

ಮಧುಮೇಹವು ಶಾಶ್ವತ ಚಿಕಿತ್ಸೆ ಇಲ್ಲದ ಒಂದು ಕಾಯಿಲೆ. ಜೀವನದಲ್ಲಿ ಒಮ್ಮೆ ಬಂದರೆ ಸಾಯುವವರೆಗೂ ಪೀಡಿಸುತ್ತದೆ. ಮಧುಮೇಹ ರೋಗಿಗಳು ಸ್ಥೂಲಕಾಯತೆ, ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೊಂದಿರುತ್ತಾರೆ. ಮಧುಮೇಹ ಇರುವವರ ದೇಹದಲ್ಲಿ ಸಾಕಷ್ಟು ಇನ್ಸುಲಿನ್ ಉತ್ಪಾದನೆಯಾಗುವುದಿಲ್ಲ ಅಥವಾ ಅದು ತಯಾರಿಸುವ ಇನ್ಸುಲಿನ್ ಅನ್ನು ಪರಿಣಾಮಕಾರಿಯಾಗಿ ಬಳಸಲಾಗುವುದಿಲ್ಲ.
ಮಧುಮೇಹಕ್ಕೆ ಚಿಕಿತ್ಸೆ ನೀಡದಿದ್ದರೆ ರಕ್ತದಲ್ಲಿನ ಸಕ್ಕರೆ ಅಂಶ ಹೆಚ್ಚಾಗುತ್ತದೆ. ಇದು ನರಗಳು, ಕಣ್ಣುಗಳು, ಮೂತ್ರಪಿಂಡಗಳು ಮತ್ತು ಇತರ ಅಂಗಗಳಿಗೆ ಹಾನಿಯನ್ನುಂಟುಮಾಡುತ್ತದೆ. ಹಸಿವು ಕಡಿಮೆಯಾಗುವುದು, ಹೆಚ್ಚಿದ ಬಾಯಾರಿಕೆ, ತೂಕ ನಷ್ಟ, ಆಗಾಗ್ಗೆ ಮೂತ್ರ ವಿಸರ್ಜನೆ, ದೃಷ್ಟಿ ಮಂದವಾಗುವುದು, ತೀವ್ರ ಆಯಾಸ ಮತ್ತು ಗಾಯಾಗಳು ವಾಸಿಯಾಗದೇ ಇರುವುದು ಮಧುಮೇಹದ ಲಕ್ಷಣಗಳಾಗಿವೆ.
ಪ್ರಸ್ತುತ ಜೀವನಶೈಲಿ ಮತ್ತು ಕಳಪೆ ಆಹಾರ ಪದ್ಧತಿ ಮಧುಮೇಹ ಬರಲು ಕಾರಣ ಎಂಬುದು ತಜ್ಞರ ಮಾತು. ಮಧುಮೇಹವನ್ನು ನಿಯಂತ್ರಿಸಲು ಹಲವಾರು ರೀತಿಯ ಆಹಾರ ಪದಾರ್ಥಗಳು ಲಭ್ಯವಿದ್ದರೂ, ನಿಮ್ಮ ಆಹಾರದಲ್ಲಿ ಫೈಬರ್ ಪ್ರಮಾಣವನ್ನು ಹೆಚ್ಚಿಸುವ ಮೂಲಕ ನೀವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಮಧುಮೇಹ ರೋಗಿಗಳು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಲು ಫೈಬರ್ ಭರಿತ ಆಹಾರವನ್ನು ಸೇವಿಸಬೇಕು.
ಫೈಬರ್ ಆರೋಗ್ಯಕರ ಆಹಾರದ ಭಾಗವಾಗಿದೆ. ವಿವಿಧ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ಇದು ಮಧುಮೇಹವನ್ನು ತಡೆಗಟ್ಟಲು ಮತ್ತು ನಿರ್ವಹಿಸಲು ಸಹಾಯಕವಾಗಿದೆ. ಅಲ್ಲದೆ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಸಹಕಾರಿಯಾಗಿದೆ. ಫೈಬರ್ ಪ್ರಾಥಮಿಕವಾಗಿ ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ದ್ವಿದಳ ಧಾನ್ಯಗಳಲ್ಲಿ ಕಂಡುಬರುವ ಒಂದು ರೀತಿಯ ಕಾರ್ಬೋಹೈಡ್ರೇಟ್ ಆಗಿದೆ.
ಫೈಬರ್ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿದೆ. ದೇಹವು ಫೈಬರ್ ಅನ್ನು ಹೀರಿಕೊಳ್ಳಲು ಮತ್ತು ಒಡೆಯಲು ಸಾಧ್ಯವಾಗದ ಕಾರಣ ಇದು ಇತರ ಕಾರ್ಬೋಹೈಡ್ರೇಟ್‌ಗಳಂತೆ ರಕ್ತದಲ್ಲಿನ ಸಕ್ಕರೆಯ ಹೆಚ್ಚಳಕ್ಕೆ ಕಾರಣವಾಗುವುದಿಲ್ಲ. ಅದಕ್ಕಾಗಿಯೇ ಇದು ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಮತ್ತು ನಿರ್ವಹಿಸಲು ಸಹಾಯ ಮಾಡುತ್ತದೆ. ನೀವು ಇದನ್ನು ಫಾಲೋ ಮಾಡುವ ಮುನ್ನ ಒಮ್ಮೆ ವೈದ್ಯರನ್ನು ಸಂಪರ್ಕಿಸಿ.