More

    ದಂಪತಿ ಮೇಲೆ ದಾಳಿ ಮಾಡಿದ್ದ ಚಿರತೆ ಸೆರೆ

    ಕಡಬ: ಸುಬ್ರಹ್ಮಣ್ಯ ವಲಯಾರಣ್ಯ ವ್ಯಾಪ್ತಿಯ ರೆಂಜಿಲಾಡಿ ಗ್ರಾಮದ ಹೇರ ಎಂಬಲ್ಲಿ ಶುಕ್ರವಾರ ನಸುಕಿನ ಜಾವ ಕೃಷಿಕ ದಂಪತಿ ಮೇಲೆ ದಾಳಿ ನಡೆಸಿ, ಬಳಿಕ ತೋಟದಲ್ಲಿ ಅವಿತು ಕುಳಿತಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ. ಹೇರ ನಿವಾಸಿ ಚಂದ್ರಶೇಖರ ಕಾಮತ್ ಹಾಗೂ ಸೌಮ್ಯ ಕಾಮತ್ ಶುಕ್ರವಾರ ಬೆಳಗ್ಗಿನ ಜಾವ ಅಡಕೆ ತೋಟದಲ್ಲಿ ಸ್ಪಿಂಕ್ಲರ್ ಜೆಟ್ ಬದಲಾಯಿಸುತ್ತಿದ್ದ ಸಂದರ್ಭ ಚಿರತೆ ದಾಳಿ ನಡೆಸಿತ್ತು. ಗಂಭೀರ ಗಾಯಗೊಂಡ ದಂಪತಿಯನ್ನು ಕಡಬ ಸಮುದಾಯ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸ್ ಹಾಗೂ ಅರಣ್ಯ ಅಧಿಕಾರಿಗಳು ಚಿರತೆಯ ಚಲನವಲನದ ಮೇಲೆ ನಿಗಾ ಇಟ್ಟು, ಬೋನು ಅಳವಡಿಸುವ ಮೂಲಕ ಅದನ್ನು ಸೆರೆಹಿಡಿಯುವ ಕಾರ್ಯಾಚರಣೆ ಆರಂಭಿಸಿದ್ದರು. ಈ ವೇಳೆ ಮರವನ್ನೇರಿ ಕುಳಿತಿದ್ದ ಚಿರತೆಗೆ ಗನ್ ಮೂಲಕ ಅರಿವಳಿಕೆ ಮದ್ದು ನೀಡಲಾಯಿತು. ಚಿರತೆ ಪ್ರಜ್ಞೆ ತಪ್ಪಿದ ಬಳಿಕ ಮರದ ಸುತ್ತಲೂ ಬಲೆ ಹರಡಿ, ಮರವನ್ನು ಕತ್ತರಿಸುವ ಮೂಲಕ ಚಿರತೆಯನ್ನು ಕೆಳಗೆ ಬೀಳಿಸಿ ,ಬಲೆಯಲ್ಲಿ ಸೆರೆ ಹಿಡಿದು ಬಳಿಕ ಪಂಜರ(ಬೋನು)ಕ್ಕೆ ಸ್ಥಳಾಂತರಿಸಲಾಯಿತು. ಡಿಎಫ್‌ಒ ಡಾ.ಕರಿಕ್ಕಾಳನ್ ಅವರು ಚಿರತೆಯ ಆರೋಗ್ಯ ತಪಾಸಣೆ ನಡೆಸಿದರು.

    ಉರುಳಿಗೆ ಬಿದ್ದಿತ್ತು ುಲು ಬಳಸುವ ಉರುಳು(ತಂತಿ) ಪತ್ತೆಯಾಗಿದ್ದು, ಜತೆಗೆ ಬಿದಿರಿನ ತುಂಡು ಇತ್ತು. ಇದರಿಂದಾಗಿ ಚಿರತೆಗೆ ಸ್ಥಳದಿಂದ ಹೆಚ್ಚು ದೂರ ತೆರಳಿ ತಪ್ಪಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಕಡಬ ವ್ಯಾಪ್ತಿಯ ವಿವಿಧೆಡೆ ಕಳೆದ ಹಲವಾರು ಸಮಯಗಳಿಂದ ಚಿರತೆ, ಕಾಡುಪ್ರಾಣಿ ಹಾವಳಿ ಮಿತಿ ಮೀರುತ್ತಿದೆ. ಫೆ.3ರಂದು ಬಿಳಿನೆಲೆ ಬಳಿಯ ಕೈಕಂಬದಲ್ಲಿ ನಾಯಿಯೊಂದಿಗೆ ಶೌಚಗೃಹದಲ್ಲಿ ಸೆರೆಯಾಗಿದ್ದ ಚಿರತೆ ಕಾರ್ಯಚರಣೆ ಸಂದರ್ಭ ತಪ್ಪಿಸಿಕೊಂಡಿತ್ತು. ಕಳೆದ ವರ್ಷ ಜನವರಿಯಲ್ಲಿ ಬಳ್ಪದ ತೋಟವೊಂದರಲ್ಲಿ ಪತ್ತೆಯಾಗಿದ್ದ ಚಿರತೆ ಜನರು ಹಾಗೂ ಅರಣ್ಯಾಧಿಕಾರಿ ಮೇಲೆ ದಾಳಿ ನಡೆಸಿ ಬಳಿಕ ತಪ್ಪಿಸಿಕೊಂಡಿತ್ತು.

    ಚಿಕಿತ್ಸಾ ವೆಚ್ಚ ಪಾವತಿ ಭರವಸೆ: ಚಿರತೆ ದಾಳಿಯಿಂದ ಗಾಯಗೊಂಡಿರುವ ದಂಪತಿಯ ಚಿಕಿತ್ಸಾ ವೆಚ್ಚವನ್ನು ಅರಣ್ಯ ಇಲಾಖೆ ಭರಿಸಲಿದೆ ಎಂದು ಡಿಎಫ್‌ಒ ಡಾ.ಡಾ.ಕರಿಕ್ಕಾಳನ್ ತಿಳಿಸಿದ್ದಾರೆ. ಸೆರೆ ಸಿಕ್ಕಿರುವ ಚಿರತೆಯನ್ನು ವೈದ್ಯರ ಸಲಹೆ ಮೇರೆಗೆ ಪಿಲಿಕುಳ ನಿಸರ್ಗಧಾಮ ಇಲ್ಲವೇ ಕಾಡಿಗೆ ಬಿಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಎಸಿಎಫ್ ಆಸ್ಟೀನ್ ಸೋನ್ಸ್, ಆರ್‌ಎಫ್‌ಒಗಳಾದ ರಾಘವೇಂದ್ರ, ಮಂಜುನಾಥ, ವನ್ಯಜೀವಿ ರಕ್ಷಣಾ ದಳದ ಭುವನೇಶ್ ಕೈಕಂಬ, ಕಡಬ ಎಸೈ ರುಕ್ಮ ನಾಯ್ಕ, ಗ್ರಾಪಂ ಸದಸ್ಯ ಉಮೇಶ್ ಜಾಲು ಮೊದಲಾದವರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts