More

    ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗಲಿ



    ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಭವಿಷ್ಯದ ಉದ್ಯಮ ಕೇಂದ್ರಗಳು. ಕೈಗಾರಿಕೆ ಸ್ಥಾಪನೆಗೆ ಇಂತಹ ಪ್ರಶಸ್ತ ಸ್ಥಳ ಬೇರೆಲ್ಲೂ ಇಲ್ಲ. ಅವಕಾಶ ಸಿಗದಾಗಿ ಪ್ರತಿಭಾವಂತರು ವಲಸೆ ಹೋಗುತ್ತಿದ್ದಾರೆ. ಅವರಿಗೆ ಇಲ್ಲಿಯೇ ಉದ್ಯೋಗ ಸೃಷ್ಟಿಸುವ ಗುರುತರ ಜವಾಬ್ದಾರಿ ಸರ್ಕಾರ ಹಾಗೂ ಇಲ್ಲಿನ ಉದ್ಯಮಿಗಳ ಮೇಲಿದೆ ಎಂದು ಜ್ಯೋತಿ ಲ್ಯಾಬರೋಟರೀಸ್​ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಕೆ. ಉಲ್ಲಾಸ ಕಾಮತ್ ಹೇಳಿದರು.

    ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ (ಕೆಸಿಸಿಐ)ಯಲ್ಲಿ ಗುರುವಾರ ಸಂಸ್ಥಾಪಕರ ದಿನಾಚರಣೆ ಹಾಗೂ ಐವರು ಸಾಧಕರಿಗೆ ವಾಣಿಜ್ಯ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತಿಥಿಗಳಾಗಿ ಅವರು ಮಾತನಾಡಿದರು. ಈ ಭಾಗದಲ್ಲಿ ಉದ್ಯಮಗಳ ಸ್ಥಾಪನೆಯಾಗಬೇಕು. ಇದಕ್ಕಾಗಿ ಈ ಭಾಗದ ಉದ್ಯಮಿಗಳು ಒಂದಿಷ್ಟು ಕ್ಯಾಪಿಟಲ್ ಫಂಡ್ ಸಂಗ್ರಹಿಸಬೇಕು. ಏನು ಮಾಡಿದರೆ ಉದ್ಯೋಗ ಸೃಷ್ಟಿಸಬಹುದು ಎಂದು ಚಿಂತನೆ ಮಾಡಬೇಕು. ಉದ್ಯಮ ಸ್ಥಾಪನೆಗೆ ಮುಂದೆ ಬಂದವರಿಗೆ ಆರ್ಥಿಕ ಸಹಕಾರ ನೀಡಬೇಕು. ಈ ಕಾರ್ಯಕ್ಕೆ ನಾವೂ ಕೂಡ ಕೈಜೋಡಿಸುತ್ತೇವೆ ಎಂದರು.

    ಹಳ್ಳಿಗಳು ಸ್ಮಾರ್ಟ್ ಆಗಲಿ: ಸಾನ್ನಿಧ್ಯ ವಹಿಸಿದ್ದ ಕೊಲ್ಲಾಪುರ ಕನೇರಿ ಸಿದ್ದಗಿರಿಮಠದ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ಶೀಲ ರಹಿತ ಶಿಕ್ಷಣ, ನೀತಿ ಹೀನ ವ್ಯಾಪಾರ, ಮನುಷ್ಯತ್ವರಹಿತ ವಿಜ್ಞಾನ ಹಾಗೂ ತತ್ವರಹಿತ ರಾಜಕೀಯ ಇರಬಾರದು ಎಂದು ಗಾಂಧೀಜಿ ಹೇಳಿದ್ದರು. ಆದರೆ, ಇದೆಲ್ಲವೂ ಈಗ ಜಾರಿಯಲ್ಲಿ ಬಂದಿವೆ. ದೇಶ ಸ್ವತಂತ್ರವಾದ ಆರಂಭದಲ್ಲಿಯೇ ತಪ್ಪು ಶಿಕ್ಷಣ ನೀತಿಯಿಂದ ಈಗ ನಿರುದ್ಯೋಗ ಕಾಡುತ್ತಿದೆ. ಹಳ್ಳಿಗಳಲ್ಲಿ ಇದ್ದ ಗುಡಿ ಕೈಗಾರಿಕೆಗಳು ಕಳೆದುಹೋಗಿವೆ ಎಂದು ವಿಷಾದಿಸಿದರು. ನಗರ ಕೇಂದ್ರಿತ ಉದ್ಯಮ ಬೆಳವಣಿಗೆ ಕೈಬಿಟ್ಟು ಹಳ್ಳಿಗಳನ್ನು ಸ್ಮಾರ್ಟ್ ಹಾಗೂ ಸಮೃದ್ಧಗೊಳಿಸಬೇಕು. ನಗರಗಳು ಆ ಉತ್ಪಾದನೆಯನ್ನು ಬ್ರಾಂಡಿಂಗ್ ಮಾಡಿ ಮಾರಾಟ ಮಾಡಲಿ ಎಂದು ಸಲಹೆ ನೀಡಿದರು.

    ಪುರಸ್ಕೃತರಿಂದ ಅನಿಸಿಕೆ: ವಾಣಿಜ್ಯ ರತ್ನ ಪ್ರಶಸ್ತಿ ಸ್ವೀಕರಿಸಿದ ಧಾರವಾಡದ ಸ್ಕೈಟೆಕ್ ಇಂಜಿನಿಯರ್ಸ್​ನ ನಾಗರಾಜ ಯಲಿಗಾರ, ಶಿಲ್ಪಾ ಬಯೋಲಾಜಿಕಲ್ ನಿರ್ದೇಶಕರು ಹಾಗೂ ಸಿಎಸ್​ಒ ಡಾ. ಕೆ.ಆರ್. ರಾಜಶ್ರೀ, ಕೆನರಾ ಹೋಟೆಲ್​ನ ಅನಂತಪದ್ಮನಾಭ ಐತಾಳ ಹಾಗೂ ಕೃಷಿ ಸಲಕರಣೆಗಳ ಸಂಶೋಧಕ ಅಬ್ದುಲ್​ಖಾದರ್ ನಡಕಟ್ಟಿನ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

    ಸಂಸ್ಥೆ ಮಾಜಿ ಅಧ್ಯಕ್ಷ ಎಂ.ಸಿ. ಹಿರೇಮಠ, ಉಪಾಧ್ಯಕ್ಷರಾದ ವಿನಯ ಜವಳಿ, ಸಿದ್ದೇಶ್ವರ ಕಮ್ಮಾರ, ಗೌರವ ಕಾರ್ಯದರ್ಶಿ ಅಶೋಕ ಗಡಾದ, ಸಚಿನ್ ಶಹಾ, ಜಂಗೀನ ಕುಟುಂಬದ ಪ್ರೊ. ಚಂದ್ರಶೇಖರ, ಸಣ್ಣಮ್ಮ ಹಾಗೂ ವಾಣಿಜ್ಯೋದ್ಯಮಿಗಳು ಉಪಸ್ಥಿತರಿದ್ದರು.

    ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಮಹೇಂದ್ರ ಲದ್ದಡ ಸ್ವಾಗತಿಸಿದರು. ಭಾಗ್ಯಜ್ಯೋತಿ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ರೇವತಿ ಪ್ರಾರ್ಥನೆ ಹಾಡಿದರು. ಸಂಸ್ಥಾಪಕರ ದಿನಾಚರಣೆ ಸಮಿತಿ ಅಧ್ಯಕ್ಷ ಪ್ರವೀಣ ಅಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಮಾಜಿ ಅಧ್ಯಕ್ಷ ಶಂಕ್ರಣ್ಣ ಮುನವಳ್ಳಿ ಸಂಸ್ಥೆಯ ಮಾಹಿತಿ ನೀಡಿದರು. ಶಂಕರ ಕೋಳಿವಾಡ, ಉಮೇಶ ಗಡ್ಡದ ಅತಿಥಿಗಳ ಪರಿಚಯ ಮಾಡಿದರು.

    ಉತ್ತಮ ವಾತಾವರಣವಿದೆ

    ಹುಬ್ಬಳ್ಳಿ- ಧಾರವಾಡ ಅವಳಿನಗರದಲ್ಲಿ ಉದ್ಯಮ ಬೆಳವಣಿಗೆಗೆ ಒಳ್ಳೆಯ ವಾತಾವರಣ ಇರುವುದರಿಂದಲೇ ನಾವು ಈ ಕ್ಷೇತ್ರದಲ್ಲಿ ಬೆಳೆಯಲು ಸಾಧ್ಯವಾಯಿತು ಎಂದು ವಿಭವ ಸಮೂಹ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಎನ್. ನಂದಕುಮಾರ ಹೇಳಿದರು. ‘ವಾಣಿಜ್ಯ ರತ್ನ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ವಿಭವ ಸಂಸ್ಥೆಯು ಸುಮಾರು 4 ಸಾವಿರ ಕುಟುಂಬಗಳಿಗೆ ಉದ್ಯೋಗ ನೀಡಿದೆ. ಕರೊನಾ ಸಂಕಷ್ಟ ಕಾಲದಲ್ಲೂ ಸಂಸ್ಥೆ ತನ್ನ ಕೆಲಸಗಾರರ ಹಿತ ಕಾಪಾಡಿದೆ. ಅಂದಾಜು 15 ಕೋಟಿ ರೂ. ಸಂಬಳ ಪಾವತಿಸಿದೆ. ಲಾಕ್​ಡೌನ್ ಸಂದರ್ಭದಲ್ಲಿ ಸಾವಿರಾರು ಜನರಿಗೆ ಅಗತ್ಯ ವಸ್ತುಗಳ ಕಿಟ್ ವಿತರಣೆ ವಿತರಣೆ ಮಾಡಿದೆ ಎಂದು ಸ್ಮರಿಸಿದ ಅವರು, ಈ ಪ್ರಶಸ್ತಿ ಜವಾಬ್ದಾರಿ ಹೆಚ್ಚು ಮಾಡಿದೆ ಎಂದರು. ಬೆಂಗಳೂರು ವಿಶ್ವವಿದ್ಯಾಲಯ, ಮೈಸೂರು ವಿಶ್ವವಿದ್ಯಾಲಯ ಹೀಗೆ ಆಯಾ ಭಾಗಕ್ಕೆ ಹೆಸರುಗಳು ಸೀಮಿತವಾಗಿವೆ. ಆದರೆ, ಹುಬ್ಬಳ್ಳಿ- ಧಾರವಾಡದಲ್ಲಿ ಕರ್ನಾಟಕ ವಿವಿ ಇದೆ. ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ ಇದೆ. ಹೀಗೆ ಅಖಂಡ ಕರ್ನಾಟಕ ಪ್ರತಿನಿಧಿಸುವಂತಹ ಸಂಸ್ಥೆಗಳಿವೆ. ಅದೇ ರೀತಿ ವಾಣಿಜ್ಯೋದ್ಯಮ ಸಂಸ್ಥೆಯ ಸಂಸ್ಥಾಪಕರಾದ ಲಿಂ. ಮುರುಗಯ್ಯಸ್ವಾಮಿ ಜಂಗೀನ್ ಅವರು ದೂರದೃಷ್ಟಿಯುಳ್ಳವರಾಗಿದ್ದರು. ಅವರು ಕೂಡ ಸಮಗ್ರ ಕರ್ನಾಟಕ ಗಮನದಲ್ಲಿಟ್ಟುಕೊಂಡು ವಾಣಿಜ್ಯೋದ್ಯಮ ಸಂಸ್ಥೆ ಸ್ಥಾಪಿಸಿದರು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts