More

    ಒಳಚರಂಡಿ ವಿಭಾಗ ಕಾರ್ಮಿಕರ ಪ್ರತಿಭಟನೆ

    ಮಂಗಳೂರು: ಒಳಚರಂಡಿ ವಿಭಾಗದಲ್ಲಿ ದುಡಿಯುವ ಪೌರಕಾರ್ಮಿಕರ ಸಮಸ್ಯೆಗೆ ಮಹಾನಗರ ಪಾಲಿಕೆ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸದೆ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ನೇತೃತ್ವದಲ್ಲಿ ಕಾರ್ಮಿಕರು ಸೋಮವಾರ ಪಾಲಿಕೆ ಎದುರು ಪ್ರತಿಭಟನೆ ನಡೆಸಿದರು.

    ಪಾಲಿಕೆ ವ್ಯಾಪ್ತಿಯ ಕುದ್ರೋಳಿ, ಪಾಂಡೇಶ್ವರ, ಪಚ್ಚನಾಡಿ, ಕೊಂಗೂರು ಮಠ, ಪಿಲಿಕುಳ, ಮಂಜಲ್‌ಪಾದೆ ಹಾಗೂ ಎಂಎಸ್‌ಇಜೆಡ್‌ನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಒಳಚರಂಡಿ ಕಾರ್ಮಿಕರು ಅನೇಕ ಸಮಸ್ಯೆಗಳನ್ನು ಎದುರಿಸುತಿದ್ದಾರೆ. ಆದರೆ ನಗರಪಾಲಿಕೆ ಹಾಗೂ ಗುತ್ತಿಗೆದಾರರು ಸ್ಪಂದಿಸದೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

    ಮಾಸಿಕ ವೇತನ ಸೇರಿದಂತೆ ವಿವಿಧ ಸವಲತ್ತು ನೀಡುವಲ್ಲಿ ತಾರತಮ್ಯ ವಹಿಸುತ್ತಿದ್ದು, ಈ ಕುರಿತು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಪ್ರತಿ ತಿಂಗಳು 5ನೇ ತಾರೀಕಿನ ಒಳಗೆ ವೇತನ ಪಾವತಿ, ಇಎಲ್, ಸಿಎಲ್ ವಾರ್ಷಿಕ 11 ರಜೆ ನೀಡಬೇಕು. ಪ್ರತಿ ನೌಕರರಿಗೆ ವಿಮೆ ಒದಗಿಸಬೇಕು. ದಿನಕೂಲಿ ರದ್ದುಗೊಳಿಸಿ ಮಾಸಿಕ ವೇತನ, ಪ್ರತಿ ವರ್ಷ ಒಂದು ತಿಂಗಳ ಸಂಬಳವನ್ನು ಬೋನಸ್ ಆಗಿ ನೀಡಬೇಕು. ಸೋಪ್, ಗ್ಲೌಸ್, ಯೂನಿಫಾರಂ, ರೈನ್‌ಕೋಟ್, ಗಮ್‌ಬೂಟ್ ಹಾಗೂ ಪಾಲಿಕೆಯಿಂದಲೇ ಗುರುತಿನ ಚೀಟಿ ನೀಡಬೇಕು ಎಂದು ಆಗ್ರಹಿಸಿದರು.
    ದಸಂಸ ಮುಖಂಡರಾದ ಜಗದೀಶ್ ಪಾಂಡೇಶ್ವರ, ನಾಗೇಶ್ ಮುಲ್ಲಕಾಡು, ಸಂಜೀವ ಉಳಾಯಿಬೆಟ್ಟು, ಪ್ರೇಮ್ ಕುಮಾರ್ ಬಲ್ಲಾಳ್‌ಬಾಗ್, ಪದ್ಮನಾಭ ವಾಮಂಜೂರು, ರಾಜೇಶ್ ಪೆರ್ನಾಜೆ, ಸತೀಶ್ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts