More

    ಕೊನೇ ದಿನ 1285 ನಾಮಪತ್ರ

    ಧಾರವಾಡ: ಜಿಲ್ಲೆಯಲ್ಲಿ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದ ಶುಕ್ರವಾರ, ಧಾರವಾಡ, ಅಳ್ನಾವರ ಮತ್ತು ಕಲಘಟಗಿ ತಾಲೂಕುಗಳ ವಿವಿಧ ಗ್ರಾಮ ಪಂಚಾಯಿತಿಗಳಿಗೆ 1285 ಸೇರಿ ಒಟ್ಟು 3209 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

    ಧಾರವಾಡ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ 757, ಕಲಘಟಗಿ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ 456 ಮತ್ತು ಅಳ್ನಾವರ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ 72 ಸೇರಿದಂತೆ ಒಟ್ಟು 1285 ನಾಮಪತ್ರಗಳು ಸಲ್ಲಿಕೆ ಆಗಿವೆ. ಜಿಲ್ಲೆಯ ಮೊದಲ ಹಂತದ ಗ್ರಾಮ ಚುನಾವಣೆಗೆ ಆಧಿಸೂಚನೆ ಹೊರಡಿಸಿದ ಡಿಸೆಂಬರ್ 7 ರಿಂದ ಕೊನೆಯ ದಿನವಾದ ಡಿ. 11ರವರೆಗೆ ಧಾರವಾಡ ತಾಲೂಕಿನಲ್ಲಿ 1871, ಅಳ್ನಾವರ ತಾಲೂಕಿನಲ್ಲಿ 180 ಮತ್ತು ಕಲಘಟಗಿ ತಾಲೂಕಿನಲ್ಲಿ 1158 ಸೇರಿ ಒಟ್ಟು 3209 ನಾಮಪತ್ರಗಳು ಸಲ್ಲಿಕೆ ಆಗಿವೆ ಎಂದು ತಿಳಿಸಿದ್ದಾರೆ.

    ಪರಿಶೀಲನೆ ಇಂದು: ಡಿ. 22ರಂದು ನಡೆಯುವ ಗ್ರಾಮ ಪಂಚಾಯಿತಿ ಮೊದಲ ಹಂತದ ಚುನಾವಣೆಗೆ ಸ್ಪರ್ಧೆ ಬಯಸಿ ಅಭ್ಯರ್ಥಿಗಳು ಸಲ್ಲಿಸಿರುವ ನಾಮಪತ್ರಗಳ ಪರಿಶೀಲನೆ ಡಿ. 12 ರಂದು ಬೆಳಗ್ಗೆ 11 ಗಂಟೆಯಿಂದ ಆಯಾ ಗ್ರಾಪಂ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ನಡೆಯಲಿದೆ. ಡಿ. 14ರಂದು ಉಮೇದುವಾರಿಕೆ ಹಿಂಪಡೆಯಲು ಅವಕಾಶವಿದೆ. ನಾಮಪತ್ರಗಳ ಪರಿಶೀಲನೆಯನ್ನು ಸ್ವತಃ ಚುನಾವಣಾಧಿಕಾರಿ ಮಾಡುತ್ತಾರೆ. ನಾಮಪತ್ರಗಳಲ್ಲಿ ಅಭ್ಯರ್ಥಿ ಹಾಗೂ ಸೂಚಕನ ಸಹಿ ಇಲ್ಲದಿದ್ದಲ್ಲಿ ತಿರಸ್ಕರಿಸಲಾಗುತ್ತದೆ. ನಾಮಪತ್ರಗಳ ಪರಿಶೀಲನೆ ನಂತರ ಡಿ. 14ರ ಬೆಳಗ್ಗೆ 11 ಗಂಟೆಯಿಂದ ಉಮೇದುವಾರಿಕೆ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳಿಗೆ ಅಥವಾ ಅವರಿಂದ ಅಧಿಕೃತಗೊಂಡ ಏಜೆಂಟರಿಗೆ ಸ್ವೀಕೃತಿಯಾಗಿರುವ ನಾಮಪತ್ರ ಹಿಂಪಡೆಯಲು ಅವಕಾಶವಿದೆ. ಅದೇ ದಿನ ಮಧ್ಯಾಹ್ನ 3 ಗಂಟೆ ನಂತರ ಅಂತಿಮವಾಗಿ ಚುನಾವಣಾ ಕಣದಲ್ಲಿ ಉಳಿದ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲಾಗುವುದು. ಒಂದು ಕ್ಷೇತ್ರಕ್ಕೆ ಅಥವಾ ಒಂದು ಕ್ಷೇತ್ರದಲ್ಲಿನ ಮೀಸಲು ಸ್ಥಾನಕ್ಕೆ ಒಬ್ಬ ಅಭ್ಯರ್ಥಿ ಮಾತ್ರ ಉಳಿದಲ್ಲಿ ಅದನ್ನು ಅವಿರೋಧ ಆಯ್ಕೆ ಎಂದು ಪರಿಗಣಿಸಲಾಗುವುದು. ಪ್ರಪತ್ರ -7ರಲ್ಲಿ ಪ್ರತಿ ಕ್ಷೇತ್ರಕ್ಕೂ ಪ್ರತ್ಯೇಕವಾಗಿ ಸಿಂಧುವಾದ ನಾಮನಿರ್ದೇಶಿತ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುತ್ತದೆ. ಉಮೇದುವಾರರ ಹೆಸರುಗಳನ್ನು ಕನ್ನಡ ಅಕ್ಷರ ಮಾಲೆಯ ಕ್ರಮದಂತೆ ನಮೂದಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts