದು ಒಳಿತು. ಈ ಸಮಯದಲ್ಲಿ, ಬಾನೆಟ್ ಅನ್ನು ತಕ್ಷಣವೇ ಓಪನ್ ಮಾಡಬೇಡಿ. ಕಾರಣ, ಇಂಜಿನ್ ಬಿಸಿಯಾಗಿರುವಾಗ ಒಳಗಿನಿಂದ ಬಿಸಿ ಆವಿ ಹೊರಬಂದು ಕೈ ಮತ್ತು ಮುಖಕ್ಕೆ ಸುಟ್ಟ ಗಾಯಗಳಾಗಬಹುದು. ಬೆಂಕಿ ಕಾಣಿಸಿಕೊಂಡಿದ್ದರೆ ಅಥವಾ ದಟ್ಟ ಹೊಗೆ ಬರುತ್ತಿದ್ದರೆ ವಾಹನದ ಹತ್ತಿರ ಹೋಗದೆ ಎಮರ್ಜೆನ್ಸಿ ಸೇವೆಗಳ ಸಹಾಯ ಪಡೆದುಕೊಳ್ಳಿ.

ಹೊಗೆಯ ಬಣ್ಣದಿಂದ ಸಮಸ್ಯೆ ಗೊತ್ತಾಗುತ್ತಾ?

ಕಾರಿನ ಬಾನೆಟ್‌ನಿಂದ ಹೊರಬರುವ ಹೊಗೆಯ ಬಣ್ಣವು ಸಮಸ್ಯೆಯ ಸ್ವರೂಪದ ಬಗ್ಗೆ ಕೆಲವು ಸುಳಿವುಗಳನ್ನು ನೀಡಬಹುದು. ಬಿಳಿ ಹೊಗೆ ಕಾಣಿಸಿಕೊಂಡರೆ ಕೂಲಂಟ್ ಸೋರಿಕೆ ಅಥವಾ ಇಂಜಿನ್ ಓವರ್​ ಹೀಟ್​ ಆಗಿರುವ ಸಾಧ್ಯತೆಯಿದೆ. ನೀಲಿ ಅಥವಾ ಬೂದು ಬಣ್ಣದ ಹೊಗೆ ಕಂಡುಬಂದರೆ ಇಂಜಿನ್ ಆಯಿಲ್ ಸೋರಿಕೆಯಾಗಿ ಬಿಸಿಯಾದ ಭಾಗಗಳಿಗೆ ತಾಗಿ ಉರಿಯುತ್ತಿರಬಹುದು. ಕಪ್ಪು ಹೊಗೆ ಕಾಣಿಸಿಕೊಂಡರೆ ಇಂಧನ ಪೂರೈಕೆ ವ್ಯವಸ್ಥೆ, ಇಂಜಿನ್‌ನಲ್ಲಿ ದೋಷವಿರುವ ಸಾಧ್ಯತೆಯಿದೆ. ಆದರೆ, ಹೊಗೆಯ ಬಣ್ಣವೊಂದೇ ಇಂತದ್ದೇ ಸಮಸ್ಯೆ ಎಂದು ಖಚಿತಪಡಿಸಲು ಸಾಧ್ಯವಿಲ್ಲ ಎಂಬುದು ಗಮನಾರ್ಹ.

ಬಾನೆಟ್‌ನಲ್ಲಿ ಹೊಗೆ ಬರಲು ಕಾರಣಗಳೇನು?

ಇಂಜಿನ್ ಓವರ್​ ಹೀಟ್​ ಆಗುವುದು ಹೊಗೆ ಕಾಣಿಸಿಕೊಳ್ಳಲು ಸಾಮಾನ್ಯ ಕಾರಣ. ಕೂಲಂಟ್ ಪ್ರಮಾಣ ಇಳಿದಿರುವುದು, ಪೈಪ್‌ಗಳಲ್ಲಿ ಲೀಕೇಜ್​, ರೇಡಿಯೇಟರ್ ಅಥವಾ ವಾಟರ್ ಪಂಪ್‌ನಲ್ಲಿ ಸಮಸ್ಯೆ ಕಾಣಿಸಿಕೊಳ್ಳುವುದು ಇದಕ್ಕೆ ಪ್ರಮುಖ ಕಾರಣಗಳು. ಇನ್ನು ಇಂಜಿನ್ ಆಯಿಲ್ ಸೋರಿಕೆಯಾಗಿ ಬಿಸಿಯಾದ ಭಾಗಗಳ ಮೇಲೆ ಬಿದ್ದಾಗ ಹೊಗೆ ಉಂಟಾಗುತ್ತದೆ. ಕೆಲವೊಮ್ಮೆ ವಿದ್ಯುತ್ ವೈರ್‌ಗಳಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾದರೂ ಹೊಗೆ ಕಾಣಿಸಿಕೊಳ್ಳಬಹುದು. ವೈರಿಂಗ್ ಅಥವಾ ಪ್ಲಾಸ್ಟಿಕ್ ಭಾಗಗಳು ಬಿಸಿಯಾಗಿ ಹಾನಿಗೊಳಗಾದಾಗಲೂ ಈ ಸಮಸ್ಯೆ ಎದುರಾಗಬಹುದು.

Also Read
ದಿನೇ ದಿನೇ ಮುಳುಗುತ್ತಿದೆ ಜಗತ್ತಿನ ಅತೀ ಚಿಕ್ಕ ರಾಷ್ಟ್ರ! 2100ರ ವೇಳೆಗೆ ಭೂಮಿ ಮೇಲೇ ಇರಲ್ವಂತೆ ಈ ದ್ವೀಪ | Tuvalu
 Car Bonnet Smoke

ಈ ಮಿಸ್ಟೇಕ್​ ಮಾತ್ರ ಮಾಡ್ಬೇಡಿ

ಇಂಜಿನ್ ಬಿಸಿಯಾಗಿರುವಾಗ ಅದರ ಮೇಲೆ ತಣ್ಣೀರು ಸುರಿಯಬಾರದು. ತಾಪಮಾನ ಹೆಚ್ಚಿರುವ ಲೋಹದ ಭಾಗಗಳಿಗೆ ಏಕಾಏಕಿ ತಣ್ಣೀರು ಬಿದ್ದರೆ, ಡ್ಯಾಮೇಜ್​ ಆಗುವ ಸಾಧ್ಯತೆಯಿದೆ. ಹಾಗೆಯೇ ಬಾನೆಟ್‌ನಿಂದ ಹೊಗೆ ಬರುತ್ತಿದ್ದರೂ ಕಾರು ಚಲಾಯಿಸಿಕೊಂಡು ಹೋಗುವುದು ಅಪಾಯಕಾರಿ. ಸಣ್ಣ ಸಮಸ್ಯೆಯೂ ದೊಡ್ಡ ಇಂಜಿನ್ ಫೇಲ್ಯೂರ್​ ಆಗಿ ತಿರುಗಬಹುದು. ಆದ್ದರಿಂದ, ಸುರಕ್ಷಿತ ಸ್ಥಳದಲ್ಲಿ ವಾಹನ ನಿಲ್ಲಿಸಿ, ಇಂಜಿನ್ ತಣ್ಣಗಾಗಲು ಬಿಡಿ. ನಂತರ ಅಗತ್ಯವಿದ್ದರೆ ಮೆಕ್ಯಾನಿಕ್ ಸಹಾಯ ಪಡೆದುಕೊಳ್ಳಿ,(ಏಜೆನ್ಸೀಸ್).