More

    ಆಂತರಿಕ ಶಕ್ತಿಯನ್ನು ಅರಿಯೋಣ: ಮನೋಲ್ಲಾಸ

    ಆಂತರಿಕ ಶಕ್ತಿಯನ್ನು ಅರಿಯೋಣ: ಮನೋಲ್ಲಾಸ| ರೇಖಾ ಗಜಾನನ ಭಟ್ಟ

    ಊರಿನ ಸಮೀಪದ ಹಳ್ಳದಲ್ಲಿ ನೀರು ಕುಡಿಯಲು ಬಂದ ಹುಲಿಯೊಂದು ಕಟುಕನ ಗುಂಡೇಟಿಗೆ ಬಲಿಯಾಗಿ ಪ್ರಾಣ ಬಿಟ್ಟಿತು. ಆ ಹುಲಿಗೆ ಮೂರು ಮರಿಗಳಿದ್ದವು. ಅವುಗಳನ್ನು ಬೆಳೆಸಿ ಮಾರಿದರೆ ಚೆನ್ನಾಗಿ ಹಣ ಸಂಪಾದಿಸಬಹುದು ಎಂದು ಕಟುಕ ವಿಚಾರ ಮಾಡಿ ಆ ಮೂರೂ ಹುಲಿಮರಿಗಳನ್ನು ದೊಡ್ಡ ಪಂಜರದಲ್ಲಿಟ್ಟು ಸಾಕತೊಡಗಿದ. ಕಟುಕ ಹಾಕಿದ ಮಾಂಸವನ್ನು ತಿಂದು ಅವು ಪಂಜರದೊಳಗೆ ಬೆಳೆಯತೊಡಗಿದವು. ಅವುಗಳಿಗೆ ಕಾಡಿನಲ್ಲಿರುವ ಹುಲಿಗಳ ಗರ್ಜನೆ, ಬೇಟೆ, ಸುತ್ತಾಟಗಳ ಅರಿವೇ ಆಗಿರಲಿಲ್ಲ. ಹೀಗಿರುವಾಗ ಒಂದು ದಿನ ರಾತ್ರಿ ಕಾಡಿನ ಹುಲಿಯೊಂದು ಆಹಾರ ಹುಡುಕುತ್ತ ಹುಲಿಮರಿಗಳಿರುವ ಪಂಜರದ ಹತ್ತಿರ ಬಂದಿತು. ಇವುಗಳನ್ನು ಕಂಡು ಗರ್ಜಿಸಿತು. ಪಂಜರದ ಹೊರಗೆ ಮಲಗಿದ್ದ ನಾಯಿಯನ್ನು ಬೇಟೆಯಾಡಿ ತಿನ್ನತೊಡಗಿತು. ಆ ಸದ್ದಿಗೆ ಎಚ್ಚರಾದ ಕಟುಕ ಬಂದೂಕು ಹಿಡಿದು ಬಂದಾಗ, ಹುಲಿ ತಪ್ಪಿಸಿಕೊಂಡು ಕಾಡಿನೆಡೆಗೆ ಓಡಿತು.

    ಅದನ್ನು ನೋಡಿದ ಹುಲಿಮರಿಗಳು ಅಚ್ಚರಿಗೊಂಡವು. ಒಂದು ಹುಲಿಮರಿ, ‘ನೋಡಿ ಆ ಹುಲಿ ಎಷ್ಟು ಗತ್ತಿನಿಂದ ಗರ್ಜಿಸುತ್ತ ಓಡಾಡಿಕೊಂಡಿದೆ. ನಾವು ಈ ಪಂಜರದಲ್ಲಿ ಬಂಧಿಯಾಗಿದ್ದೇವೆ. ಉಪಾಯದಿಂದ ಇಲ್ಲಿಂದ ಪಾರಾಗಿ ಕಾಡು ಸೇರೋಣ’ ಎಂದಿತು. ಉಳಿದೆರಡು ಹುಲಿಮರಿಗಳು, ‘ಇಲ್ಲಿಂದ ಹೊರಹೋದರೆ ನಾವೇ ಆಹಾರ ಹುಡುಕಿಕೊಳ್ಳಬೇಕಾಗುತ್ತದೆ. ಅಲ್ಲದೆ ಕಟುಕನಂಥವರು ನಮ್ಮನ್ನು ಕೊಲ್ಲಬಹುದು. ಅದರ ಬದಲು ಇಲ್ಲೇ ಇರುವುದು ಕ್ಷೇಮ’ ಎಂದವು. ಸ್ವಾತಂತ್ರ್ಯದ ಜೊತೆಗಿನ ಜವಾಬ್ದಾರಿಗಳನ್ನು ಅರಿತ ಮೊದಲನೆಯ ಹುಲಿಮರಿ ಅವಕಾಶಕ್ಕಾಗಿ ಕಾದು ಕುಳಿತು ಚಾಣಾಕ್ಷತನದಿಂದ ಪಂಜರದಿಂದ ಹೊರಗೋಡಿ ಕಾಡು ಸೇರಿ ಕಾಡಿನ ರಾಜನಾಗಿ ಬಾಳಿತು. ಉಳಿದೆರಡು ಹುಲಿಮರಿಗಳು ಕಟುಕನಿಂದ ಸರ್ಕಸ್ ಕಂಪನಿಗೆ ಮಾರಲ್ಪಟ್ಟು ಕೊನೆತನಕ ಬಂಧನದಲ್ಲೇ ಬದುಕಿದವು.

    ಹಲವು ವರ್ಷಗಳ ನಂತರ ಹಳ್ಳಿಗೆ ಅದೇ ಹುಲಿಗಳಿರುವ ಸರ್ಕಸ್ ಕಂಪನಿ ಬಂದಾಗ ಅವರ ಬಿಡಾರಕ್ಕೆ ಕಾಡಿನಲ್ಲಿ ಇರುವ ಹುಲಿ ನುಗ್ಗಿತು. ಅದರ ಗರ್ಜನೆಗೆ ಎಲ್ಲರೂ ಹೆದರಿ ಓಡಿದರು. ಪಂಜರದೊಳಗೆ ಇದ್ದ ಹುಲಿಗಳು ಅದರ ಗುರುತು ಹಿಡಿದಾಗ ತಮ್ಮ ಮತ್ತು ಕಾಡಿಗೆ ಓಡಿಹೋದ ಹುಲಿಯ ನಡುವಿನ ವ್ಯತ್ಯಾಸ ಸ್ಪಷ್ಟವಾಗಿ ಗೋಚರವಾಗಿತ್ತು. ಪಂಜರದಿಂದ ತಪ್ಪಿಸಿಕೊಂಡು ಕಾಡು ಸೇರಿದ ಹುಲಿ ದೈಹಿಕವಾಗಿ ಸದೃಢವಾಗಿದ್ದು, ನೈಸರ್ಗಿಕ ಗುಣಲಕ್ಷಣಗಳನ್ನು ಬೆಳೆಸಿಕೊಂಡಿತ್ತು. ಬಂಧಿತ ಹುಲಿಗಳು ಮೂಲಸ್ವರೂಪವನ್ನೇ ಮರೆತು ಹೋಗಿದ್ದವು.

    ಹುಲಿಯೇ ಇರಲಿ, ಸಾತ್ವಿಕ ಪ್ರಾಣಿಯೇ ಇರಲಿ ಬಂಧನದಲ್ಲಿ ಇರುವಾಗ ತನ್ನ ಆಂತರಿಕ ಶಕ್ತಿಯನ್ನು ಅರಿಯಲು, ಪೂರ್ತಿಯಾಗಿ ಹೊರಹಾಕಲು ಸಾಧ್ಯವಾಗದು. ಇದೇ ಪರಿಸ್ಥಿತಿ ನಮ್ಮ ದೇಹ, ಮನಸ್ಸುಗಳಿಗೂ ಅನ್ವಯವಾಗುತ್ತದೆ. ಆದ್ದರಿಂದ ನಮ್ಮ ಓರೆಕೋರೆಗಳನ್ನು ತಿದ್ದಿಕೊಳ್ಳುತ್ತ, ತೊಡಕುಗಳನ್ನು ನಿವಾರಿಸಿಕೊಳ್ಳುವುದರ ಜೊತೆಗೆ ನಮ್ಮಆಂತರಿಕ ಧನಾತ್ಮಕ ಶಕ್ತಿ ಸ್ವತಂತ್ರವಾಗಿ, ಸಂಪೂರ್ಣವಾಗಿ ಹೊರಬರುವಂತೆ ಪ್ರಯತ್ನಿಸೋಣ.

    ಕಟ್ಟೋಣ ಬೇಲಿಯ ನಕಾರಾತ್ಮಕ ನಡೆಗೆ

    ಅಟ್ಟೋಣ ಮನಸ ಧನಾತ್ಮಕತೆಯ ಎಡೆಗೆ

    ಮುನ್ನ ಹಿರಿದಾಗಲಿ ನಮ್ಮೊಳಗಿನ ಸದ್ಬಲ

    ಹಿನ್ನಡೆಯೇಕೆ ಅರಳಲಿ ಅಂತರಂಗದ ಕಮಲ

    (ಲೇಖಕರು ಶಿಕ್ಷಕರು, ಹವ್ಯಾಸಿ ಬರಹಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts