More

    ಉತ್ತಮ ಹವ್ಯಾಸದಿಂದ ಬದುಕಿಗೆ ಸೌಂದರ್ಯ

    ಉತ್ತಮ ಹವ್ಯಾಸದಿಂದ ಬದುಕಿಗೆ ಸೌಂದರ್ಯನಮ್ಮ ಭಾರತದಲ್ಲಿ ಅನೇಕ ಮಹಾತ್ಮರು, ವಿದ್ವಾಂಸರು, ಗಣಿತಜ್ಞರು, ಆಯುರ್ವೆದ ಶಾಸ್ತ್ರಜ್ಞರು, ವಿಜ್ಞಾನಿಗಳು, ತತ್ವಶಾಸ್ತ್ರಜ್ಞರು, ರಾಜಕೀಯ ನೇತಾರರು ಜನಿಸಿ, ದೇಶಕ್ಕೆ ಕೀರ್ತಿ-ಹೆಮ್ಮೆ ತಂದಿದ್ದಾರೆ. ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಇತ್ತೀಚೆಗೆ ನಮ್ಮ ಕಣ್ಣ ಮುಂದಿದ್ದ ಮಹಾನ್ ಸಾಧಕರು. ಅಂತಹ ಮಹನೀಯರೆಲ್ಲ ವಿದ್ಯಾರ್ಥಿಗಳಾಗಿದ್ದಾಗ ಬಹಳ ಕಷ್ಟಪಟ್ಟು, ಅನೇಕರ ಸಹಾಯದಿಂದ ವಿದ್ಯೆ ಕಲಿತು ಆಮೇಲೆ ಸ್ವಪ್ರತಿಭೆಯಿಂದ ಶ್ರೇಷ್ಠ ಸ್ಥಾನ ಪಡೆದವರು. ಅಂತಹ ಮಹಾನ್ ವ್ಯಕ್ತಿಗಳು ಇಂದಿನ ಯುವ ಪೀಳಿಗೆಗೆ ಆದರ್ಶರಾಗಬೇಕು, ಪ್ರೇರಣೆಯಾಗಬೇಕು.

    ಮಕ್ಕಳು ಪಠ್ಯಪುಸ್ತಕಗಳಲ್ಲಿನ ಜ್ಞಾನ ಮಾತ್ರವಲ್ಲದೆ ಇತರ ಸಾಮಾನ್ಯ ಜ್ಞಾನವನ್ನೂ ವೃದ್ಧಿಸಿಕೊಳ್ಳುವುದರ ಮೂಲಕ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂಬ ಉದ್ದೇಶದಿಂದ ಶ್ರೀ ಕ್ಷೇತ್ರದ ಶಾಂತಿವನದಿಂದ ಮೌಲ್ಯಯುತ ಪುಸ್ತಕಗಳನ್ನು ಪ್ರಕಟಿಸಲಾಗುತ್ತಿದೆ. ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವುದು ಹೇಗೆ? ಯಾವುದಾದರೂ ಒಂದನ್ನು ಆಸಕ್ತಿಯ ವಿಷಯವನ್ನಾಗಿ ತೆಗೆದುಕೊಳ್ಳಬೇಕು; ಹವ್ಯಾಸವನ್ನಾಗಿ ರೂಪಿಸಿಕೊಳ್ಳಬೇಕು. ಉದಾಹರಣೆಗೆ- ಡುಂಡಿರಾಜರಿಗೆ ಚುಟುಕು ಕವನಗಳನ್ನು ಬರೆಯುವುದು ಆಸಕ್ತಿಯ ಕ್ಷೇತ್ರ. ಅದನ್ನೇ ಅವರು ಬೆಳೆಸಿಕೊಂಡು ಹೋದರು. ಉದ್ಯೋಗಕ್ಕಾಗಿ ಬ್ಯಾಂಕ್ ಹಾಗೂ ಬದುಕಿಗಾಗಿ ಸಾಹಿತ್ಯವನ್ನು ಅವರು ಆಯ್ಕೆ ಮಾಡಿಕೊಂಡರು. ವಿದ್ಯಾರ್ಥಿಗಳೂ ಕೂಡ ಬದುಕಿಗಾಗಿ ವೃತ್ತಿಯನ್ನು ಆಯ್ಕೆ ಮಾಡಿಕೊಂಡರೂ ಒಂದಲ್ಲ ಒಂದು ಹವ್ಯಾಸ ಬೆಳೆಸಿಕೊಳ್ಳಬೇಕು.

    ಶಿಕ್ಷಣ ಎಂದರೆ ಓದುವುದನ್ನು ಬಿಟ್ಟು ಬೇರೆ ಏನನ್ನೂ ಮಾಡಬಾರದು ಎಂಬ ಭಾವನೆ ಇದೆ. ಕ್ಷೇತ್ರಕ್ಕೆ ಬಂದವರು ನನ್ನನ್ನು ಭೇಟಿಯಾದಾಗ ಈಗಲೂ ಅದೇ ಹೇಳ್ತಾರೆ. ಮಕ್ಕಳು ಓದುವುದಿಲ್ಲ, ಬರೆಯುವುದಿಲ್ಲ, ಕಲಿಯುವುದಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ. ನಾನು ಅವರಲ್ಲಿ ‘ಮಕ್ಕಳು ಓದುವುದು ಎಂದರೆ ಏನು? ಬೆಳಗ್ಗೆಯಿಂದ ಪುಸ್ತಕ ಹಿಡಿದುಕೊಂಡು ಓದಿದರೆ ನಿಜವಾದ ಓದು-ಶಿಕ್ಷಣ ಆಯಿತೇ? ಪಠ್ಯಪುಸ್ತಕದ ಶಿಕ್ಷಣ ಮಾತ್ರವಲ್ಲದೆ ಸಾಮಾನ್ಯ ಜ್ಞಾನ, ಜೀವನ ಮೌಲ್ಯಗಳನ್ನು ಕಲಿತು ಅಳವಡಿಸಿಕೊಳ್ಳುವ ಶಿಕ್ಷಣದ ಅಗತ್ಯವಿದೆ’ ಎಂದು ಹೇಳುತ್ತೇನೆ. ಹಿಂದೆ ಕೆಲಮಕ್ಕಳು ಶಾಲೆಯಲ್ಲಿ ಮೇಷ್ಟ್ರು ಪಾಠ ಮಾಡುವಾಗ ಪುಸ್ತಕದ ಒಳಗೆ ಕಥೆ ಪುಸ್ತಕ ಇಟ್ಟುಕೊಂಡು ಓದುತ್ತಿದ್ದರು. ಈಗ ಓದುತ್ತಾರೋ ಇಲ್ಲವೋ ಗೊತ್ತಿಲ್ಲ. ಮೊಬೈಲ್ ಬಂದಿದೆಯಲ್ಲ!

    ನಾವೆಲ್ಲ ಸಣ್ಣವರಾಗಿದ್ದಾಗ ಬಹಳ ಕಥೆ ಪುಸ್ತಕ ಓದುತ್ತಿದ್ದೆವು. ನನ್ನ ಸಹಪಾಠಿ ಹೈಸ್ಕೂಲ್ ವಿದ್ಯಾರ್ಥಿಯೊಬ್ಬನಿದ್ದ. ಸಾಮಾನ್ಯವಾಗಿ ಒಂದು ತಿಂಗಳಿನಲ್ಲಿ ಸಾವಿರ ಪುಟ ಓದುತ್ತಿದ್ದ. ಒಮ್ಮೊಮ್ಮೆ 250 -300 ಪುಟದಷ್ಟು ದಪ್ಪದ ಇಂಗ್ಲಿಷ್ ಕಾದಂಬರಿಯನ್ನು ಒಂದೇ ದಿನದಲ್ಲಿ ಓದುತ್ತಿದ್ದ. ಓದು ಅವನ ಆಸಕ್ತಿಯ ಕ್ಷೇತ್ರ. ಪರೀಕ್ಷೆ, ಅಂಕಗಳಿಕೆಗೆ, ಉದ್ಯೋಗಕ್ಕೆ, ವೃತ್ತಿಗೆ ಶಿಕ್ಷಣ ಬೇಕು. ಆದರೆ ನಮ್ಮ ರಾಷ್ಟ್ರಕವಿ ಕುವೆಂಪು ಹೇಳಿದಂತೆ ಏನೇ ಆದರೂ ಮೊದಲು ಮಾನವರಾಗಬೇಕು. ನಾವು ಏನೇ ಸಾಧಿಸಿದರೂ ಮಾನವನಾಗದೆ ದಾನವನಾದರೆ ಬದುಕು ನಿಶ್ಚಯವಾಗಿ ವ್ಯರ್ಥವಾಗುತ್ತದೆ. ಹಾಗಾಗಿ ಪ್ರತಿ ಮಕ್ಕಳನ್ನೂ ಶ್ರೇಷ್ಠ ಮಾನವರನ್ನಾಗಿ ಬೆಳೆಸಬೇಕು.

    ದಾನವನಾಗಲು ಯಾರೂ ಪಾಠ ಹೇಳಿಕೊಡಬೇಕೆಂದಿಲ್ಲ. ಎಲ್ಲವೂ ಮೂಲತಃ ಹೃದಯದಿಂದಲೇ ಹುಟ್ಟುವಂಥದ್ದು. ನಮ್ಮಲ್ಲಿ ಎರಡು ಕಣ್ಣಿದೆ, ಎಡ-ಬಲ. ಇವುಗಳಲ್ಲಿ ವ್ಯತ್ಯಾಸವಿಲ್ಲ. ಆದರೆ ಸ್ವಾಭಾವಿಕವಾಗಿ ಬಲಗೈ ಊಟ ಮಾಡುವಂತಹದ್ದು, ಸ್ವೀಕರಿಸುವಂತಹದ್ದು, ಕೊಡುವಂತಹದ್ದು. ಎಡಗೈ ಇತರೆ ಕೆಲಸಕ್ಕೆ ಉಪಯೋಗವಾಗುವಂತಹದ್ದು ಎಂಬ ನಂಬಿಕೆ. ಎಡಗೈಯಲ್ಲಿ ಕೊಡಬಾರದು ಎನ್ನುತ್ತಾರೆ. ಎಡಗೈ ಏನು ಪಾಪ ಮಾಡಿದೆ, ಎಡ ಕಣ್ಣು ಅಥವಾ ಎಡ ಕಿವಿ ಏನು ಪಾಪ ಮಾಡಿವೆ? ಯಾಕೆ ನಾವು ಬಲ ಭಾಗವನ್ನು ಶ್ರೇಷ್ಠ ಎನ್ನುತ್ತೇವೆ? ಮನೆಯೊಳಗೆ ಬರುವಾಗ ‘ಬಲಗಾಲು ಇಟ್ಟು ಒಳಗೆ ಬಾ’ ಅನ್ನುತ್ತೇವೆ. ಸದ್ಗುಣ, ಸದ್ವಿಚಾರ ಹಾಗೂ ಬದುಕಿನಲ್ಲಿ ಒಳ್ಳೆಯ ವಿಚಾರ ಸಂಗ್ರಹಿಸುವುದಕ್ಕೆ ನಾವು ಬಲವನ್ನು ಕೊಡುತ್ತೇವೆ. ಎಡ ಎಂದರೆ ಯಾವಾಗಲೂ ನಷ್ಟ, ರಾಕ್ಷಸೀಯವಾದಂತಹ ವಿಷಯಗಳಿಗೆ ‘ಎಡ ಬಳಕೆ’ ಎಂದು ಹೇಳುತ್ತೇವೆ. ಹಾಗೇ ನಮ್ಮೊಳಗೆ ದಾನವ ಮತ್ತು ಮಾನವ ಇದ್ದಾನೆ. ಮಾನವ ಬಲ, ದಾನವ ಎಡ. ನಾವು ಯಾರನ್ನು ಸ್ವೀಕರಿಸುತ್ತೇವೆಯೋ ಅದರ ಮೇಲೆ ನಮ್ಮ ಬದುಕು ನಿರ್ವಣವಾಗುತ್ತದೆ.

    ನಾನು ಬಹಳ ಸಣ್ಣವನಿರುವಾಗ ಅಜ್ಜಿ ‘ಬೆಳಗ್ಗೆ ಬೇಗ ಏಳು’ ಎನ್ನುತ್ತಿದ್ದರು. ನಾವು ಚಿಕ್ಕವರಾದ್ದರಿಂದ ಸ್ವಾಭಾವಿಕವಾಗಿ ನಿಧಾನವಾಗಿ ಏಳುತ್ತಿದ್ದೆವು. ಆಗ ಅಜ್ಜಿ ಒಂದು ಕಥೆ ಹೇಳಿದರು. ‘ನೋಡು ಮುಂಜಾನೆಯ ಹೊತ್ತಿನಲ್ಲಿ ಒಬ್ಬಳು ದೇವತೆ ಬರುತ್ತಾಳೆ. ಭಾಗ್ಯದೇವತೆ. ಅವಳು ಬಂದು ಬಲಗಾಲನ್ನು ತಿಕ್ಕಿ – ಬೇಗ ಏಳು, ಮುಂಜಾನೆ ಆಯಿತು, ಕೈ-ಕಾಲು ತೊಳೆದು ಸ್ನಾನ ಮಾಡು, ಪಾಠ ಓದು, ಶಾಲೆಗೆ ಹೋಗು ಎನ್ನುತ್ತಾಳೆ. ಇನ್ನೊಬ್ಬ ದೇವತೆ ಬರುತ್ತಾಳೆ, ಅವಳು ನೀಚ ದೇವತೆ, ಕೆಟ್ಟ ದೇವತೆ. ಅವಳು ಎಡಗಾಲು ತಿಕ್ಕುತ್ತಾಳೆ. ಮಗು! ಇನ್ನೂ ಸ್ವಲ್ಪ ಮಲಗು. ಗಂಟೆ ಎಂಟಾಯಿತಷ್ಟೇ. ಒಂಬತ್ತು ಆಗಲಿ. ಮಲಗು. ಎದ್ದು ಹೋಗಿ ಶಾಲೆಯಲ್ಲಿ ಏನು ಮಾಡಲು ಇದೆ? ಇಲ್ಲೇ ಸೋಮಾರಿಯಾಗಿ ಬಿದ್ದುಕೊಂಡಿರು ಎನ್ನುತ್ತಾಳಂತೆ. ಯಾವ ಕಾಲನ್ನು ನೀನು ಜಾಡಿಸ್ತೀಯೋ ಆ ನಿರ್ಣಯ ನಿನ್ನನ್ನು ರಕ್ಷಣೆ ಮಾಡುತ್ತದೆ. ಬಲಗಾಲನ್ನು ಭಾಗ್ಯದೇವತೆ ಒತ್ತುವಾಗ ಅವಳನ್ನು ಜಾಡಿಸಿದರೆ ನಷ್ಟವಾಗುತ್ತದೆ. ಎಡಗಾಲನ್ನು ಒತ್ತಿ ಸುಖ ಆನಂದ ನೀಡುವ ಉದಾರತೆ ತೋರಿಸುವವಳನ್ನು ಜಾಡಿಸಿದರೆ ಬಲಕಾಲಿನ ಪಕ್ಷ ನಾವಾಗುತ್ತೇವೆ. ಅದಕ್ಕೇ ಸೋಮಾರಿತನವನ್ನು ಜಾಡಿಸಿ ಬೇಗ ಎದ್ದೇಳಬೇಕು’ ಎಂದು ಅಜ್ಜಿ ಬುದ್ಧಿ ಹೇಳುತ್ತಿದ್ದರು.

    ಸ್ನಾನ ಮಾಡುವಾಗ ಬೆನ್ನನ್ನು ಚೆನ್ನಾಗಿ ತಿಕ್ಕಿಕೊಂಡರೆ ಶನಿ ಹಿಡಿಯುವುದಿಲ್ಲ ಎಂದು ಅಜ್ಜಿಯಂದಿರು ಹೇಳುತ್ತಿದ್ದರು. ಬೆನ್ನು ತಿಕ್ಕಿಕೊಂಡರೆ ಶೀತ ಕಫ ಆಗುವುದಿಲ್ಲ ಎಂದು ಅದರ ನಿಜಾರ್ಥ ಬುದ್ಧಿ ಬಂದ ಮೇಲೆ ಅರಿವಾಯಿತು. ಮಕ್ಕಳಿಗೆ ಶಿಕ್ಷಣದ ಜೊತೆಗೆ ಬದುಕಿನ ಪಾಠವನ್ನೂ ಕಲಿಸಿಕೊಡುವ ಹೊಣೆೆಗಾರಿಕೆ ಹೆತ್ತವರು ಮಾತ್ರವಲ್ಲದೆ ಶಾಲಾ-ಕಾಲೇಜುಗಳಿಗೂ ಇದೆ. ಸಾಮಾನ್ಯವಾಗಿ ಕೆಲವರಲ್ಲಿ ಹಳೆಯದು ಶ್ರೇಷ್ಠ ಹೊಸತು ಕೆಟ್ಟದ್ದು ಎಂಬ ಭಾವವಿದೆ. ‘ಮಂಕುತಿಮ್ಮನ ಕಗ್ಗ’ದಲ್ಲಿ ಸುಂದರವಾಗಿ ಅದನ್ನು ವಿವರಿಸುತ್ತಾರೆ. ಹಳೆಯದು ಮತ್ತು ಹೊಸತರೆಡರಲ್ಲೂ ಒಳ್ಳೆಯದು ಕೆಟ್ಟದ್ದು ಇದೆ. ಎರಡೂ ಬೇಕು. ನಾವು ಸ್ವೀಕಾರ ಮಾಡುವ ಕಣ್ಣಲ್ಲಿ ಇರುವಂತಹದ್ದು. ಹಳೆಯ-ಹೊಸತು ಎರಡರಲ್ಲಿರುವ ಕೆಟ್ಟದ್ದನ್ನ ಎಡ ಕಣ್ಣಲ್ಲಿ ನೋಡೋಣ. ಒಳ್ಳೆಯದನ್ನು ಬಲ ಕಣ್ಣಿನಲ್ಲಿ ನೋಡೋಣ ಎಂದು ವಿವರಿಸಿದ್ದಾರೆ.

    ‘ಫಸ್ಟ್ ರ್ಯಾಂಕ್ ರಾಜು’ ಅನ್ನುವ ಸಿನೆಮಾ ಬಂದಿತ್ತು. ಮೊದಲ ರ್ಯಾಂಕ್ ಪಡೆದ ಯುವಕನಿಗೆ ಪ್ರಾಪಂಚಿಕ ಜ್ಞಾನದ ಕೊರತೆ ಇತ್ತು. ಲೌಕಿಕ ವಿಷಯದಿಂದ ಹಿಡಿದು ಆಧುನಿಕ ಡ್ರೆಸ್ ಧರಿಸುವ ವಿಷಯದಲ್ಲೂ ಅಜ್ಞಾನಿ. ರಾಜು ಕೆಲಸಕ್ಕಾಗಿ ಸಂದರ್ಶನಕ್ಕೆ ಹೋಗುತ್ತಾನೆ. ಸಂದರ್ಶಕರು ಆತನಿಗೆ ಕೆಲವು ಪ್ರಶ್ನೆಗಳನ್ನು ಕೇಳಿ ಅನರ್ಹಗೊಳಿಸುತ್ತಾರೆ. ಆತ ನಿರಾಶನಾದಾಗ- ಪರಿಚಯವಿದ್ದ ಸಂದರ್ಶಕರು ಆತನ ತಂದೆಗೆ ಕರೆಮಾಡಿ ಆತನಿಗೆ ಪ್ರಾಪಂಚಿಕ ಜ್ಞಾನ ತಿಳಿಸಿರಿ ಎನ್ನುತ್ತಾರೆ. ಕೊನೆಗೆ ತಂದೆಯೇ ಆಧುನಿಕತೆಯ ಪಾಠ ಹೇಳಿಕೊಡುತ್ತಾನೆ. ಅಂದರೆ- ಹುಡುಗಿಯರನ್ನು ನೋಡು, ಚುಡಾಯಿಸು, ಸ್ವೇಚ್ಛೆಯಿಂದ ಇರು ಇತ್ಯಾದಿ- ಹೀಗೆ ಆಧುನಿಕತೆಯ ಪಾಠವಾಗುತ್ತದೆ. ನಮಗೇನೋ ಸಜ್ಜನರು ಕೆಟ್ಟಂತೆ ಕಾಣುತ್ತದೆ. ಪುರಂದರದಾಸರ ಹಾಡಿನಂತೆ, ‘ಸತ್ಯವಂತರಿಗಿದು ಕಾಲವಲ್ಲಾ ದುಷ್ಟ ಜನರಿಗಿದು ಸುಭಿಕ್ಷ ಕಾಲ! ಹರಿಸ್ಮರಣೆ ಮಾಡುವವರಿಗೆ ಕ್ಷಯವಾಗುವ ಕಾಲ. ಪರಮ ದುಷ್ಟರಿಗೆ ಸುಭಿಕ್ಷ ಕಾಲ’ ಇತ್ಯಾದಿ. ಆದರೆ ಸಮಾಜದೊಂದಿಗೆ ಬೆರೆತುಕೊಳ್ಳುವ ಮನೋಧರ್ಮವಿರಬೇಕು. ಅಪ್ಪ ನೆಟ್ಟ ಆಲದ ಮರಕ್ಕೆ ನೇಣು ಎಂಬಂತೆ, ಹಳೆಯದೆಲ್ಲವೂ ಉತ್ತಮ, ಹೊಸದೆಲ್ಲವೂ ಅಧಮ ಎನ್ನುವಂತೆ ಅಥವಾ ಅದನ್ನೆ ಹಿಂದೆ ಮುಂದೆ ಮಾಡಿದರೆ ಆಗಬಾರದ್ದು ಆಗುತ್ತದೆ.

    ಹಳೇ ಬೇರು ಹೊಸ ಚಿಗುರು ಅನ್ನುವ ಡಿ.ವಿ.ಜಿ.ಯವರ ಮಾತಿನಂತೆ ಇದ್ದರೆ ಚೆನ್ನ. ಬೇರು ಮಣ್ಣಿನೊಳಗೆ ಇದ್ದು ಎಲ್ಲಾ ಋತುಗಳ ವೈರುಧ್ಯಗಳನ್ನು ಸಹಿಸಿಕೊಂಡು ವೃಕ್ಷಕ್ಕೆ ‘ತಾಯಿ’ಯಾಗಿ ಪೌಷ್ಟಿಕತೆ ಕೊಟ್ಟು ರಕ್ಷಿಸಿ ಬೆಳೆಸುತ್ತದೆ. ಕಣ್ಣಿಗೆ ಹಸಿರು, ಹೂವು, ಹಣ್ಣುಗಳು ಕಂಡರೂ ತಾಯಿಬೇರಿಗೆ ಅಪಾಯವಾದರೆ ಗಿಡವೇ ನಾಶವಾಗುವಂತೆ ಸಮಾಜದಲ್ಲಿ ಧರ್ಮ, ಸಂಸ್ಕೃತಿ, ಉತ್ತಮ ಆಚರಣೆಗಳು ಇದ್ದು ಅದರೊಂದಿಗೆ ಆಧುನಿಕತೆ ಇದ್ದರೆ ಒಳ್ಳೆಯದು.

    ಈ ಮೇಲೇ ಹೇಳಿದ ಸಿನಿಮಾದ ರಾಜು ಮನೆಯಲ್ಲಿದ್ದುಕೊಂಡು ಶಿಕ್ಷಣ ಪಡೆದ. ತಂದೆ-ತಾಯಿ ಎಲ್ಲಾ ಅನುಕೂಲಗಳನ್ನು ಒದಗಿಸಿದರು. ಗೌತಮ ಬುದ್ಧನಿಗೆ ಸಂಸಾರ ಯೋಗವಿಲ್ಲವೆಂದು ಜಾತಕ ಫಲ ಹೇಳಿದಾಗ ಆತನನ್ನು ಲೌಕಿಕ ಭೋಗ ಜೀವನದ ಕಡೆಗೆ ಆಕರ್ಷಿಸಲು ತಂದೆ ಪ್ರಯತ್ನಿಸಿದರು. ಸುಂದರ ರಾಜಕುಮಾರಿಯೊಂದಿಗೆ ಮದುವೆಯೂ ಆಯಿತು. ಆದರೂ ಆಕಸ್ಮಿಕವಾಗಿ ರೋಗಿ, ವೃದ್ಧ ಮತ್ತು ಶವ ಸಾಗಾಟದ ದೃಶ್ಯಗಳನ್ನು ಕಂಡಾಗ ಬದುಕಿನ ನಶ್ವರತೆಯ ನೆನಪಾಯಿತು. ವಿರಕ್ತಿ ಬಂತು. ನಾನು ಧರ್ಮಸ್ಥಳ ಬೀಡಿನಲ್ಲಿ ಹುಟ್ಟಿ ಬೆಳೆದಿದ್ದರೂ, ನನ್ನ ತೀರ್ಥರೂಪರಾದ ಶ್ರೀ ರತ್ನವರ್ಮ ಹೆಗ್ಗಡೆಯವರಿಗೆ ನಾನು ಸಾಮಾನ್ಯ ಜನಜೀವನದೊಂದಿಗೆ ಬೆರೆತು ವ್ಯಕ್ತಿತ್ವ ರೂಪಿಸಿಕೊಳ್ಳಬೇಕೆಂಬ ಭಾವನೆ ಇತ್ತು. ಅಂತೆಯೇ ಧರ್ಮಸ್ಥಳದ ಬಳಿ ಇರುವ ಉಜಿರೆಯ ಸಿದ್ಧವನದಲ್ಲಿ ಹೈಸ್ಕೂಲ್ ಮೊದಲನೇ ವರ್ಷಕ್ಕೆ ಸೇರಿಸಿದರು. ನಾಲ್ಕು ವಿದ್ಯಾರ್ಥಿಗಳಿರುವ ಸಾದಾ ಕೊಠಡಿ, ಬೆಳಿಗ್ಗೆ 5 ಗಂಟೆಗೆ ಎದ್ದು, ಸಾಲು ಶೌಚಗೃಹ ಬಳಸಿ ಬಾವಿಯಲ್ಲಿ ನೀರು ಸೇದಿ ಸ್ನಾನ ಮಾಡಬೇಕಿತ್ತು. ಬೆಳಿಗ್ಗೆ ನಿತ್ಯವೂ ಗಂಜಿ ಊಟ, ಮಧ್ಯಾಹ್ನ ಮತ್ತು ಸಾಯಂಕಾಲ ಊಟದ ವ್ಯವಸ್ಥೆ ಇತ್ತು. ಘನ ವಿದ್ವಾಂಸರಾಗಿದ್ದ ಜಿನರಾಜ ಶಾಸ್ತ್ರಿಗಳು ನಿತ್ಯವೂ ಸಂಜೆ 5.30-6.30 ಭಾಗವತ, ಭಗವದ್ಗೀತೆ ಮತ್ತು ಜೈನ ಧರ್ಮದ ಗ್ರಂಥಗಳನ್ನು ಓದಿ ಪ್ರವಚನ ನೀಡುತ್ತಿದ್ದರು. ಭಾನುವಾರ ಮತ್ತು ರಜೆಯಲ್ಲಿ ಮನೆಗೆ (ಧರ್ಮಸ್ಥಳಕ್ಕೆ) ಬಂದಾಗ ಅಜ್ಜಿ ಕಮಲಾವತಿ ಅಮ್ಮನವರ ಮತ್ತು ತಾಯಿ ರತ್ನಮ್ಮನವರ ತಿಂಡಿ, ಬೋರ್ನವೀಟಾ, ಓವಲ್​ಟೈನ್, ಕಾಫಿ ಸಿಗುತ್ತಿತ್ತು.

    ಅಂತೂ ತಂದೆಯವರ ಅಪೇಕ್ಷೆಯಂತೆ ಸಾಮಾನ್ಯರ ಜೊತೆ ಬೆಳೆೆಯುವಂತಾಯಿತು. ಇಂದು ಯಾವುದೇ ಆಹಾರ ನನಗೆ ಪ್ರಿಯವಾಗುತ್ತದೆ. ಪ್ರವಾಸದಲ್ಲಿ ಎಲ್ಲಿ ಮಲಗಿದರೂ ನಿದ್ದೆ ಬರುತ್ತದೆ. ಒಂದು ಬಾರಿ ಕೇರಳಕ್ಕೆ ಹೋಗಿದ್ದೆ. ಸೆಕೆಗಾಲ ಅದು. ಸಾಮಾನ್ಯ ಕೊಠಡಿಯಲ್ಲಿದ್ದೆ. ರಾತ್ರಿಯಿಡೀ ಮೈಕ್​ನಲ್ಲಿ ಗಟ್ಟಿಯಾಗಿ ಪ್ರಸಾರ ಮಾಡುತ್ತಿದ್ದರು. ನನ್ನ ಜೊತೆಯಲ್ಲಿರುವವರಿಗೆ ನಿದ್ದೆಯೇ ಇಲ್ಲ. ನನಗೆ ಕಿರಿಕಿರಿಯಾದರೂ ನಿದ್ದೆ ಬಂದಿತ್ತು. ನನ್ನ ಸಿದ್ಧವನ ಗುರುಕುಲದ ತರಬೇತಿ ಉಪಯುಕ್ತವಾಯಿತು. ವಿದ್ಯಾರ್ಥಿನಿಲಯದಲ್ಲಿ ದೇಹ ಮತ್ತು ಮನಸ್ಸು ಪಕ್ವವಾಗುತ್ತದೆ.

    ಸಿದ್ಧಗಂಗಾ ಮಠ, ಆದಿಚುಂಚನಗಿರಿಯ ವಿದ್ಯಾರ್ಥಿನಿಲಯ, ರಾಮಕೃಷ್ಣ ಆಶ್ರಮ, ಅಳಿಕೆ ವಿದ್ಯಾರ್ಥಿ ನಿಲಯ, ಧರ್ಮಸ್ಥಳ ಸಿದ್ಧವನ ಗುರುಕುಲ ಮುಂತಾದವು ಚಾರಿತ್ರ್ಯವಿರುವ ಪಾರಂಪರಿಕ ಜ್ಞಾನವನ್ನು ಕೊಟ್ಟರೆ, ಇತರ ಕೆಲ ವಿದ್ಯಾರ್ಥಿನಿಲಯಗಳು ಆಧುನಿಕ ಜೀವನದ ಪರಿಚಯವನ್ನು ನೀಡಬಹುದು. ಅಂದರೆ ಮೂಗುದಾರವಿಲ್ಲದೆ ಸಿನೆಮಾಗಳಲ್ಲಿ ಬರುವ ವಿದ್ಯಾರ್ಥಿಗಳಂತೆ ಸ್ವತಂತ್ರವಾಗಿ ಅಲ್ಲಿ ಇರಬಹುದು. ಸಣ್ಣ ವಯಸ್ಸಿನಲ್ಲಿ ದೊರಕಿದ ವ್ಯಕ್ತಿತ್ವ ಶಾಶ್ವತ ಮೌಲ್ಯಗಳಾಗುತ್ತವೆ. ಬೆಳೆಯುತ್ತಾ ಕುದುರೆ ಕತ್ತೆಯಾಯಿತು ಎನ್ನುವ ಗಾದೆಯಂತೆ ಆದರೆ ಅದು ವೈಯಕ್ತಿಕ ಅಧಃಪತನ. ಯುವಜನತೆಗೆ ಶಾಶ್ವತ ಮೌಲ್ಯಗಳ ಪರಿಚಯ ಮಾಡಿ ಧನ್ಯರಾಗೋಣ.

    (ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts