More

    ಕೆಜಿಎಫ್ ಎಂ.ಜಿ.ಮಾರುಕಟ್ಟೆ ಮಳಿಗೆಗಳ ಇ-ಹರಾಜು ನಡೆಸದಂತೆ ಸಚಿವರಿಗೆ ಮನವಿ ; ಕಡತಗಳೊಂದಿಗೆ ಕಚೇರಿಗೆ ಬರಲು ಡಿಸಿಗೆ ಎಂಟಿಬಿ ನಾಗರಾಜ್ ಸೂಚನೆ

    ಕೆಜಿಎಫ್ : ಎಂ.ಜಿ.ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳು ಮಾಜಿ ಶಾಸಕ ವೈ.ಸಂಪಂಗಿ ನೇತೃತ್ವದಲ್ಲಿ ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ್ ಅವರನ್ನು ಹೊಸಕೊಟೆಯಲ್ಲಿ ಭಾನುವಾರ ಭೇಟಿ ಮಾಡಿ ಇ ಹರಾಜು ಬದಲು ಬಾಡಿಗೆದಾರರಿಗೇ ನೀಡುವಂತೆ ಕೋರಿ ಮನವಿ ಸಲ್ಲಿಸಿದರು.

    ಈ ವೇಳೆ ಮಾತನಾಡಿದ ಮಾಜಿ ಶಾಸಕ ಸಂಪಂಗಿ, ನಗರದ ಎಂ.ಜಿ.ಮಾರುಕಟ್ಟೆಯಲ್ಲಿ ನಗರಸಭೆಗೆ ಸೇರಿದ ಜಾಗದಲ್ಲಿ 1766 ಅಂಗಡಿ ಮಳಿಗೆಗಳಿದ್ದು, ಬಾಡಿಗೆದಾರರು ವಹಿವಾಟು ನಡೆಸಿಕೊಂಡು ಬರುತ್ತಿದ್ದಾರೆ. ಮಳಿಗೆಗಳನ್ನು ಇ ಹರಾಜು ಮೂಲಕ ಮರು ಹರಾಜು ನಡೆಸುವ ಸಂಬಂಧ ಖಾಲಿ ಮಾಡಲು ಪೌರಾಯುಕ್ತರು ನೋಟಿಸ್ ಜಾರಿ ಮಾಡುತ್ತಿದ್ದಾರೆ. ಇ ಹರಾಜು ನಡೆಸದಂತೆ ವ್ಯಾಪಾರಸ್ಥರು ಧರಣಿ ನಡೆಸಿ ಕೈ ಬಿಡಲು ಮನವಿ ಮಾಡಿದ್ದರೂ ಸ್ಪಂದಿಸಿಲ್ಲ ಎಂದು ದೂರಿದರು.

    ಎಂ.ಜಿ.ಮಾರುಕಟ್ಟೆಯಲ್ಲಿನ ಅಂಗಡಿಗಳನ್ನೇ ನಂಬಿ ಸಾವಿರಾರು ಕುಟುಂಬಗಳು ಜೀವನ ನಡೆಸುತ್ತಿವೆ. ಇ ಹರಾಜು ನಡೆಸಲು ನೋಟಿಸ್ ಜಾರಿ ಮಾಡಿರುವುದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಇ ಹರಾಜು ಮಾಡುವ ಕ್ರಮವನ್ನು ಕೈ ಬಿಟ್ಟು ಸರ್ಕಾರ ನಿಗದಿಪಡಿಸುವ ದರದಲ್ಲಿ ಬಾಡಿಗೆದಾರರಿಗೆ ಲೀಸ್‌ಗೆ ನೀಡುವ ನಿಟ್ಟಿನಲ್ಲಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

    ನಗರಸಭೆಗೆ ಸೇರಿದ ಜಾಗದಲ್ಲಿ ನಮ್ಮ ಹಿರಿಯರು ಶತಮಾನಗಳ ಹಿಂದೆ ಅಂಗಡಿ ಮಳಿಗೆಗಳನ್ನು ಕಟ್ಟಿಕೊಂಡಿದ್ದರು, ಮಾಸಿಕ 300ರಿಂದ 3000 ರೂ.ವರೆಗೆ ಬಾಡಿಗೆ ಪಾವತಿಸುತ್ತಿದ್ದೇವೆ. ತರಕಾರಿ, ಮಾಂಸ ಸೇರಿ ಎಲ್ಲ ರೀತಿಯ ಮಾರುಕಟ್ಟೆಗಳು ಇಲ್ಲಿ ನಡೆಯುತ್ತಿದೆ. ನಾವು ಮಳಿಗೆಯನ್ನೇ ನಂಬಿಕೊಂಡು ಕುಟುಂಬ ಪೋಷಣೆ ಮಾಡುತ್ತಿದ್ದೇವೆ. ಬಹುತೇಕ ಎಲ್ಲರೂ ಬಡವರೇ ಆಗಿದ್ದು, ನಿತ್ಯ ಸಾಲ ಪಡೆದು ವ್ಯಾಪಾರ ಮಾಡುತ್ತಿದ್ದೇವೆ. ಸರ್ಕಾರ ನಿಗದಿಪಡಿಸುವ ಬಾಡಿಗೆ ಮತ್ತು ಠೇವಣಿ ಮೊತ್ತ ಪಾವತಿಸಲು ಸಿದ್ದರಿದ್ದೇವೆ. ಮಳಿಗೆಗಳನ್ನು ಹರಾಜು ಹಾಕದೆ ಹಾಲಿ ಬಾಡಿಗೆದಾರರಿಗೇ ನೀಡಲು ಕ್ರಮ ವಹಿಸಬೇಕೆಂದು ವ್ಯಾಪಾರಸ್ಥರು ಕೋರಿದರು. ಸಂಘದ ಅಧ್ಯಕ್ಷ ದೇವೇಂದ್ರ, ವ್ಯಾಪಾರಸ್ಥರಾದ ಕೃಷ್ಣ, ಜಯಶೀಲನ್. ವೆಂಕಟರೆಡ್ಡಿ, ರಾಜಣ್ಣ ಇತರರು ಹಾಜರಿದ್ದರು.

    ಡಿಸಿ ಸತ್ಯಭಾಮಗೆ ಬುಲಾವ್: ವ್ಯಾಪಾರಸ್ಥರ ಅಹವಾಲು ಆಲಿಸಿದ ಸಚಿವ ನಾಗರಾಜ್ ಕೋಲಾರ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರಿಗೆ ಕರೆ ಮಾಡಿ, ನಗರಸಭೆಗೆ ಸಂಬಂಧಪಟ್ಟ ಕಡತಗಳನ್ನು ಮೂರು ದಿನಗಳ ನಂತರ ತೆಗೆದುಕೊಂಡು ನೀವು ಹಾಗೂ ಪೌರಾಯುಕ್ತರು ನಮ್ಮ ಕಚೇರಿಗೆ ಬನ್ನಿ, ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳೋಣ. ಅದುವರೆಗೆ ನೋಟಿಸ್ ಜಾರಿ ಸ್ಥಗಿತಗೊಳಿಸುವಂತೆ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts