More

    ಸೊರಗುತ್ತಿದೆ ಸೊರ್ಕಳ ಕೆರೆ : 10 ಎಕರೆ ವಿಸ್ತಾರದಲ್ಲಿ ತುಂಬಿದೆ ಹೂಳು : ಮೂರು ಗ್ರಾಪಂಗೆ ಆಧಾರ

    ಹರಿಪ್ರಸಾದ್ ನಂದಳಿಕೆ ಶಿರ್ವ

    ಸುಮಾರು 10 ಎಕರೆ ಪ್ರದೇಶದಲ್ಲಿ ವಿಸ್ತಾರವಾಗಿ ಹಬ್ಬಿದ್ದು, ಮೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷಿಭೂಮಿಗೆ ಆಧಾರವಾಗಿರುವ ಸೊರ್ಕಳ ಕೆರೆ ಇದೀಗ ನಿರ್ವಹಣೆ ಕೊರತೆಯಿಂದ ಸೊರಗುತ್ತಿದೆ.

    ಹಲವು ವರ್ಷಗಳಿಂದ ಶಿರ್ವ, ಕುತ್ಯಾರು ಹಾಗೂ ಮುದರಂಗಡಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಜೀವನಾಡಿಯಾಗಿದ್ದ ಈ ಕೆರೆಗೆ ಕೆಲವು ವರ್ಷಗಳ ಹಿಂದೆ ಹೂಳೆತ್ತಿ ಮರುಜೀವ ನೀಡಲಾಗಿತ್ತು. ಇದೀಗ ಕೆರೆಯಲ್ಲಿ ಸಂಪೂರ್ಣ ಹೂಳು ತುಂಬಿರುವುದರಿಂದ ಕೆರೆಯ ವ್ಯಾಪ್ತಿ ಕಡಿಮೆಯಾಗುತ್ತಾ ಬರುತ್ತಿದೆ. 7.55 ಎಕರೆ ಕೆರೆ ಪ್ರದೇಶ ಕುತ್ಯಾರು ಗ್ರಾಪಂಗೆ ಒಳಪಟ್ಟಿದ್ದರೆ, ಉಳಿದ ಸ್ವಲ್ಪ ಭಾಗ ಶಿರ್ವ ಹಾಗೂ ಮುದರಂಗಡಿ ಗ್ರಾಪಂನ ಪಿಲಾರು ಗ್ರಾಮಕ್ಕೆ ಸೇರಿದೆ. ಹಾಗಾಗಿ ಮೂರು ಗ್ರಾಮ ಪಂಚಾಯಿತಿಯ ಸಾವಿರಾರು ಎಕರೆ ಕೃಷಿಭೂಮಿಗೆ ಆಧಾರವಾಗಿರುವ ಕೆರೆಯ ಅಭಿವೃದ್ಧಿಗೆ ಸ್ಥಳೀಯರು ಆಗ್ರಹ ವ್ಯಕ್ತಪಡಿಸಿದ್ದಾರೆ.

    18ವರ್ಷಗಳಿಂದ ಹೂಳೆತ್ತಿಲ್ಲ

    ಜಿಲ್ಲಾ ಪಂಚಾಯಿತಿಯ 11ನೇ ಹಣಕಾಸು ಅನುದಾನದಲ್ಲಿ 2005ರಲ್ಲಿ ಕುತ್ಯಾರು ಗ್ರಾಪಂ ವತಿಯಿಂದ ಸುಮಾರು 3.6 ಲಕ್ಷ ರೂ. ವೆಚ್ಚದಲ್ಲಿ ಈ ಕೆರೆಯ ಹೂಳೆತ್ತಲಾಗಿತ್ತು. ಆ ಬಳಿಕ ಬರೋಬ್ಬರಿ 18 ವರ್ಷಗಳಿಂದ ಹೂಳೆತ್ತುವ ಕಾಮಗಾರಿ ನಡೆದಿಲ್ಲ. ಈ ಕೆರೆಯ ನೀರನ್ನೇ ನಂಬಿಕೊಂಡು ಈ ಹಿಂದೆ ಈ ಭಾಗದ ನೂರಾರು ಕೃಷಿಕರು ಭತ್ತದ ಬೇಸಾಯ, ಅಡಕೆ, ತೆಂಗು ಸಹಿತ ಇತರ ಕೃಷಿ ನಡೆಸುತ್ತಿದ್ದರು. ಕಾಲ ಕ್ರಮೇಣ ಕಾಮಗಾರಿ ನಡೆಯದೆ, ಇತ್ತ ಕೆರೆಯಿಂದ ನೀರು ಹರಿದು ಹೋಗುವ ತೋಡುಗಳ ನಿರ್ವಹಣೆಯೂ ಇಲ್ಲದೆ ಕಸ ಕಡ್ಡಿ ತುಂಬಿವೆ.

    ಅಣೆಕಟ್ಟು ಕಟ್ಟುವ ವ್ಯವಸ್ಥೆ ನಿಂತೇ ಹೋಗಿದೆ

    ಕೆರೆಯಿಂದ ಹರಿದು ಹೊರಹೋಗುವ ನೀರಿಗೆ ದಶಕಗಳ ಹಿಂದಿನಿಂದಲೂ ಪ್ರತಿ ವರ್ಷ ಕಾವೇರಿ ಸಂಕ್ರಮಣದಂದು ಗ್ರಾಮಸ್ಥರು ಒಟ್ಟು ಸೇರಿ ಅಣೆಕಟ್ಟು ಕಟ್ಟುವ ವ್ಯವಸ್ಥೆ ಹಲವು ವರ್ಷಗಳಿಂದ ಚಾಲ್ತಿಯಲ್ಲಿತ್ತು. ಆದರೆ ಇತ್ತಿಚಿನ ದಿನಗಳಲ್ಲಿ ಆ ಕಾರ್ಯವೂ ನಿಂತು ಹೋದ ಪರಿಣಾಮ ಕೃಷಿಯೂ, ಇಲ್ಲ ನೀರೂ ಇಲ್ಲ ಎಂಬಂತಾಗಿದೆ. ಜತೆಗೆ ಕುಡಿಯುವ ನೀರಿಗೂ ತಾತ್ವಾರ ಬಂದಿದೆ.

    ಅಂತರ್ಜಲ ವೃದ್ಧಿ ಸಾಧ್ಯತೆ

    ವಿಸ್ತಾರವಾಗಿ ಹರಡಿಕೊಂಡಿರುವ ಈ ಕೆರೆಯ ಹೂಳೆತ್ತುವ ಕಾಮಗಾರಿ ನಡೆದರೆ ಈ ಭಾಗದ ಸಾವಿರಾರು ಎಕರೆ ಪ್ರದೇಶಕ್ಕೆ ಅಂತರ್ಜಲ ವೃದ್ಧಿಗೆ ಸಹಾಯವಾಗುತ್ತದೆ. ಅಲ್ಲದೆ ಪರಿಸರದ ಬಾವಿಗಳಲ್ಲಿ ನೀರಿನ ಒರತೆ ಹೆಚ್ಚಾಗಿ ವರ್ಷದುದ್ದಕ್ಕೂ ಜಲಮಟ್ಟ ಏರಿಕೆಯಾಗುವುದು ಖಚಿತ.

    ಅಭಿವೃದ್ದಿಗೆ ಆಸಕ್ತಿ ಬೇಕಾಗಿದೆ

    ಸೊರ್ಕಳ ಕೆರೆ ಪುರಾತನ ಕೆರೆಯಾಗಿದ್ದು, ಹಲವಾರು ರೀತಿಯಲ್ಲಿ ಪರಿಸರಕ್ಕೆ ಮತ್ತು ಗ್ರಾಮಸ್ಥರಿಗೆ ಪ್ರಯೋಜಕಾರಿಯಾಗಿದೆ. ಈ ಕೆರೆಯ ಅಭಿವೃದ್ಧಿ ಬಗ್ಗೆ ಶಿರ್ವ, ಮುದರಂಗಡಿ, ಕುತ್ಯಾರು ಈ ಮೂರು ಗ್ರಾಮ ಪಂಚಾಯಿತಿಗಳು ಒಗ್ಗಟ್ಟಾಗಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಅಭಿವೃದ್ಧಿಗೆ ಮುಂದಾಗಬೇಕಾಗಿದೆ ಎಂದು ನಾಗರಿಕರು ಆಗ್ರಹಿಸಿದ್ದಾರೆ.

    ಪ್ರವಾಸಿತಾಣವಾಗಲು ಸಾಧ್ಯ

    ಒಂದು ಬದಿಯಲ್ಲಿ ಬಂಡೆಕಲ್ಲು, ಸುತ್ತಲೂ ಪ್ರಕೃತಿದತ್ತ ಸೌಂದರ್ಯ ನಡುವೆ ವಿಸ್ತಾರವಾದ ಕೆರೆಯ ಹೂಳು ತೆಗೆದರೆ ಪ್ರವಾಸಿತಾಣವಾಗಿ ಅಭಿವೃದ್ಧಿಪಡಿಸಬಹುದು. ವರ್ಷವಿಡೀ ನೀರಿನಿಂದ ತುಂಬಿರುವುದರಿಂದ ಸುತ್ತಲೂ ವಾಕಿಂಗ್ ಟ್ರಾೃಕ್ ಹಾಗೂ ಬೋಟಿಂಗ್ ವ್ಯವಸ್ಥೆ, ವಿಶ್ರಾಂತಿಗೆ ಆಸನದ ವ್ಯವಸ್ಥೆ ಕಲ್ಪಿಸಿದರೆ ನಿತ್ಯ ನೂರಾರು ಮಂದಿ ಬಂದು ಇಲ್ಲಿನ ಪ್ರಕೃತಿಯ ಸೊಬಗನ್ನು ಸವಿಯಲು ಸಾಧ್ಯ.

    ಸೊರ್ಕಳ ಕೆರೆ ಮೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವುದರಿಂದ ಇದರ ನಿರ್ವಹಣೆ ಬಗ್ಗೆ ಚಿಂತನೆ ನಡೆದಿಲ್ಲ. ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡುತ್ತೇವೆ. ಕೆರೆ ಅಭಿವೃದ್ಧಿಯಾದಲ್ಲಿ ಸಾವಿರಾರು ಎಕರೆ ಕೃಷಿ ಭೂಮಿಗೆ ಜೀವ ತುಂಬಲಿದೆ.
    – ಜನಾರ್ದನ ಆಚಾರ್ಯ, ಅಧ್ಯಕ್ಷ, ಕುತ್ಯಾರು ಗ್ರಾಪಂ

    ಶಿರ್ವ, ಕುತ್ಯಾರು, ಮುದರಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೊರ್ಕಳ ಕೆರೆ ಒಳಪಟ್ಟಿರುವುದರಿಂದ ಅದರ ನಿರ್ವಹಣೆ ಬಗ್ಗೆ ಈವರೆಗೆ ಯಾವುದೇ ಸಮಾಲೋಚನೆ ನಡೆದಿಲ್ಲ. ಮುಂದೆ ಮೂರು ಗ್ರಾಮ ಪಂಚಾಯಿತಿ ಸೇರಿ ಅಭಿವೃದ್ಧಿ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.
    – ರಜನಿ ರಾವ್, ಪಿಡಿಒ, ಕುತ್ಯಾರು ಗ್ರಾಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts