More

    ಭವ ಭಯ ನಿವಾರಕ ಕುಂದೂರಿನ ಆಂಜನೇಯ

    ಶ್ರೀನಿವಾಸ್ ಟಿ. ಹೊನ್ನಾಳಿ: ಭವ ಭಯ ನಿವಾರಕನಾಗಿ ನೆಲೆ ನಿಂತಿರುವ ಹೊನ್ನಾಳಿ ತಾಲೂಕು ಕುಂದೂರಿನ ಶ್ರೀ ಆಂಜನೆಯ ಸ್ವಾಮಿ ಬೇಡಿದ ವರ ಕೊಡುವ ಭಕ್ತರ ಇಷ್ಟದೈವ. ಕುಂದೂರು ಗ್ರಾಮವು ಸಹ್ಯಾದ್ರಿ ಪರ್ವತಗಳ ಸಾಲಿನಲ್ಲಿದೆ. ಏಳು ಗುಡ್ಡಗಳು ಗ್ರಾಮದ ರಕ್ಷಣೆಗೆ ನಿಂತಿರುವಂತಿವೆ. ಇಲ್ಲಿ ಋಷಿ ಮುನಿಗಳು ತಪಸ್ಸು ಮಾಡಿ ಭಗವಂತನ ದರ್ಶನ ಪಡೆದಿದ್ದಾರೆಂಬ ಪ್ರತೀತಿ ಇದೆ.

    ವಿಜಯನಗರ ಸಾಮ್ರಾಜ್ಯದ ಶ್ರೀ ಕೃಷ್ಣದೇವರಾಯನ ಆಸ್ಥಾನದಲ್ಲಿದ್ದ ವ್ಯಾಸರಾಯರಿಗೆ ಒಮ್ಮೆ ಕನಸಿನಲ್ಲಿ ಆಂಜನೇಯ ಸ್ವಾಮಿ ಕಾಣಿಸಿಕೊಂಡು ಭಕ್ತರ ಇಷ್ಟಾರ್ಥ ಪೂರೈಸಲು ನಾನು ಇಲ್ಲಿಯೇ ನೆಲೆಸುತ್ತೇನೆ ಎಂದು ನುಡಿದನಂತೆ. ಇದನ್ನು ಪೂರೈಸಲು ವ್ಯಾಸರಾಯರು ಬೆಟ್ಟದ ತುದಿಯ ವೈರ ದೇವರ ದೇಗುಲ ಬಳಿ ಆಂಜನೇಯನ ಮೂರ್ತಿ ಪ್ರತಿಷ್ಠಾಪಿಸಿದರೆಂದು ಶಾಸನದಲ್ಲಿ ಉಲ್ಲೇಖವಿದೆ. ಸ್ವಾಮಿ ಬಲಗಡೆ ಹೂ ಕೊಟ್ಟ ನಂತರವೇ ಭಕ್ತರು ಶುಭ ಕಾರ್ಯಗಳನ್ನು ಮಾಡುತ್ತಾರೆ. ಭಕ್ತರ ಸಹಕಾರದಿಂದ ಇತ್ತೀಚೆಗೆ 100 ಅಡಿ ಎತ್ತರದ ಗೋಪುರದ ಮಹಾದ್ವಾರ ನಿರ್ಮಿಸಲಾಗಿದೆ.

    ವಿಶೇಷ ಮುಳ್ಳೋತ್ಸವ: ಪ್ರತಿವರ್ಷ ಶ್ರೀ ಸ್ವಾಮಿ ಮುಳ್ಳೋತ್ಸವ ನಡೆಯುತ್ತದೆ. ದೇವಾಲಯದ ಪಕ್ಕದ ಅಗಸೆ ಬಾಗಿಲಿಗೆ ಹೊಂದಿಕೊಂಡ ಸ್ಥಳದಲ್ಲಿ ಕಾರಿಗಿಡದ ಎತ್ತರದ ಮುಳ್ಳಿನ ಗದ್ದುಗೆ ಸಿದ್ಧಪಡಿಸಿ ಅದಕ್ಕೆ ಪೂಜೆ ಮಾಡುತ್ತಾರೆ. ದಾಸಪ್ಪನವರು ಮುಳ್ಳುಗದ್ದುಗೆ ಏರಿ ಮುಳ್ಳೋತ್ಸವಕ್ಕೆ ಚಾಲನೆ ನೀಡುತ್ತಾರೆ. ಭಕ್ತರು ನಮಿಸಿ ಮುಳ್ಳಿನ ಗದ್ದುಗೆ ಏರಿ ಹರಕೆ ಸಲ್ಲಿಸುತ್ತಾರೆ. ದೇವರು ಪಲ್ಲಕ್ಕಿ ಏರಿದ ನಂತರ ಕಾರ್ಣಿಕ ನುಡಿಯುವ ದಾಸಪ್ಪನವರ ದೈವವಾಣಿ ಮೊಳಗುತ್ತದೆ.

    ಇಂದು ಮುಳ್ಳೋತ್ಸವ, ಕಾರ್ಣಿಕ: ಶುಕ್ರವಾರ ಮುಳ್ಳೋತ್ಸವ, ಕಾರ್ಣಿಕ ನಡೆಯಲಿದೆ. ಶನಿವಾರ ಓಕುಳಿ ಇದೆ ಎಂದು ದೇಗುಲ ಸಮಿತಿ ಅಧ್ಯಕ್ಷ ಸಿ.ಕೆ. ಶೇಖರಪ್ಪ ತಿಳಿಸಿದ್ದಾರೆ.

    ಆಂಜನೇಯ ಸ್ವಾಮಿ ಬೇಡಿ ಬಂದ ಭಕ್ತರಿಗೆ ಸಕಲವನ್ನೂ ಕರುಣಿಸುವ ದೈವ. ಕುಂದೂರಿನಲ್ಲಿ ನೆಲೆ ನಿಂತು ಎಲ್ಲರನ್ನು ಕಾಯುತ್ತಿದ್ದಾನೆ. ಮಕ್ಕಳ ಮದುವೆ ಮತ್ತಿತರ ಶುಭ ಕಾರ್ಯಗಳಿಗೆ ಸ್ವಾಮಿಯ ಅಪ್ಪಣೆ ಪಡದೇ ಮುಂದುವರಿಯುತ್ತಾರೆ.
    l ಸಿ.ಕೆ. ಶೇಖರಪ್ಪ ದೇವಾಲಯ ಸಮಿತಿ ಅಧ್ಯಕ್ಷ, ಕುಂದೂರು.
    ಮಧ್ಯ ಕರ್ನಾಟಕದ ಐದಾರು ಜಿಲ್ಲೆಗಳಿಂದ ಸಾಗರೋಪಾದಿಯಲ್ಲಿ ಭಕ್ತ ರು ಬಂದು ಇಷ್ಟಾರ್ಥ ಈಡೇರಿಸುವಂತೆ ಹರಕೆ ಮಾಡಿಕೊಳ್ಳುತ್ತಾರೆ. ಅವು ಈಡೇರಿದ ಮೇಲೆ ಅಷ್ಟೇ ಭಕ್ತಿಯಿಂದ ಹರಕೆ ತೀರಿಸುತ್ತಾರೆ.
    l ಶ್ರೀನಿವಾಸ್, ಪ್ರಧಾನ ಅರ್ಚಕ, ಕುಂದೂರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts