More

    ಬ್ಯಾಡಗಿಯಲ್ಲಿ ಚಿರತೆ ಕಾಟ..ರೈತರಿಗೆ ಪ್ರಾಣ ಸಂಕಟ

    ಬ್ಯಾಡಗಿ: ತಾಲೂಕಿನ ಶಿಡೇನೂರು, ತಡಸ, ಬಿದರಕಟ್ಟೆ, ಕಾಟೇನಹಳ್ಳಿ ಗ್ರಾಮಗಳ ಹೊರವಲಯದಲ್ಲಿ ಚಿರತೆ ಪ್ರತ್ಯಕ್ಷವಾದ ಪರಿಣಾಮ ಸುತ್ತಲಿನ ರೈತರು ಆತಂಕದಲ್ಲಿ ಓಡಾಡುವಂತಾಗಿದ್ದು, ಅರಣ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.

    ನಾಲ್ಕು ವರ್ಷಗಳಿಂದ ಚಿರತೆಗಳು ತಾಲೂಕಿನ ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟಿದ್ದು,ಆಗಾಗ ರೈತರ ಹೊಲ, ಹೊರಪ್ರದೇಶದ ಮನೆಗಳ ಮೇಲೆ ದಾಳಿ ನಡೆಸಿ ಸಾಕು ಪ್ರಾಣಿಗಳನ್ನು ಭಕ್ಷಿಸುವ ಮೂಲಕ ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡುತ್ತಿದೆ.

    ತಾಲೂಕಿನ ಶಿಡೇನೂರು ಗ್ರಾಮದಲ್ಲಿ ರೈತ ಮಹ್ಮದ್​ಸಾಬ ಬೆನ್ನೂರು ಎಂಬುವವರ ಹೊಲದಲ್ಲಿ ಗುರುವಾರ ಮಧ್ಯಾಹ್ನ ದನಗಳನ್ನು ಮೇಯಿಸುವಾಗ ಚಿರತೆ ರೈತನ ಕಣ್ಣೆದುರೇ ಆಕಳನ್ನು ಹೊತ್ತುಕೊಂಡು ತೆರಳಿದೆ. ಸುತ್ತಲಿನ ರೈತರು ಕಿರುಚಾಟ, ಚೀರಾಟ ನಡೆಸುವಷ್ಟರಲ್ಲಿ ಅರಣ್ಯದತ್ತ ನುಗ್ಗಿದ್ದು, ರೈತ ಭೀತಿಯಿಂದ ಮನೆಯತ್ತ ಧಾವಿಸಿ ಗ್ರಾಮಸ್ಥರ ಮೂಲಕ ಅರಣ್ಯ ಸಿಬ್ಬಂದಿಗೆ ತಿಳಿಸಿದ್ದಾನೆ. ಮರುದಿನ ಬೆಳಗ್ಗೆ ಸಿಬ್ಬಂದಿ ಚಿರತೆ ಓಡಾಡಿದ ಪ್ರದೇಶ ಪತ್ತೆ ಹಚ್ಚಿದಾಗ ಅಳಿದುಳಿದ ಆಕಳ ಮೃತದೇಹ ಪತ್ತೆಯಾಗಿದೆ.

    ಬಿದರಕಟ್ಟೆಯ ದಟ್ಟ ಅರಣ್ಯದಲ್ಲಿ ಹಲವು ದಿನಗಳಿಂದ ಚಿರತೆ ಮರಿ ಮಾಡಿಕೊಂಡು ವಾಸವಾಗಿದೆ ಎನ್ನಲಾಗುತ್ತಿದೆ. ಪಕ್ಕದಲ್ಲಿ ದೊಡ್ಡ ಕೆರೆಯಿದ್ದು ನೀರು ಕುಡಿಯಲು ಆಗಾಗ ಅಲ್ಲಿ ಕಾಣಿಸಿಕೊಳ್ಳುವ ಚಿರತೆಗಳು, ಕೆಲವೊಮ್ಮೆ ಆಹಾರ ಅರಸುತ್ತ ಗ್ರಾಮಗಳ ಕಡೆ ಮುಖ ಮಾಡುತ್ತಿವೆ. ತಡಸ ಹಾಗೂ ಕಾಟೇನಹಳ್ಳಿ ಗ್ರಾಮದಲ್ಲಿ ಮೇಕೆ ಮತ್ತು ಕುರಿಯನ್ನು ತಿಂದಿರುವುದಾಗಿ ತಿಳಿದುಬಂದಿದೆ. ಜಾನುವಾರು, ಕುರಿ ಕಳೆದುಕೊಂಡ ಕೆಲ ರೈತರು ಎಲ್ಲಿಯೋ ಹೋಗಿರಬಹುದು ಅಥವಾ ಕಳವು ಮಾಡಿರಬಹುದೆಂದು ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ರೈತರು ಅರಣ್ಯ ಇಲಾಖೆಗೆ ಬಂದು ದೂರು ಸಲ್ಲಿಸಿದಲ್ಲಿ ಮಾತ್ರ ಪ್ರಕರಣ ದಾಖಲಾಗುತ್ತಿದೆ. ಕೆಲವರು ಅಧಿಕಾರಿಗಳ ಕಿರಿಕಿರಿ, ಅಲ್ಪ ಪರಿಹಾರಕ್ಕೆ ಅಲೆದಾಟ, ತಮ್ಮಲ್ಲಿಲ್ಲದ ದಾಖಲೆ ಸೃಷ್ಟಿಸಿಕೊಡಬೇಕಾದ ಅನಿವಾರ್ಯತೆಯಿಂದ ದೂರು ನೀಡುತ್ತಿಲ್ಲ.

    ರೈತರ ಗೋಳು ಕೇಳೋರ್ಯಾರು..?

    ಈಗ ತಾಲೂಕಿನಲ್ಲಿ ಬೆಳೆ ಕೊಯ್ಯುವ ಹಂಗಾಮು ಶುರುವಾಗಿದ್ದು, ಬಿದರಕಟ್ಟೆ ಅರಣ್ಯ ಪ್ರದೇಶದ ಸುತ್ತಲೂ ಕೊಳವೆ ಬಾವಿಗಳ ಸಂಖ್ಯೆ ಹೆಚ್ಚಿದೆ. ನೀರಾವರಿ ಗೋವಿನಜೋಳ, ಹತ್ತಿ ಸೇರಿದಂತೆ, ಬೀಜೋತ್ಪಾದನೆಯಲ್ಲಿ ರೈತರು ತೊಡಗಿದ್ದು, ಕೃಷಿ ಕೆಲಸ ನಿರ್ವಹಿಸಲು ಕೂಲಿಕಾರರು ಸಿಗುತ್ತಿಲ್ಲ. ಕೂಲಿ ಕರೆಯುವ ಮುನ್ನವೇ ಯಾವ ಕಡೆಗೆ ಹೊಲ ಎನ್ನುವ ಕೂಲಿಕಾರರು, ಆ ಪ್ರದೇಶದ ಹೆಸರು ಹೇಳುತ್ತಿದ್ದಂತೆ ‘ನಾ ಒಲ್ಲೆ, ತಾ ಒಲ್ಲೆ’ ಎಂದು ಹಿಂದೇಟು ಹಾಕುತ್ತಿದ್ದಾರೆ. ಒಂದೆಡೆ ರೈತನಿಗೆ ಬರದಿಂದ ಬೆಳೆ ನಷ್ಟ, ಅಸಮರ್ಪಕ ವಿದ್ಯುತ್ ಕೊರತೆ, ಈಗ ಚಿರತೆ ಕಾಟ ಶುರುವಾಗಿದ್ದು, ರೈತರ ಗೋಳು ಕೇಳೋರ್ಯಾರು ಎನ್ನುವಂತಾಗಿದೆ.

    ಬರಗಾಲದಲ್ಲಿ ಹೊಲದಲ್ಲಿ ಬೆಳೆಯಿಲ್ಲ, ಕೈಯಲ್ಲಿ ರೊಕ್ಕವೂ ಇಲ್ಲ, ಹೈನುಗಾರಿಕೆ ಹಾಲು ಮಾರಿ ಜೀವನ ನಡೆಸುತ್ತಿದ್ದ ನನಗೆ ಕುತ್ತು ಬಂದಿದೆ. ನನ್ನ ಕಣ್ಣೆದುರೇ ಚಿರತೆ ಆಕಳನ್ನು ಹೊತ್ತೊಯ್ದು ತಿಂದು ಹಾಕಿದೆ. ಲಕ್ಷಾಂತರ ರೂ. ಸಾಲದಲ್ಲಿರುವ ನನಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರ್ಕಾರ ರಾವಣ ಹೊಟ್ಟೆಗೆ, ಅರೆಕಾಸಿನ ಮಜ್ಜಿಗೆ ಎನ್ನುವ ಪರಿಹಾರ ಕೈಬಿಟ್ಟು, ರೈತರ ನೈಜನೋವಿಗೆ ಸ್ಪಂದಿಸಬೇಕಿದೆ.

    | ಮಹ್ಮದಸಾಬ ಬೆನ್ನೂರು, ರೈತ

    ತಾಲೂಕಿನ ಶಿಡೇನೂರು, ತಡಸ, ಕಾಟೇನಹಳ್ಳಿ ಅರಣ್ಯಪ್ರದೇಶದಲ್ಲಿ ಚಿರತೆ ಬೀಡುಬಿಟ್ಟಿರುವುದು ಖಚಿತವಾಗಿದೆ. ರೈತರಿಗೆ ಮುನ್ನೆಚ್ಚರಿಕೆ ನೀಡಿದ್ದು, ಅರಣ್ಯ ಇಲಾಖೆ ನೊಂದ ರೈತನಿಂದ ಇ-ಪರಿಹಾರಕ್ಕೆ ಅರ್ಜಿ ಸಲ್ಲಿಸಲಾಗಿದೆ. ಚಿರತೆ ಬಂಧಿಸಲು ಮೇಲಧಿಕಾರಿಗಳ ಜತೆ ರ್ಚಚಿಸುವೆ.

    | ವಸಂತ ಪಾಟೀಲ, ಅರಣ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts