More

    ಕೆವಿಎಸ್, ಎಸ್‌ಎಂಕೆ ಕುಟುಂಬಕ್ಕಿಲ್ಲ ಅವಕಾಶ: ವಿಜಯಾನಂದ, ಗುರುಚರಣ್‌ಗೆ ಸಿಗದ ಟಿಕೆಟ್

    ಮಂಡ್ಯ: ಜಿಲ್ಲೆಯ ಹಿರಿಯ ರಾಜಕಾರಣಿಗಳಾದ ನಿತ್ಯಸಚಿವ ಕೆ.ವಿ.ಶಂಕರೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕುಟುಂಬದ ಕುಡಿಗಳು ಚುನಾವಣೆಗೆ ಸ್ಪರ್ಧೆ ಮಾಡಬೇಕೆನ್ನುವ ಆಶಯಕ್ಕೆ ಕಾಂಗ್ರೆಸ್, ಜೆಡಿಎಸ್ ಪಕ್ಷ ನೀರೆರೆಚಿವೆ. ಇದು ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರುವ ಮುನ್ಸೂಚನೆ ಕಾಣಿಸುತ್ತಿದೆ.
    ಮಂಡ್ಯ ರಾಜ್ಯಕಾರಣದಲ್ಲಿ ಹೊಸ ಭಾಷ್ಯ ಬರೆದಿದ್ದ ಕೆವಿಎಸ್ ಅವರ ಮೊಮ್ಮಗ ಕೆ.ಎಸ್.ವಿಜಯಾನಂದ ಮಂಡ್ಯ ಕ್ಷೇತ್ರದಿಂದ ಜೆಡಿಎಸ್ ಬಿ ಫಾರ್ಮ್ ಆಕಾಂಕ್ಷಿಯಾಗಿದ್ದರು. ಆದರೆ ದಳಪತಿಗಳು ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರುಗೆ ಮಣೆ ಹಾಕಿದ್ದಾರೆ. ಅತ್ತ ಎಸ್‌ಎಂಕೆ ಕುಟುಂಬದ ಕುಡಿ ಎಸ್.ಗುರುಚರಣ್‌ಗೆ ಮದ್ದೂರು ಕ್ಷೇತ್ರದಿಂದ ಸ್ಪರ್ಧೆ ಮಾಡಲು ಕಾಂಗ್ರೆಸ್ ಅವಕಾಶ ನೀಡಲಿಲ್ಲ. ಬದಲಿಗೆ ಸಮಾಜ ಸೇವಕ ಕದಲೂರು ಉದಯ್‌ಗೆ ಬಿ ಫಾರ್ಮ್ ನೀಡಲಾಗಿದೆ.
    ಎರಡು ಪಕ್ಷಕ್ಕೂ ಹಿನ್ನಡೆ: ಜಿಲ್ಲೆಯ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿರುವ ಎರಡು ಕುಟುಂಬದ ಕುಡಿಗಳಿಗೆ ಅವಕಾಶ ಕೊಡದಿರುವುದು ಚುನಾವಣೆಯಲ್ಲಿ ಹಿನ್ನಡೆಯಾದಂತಾಗುತ್ತಿದೆ. ಈಗಾಗಲೇ ಅವರ ಕುಟುಂಬದ ಹಿತೈಷಿಗಳು ಎರಡು ಪಕ್ಷದ ನಾಯಕರ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕುತ್ತಿದ್ದಾರೆ. ಹಣಕ್ಕಾಗಿ ಟಿಕೆಟ್ ಮಾರಾಟ ಮಾಡಿಕೊಳ್ಳಲಾಗಿದೆ. ಮಾತ್ರವಲ್ಲದೆ ಹಿರಿಯ ರಾಜಕಾರಣಿಗಳ ಕುಟುಂಬಕ್ಕೆ ಮಾಡಿದ ಬಹುದೊಡ್ಡ ಅನ್ಯಾಯವೆಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಜ್ಜನ ರಾಜಕಾರಣಕ್ಕೆ ಹೆಸರಾಗಿರುವ ಕುಟುಂಬಗಳಿಗೆ ಅವಕಾಶ ಕೊಡದಿರುವ ಕುರಿತು ಚರ್ಚೆ ನಡೆಯುತ್ತಿದೆ.
    ಜೆಡಿಎಸ್‌ಗೆ ದೊಡ್ಡ ಪೆಟ್ಟು?: ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಕೆ.ಎಸ್.ವಿಜಯಾನಂದ ಪ್ರಬಲ ಆಕಾಂಕ್ಷಿಯಾಗಿದ್ದರು. ಎಚ್.ಡಿ.ಕುಮಾರಸ್ವಾಮಿ ಅವರು ಕೂಡ ತಮ್ಮ ಕುಟುಂಬದ ಸದಸ್ಯ ಎನ್ನುವಂತೆ ಹೇಳುತ್ತಲೇ ಇದ್ದರು. ಆದರೂ ಶಾಸಕ ಎಂ.ಶ್ರೀನಿವಾಸ್, ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಜಿಪಂ ಮಾಜಿ ಸದಸ್ಯ ಎಚ್.ಎನ್.ಯೋಗೇಶ್ ರೇಸ್‌ನಲ್ಲಿದ್ದರು.
    ಜೆಡಿಎಸ್‌ನ ಮೊದಲ ಪಟ್ಟಿಯಲ್ಲಿಯೇ ವಿಜಯಾನಂದ ಹೆಸರು ಘೋಷಣೆಯಾಗಲಿದೆ ಎನ್ನುವ ಮಾತಿತ್ತು. ಆದರೆ ಆಗಲೂ ಹಾಲಿ ಶಾಸಕ ಹೆಸರನ್ನು ಘೋಷಣೆ ಮಾಡಲಾಗಿತ್ತು. ಬಳಿಕ ಅಭ್ಯರ್ಥಿ ಬದಲಾವಣೆ ಖಚಿತವಾಗುತ್ತಿದ್ದಂತೆ ಮತ್ತೆ ವಿಜಯಾನಂದ ಹೆಸರು ಮುನ್ನಲೆಗೆ ಬಂತು. ಎರಡು ಹಾಗೂ ಮೂರನೇ ಪಟ್ಟಿಯಲ್ಲಿಯೂ ಸ್ಥಾನ ನೀಡಲಿಲ್ಲ. ಇಷ್ಟೆಲ್ಲ ಬೆಳವಣಿಗೆ ನಡುವೆ ಎಚ್‌ಡಿಕೆ ಅವರೇ ಸ್ಪರ್ಧೆ ಮಾಡುತ್ತಾರೆನ್ನುವ ಸುದ್ದಿ ಹೊರಬಂತು. ಅಂತಿಮವಾಗಿ ಅದು ಕೂಡ ನಡೆಯಲಿಲ್ಲ. ಈ ಹಿನ್ನೆಲೆಯಲ್ಲಿ ವಿಜಯಾನಂದ ಹೆಸರೇ ಅಂತಿಮವಾಗಲಿದೆ ಎನ್ನುವ ಕಾರಣಕ್ಕೆ ಬುಧವಾರ ಅವರು ಮತ್ತವರ ಬೆಂಬಲಿಗರು ಬೆಂಗಳೂರಿಗೆ ತೆರಳಿದರು. ಅತ್ತ ರಾಮಚಂದ್ರು ಹಾಗೂ ಬೆಂಬಲಿಗರು ಹೋಗಿದ್ದರು.
    ಅಂತಿಮವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ರಾಮಚಂದ್ರು ಅವರಿಗೆ ಬಿ ಫಾರ್ಮ್ ನೀಡಿದ್ದಾರೆ. ಆದರೆ ಇತ್ತ ಕೆವಿಎಸ್ ಕುಟುಂಬದ ಹಿತೈಷಿಗಳು, ಬೆಂಬಲಿಗರಲ್ಲಿ ಆಕ್ರೋಶದ ಕಟ್ಟೆಯೊಡೆದಿದೆ. ವಿಜಯಾನಂದ ಅವರ ನಿವಾಸದ ಎದುರು ಜಮಾಯಿಸಿದ ಹಿತೈಷಿಗಳು ಎಚ್‌ಡಿಡಿ ಕುಟುಂಬದ ವಿರುದ್ಧ ಟೀಕಾಪ್ರಹಾರ ನಡೆಸಿದರು. ಮಾತ್ರವಲ್ಲದೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲೇಬೇಕೆಂದು ಒತ್ತಾಯಿಸಿದರು.
    ಈ ಎಲ್ಲ ಬೆಳವಣಿಗೆ ಜೆಡಿಎಸ್‌ಗೆ ದೊಡ್ಡ ಹೊಡೆತ ಬೀಳಲಿದೆ ಎನ್ನುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ರಾಮಚಂದ್ರು ಅವರ ವಿರುದ್ಧ ಶಾಸಕ ಎಂ.ಶ್ರೀನಿವಾಸ್ ಸೇರಿದಂತೆ ಆಕಾಂಕ್ಷಿತರಿಗೆ ಅಸಮಾಧಾನವಿದ್ದದ್ದು ಗುಟ್ಟೇನಲ್ಲ. ಇದು ಎಷ್ಟೋ ಬಾರಿ ಬಹಿರಂಗಗೊಂಡಿರುವುದು ಇದೆ. ಶ್ರೀನಿವಾಸ್ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ನನಗೆ ಅವಕಾಶ ಕೊಡಿ, ಇಲ್ಲದಿದ್ದರೆ ಎಚ್‌ಡಿಕೆ ಬರಬೇಕೆಂದು ಹೇಳಿದ್ದರು. ಶಾಸಕರು ಕ್ಷೇತ್ರದಲ್ಲಿ ತಮ್ಮದೇ ಆದ ಮತಬ್ಯಾಂಕ್ ಹೊಂದಿರುವುದು ಗಮನಾರ್ಹ. ಅತ್ತ ಟಿಕೆಟ್ ಕೈ ತಪ್ಪಿರುವುದರಿಂದ ಕೆವಿಎಸ್ ಕುಟುಂಬದ ಹಿತೈಷಿಗಳು ಬಂಡಾಯವೆದ್ದಿದ್ದಾರೆ. ಆದ್ದರಿಂದ ರಾಮಚಂದ್ರು ಪರ ಚುನಾವಣೆ ಮಾಡುತ್ತಾರೆಯೇ ಎನ್ನುವ ಪ್ರಶ್ನೆಗೆ ಮುಂದಿನ ದಿನದಲ್ಲಿ ಉತ್ತರ ಸಿಗಲಿದೆ. ಮಾತ್ರವಲ್ಲದೆ ಜೆಡಿಎಸ್‌ನಲ್ಲಿರುವ ಶೀತಲ ಸಮರ ವಿಪಕ್ಷ ಅದರಲ್ಲಿಯೂ ಬಿಜೆಪಿಗೆ ವರವಾದರೂ ಅಚ್ಚರಿಪಡುವಂತಿಲ್ಲ.
    ‘ಕೈ’ ಬಿಟ್ಟು ಹೊರೆಯತ್ತ ಗುರುಚರಣ್: ಈ ಬಾರಿಯ ಮದ್ದೂರು ಕ್ಷೇತ್ರದಿಂದ ಗುರುಚರಣ್ ಸ್ಪರ್ಧೆ ಮಾಡುವುದು ಎಸ್.ಎಂ.ಕೃಷ್ಣ ಕುಟುಂಬಕ್ಕೆ ಪ್ರತಿಷ್ಠೆಯಾಗಿತ್ತು. ಇದರಲ್ಲಿ ಎಸ್‌ಎಂಕೆ ಕುಟುಂಬದ ಅಸ್ಥಿತ್ವದ ಪ್ರಶ್ನೆಯೂ ಆಗಿತ್ತು. ಈ ಕಾರಣದಿಂದಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೇಲೆ ಕೃಷ್ಣ ಒತ್ತಡ ಹಾಕಿದ್ದಾರೆನ್ನುವ ಮಾತು ಕ್ಷೇತ್ರದಲ್ಲಿದೆ. ಆದರೂ ರಾಜಕೀಯ ಗುರುಗಳಾದ ಕೃಷ್ಣ ಅವರ ಮಾತನ್ನು ಧಿಕ್ಕರಿಸಲಾಗಿದೆ ಎನ್ನುವ ಕಳಂಕವನ್ನು ಅನಿವಾರ್ಯವಾಗಿ ಕಾಂಗ್ರೆಸ್ ಹೊರಬೇಕಿದೆ.
    ಹಲವು ವರ್ಷದಿಂದ ಕಾಂಗ್ರೆಸ್‌ನಲ್ಲಿದ್ದ ಗುರುಚರಣ್ ಅವರು ಜಿಪಂ ಅಧ್ಯಕ್ಷರಾಗಿ ಹಾಗೂ ದಿ ಮೈಸೂರ್ ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ರಾಜ್ಯದಲ್ಲಿಯೇ ಮೊದಲ ಅಭ್ಯರ್ಥಿಯನ್ನಾಗಿ ಗುರುಚರಣ್ ಹೆಸರು ಘೋಷಣೆಯಾದರೂ ಸ್ಪರ್ಧೆ ಮಾಡಲು ಅವಕಾಶ ಕೊಡದಿರುವ ಬಗ್ಗೆ ಪಕ್ಷದ ವಿರೋಧಿ ಅಲೆಗೆ ಕಾರಣವಾಗಿದೆ. ಮಾತ್ರವಲ್ಲದೆ ಅವರ ಬೆಂಬಲಿಗರು ಕೂಡ ಪ್ರತಿಭಟನೆ ನಡೆಸಿ ‘ಹಣಕ್ಕಾಗಿ ಟಿಕೆಟ್ ಮಾರಿಕೊಳ್ಳಲಾಗಿದೆ. ಗುರುಗಳಿಗೆ ದ್ರೋಹ ಮಾಡಿದ ಡಿ.ಕೆ.ಸುರೇಶ್ ಹಾಗೂ ಡಿ.ಕೆ.ಸುರೇಶ್’ ಎನ್ನುವ ಗಂಭೀರ ಆರೋಪವನ್ನು ಮಾಡಿದ್ದಾರೆ. ಇದು ಕ್ಷೇತ್ರದಲ್ಲಿ ಚರ್ಚೆಗೆ ಕಾರಣವಾಗಿದೆ.
    ಪ್ರಬಲ ಆಕಾಂಕ್ಷಿಯಾಗಿದ್ದ ಗುರುಚರಣ್ ಅವರನ್ನು ಪಕ್ಷದ ನಾಯಕರು ಮನವೊಲಿಕೆ ಮಾಡಲಿದ್ದಾರೆನ್ನಲಾಗುತ್ತಿತ್ತು. ಆದರೆ ಪರಿಸ್ಥಿತಿ ಕೈ ಮೀರಿ ಹೋಗಿದೆ. ಮಾತ್ರವಲ್ಲದೆ ಹಣ ಕೊಟ್ಟು ಬಂಡಾಯವನ್ನು ಶಮನ ಮಾಡಲಾಗಿದೆ ಎಂದು ಕ್ಷೇತ್ರದಲ್ಲಿ ಹರಿದಾಡಿದ ಮಾತು ಎಸ್‌ಎಂಕೆ ಕುಟುಂಬದ ಮನಸ್ಸಿಗೆ ಘಾಸಿ ಮಾಡಿದೆ. ಮಾತ್ರವಲ್ಲದೆ ಪಕ್ಷ ಸಂಘಟನೆ ಮಾಡಿದವರನ್ನು ಬಿಟ್ಟು ಕದಲೂರು ಉದಯ್‌ಗೆ ಅವಕಾಶ ನೀಡಲಾಗಿದೆ ಎನ್ನುವುದು ಕೂಡ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಎಲ್ಲ ಕಾರಣದಿಂದ ಬೇಸತ್ತಿರುವ ಗುರುಚರಣ್ ಸುಧೀರ್ಘ ಅವಧಿಯಿಂದ ಕಾಂಗ್ರೆಸ್‌ನೊಂದಿಗಿದ್ದ ನಂಟನ್ನು ಕಳಚಿ ಜೆಡಿಎಸ್ ಸೇರಲು ಸಜ್ಜಾಗಿದ್ದಾರೆ. ಈ ನಡುವೆ ಬುಧವಾರ ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ, ಗುರುಚರಣ್ ಅವರನ್ನು ಭೇಟಿ ಮಾಡಿ ಮನವೊಲಿಕೆ ಯತ್ನ ನಡೆಸಿದ್ದಾರೆ.
    ಇನ್ನು ಗುರುವಾರ(ಏ.20)ರಂದು ಮದ್ದೂರು ತಾಲೂಕು ಸೋಮನಹಳ್ಳಿಯಲ್ಲಿರುವ ನಿವಾಸಕ್ಕೆ ಬೆಳಗ್ಗೆ 8.30ಕ್ಕೆ ಎಚ್.ಡಿ.ಕುಮಾರಸ್ವಾಮಿ ಅವರು ಆಗಮಿಸಲಿದ್ದಾರೆ. ಈ ವೇಳೆ ಗುರುಚರಣ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗುತ್ತಿದ್ದು, ಸ್ಥಳೀಯ ಶಾಸಕ ಡಿ.ಸಿ.ತಮ್ಮಣ್ಣ ಉಪಸ್ಥಿತರಿರಲಿದ್ದಾರೆನ್ನುವ ಮಾಹಿತಿ ಹರಿದಾಡುತ್ತಿದ್ದು, ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರುತ್ತಾರೆಯೇ ಎನ್ನುವ ಕುತೂಹಲಕ್ಕೆ ತೆರೆಬೀಳಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts