More

    ಕುಷ್ಠ ಶಾಪ-ಪಾಪದಿಂದ ಬರಲ್ಲ

    ದೇವದುರ್ಗ: ಕುಷ್ಠರೋಗದ ಬಗ್ಗೆ ಜನರಲ್ಲಿ ಕೆಲ ತಪ್ಪು ಅಭಿಪ್ರಾಯಗಳಿದ್ದು ಪಾಪ, ಶಾಪದಿಂದ ಈ ರೋಗ ಹರಡುವುದಿಲ್ಲ. ಈ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಆರೋಗ್ಯ ಇಲಾಖೆಯಿಂದ ಮಾಡಲಾಗುತ್ತಿದೆ ಎಂದು ಆಯುಷ್ ವೈದ್ಯಾಧಿಕಾರಿ ನಿರ್ಮಲಾ ಹೇಳಿದರು.

    ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಸ್ಪರ್ಶ ಕುಷ್ಠರೋಗ ಅರಿವು ಹಾಗೂ ಜಾಗೃತಿ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಂಗಳವಾರ ಮಾತನಾಡಿದರು. ಕುಷ್ಠರೋಗದ ಬಗ್ಗೆ ಇರುವ ಕಳಂಕ ದೂರ ಮಾಡುವುದು ಕಾರ್ಯಕ್ರಮದ ಮುಖ್ಯಉದ್ದೇಶವಾಗಿದ್ದು, ಕಳಂಕವನ್ನು ಕೊನೆಗೊಳಿಸಿ ಘನತೆಯನ್ನು ಎತ್ತಿಹಿಡಿಯಿರಿ ಎನ್ನುವುದು ಈ ವರ್ಷದ ಘೋಷವಾಕ್ಯವಾಗಿದೆ ಎಂದರು.

    ಕುಷ್ಠರೋಗ ಶಾಪ, ಪಾಪದಿಂದ ಬರದೆ ಮೈಕೋ ಬ್ಯಾಕ್ಟೀರಿಯಾ ಎಂಬ ರೋಗಾಣುವಿನಿಂದ ಹರಡುತ್ತದೆ. ರೋಗ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಸಂಪೂರ್ಣ ಗುಣವಾಗಲಿದೆ. ತಿಳಿತಾಮ್ರ ವರ್ಣದ ಮಚ್ಛೆಗಳು, ಸ್ಪರ್ಶ ಜ್ಞಾನ ಇಲ್ಲದಿರುವ ಲಕ್ಷಣ ಕಂಡುಬಂದರೆ ತಕ್ಷಣ ಪರೀಕ್ಷಿಸಿಕೊಂಡು ಚಿಕಿತ್ಸೆ ಪಡೆಯಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಲಭ್ಯವಿದ್ದು ತಾಲೂಕಿನಲ್ಲಿ 20 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಫೆ.13ರವರೆಗೆ ರೋಗದ ಬಗ್ಗೆ ಜಾಗೃತಿ ಅಭಿಯಾನ ನಡೆಯಲಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿ ಶಾಲೆ, ಕಾಲೇಜು, ಅಂಗನವಾಡಿ ಕೇಂದ್ರ ಹಾಗೂ ಗ್ರಾಪಂ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಿ ಜಾಗೃತಿ ಮೂಡಿಸಲಿದ್ದಾರೆ ಎಂದು ಡಾ.ನಿರ್ಮಲಾ ತಿಳಿಸಿದರು. ನಂತರ ಆರೋಗ್ಯ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಆಶಾ ಕಾರ್ಯಕರ್ತೆಯರಾದ ನಾಗಮ್ಮ, ಸುಜಾತ, ತಾಯಮ್ಮ, ಮಹಮ್ಮದಿ, ಶಾಂತಮ್ಮ, ರೇಣುಕಾ, ಭೀಮಮ್ಮ, ಶಿವಗಂಗಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts