More

    ಮಗುವಿನ ಆರೋಗ್ಯಕ್ಕೆ ತಾಯಿಯ ಆರೈಕೆ; ಗರ್ಭಧರಿಸುವ ಮುನ್ನ..

    ಒಬ್ಬ ರೈತ ತಾನು ಬಿತ್ತನೆ ಮಾಡುವ ಮೊದಲು ಆ ಹೊಲದಲ್ಲಿ ಕಸಕಡ್ಡಿ ತೆಗೆದು ಉಳುಮೆ ಮಾಡಿ ಗೊಬ್ಬರ ಹಾಕುವುದರಿಂದ ಫಸಲು ಚೆನ್ನಾಗಿ ಬರುತ್ತದೆ. ಅದೇ ರೀತಿ ಮಹಿಳೆ ಗರ್ಭ ಧರಿಸುವ ತೀರ್ಮಾನ ಕೈಗೊಂಡಾಗ ಪ್ರಸೂತಿ ತಜ್ಞರನ್ನು ಕಂಡು ಅವರ ಸಲಹೆ, ಮಾರ್ಗದರ್ಶನ ಪಡೆಯುವುದು ಉತ್ತಮ.

    | ಡಾ. ದ್ರಾಕ್ಷಾಯಿಣಿ ಸಿ.ಎಲ್., ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು, ಶಿವಮೊಗ್ಗ

    ಒಡಲಲ್ಲಿ ಕುಡಿಯೊಂದು ಚಿಗುರುವುದು ಅಷ್ಟು ಸುಲಭದ ಮಾತಲ್ಲ. ಇದು ಪ್ರಕೃತಿಯ ನಿಯಮವಾದರೂ ಮಹಿಳೆಯರು ತಮ್ಮಲ್ಲೇ ಒಂದಷ್ಟು ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಮೊದಲೆಲ್ಲ ಕೆಲಸದ ಒತ್ತಡ, ಮಾನಸಿಕ ಹಿಂಸೆ ಇರುತ್ತಿರಲಿಲ್ಲವಾದ್ದರಿಂದ ಸಹಜವಾಗಿಯೇ ಮಹಿಳೆ ಗರ್ಭಧರಿಸುತ್ತಿದ್ದಳು. ಆದರೀಗ ಆಧುನಿಕ ಕಾಲಘಟ್ಟದಲ್ಲಿ ಮಹಿಳೆಯೂ ಕಾಲದೊಂದಿಗೆ ಓಡುತ್ತಿದ್ದಾಳೆ. ಪರಿಣಾಮ ಒತ್ತಡ ಹೆಚ್ಚಾಗಿ ಅದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಪಿಸಿಒಡಿ, ಹಾಮೋನ್​ನಲ್ಲಿ ಬದಲಾವಣೆ, ತೂಕ ಹೆಚ್ಚಳ, ಅನಿಯಮಿತ ಮುಟ್ಟಿನಿಂದ ಗರ್ಭಧಾರಣೆಯಲ್ಲಿ ಏರುಪೇರಾಗುತ್ತದೆ. ಇಂತಹ ಸಂದರ್ಭದಲ್ಲಿ ಏನು ಮಾಡಬೇಕು? ಯಾವ ಆಹಾರ ಸೇವನೆ ಉತ್ತಮ ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ.

    ಯಾವ ವಯಸ್ಸು ಉತ್ತಮ: 20ರಿಂದ 30 ವರ್ಷದೊಳಗೆ ಗರ್ಭಿಣಿಯಾಗುವುದು ಒಳ್ಳೆಯದು. 30 ವರ್ಷದ ನಂತರ ಗರ್ಭಿಣಿಯಾಗಬಾರದು ಎಂದು ಅರ್ಥ ಅಲ್ಲ. 30ರ ನಂತರ ಗರ್ಭ ಧರಿಸುವ ಸಾಧ್ಯತೆ ಕಡಿಮೆಯಾಗುತ್ತದೆ. 35ರ ನಂತರ ಇನ್ನೂ ತೀವ್ರವಾಗಿ ಕುಸಿಯುತ್ತದೆ ಮತ್ತು ವಯಸ್ಸು ಹೆಚ್ಚಾದಂತೆ ಕೆಲವೊಂದು chromosome ತೊಂದರೆಗಳಾಗಬಹುದು. ತಾಯಂದಿರಿಗೆ ಅಧಿಕ ರಕ್ತದೊತ್ತಡದಿಂದ ಅಂಡಾಣುಗಳ ಸಂಖ್ಯೆ ಮತ್ತು ಗುಣಮಟ್ಟ ಕಡಿಮೆಯಾಗಿ ಸಕ್ಕರೆ ಕಾಯಿಲೆ ಎಂಬಿತ್ಯಾದಿ ತೊಂದರೆಗಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ಮಿಂಚಿಹೋದ ಕಾಲಕ್ಕೆ ಚಿಂತಿಸಿ ಫಲವೇನು ಅನ್ನುವ ಹಾಗೆ ಹೋದ ವಯಸ್ಸನ್ನು ಮರಳಿ ತರಲು ಆಗುವುದಿಲ್ಲ. ಆದ್ದರಿಂದ ವಯಸ್ಸಿದ್ದಾಗಲೇ ಗರ್ಭಧಾರಣೆ ಸೂಕ್ತ. ಇದೇ ರೀತಿ ವಯಸ್ಸು ಮೀರಿದ ಮೇಲೆ ಹೇಗೆ ಗರ್ಭಧರಿಸುವುದರಿಂದ ತೊಂದರೆಗಳಾಗುತ್ತವೆಯೋ ಚಿಕ್ಕ ವಯಸ್ಸಿನಲ್ಲಿ ಗರ್ಭ ಧರಿಸುವುದರಿಂದ ಅಧಿಕ ರಕ್ತದೊತ್ತಡ, ರಕ್ತ ಹೀನತೆಯಂತಹ ತೊಂದರೆಗಳಾಗುವ ಸಾಧ್ಯತೆ ಇರುತ್ತದೆ. ಸಂಬಂಧದಲ್ಲಿ ಮದುವೆ: ಎಲ್ಲ ಸಂದರ್ಭದಲ್ಲೂ ತೊಂದರೆಗಳಾಗುತ್ತವೆ ಎಂದು ಹೇಳಲಾಗುವುದಿಲ್ಲ. ಕೆಲವೊಂದು ಅನುವಂಶೀಯವಾಗಿ ಬರುವಂತಹ ತೊಂದರೆಗಳು ನಿಮ್ಮ ಕುಟುಂಬದಲ್ಲಿದ್ದರೆ ಮಗುವಿನಲ್ಲಿ ಈ ತೊಂದರೆಗಳು ಉಲ್ಭಣಿಸುವ ಸಾಧ್ಯತೆ ಹೆಚ್ಚಿರುತ್ತವೆ.

    ಜೆನೆಟಿಕ್ ವೈದ್ಯರನ್ನು ಯಾವಾಗ ಕಾಣಬೇಕು?

    • ಅನುವಂಶೀಯ ಕಾಯಿಲೆಗಳಿದ್ದಲ್ಲಿ
    • ಪದೇ ಪದೆ ಗರ್ಭಪಾತವಾದರೆ
    • ಮೊದಲು ಹುಟ್ಟುವ ಮಗುವಿನಲ್ಲಿ ಯಾವುದಾದರೂ ತೊಂದರೆಗಳು ಇದ್ದಲ್ಲಿ

    ಪುರುಷರ ಪಾತ್ರವೂ ಮುಖ್ಯ

    ಮಹಿಳೆಯರ ರೀತಿ ಪುರುಷರ ಪಾತ್ರ ಸಹ ಅಷ್ಟೇ ಮುಖ್ಯವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ಒಳ್ಳೆಯ ಸಮಯವನ್ನು ಕಳೆಯಿರಿ. ಅವಳ ಬೇಕು, ಬೇಡಗಳನ್ನು ಅರ್ಥಮಾಡಿಕೊಂಡು ಅವಳೊಂದಿಗೆ ಸದಾಕಾಲ ಚೆನ್ನಾಗಿರಿ. ಇದರಿಂದ ಅವಳ ಆತ್ಮವಿಶ್ವಾಸ ಹೆಚ್ಚುತ್ತದೆ. ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯ ಕೂಡ ಮುಖ್ಯವಾಗಿರುತ್ತದೆ. ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರಿ. ಇಂತಹ ಚಟಗಳಿದ್ದರೆ ತಕ್ಷಣವೇ ನಿಲ್ಲಿಸಿ, ರೇಡಿಯೇಷನ್​ನಿಂದ ದೂರವಿರಿ. ಆರ್ಥಿಕ, ಸಾಮಾಜಿಕವಾಗಿ ಸ್ಥಿರವಾಗಿ, ಒಟ್ಟಿನಲ್ಲಿ ನಿಮ್ಮ ಆಸೆಯಂತೆ ಒಂದು ಸುಂದರ ಮಗು ನಿಮ್ಮದಾಗಲಿ.

    ಮೊದಲು ಯಾವೆಲ್ಲ ಪರೀಕ್ಷೆ ಮಾಡಿಸಬೇಕು?

    1. ನೀವು ದೀರ್ಘಕಾಲದ ಕಾಯಿಲೆಗಳಿಂದ (ಉದಾ: ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದಯರೋಗ, ಅಸ್ತಮಾ, ಮೂರ್ಚೆರೋಗ) ಬಳಲುತ್ತಿದ್ದರೆ ನುರಿತ ತಜ್ಞವೈದ್ಯರಿಂದ ಸಲಹೆ ಪಡೆದು ಈ ಕಾಯಿಲೆಗಳು ನಿಯಂತ್ರಣಕ್ಕೆ ಬಂದ ಮೇಲೆ ಗರ್ಭಧರಿಸುವುದು ಉತ್ತಮ. ಯಾವೊಂದು ಔಷಧಗಳನ್ನೂ ಗರ್ಭಾವಸ್ಥೆಯಲ್ಲಿ ತೆಗೆದುಕೊಳ್ಳುವುದು ಸೂಕ್ತವಲ್ಲ. ಆದ್ದರಿಂದ ಮೊದಲು ಬದಲಾಯಿಸುವುದು ಉತ್ತಮ. ಎಷ್ಟೋ ಬಾರಿ ನೀವು ಗರ್ಭಿಣಿಯಾಗಿದ್ದೀರಿ ಎಂದು ತಿಳಿಯುವ ಮೊದಲೇ ನಿಮ್ಮ ಮಗುವಿನ ಮಿದುಳು ಮತ್ತು ಸ್ಪೈನಲ್ ಕಾರ್ಡ್ ಬೆಳವಣಿಗೆ ಶುರುವಾಗಿರುತ್ತದೆ. ಇದರ ಬೆಳವಣಿಗೆಗೆ ಫೋಲಿಕ್ ಆಸಿಡ್ ಅನ್ನುವ ವಿಟಮಿನ್ ಅಗತ್ಯವಿರುತ್ತದೆ. ಆದ್ದರಿಂದ ಗರ್ಭಧರಿಸುವ 2ರಿಂದ 3 ತಿಂಗಳ ಮೊದಲೇ ಫೋಲಿಕ್ ಆಸಿಡ್ ಮಾತ್ರ್ರೆ ತೆಗೆದುಕೊಳ್ಳುವುದು ಉತ್ತಮ. ಇದರಲ್ಲಿ ಹಸಿರು ಧಾನ್ಯ ತರಕಾರಿ, ಸಂಪೂರ್ಣ ಧಾನ್ಯ ಹೆಚ್ಚಿರುತ್ತದೆ.
    2. ಗರ್ಭಿಣಿಯಾಗಲು ಬಯಸುವವರು ತಮ್ಮ ತೂಕದ ಮೇಲೆ ನಿಗಾ ಇಡಬೇಕು. ಏಕೆಂದರೆ ತೂಕ ತುಂಬಾ ಜಾಸ್ತಿ ಆದರೂ ಕಷ್ಟ, ತುಂಬಾ ಕಡಿಮೆ ಇದ್ದರೂ ಕಷ್ಟ. ಒಬ್ಬ ವ್ಯಕ್ತಿ ತನ್ನ ಎತ್ತರಕ್ಕೆ ಅನುಗುಣವಾಗಿ ತೂಕ ಇರಬೇಕು. ಅದನ್ನು ನಾವು ಬಿಎಂಐ ಬಾಡಿ ಮಾಸ್ ಇಂಡೆಕ್ಸ್ ಎಂದು ಕರೆಯುತ್ತೇವೆ. ಎಲ್ಲ ಮಹಿಳೆಯರು ಗರ್ಭಧರಿಸುವ ಮೊದಲ ಬಿಎಂಐ-18ರಿಂದ 25ರಲ್ಲಿ ಕಾಪಾಡಿಕೊಳ್ಳುವುದು ಉತ್ತಮ. ಇದಕ್ಕಾಗಿ ನೀವು ಕಡಿಮೆ ಕ್ಯಾಲರಿ ಇರುವ ಮತ್ತು ಹೆಚ್ಚು ಪೌಷ್ಟಿಕ ಅಂಶಗಳಿರುವ ಆಹಾರ ಸೇವಿಸಬೇಕು ಮತ್ತು ನಿಯಮಿತವಾದ ವ್ಯಾಯಾಮ ಮಾಡಬೇಕು.
    3. ಗರ್ಭಾವಸ್ಥೆಯಲ್ಲಿ ಕೆಲವು ಚುಚ್ಚುಮದ್ದು ತೆಗೆದುಕೊಳ್ಳಲು ಬರುವುದಿಲ್ಲ. ಆದ್ದರಿಂದ ಗರ್ಭಧರಿಸುವ ಮೊದಲೇ ಆ ಚುಚ್ಚುಮದ್ದುಗಳನ್ನು ತೆಗೆದುಕೊಳ್ಳುವುದರಿಂದ ನಿಮ್ಮನ್ನು ಮತ್ತು ನಿಮಗೆ ಹುಟ್ಟುವ ಮಗುವನ್ನು ಸೋಂಕುಗಳಿಂದ ರಕ್ಷಿಸಬಹುದು. ಉದಾ: ಎಂಎಂಆರ್ ಚುಚ್ಚುಮದ್ದು ಮತ್ತು ಚಿಕನ್ ಫಾಕ್ಸ್ ಚುಚ್ಚುಮದ್ದು ತೆಗೆದುಕೊಂಡ 4 ವಾರದ ನಂತರ ಗರ್ಭಧರಿಸುವುದು ಉತ್ತಮ.
    4. ನೀವು ಗರ್ಭನಿರೋಧಕಗಳನ್ನು ಉಪಯೋಗಿಸುತ್ತಿದ್ದರೆ ನಿಲ್ಲಿಸಿ. IVCD(cu9) ಹಾಕಿಸಿಕೊಂಡಿದ್ದರೆ ತೆಗೆಸಿಬಿಡಿ. ಗರ್ಭನಿರೋಧಕ ಮಾತ್ರೆ ಮತ್ತು CuT ಉಪಯೋಗಿಸುವುದನ್ನು ನಿಲ್ಲಿಸಿದ ತಕ್ಷಣ ಗರ್ಭವತಿ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಡಿಪೋಸ್ರಫವರ್ ((Depoprouch)) ಅಂತಹ ಇಂಜಕ್ಷನ್ ತೆಗೆದುಕೊಳ್ಳುತ್ತಿದ್ದಲ್ಲಿ ಅದನ್ನು ನಿಲ್ಲಿಸಿದ ಮೇಲೆ ತಕ್ಷಣ ಗರ್ಭಧರಿಸುವ ಸಾಧ್ಯತೆ ಕಡಿಮೆ ಇರುತ್ತದೆ.
    5. ಗರ್ಭಾವಸ್ಥೆಯಲ್ಲಿ ಹಾಮೋನ್ ವ್ಯತ್ಯಾಸದಿಂದ ಹಲ್ಲು ಮತ್ತು ವಸಡಿನ ಮೇಲೆ ಪರಿಣಾಮ ಬೀರಬಹುದು. ಇದರಿಂದ ನೀವು ಡೆಂಟಲ್ ಕೇಸ್​ನಿಂದ ಬಳಲುತ್ತಿದ್ದರೆ ಮೊದಲೆ ಅದಕ್ಕೆ ಚಿಕಿತ್ಸೆ ಪಡೆಯುವುದು ಉತ್ತಮ. ನೀವು ಯಾವುದಾದರು ಸೋಂಕು ಅದರಲ್ಲೂ ಜನನಾಂಗದ ಸೋಂಕಿನಿಂದ ಬಳಲುತ್ತಿದ್ದರೆ ಅದಕ್ಕೆ ಅಗತ್ಯವಾದ ಚಿಕಿತ್ಸೆ ಪಡೆದುಕೊಳ್ಳಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts