Vampire Bats: ರಕ್ತ ಕುಡಿದು ಬದುಕುವ ಬಾವಲಿಗಳ ಬಗ್ಗೆ ಕೇಳಿದಾಗ ಮೊದಲು ನೆನಪಾಗುವುದೇ ಭಯಾನಕ ಸಿನಿಮಾಗಳಲ್ಲಿನ ವ್ಯಾಂಪೈರ್ ಪಾತ್ರಗಳು. ಆದರೆ ನೈಜ ಜಗತ್ತಿನಲ್ಲಿಯೂ ಇಂತಹ ಬಾವಲಿಗಳಿವೆ. ವಿಶೇಷವೆಂದರೆ, ಇವು ಕೇವಲ ರಕ್ತ ಕುಡಿಯುವುದಷ್ಟೇ ಅಲ್ಲ, ತಮ್ಮ ದೇಹದ ತೂಕದ ಸುಮಾರು ಅರ್ಧದಷ್ಟು ರಕ್ತವನ್ನು ಒಂದೇ ಬಾರಿ ಸೇವಿಸಬಲ್ಲವು. ಅಷ್ಟು ಪ್ರಮಾಣದ ದ್ರವವನ್ನು ಹೊಟ್ಟೆಯಲ್ಲಿ ತುಂಬಿಸಿಕೊಂಡ ನಂತರವೂ ಮತ್ತೆ ಹಾರಲು ಇವುಗಳಿಗೆ ಹೇಗೆ ಸಾಧ್ಯ? ಹೊಟ್ಟೆಯೊಳಗೆ ಸಂಗ್ರಹವಾಗುವ ರಕ್ತದ ನೀರನ್ನು ವೇಗವಾಗಿ ಹೊರಹಾಕುವ ವಿಶೇಷ ವ್ಯವಸ್ಥೆಯೇ ಇದಕ್ಕೆ ಕಾರಣ ಎಂಬ ಕುತೂಹಲಕಾರಿ ಸಂಗತಿಯನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.
ಜಗತ್ತಿನಲ್ಲಿ ರಕ್ತವನ್ನೇ ಆಹಾರವಾಗಿ ಸೇವಿಸುವ ಮೂರು ಪ್ರಭೇದದ ವ್ಯಾಂಪೈರ್ ಬಾವಲಿಗಳಿವೆ. ಅವುಗಳೆಂದರೆ ಕಾಮನ್ ವ್ಯಾಂಪೈರ್, ಬ್ಯಾಟ್ ಹೇರ್ ಲೆಗ್ಡ್ ವ್ಯಾಂಪೈರ್ ಬ್ಯಾಟ್, ಮತ್ತು ವೈಟ್ ವಿಂಗ್ಡ್ ವ್ಯಾಂಪೈರ್ ಬ್ಯಾಟ್ ಇವು ಮುಖ್ಯವಾಗಿ ಮಧ್ಯ ಮತ್ತು ದಕ್ಷಿಣ ಅಮೆರಿಕದ ಪ್ರದೇಶಗಳಲ್ಲಿ ಕಂಡುಬರುತ್ತವೆ. ಸಾಮಾನ್ಯವಾಗಿ ರಾತ್ರಿ ವೇಳೆ ಪ್ರಾಣಿಗಳ ಬಳಿ ತೆರಳಿ, ತಮ್ಮ ಚೂಪಾದ ಹಲ್ಲುಗಳಿಂದ ಚರ್ಮದ ಮೇಲೆ ಸಣ್ಣ ಗಾಯ ಮಾಡಿ ಹೊರಬರುವ ರಕ್ತವನ್ನು ನಾಲಿಗೆಯಿಂದ ನೆಕ್ಕಿ ಕುಡಿಯುತ್ತವೆ. ಇವುಗಳ ಲಾಲಾರಸದಲ್ಲಿರುವ ವಿಶೇಷ ಅಂಶಗಳು ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ಸಹಾಯ ಮಾಡುತ್ತವೆ.
ಒಂದು ಬಾರಿ ಆಹಾರ ಸೇವಿಸುವಾಗ ತಮ್ಮ ದೇಹದ ತೂಕದ ಸುಮಾರು ಶೇ.50ರಿಂದ 60ರಷ್ಟು ರಕ್ತವನ್ನು ಕುಡಿಯಬಲ್ಲವು. ಆದರೆ ಇಷ್ಟು ದೊಡ್ಡ ಪ್ರಮಾಣದ ಆಹಾರವನ್ನು ಸೇವಿಸಿದ ಬಳಿಕ ದೇಹದ ಭಾರ ಹೆಚ್ಚಾಗುತ್ತದೆ. ಹೀಗಿದ್ದರೂ ಅವು ಮತ್ತೆ ಹಾರಲು ಸಾಧ್ಯವಾಗುವುದೇ ಪ್ರಕೃತಿಯ ಅದ್ಭುತ
ಜರ್ಮನಿಯ ಸೆಂಕೆನ್ಬರ್ಗ್ ಸಂಶೋಧನಾ ಸಂಸ್ಥೆಯ ಮೈಕೆಲ್ ಹಿಲ್ಲರ್ ನೇತೃತ್ವದ ವಿಜ್ಞಾನಿಗಳ ತಂಡವು ಮೂರು ಬಗೆಯ ವ್ಯಾಂಪೈರ್ ಬಾವಲಿಗಳ ಜೀನೋಮ್ಗಳನ್ನು ಅಧ್ಯಯನ ಮಾಡಿದೆ. ಇದರೊಂದಿಗೆ ಇತರ ಬಾವಲಿಗಳ ಜೀನ್ಗಳನ್ನೂ ಹೋಲಿಕೆ ಮಾಡಿ, ವಿವಿಧ ಅಂಗಾಂಗಗಳಲ್ಲಿ ನಡೆಯುವ ಜೀನ್ ಚಟುವಟಿಕೆಗಳನ್ನು ಪರಿಶೀಲಿಸಿದೆ. ಈ ಸಂಶೋಧನೆಯಲ್ಲಿ ಒಟ್ಟು 150 ಜೀನ್ಗಳಲ್ಲಿ ಕಂಡುಬಂದ ಬದಲಾವಣೆಗಳು ವ್ಯಾಂಪೈರ್ ಬಾವಲಿಗಳು ರಕ್ತವನ್ನೇ ಆಹಾರವಾಗಿ ಸ್ವೀಕರಿಸಲು ಹೇಗೆ ಹೊಂದಿಕೊಂಡಿವೆ ಎಂಬುದನ್ನು ವಿವರಿಸಿವೆ.
ಸಾಮಾನ್ಯ ಪ್ರಾಣಿಗಳ ಹೊಟ್ಟೆಯಲ್ಲಿ ಆಹಾರವನ್ನು ಜೀರ್ಣಿಸಲು ಆಮ್ಲ ಉತ್ಪತ್ತಿಯಾಗುತ್ತದೆ. ಆದರೆ ವ್ಯಾಂಪೈರ್ ಬಾವಲಿಗಳ ಹೊಟ್ಟೆ ವಿಭಿನ್ನವಾಗಿ ರೂಪಾಂತರಗೊಂಡಿದೆ. ಇದು ಹೆಚ್ಚು ವಿಸ್ತರಿಸಬಲ್ಲ, ಬಹುತೇಕ ತಟಸ್ಥ pH ಹೊಂದಿರುವ ಸಂಗ್ರಹಣಾ ಚೀಲದಂತೆ ಕಾರ್ಯನಿರ್ವಹಿಸುತ್ತದೆ. ಇದರಿಂದ ದೊಡ್ಡ ಪ್ರಮಾಣದ ರಕ್ತವನ್ನು ಹೊಟ್ಟೆಯಲ್ಲಿ ಸಂಗ್ರಹಿಸಿಕೊಳ್ಳಲು ಸಾಧ್ಯವಾಗುತ್ತದೆ.
ಈ ಸಂಶೋಧನೆಯ ಅತ್ಯಂತ ಅಚ್ಚರಿಯ ಸಂಗತಿ ಹೊಟ್ಟೆಯಲ್ಲಿರುವ AQP5 ಎಂಬ ಜೀನ್ಗೆ ಸಂಬಂಧಿಸಿದೆ. ಸಾಮಾನ್ಯವಾಗಿ ಈ ಜೀನ್ ಲಾಲಾರಸ ಗ್ರಂಥಿಗಳು, ಬೆವರು ಗ್ರಂಥಿಗಳು ಮತ್ತು ಇತರ ಅಂಗಾಂಶಗಳಲ್ಲಿ ನೀರಿನ ಸಾಗಣೆಗೆ ನೆರವಾಗುತ್ತದೆ. ಆದರೆ ವ್ಯಾಂಪೈರ್ ಬಾವಲಿಗಳ ಹೊಟ್ಟೆಯಲ್ಲಿ ಇದರ ಚಟುವಟಿಕೆ ಇತರ ಬಾವಲಿಗಳಿಗೆ ಹೋಲಿಸಿದರೆ ಸುಮಾರು 943 ಪಟ್ಟು ಹೆಚ್ಚಾಗಿದೆ. ಇದರಿಂದ ಹೊಟ್ಟೆಯಲ್ಲಿರುವ ನೀರನ್ನು ವೇಗವಾಗಿ ಹೀರಿಕೊಂಡು ದೇಹದೊಳಗೆ ಸಾಗಿಸಲು ಸಾಧ್ಯವಾಗುತ್ತದೆ. ನಂತರ ಹೆಚ್ಚುವರಿ ನೀರನ್ನು ಮೂತ್ರದ ಮೂಲಕ ಹೊರಹಾಕಲಾಗುತ್ತದೆ. ಅಂದರೆ ರಕ್ತದಲ್ಲಿರುವ ಹೆಚ್ಚಿನ ಪ್ರಮಾಣದ ನೀರನ್ನು ಬೇರ್ಪಡಿಸಿ, ದೇಹದ ಭಾರವನ್ನು ಕಡಿಮೆ ಮಾಡಿಕೊಳ್ಳುವ ವಿಶೇಷ ಸಾಮರ್ಥ್ಯ ಇವುಗಳಲ್ಲಿದೆ. ರಕ್ತ ಕುಡಿದ ಬಳಿಕ ಹೆಚ್ಚಿನ ಸೋಡಿಯಂ ಅಂಶವನ್ನೂ ವೇಗವಾಗಿ ಹೊರಹಾಕುವ ವ್ಯವಸ್ಥೆ ಇವುಗಳಲ್ಲಿದೆ. ಹೀಗಾಗಿ ಭಾರವಾದ ದೇಹದೊಂದಿಗೆ ದೀರ್ಘಕಾಲ ಉಳಿಯದೆ ಮತ್ತೆ ಹಾರಲು ಅನುಕೂಲವಾಗುತ್ತದೆ.
ರಕ್ತದಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿರುತ್ತದೆ. ಅದನ್ನು ನಿರಂತರವಾಗಿ ಸೇವಿಸುವುದರಿಂದ ದೇಹದಲ್ಲಿ ಕಬ್ಬಿಣದ ಪ್ರಮಾಣ ಅಪಾಯಕಾರಿಯಾಗಿ ಹೆಚ್ಚಾಗುವ ಸಾಧ್ಯತೆ ಇದೆ. ಆದರೆ ವ್ಯಾಂಪೈರ್ ಬಾವಲಿಗಳಲ್ಲಿ ಕಬ್ಬಿಣವನ್ನು ಹೀರಿಕೊಳ್ಳುವ ಮತ್ತು ಹೊರಹಾಕುವ ಪ್ರಕ್ರಿಯೆಯೂ ವಿಶೇಷವಾಗಿ ಹೊಂದಾಣಿಕೆಯಾಗಿದೆ.ಸಂಶೋಧಕರು ಇವುಗಳ ಹೊಟ್ಟೆ ಮತ್ತು ಕರುಳಿನಲ್ಲಿ ಕಬ್ಬಿಣದ ಸಂಸ್ಕರಣೆಗೆ ಸಂಬಂಧಿಸಿದ ಜೀನ್ಗಳ ಚಟುವಟಿಕೆಯಲ್ಲಿ ಬದಲಾವಣೆಗಳನ್ನು ಗುರುತಿಸಿದ್ದಾರೆ. ಜೊತೆಗೆ, ರಕ್ತದಲ್ಲಿನ ಕಬ್ಬಿಣವನ್ನು ಸಂಸ್ಕರಿಸುವ ವ್ಯವಸ್ಥೆಯೂ ಇವುಗಳಲ್ಲಿ ಅಭಿವೃದ್ಧಿಯಾಗಿದೆ.
ಇದನ್ನೂ ಓದಿ : ಚಿಕ್ಕ ಜೀನೋಮ್, ದೈತ್ಯ ಪ್ರೋಟೀನ್ ! ಸೀ ಪಿಗ್ ಒಳಗೆ ಸಿಕ್ಕಿದ್ದೇನು? Sea Pig
ರಕ್ತವನ್ನೇ ಆಹಾರವಾಗಿ ಸೇವಿಸುವುದು ಸುಲಭದ ಕೆಲಸವಲ್ಲ. ಅದರಲ್ಲಿ ನೀರು ಹೆಚ್ಚಿದ್ದರೂ ಸಕ್ಕರೆ, ಕೊಬ್ಬು ಮತ್ತು ಕೆಲವು ಅಗತ್ಯ ಪೋಷಕಾಂಶಗಳು ಕಡಿಮೆ ಇರುತ್ತವೆ. ಅಲ್ಲದೆ ಕಬ್ಬಿಣದ ಪ್ರಮಾಣ ಹೆಚ್ಚಿರುತ್ತದೆ. ಇಂತಹ ಆಹಾರದ ಮೇಲೆಯೇ ಬದುಕಲು ಈ ಬಾವಲಿಗಳು ತಮ್ಮ ಜೀರ್ಣಾಂಗ ವ್ಯವಸ್ಥೆ, ಚಯಾಪಚಯ ಮತ್ತು ಜೀನ್ಗಳಲ್ಲಿ ಹಲವು ಬದಲಾವಣೆಗಳನ್ನು ಹೊಂದಿವೆ.
2026ರ ನವೆಂಬರ್ 7ರಂದು bioRxivನಲ್ಲಿ ಪ್ರಕಟವಾದ ಈ ಸಂಶೋಧನೆಯು ವ್ಯಾಂಪೈರ್ ಬಾವಲಿಗಳ ದೇಹದ ಹೊಂದಾಣಿಕೆಯ ಬಗ್ಗೆ ಹೊಸ ಮಾಹಿತಿಯನ್ನು ನೀಡಿದೆ. ಆದರೆ ಇದು ಇನ್ನೂ ತಜ್ಞರ ಸಮೀಕ್ಷೆಯ ಮೂಲಕ ಅಂತಿಮವಾಗಿ ದೃಢೀಕರಿಸಲ್ಪಟ್ಟ ಸಂಶೋಧನಾ ಪ್ರಬಂಧವಲ್ಲ. ರಕ್ತ ಕುಡಿದು ಹೊಟ್ಟೆ ತುಂಬಿಸಿಕೊಂಡರೂ ಮತ್ತೆ ಹಾರಲು ಸಾಧ್ಯವಾಗುವ ವ್ಯಾಂಪೈರ್ ಬಾವಲಿಗಳ ಸಾಮರ್ಥ್ಯದ ಹಿಂದೆ ಅಡಗಿರುವುದು ಅವುಗಳ ದೇಹದಲ್ಲಿನ ಅದ್ಭುತ ಜೈವಿಕ ಹೊಂದಾಣಿಕೆ. ಪ್ರಕೃತಿಯಲ್ಲಿ ಬದುಕುಳಿಯಲು ಜೀವಿಗಳು ಎಷ್ಟೊಂದು ವಿಚಿತ್ರ ರೀತಿಯಲ್ಲಿ ವಿಕಸನಗೊಳ್ಳುತ್ತವೆ ಎಂಬುದಕ್ಕೆ ಈ ಬಾವಲಿಗಳೇ ಸಾಕ್ಷಿ ( ಏಜೇನ್ಸಿಸ್)