ಪರಿಷತ್​ನಲ್ಲೂ ಬಿಜೆಪಿ ಪಾರಮ್ಯ- ಸಂಕನೂರ, ಪುಟ್ಟಣ್ಣ, ನಮೋಶಿ ಪುನರಾಯ್ಕೆ | ಆಗ್ನೇಯ ಕ್ಷೇತ್ರ ಅಸ್ಪಷ್ಟ

5

ಬೆಂಗಳೂರು: ವಿಧಾನಸಭೆ ಉಪಚುನಾವಣೆ ಜತೆಗೆ ವಿಧಾನ ಪರಿಷತ್​ಗೆ ನಡೆದಿದ್ದ ಚುನಾವಣೆಗಳಲ್ಲೂ ಬಿಜೆಪಿ ಪಾರಮ್ಯ ಮೆರೆದಿದ್ದು, ನಾಲ್ಕು ಕ್ಷೇತ್ರಗಳಲ್ಲಿ ಈಗಾಗಲೇ ಮೂರರಲ್ಲಿ ದಿಗ್ವಿಜಯ ಸಾಧಿಸಿದೆ. ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಸಲೀಸಾಗಿ ಹ್ಯಾಟ್ರಿಕ್ ಗೆಲುವು ದಾಖಲಿಸಿದೆ. ನಿಕಟಪೂರ್ವ ಎಂಎಲ್​ಸಿ ಪ್ರೊ. ಎಸ್.ವಿ. ಸಂಕನೂರ ಅವರು ಪುನರಾಯ್ಕೆಗೊಂಡಿದ್ದಾರೆ.

ನಾಟಕೀಯ ಬೆಳವಣಿಗೆಯಲ್ಲಿ ಜೆಡಿಎಸ್ ಬೆಂಬಲವನ್ನೂ ಪಡೆದು, ಆ ಪಕ್ಷದ ಅಧಿಕೃತ ಅಭ್ಯರ್ಥಿ ಕಣದಿಂದ ನಿವೃತ್ತಿ ಘೊಷಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದ ಪಕ್ಷೇತರ ಅಭ್ಯರ್ಥಿ ರಾಷ್ಟ್ರೀಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಬಸವರಾಜ ಗುರಿಕಾರಗೆ 6,188 ಮತಗಳು ಮಾತ್ರ ಪ್ರಾಪ್ತವಾಗಿವೆ. ಧಾರವಾಡ, ಉತ್ತರ ಕನ್ನಡ, ಹಾವೇರಿ, ಗದಗ ಜಿಲ್ಲೆಗಳನ್ನು ಒಳಗೊಂಡ ಈ ಕ್ಷೇತ್ರಕ್ಕೆ ಅ. 28ರಂದು ಚುನಾವಣೆ ನಡೆದಿತ್ತು. ಮಂಗಳವಾರ ಬೆಳಗ್ಗೆಯಿಂದ ಧಾರವಾಡದ ಕೃಷಿ ವಿವಿ ಆವರಣದಲ್ಲಿ ಮತ ಎಣಿಕೆ ನಡೆಯಿತು.

ಅಭ್ಯರ್ಥಿಗಳು ಪಡೆದ ಮತ ವಿವರ
ಪ್ರೊ. ಸಂಕನೂರ (ಬಿಜೆಪಿ) 23,857
ಕುಬೇರಪ್ಪ (ಕಾಂಗ್ರೆಸ್ )12,448
ಬಸವರಾಜ ಗುರಿಕಾರ (ಪಕ್ಷೇತರ) 6,188
ಚಲಾವಣೆಯಾಗಿದ್ದ ಮತ 52,041
ತಿರಸ್ಕೃತಗೊಂಡ ಮತಗಳು: 8772

ಪುಟ್ಟಣ್ಣ ನಾಲ್ಕನೇ ಬಾರಿ ಜಯಭೇರಿ

ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ಬಿಟ್ಟು ಬಿಜೆಪಿ ಸೇರಿದ್ದ ಪುಟ್ಟಣ್ಣ ನಾಲ್ಕನೇ ಬಾರಿ ಜಯಭೇರಿ ಬಾರಿಸಿದ್ದಾರೆ. ಮೂರು ಬಾರಿ ಜೆಡಿಎಸ್​ನಿಂದ ಗೆದ್ದಿದ್ದ ಪುಟ್ಟಣ್ಣ ಈ ಬಾರಿ ಬಿಜೆಪಿಗೆ ಜಿಗಿದು ವಿಜಯ ದುಂದುಭಿ ಮೊಳಗಿಸಿದ್ದಾರೆ. ಮೂರು ಬಾರಿ ಜೆಡಿಎಸ್​ನಿಂದ ಗೆದ್ದರೂ ಆ ಮತಗಳನ್ನು ಬಿಜೆಪಿಗೆ ಪರಿವರ್ತನೆ ಮಾಡಿಕೊಳ್ಳುವ ತಂತ್ರಗಾರಿಕೆಯಲ್ಲಿ ಪುಟ್ಟಣ್ಣ ಯಶಸ್ವಿಯಾಗಿದ್ದಾರೆ. ಹಾಗೆಂದ ಮಾತ್ರಕ್ಕೆ ಜೆಡಿಎಸ್ ಇಲ್ಲಿ ಕಳಪೆ ಪ್ರದರ್ಶನವೇನೂ ನೀಡಿಲ್ಲ. ಈ ಕ್ಷೇತ್ರದಲ್ಲಿ ತನ್ನ ಸಾಮರ್ಥ್ಯ ಇನ್ನೂ ಬಲವಾಗಿದೆ ಎಂಬುದನ್ನು ಸಾಬೀತುಪಡಿಸಿದೆ. ಬಿಜೆಪಿಯ ಪುಟ್ಟಣ್ಣ 7335 ಮತ ಪಡೆದರೆ, ಜೆಡಿಎಸ್​ನ ಎ.ಪಿ.ರಂಗನಾಥ್ 5107 ಮತ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಲ್ಲದೆ, ಹೀನಾಯ ಸೋಲು ಕಂಡಿದೆ. ಕಾಂಗ್ರೆಸ್ ಅಭ್ಯರ್ಥಿ ಪ್ರವೀಣ್ ಪೀಟರ್ ಕೇವಲ 782 ಮತ ಪಡೆದಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮಾಡಿದ ಪ್ರಯತ್ನವೆಲ್ಲ ಹೊಳೆಯಲ್ಲಿ ಹುಣುಸೇಹಣ್ಣು ತೊಳೆದಂತಾಗಿದೆ.

ಅಭ್ಯರ್ಥಿಗಳು ಪಡೆದ ಮತ ವಿವರ:
ಪುಟ್ಟಣ್ಣ(ಬಿಜೆಪಿ)- 7335
ಎ.ಪಿ.ರಂಗನಾಥ್(ಜೆಡಿಎಸ್)- 5107
ಪ್ರವೀಣ್ ಪೀಟರ್(ಕಾಂಗ್ರೆಸ್)- 782
ಒಟ್ಟು ಚಲಾವಣೆಗೊಂಡ ಮತಗಳು: 14,538
ತಿರಸ್ಕೃತಗೊಂಡ ಮತಗಳು: 1251

ನಾನು ನಾಲ್ಕನೇ ಬಾರಿ ಈ ಕ್ಷೇತ್ರದಲ್ಲಿ ಗೆದ್ದಿದ್ದೇನೆ. ಶಿಕ್ಷಕರ ಪರ ನಾನು ಹೋರಾಟ ಮುಂದುವರಿಸುತ್ತೇನೆ. ಶಿಕ್ಷಕರ ಸಮಸ್ಯೆಗಳು, ಶೈಕ್ಷಣಿಕ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತೇನೆ. ಶಿಕ್ಷಕ ವೃಂದ, ಬಿಜೆಪಿಯ ಎಲ್ಲ ನಾಯಕರು ಹಾಗೂ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.
ಪುಟ್ಟಣ್ಣ, ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಜೇತ ಅಭ್ಯರ್ಥಿ

ಶಶೀಲ್ ನಮೋಶಿಗೆ ಭರ್ಜರಿ ಜಯ

ತೀವ್ರ ಕುತೂಹಲ ಕೆರಳಿಸಿದ್ದ ವಿಧಾನ ಪರಿಷತ್​ನ ಈಶಾನ್ಯ ಶಿಕ್ಷಕರ ಕ್ಷೇತ್ರವನ್ನು ವಶಪಡಿಸಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಪಕ್ಷದ ಅಭ್ಯರ್ಥಿ ಶಶೀಲ್ ಜಿ.ನಮೋಶಿ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್​ನ ಹಾಲಿ ಸದಸ್ಯ ಶರಣಪ್ಪ ಮಟ್ಟೂರ್ ಅವರನ್ನು ಸೋಲಿಸಿ 4ನೇ ಬಾರಿ ವಿಧಾನ ಪರಿಷತ್ ಪ್ರವೇಶಿಸಿದರು. ಕ್ಷೇತ್ರದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ಮತದಾರ ಶಿಕ್ಷಕರು ತಮ್ಮ ಹಕ್ಕನ್ನು ಚಲಾಯಿಸಿದ್ದರು. ಮೊದಲ ಪ್ರಾಶಸ್ಱದಲ್ಲೇ ಗೆಲುವು ಸಿಗಬಹುದು ಎಂಬ ಬಿಜೆಪಿ ನಿರೀಕ್ಷೆ ಹುಸಿಯಾಯಿತು. ಆದರೆ ಮೊದಲ ಪ್ರಾಶಸ್ಱದಲ್ಲಿ ನಮೋಶಿಯವರಿಗೆ ಉತ್ತಮ ಲೀಡ್ ಬಂದಿದ್ದರಿಂದ ಮುಂದಿನ ಪ್ರಾಶಸ್ಱದಲ್ಲಿ ಗೆಲುವಿನ ಹಾದಿ ಸುಗಮವಾಯಿತು.

ಶಶೀಲ್ ನಮೋಶಿ (ಬಿಜೆಪಿ 10210
ಮಟ್ಟೂರ್ (ಕಾಂಗ್ರೆಸ್) 7072
ಜೆಡಿಎಸ್​ನ ತಿಮ್ಮಯ್ಯ ಪುರ್ಲೆ 3812
ಚಲಾವಣೆಯಾದ ಮತ -21437
ತಿರಸ್ಕಾರಗೊಂಡ ಮತ- 1844

ಉಪಚುನಾವಣೆಯಲ್ಲೂ ಬಿಜೆಪಿ ಜಯಭೇರಿ: ಮಧ್ಯಪ್ರದೇಶದಲ್ಲಿ ಚೌಹಾಣ್ ಸರ್ಕಾರ ಭದ್ರ