More

    ಜಲ್ಲಿ, ಎಂ ಸ್ಯಾಂಡ್ ಕೊರತೆ ನೀಗಿಸಿ

    ಚಿತ್ರದುರ್ಗ: ಸತತ ಒಂದು ವಾರದಿಂದ ಜಿಲ್ಲಾದ್ಯಂತ ಜಲ್ಲಿ, ಎಂ.ಸ್ಯಾಂಡ್ ಸಿಗದೆ ಕಟ್ಟಡ ಕಾರ್ಮಿಕರು ಹಾಗೂ ಮನೆ ಕಟ್ಟುವವರಿಗೆ ತೊಂದರೆಯಾಗಿದೆ ಎಂದು ಆರೋಪಿಸಿ ಎಐಟಿಯುಸಿ, ರಾಜ್ಯ ಕಟ್ಟಡ ಕಟ್ಟುವ ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಜಿಲ್ಲಾ ಸಮಿತಿ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.
    ನಗರದಲ್ಲಿ ಮೆರವಣಿಗೆ ನಡೆಸಿದ ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ, ಜಲ್ಲಿ, ಎಂ.ಸ್ಯಾಂಡ್ ತ್ವರಿತವಾಗಿ ದೊರಕಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.
    ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ.ಸುರೇಶ್‌ಬಾಬು ಮಾತನಾಡಿ, ಜಿಲ್ಲಾದ್ಯಂತ 1.5 ಲಕ್ಷಕ್ಕೂ ಅಧಿಕ ಕಟ್ಟಡ ಕಾರ್ಮಿಕರಿದ್ದಾರೆ. ನಿತ್ಯವೂ ಕೂಲಿ ಮಾಡಿಯೇ ಜೀವನ ಸಾಗಿಸುತ್ತಿದ್ದಾರೆ. ಲಾರಿ, ಟ್ರಾೃಕ್ಟರ್, ಟಿಪ್ಪರ್ ಚಾಲಕರ ಬದುಕು ಇದಕ್ಕೆ ಹೊರತಾಗಿಲ್ಲ. ಬ್ಯಾಂಕ್‌ನಿಂದ ಸಾಲ ಪಡೆದು ವಾಹನ ಖರೀದಿಸಿದವರು ಕಂತು ಕಟ್ಟಲು ಸಾಧ್ಯವಾಗದೆ ಪರದಾಡುವಂತಾಗಿದೆ. ಮನೆ ನಿರ್ಮಾಣಕ್ಕೆ ಮುಂದಾದವರ ಪರಿಸ್ಥಿತಿಯೂ ಇದೇ ರೀತಿ ಇದ್ದು, ಸಮಸ್ಯೆ ಬಗೆಹರಿಸಿ ಎಂದು ಆಗ್ರಹಿಸಿದರು.
    ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ ಮಾತನಾಡಿ, ಜಲ್ಲಿ, ಎಂ.ಸ್ಯಾಂಡ್ ಅಭಾವ ಹೆಚ್ಚಾಗಿದೆ. ಇದರಿಂದಾಗಿ ಗಾರೆ ಕೆಲಸಗಾರರು ನಿತ್ಯ ಊಟಕ್ಕೂ ಪರದಾಡುತ್ತಿದ್ದಾರೆ. ಸರ್ಕಾರ ಮಧ್ಯಪ್ರವೇಶಿಸಿ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಮನವಿ ಮಾಡಿದರು.
    ಎಐಟಿಯುಸಿ ರಾಜ್ಯ ಮಂಡಳಿ ಉಪಾಧ್ಯಕ್ಷ ಟಿ.ಆರ್.ಉಮಾಪತಿ, ಮುಖಂಡರಾದ ರಾಜಪ್ಪ, ಸತ್ಯಕೀರ್ತಿ, ನಾಗರಾಜ್, ಮುಜಿಮಲ್, ಶಿವಕುಮಾರ್, ಮಲ್ಲಪ್ಪ, ರವಿಕುಮಾರ್, ರಾಮಕೃಷ್ಣ, ಶಶಿಧರ್, ನಸ್ರುಲ್ಲಾ, ಎಂ.ಆರ್.ಬಾಬು, ಪಾಪಯ್ಯ,ತಿಪ್ಪೇಸ್ವಾಮಿ, ಶಶಿಕುಮಾರ್, ಮಲ್ಲಿಕಾರ್ಜುನ್, ನಾಗರಾಜ್, ಬಸವರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts