More

    ಸಾಮೂಹಿಕ ಅತ್ಯಾಚಾರವೆಸಗಿದ ಆರೋಪ ಸಾಬೀತು: ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಕೊಟ್ಟ ಮಂಡ್ಯ ನ್ಯಾಯಾಲಯ

    ಮಂಡ್ಯ: ಕಾಲೇಜು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ರೂ ದಂಡ ವಿಧಿಸಿ ಮಂಡ್ಯದ ಐದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಾ.20ರಂದು ತೀರ್ಪು ನೀಡಿದೆ.
    ಮೈಸೂರು ಮೂಲದ ಕೀರ್ತಿಗೌಡ, ಕಿರಣ್, ಮೋಹನ್ ಎಂಬುವರು ಶಿಕ್ಷೆಗೆ ಗುರಿಯಾದವರು. ಇವರು ಮೈಸೂರಿನ ಕಾಲೇಜೊಂದರಲ್ಲಿ ದ್ವಿತೀಯ ಬಿ.ಎ ವ್ಯಾಸಂಗ ಮಾಡುತ್ತಿದ್ದ ಯುವತಿ ಮೇಲೆ 2015ರಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಖಚಿತವಾಗಿದೆ.
    ಏನಿದು ಘಟನೆ?: ಯುವತಿಯನ್ನು ಕೀರ್ತಿಗೌಡ ಎಂಬಾತ ಪ್ರೀತಿಸುತ್ತಿದ್ದನು. ಇದನ್ನೇ ಬಂಡವಾಳ ಮಾಡಿಕೊಂಡು ಯುವತಿಯನ್ನು ನಂಬಿಸಿ ಪಾಂಡಪುರ ತಾಲೂಕು ಬೇಬಿಬೆಟ್ಟಕ್ಕೆ ಕರೆದೊಯ್ದು ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ಮಾಡಿದ್ದಾನೆ. ಬಳಿಕ ಕೀರ್ತಿಯ ಸ್ನೇಹಿತರಾದ ಕಿರಣ್, ಮೋಹನ್ ಎಂಬುವರು ಮಾತನಾಡಬೇಕೆಂದು ಕರೆದೊಯ್ದು ಮತ್ತೆ ಅತ್ಯಾಚಾರ ನಡೆಸಿದ್ದರು. ಇದಾದ ನಂತರ ಆರೋಪಿ ಮಂಜುನಾಥ್ ಎಂಬಾತ ಕರೆದುಕೊಂಡು ಹೋಗಲು ಮುಂದಾದಾಗ ಸಂತ್ರಸ್ತೆ ಅಳಲು ಪ್ರಾರಂಭಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಆಕೆಯನ್ನು ಶ್ರೀರಂಗಪಟ್ಟಣ ಬಸ್ ನಿಲ್ದಾಣಕ್ಕೆ ಬಿಟ್ಟು ಪರಾರಿಯಾಗಿದ್ದರು.
    ಈ ಸಂಬಂಧ ಪಾಂಡವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶ್ರೀರಂಗಪಟ್ಟಣದ ಉಪ ವಿಭಾಗದ ಡಿವೈಎಸ್‌ಪಿ ಎನ್.ಸಿದ್ದೇಶ್ವರ್ ಅಂದು ಆರೋಪಿಗಳ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಐದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶೆ ಕೆ.ನಿರ್ಮಲಾ ಶಿಕ್ಷೆ ಪ್ರಕಟಿಸಿದರು. ಅದರಂತೆ ಮೂವರಿಗೆ ಜೀವಾವಧಿ ಶಿಕ್ಷೆ, ತಲಾ 50 ಸಾವಿರ ರೂ.ದಂಡ, ಪಿಒಎ ಕಾಯ್ದೆಯಡಿ ಕಠಿಣ ಶಿಕ್ಷೆ ಮತ್ತು ಭಾದಂಸಂ ಕಾಯ್ದೆ 376ರಡಿ 20 ವರ್ಷ ಕಠಿಣ ಶಿಕ್ಷೆ ಮತ್ತು 40 ಸಾವಿರ ರೂ ದಂಡ ಹಾಗೂ ಭಾದಂಸಂ ಕಾಯ್ದೆ 506 ಅಡಿಯಲ್ಲಿ 5 ಸಾವಿರ ರೂ ದಂಡ ನೀಡಲಾಗಿದೆ. ಅಂತೆಯೇ ಸಂತ್ರಸ್ತೆಗೆ 2.80 ಲಕ್ಷ ರೂ ಪರಿಹಾರ ನೀಡಬೇಕೆಂದು ಆದೇಶಿಸಲಾಗಿದೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಸ್.ಸಿ.ರಾಮಲಿಂಗೇಗೌಡ ವಾದ ಮಂಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts