More

    ಕಚೇರಿಯಲ್ಲೇ ಕತ್ತು ಸೀಳಿ ಫೈನಾನ್ಶಿಯರ್ ಹತ್ಯೆ, ಪಾಲುದಾರನಿಂದ ಕೃತ್ಯ ಶಂಕೆ

    ಕುಂದಾಪುರ: ಕಾಳಾವರ ಗ್ರಾಮದ ಸಳ್ವಾಡಿಯಲ್ಲಿ ಫೈನಾನ್ಶಿಯರ್ ಓರ್ವರನ್ನು ಶುಕ್ರವಾರ ತಡರಾತ್ರಿ ಕಚೇರಿ ಒಳಗೆ ಕತ್ತು ಸೀಳಿ ಹತ್ಯೆ ಮಾಡಲಾಗಿದೆ.
    ಸಳ್ವಾಡಿ ಕಾಂಪ್ಲೆಕ್ಸ್‌ನಲ್ಲಿ ಫೈನಾನ್ಸ್ ಸಂಸ್ಥೆ ನಡೆಸುತ್ತಿರುವ ಯಡಾಡಿ ಮತ್ಯಾಡಿ ಕೂಡಲ್ ನಿವಾಸಿ ಅಜೇಂದ್ರ ಶೆಟ್ಟಿ(33) ಕೊಲೆಯಾದವರು. ಸಂಸ್ಥೆ ಪಾಲುದಾರ ಅನುಪ್ ಶೆಟ್ಟಿ ಈ ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ. 2017ರಿಂದ ಅಜೇಂದ್ರ ಶೆಟ್ಟಿ ಹಾಗೂ ಮೊಳಹಳ್ಳಿ ಮೂಲದ ಅನುಪ್ ಶೆಟ್ಟಿ ಸಳ್ವಾಡಿಯಲ್ಲಿ ಪಾಲುದಾರಿಕೆಯಲ್ಲಿ ಫೈನಾನ್ಸ್ ನಡೆಸುತ್ತಿದ್ದರು.

    ಪ್ರತಿನಿತ್ಯ ರಾತ್ರಿ 9ರ ಒಳಗೆ ಮನೆ ಸೇರುತ್ತಿದ್ದ ಅಜೇಂದ್ರ, ಶುಕ್ರವಾರ ತಡರಾತ್ರಿಯಾದರೂ ಬಾರದ್ದರಿಂದ ಮನೆಯವರು ಹಾಗೂ ಸ್ನೇಹಿತರು ಹುಡುಕಾಟ ನಡೆಸಿದ್ದಾರೆ. ಕಾಳಾವರದ ಫೈನಾನ್ಸ್ ಕಚೇರಿಗೆ ಬಂದಾಗ ಎದುರಿನ ಶಟರ್ ಮುಚ್ಚಿದ್ದು ಬೀಗ ಹಾಕಿರಲಿಲ್ಲ. ಅನುಮಾನಗೊಂಡು ಶಟರ್ ತೆರೆದು ನೋಡಿದಾಗ ಕಚೇರಿಯಲ್ಲಿ ಅಜೇಂದ್ರ ಶೆಟ್ಟಿ ರಕ್ತದ ಮಡುವಿನಲ್ಲಿ ಕುಳಿತ ಭಂಗಿಯಲ್ಲಿ ಪತ್ತೆಯಾಗಿದ್ದರು. ತಕ್ಷಣ ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದು, ಪರೀಕ್ಷಿಸಿದ ವೈದ್ಯರು ಅಜೇಂದ್ರ ಶೆಟ್ಟಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಅಜೇಂದ್ರ ಕೆನ್ನೆ, ಕತ್ತು, ಕಾಲಿನ ಭಾಗದಲ್ಲಿ ಇರಿದ ಗಾಯಗಳಾಗಿದ್ದು, ಹರಿತ ಆಯುಧದಿಂದ ಕತ್ತು ಸೀಳಲಾಗಿದೆ.

    ಅಜೇಂದ್ರ ಅವಿವಾಹಿತರಾಗಿದ್ದು, ಹಿಂದೆ ಹೈದರಾಬಾದ್‌ನಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದರು. ನಾಲ್ಕು ವರ್ಷದ ಹಿಂದೆ ಊರಿಗೆ ಬಂದು ಕೋಟೇಶ್ವರದಲ್ಲಿ ಹೋಟೆಲ್ ನಡೆಸುತ್ತಿದ್ದರು. ನಂತರ ಫೈನಾನ್ಸ್ ಸಂಸ್ಥೆ ಆರಂಭಿಸಿದ್ದರು. ಅವರು ತಂದೆ, ತಾಯಿ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ.
    ಸ್ಥಳಕ್ಕೆ ಎಸ್ಪಿ ವಿಷ್ಣುವರ್ಧನ್, ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್, ಸಿಪಿಐ ಗೋಪಿಕೃಷ್ಣ, ಕಂಡ್ಲೂರು ಗ್ರಾಮಾಂತರ ಠಾಣೆ ಪಿಎಸ್‌ಐ ನಿರಂಜನ್ ಗೌಡ ಭೇಟಿ ನೀಡಿದ್ದಾರೆ. ಫೊರೆನ್ಸಿಕ್ ತಜ್ಞರ ತಂಡ ಪರಿಶೀಲನೆ ನಡೆಸಿದ್ದಾರೆ. ಕಂಡ್ಲೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಾಲುದಾರ ನಾಪತ್ತೆ
    ಅಜೇಂದ್ರ ಶೆಟ್ಟಿ ಹಾಗೂ ಅನುಪ್ ಶೆಟ್ಟಿ ಶುಕ್ರವಾರ ರಾತ್ರಿ ತನಕ ಕಚೇರಿಯಲ್ಲಿ ಒಟ್ಟಿಗೆ ಇದ್ದುದನ್ನು ಸ್ಥಳೀಯರು ಗಮನಿಸಿದ್ದಾರೆ. ಹಣಕಾಸು ವಿಚಾರದಲ್ಲಿ ಮನಸ್ತಾಪ ಏಪರ್ಟ್ಟು ಅನುಪ್ ಶೆಟ್ಟಿಯೇ ಈ ಕೊಲೆ ಮಾಡಿರಬಹುದೆಂದು ಸಂಶಯಿಸಲಾಗಿದೆ. ಕೊಲೆ ಪೂರ್ವನಿಯೋಜಿತವಾಗಿತ್ತೇ ಎನ್ನುವ ನಿಟ್ಟಿನಲ್ಲಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಹತ್ಯೆ ಬಳಿಕ ಅನೂಪ್ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ನಾಪತ್ತೆಯಾಗಿದ್ದಾನೆ. ಆತನ ಬುಲೆಟ್ ಫೈನಾನ್ಸ್ ಎದುರಲ್ಲೇ ಇದೆ. ಆದರೆ, ಅಜೇಂದ್ರ ಖರೀದಿಸಿದ ಹೊಸ ಕಾರು ನಾಪತ್ತೆಯಾಗಿದೆ. ಈ ಕಾರಿನಲ್ಲೇ ಆರೋಪಿ ಪರಾರಿಯಾಗಿರಬೇಕು ಎಂದು ಸಂಶಯಿಸಲಾಗಿದೆ.
    ಆರೋಪಿ ಬಂಧನ ?
    ಹತ್ಯೆ ಬಳಿಕ ಪರಾರಿಯಾಗಿರುವ ಆರೋಪಿ ಅನುಪ್ ಶೆಟ್ಟಿಯನ್ನು ಉತ್ತರಕನ್ನಡ ಬಳಿ ಬಂಧಿಸಲಾಗಿದೆ ಎಂದು ಹೇಳಲಾಗಿದೆ. ಆದರೆ ಪೊಲೀಸರು ಇದನ್ನು ದೃಢಪಡಿಸಿಲ್ಲ.

    ಹೊಸ ಕಾರು ಹತ್ಯೆಗೆ ಕಾರಣವಾಯ್ತ
    ಇತ್ತೀಚೆಗೆ ಅಜೇಂದ್ರ ಶೆಟ್ಟಿ ಹೊಸ ಕಾರು ಖರೀದಿಸಿದ್ದ. ಇದುವೇ ಅಸಮಾಧಾನಕ್ಕೆ ಕಾರಣವಾಗಿ ಹತ್ಯೆಗೆ ಕಾರಣವಾಯ್ತೇ ಎಂಬ ಸಂಶಯ ವ್ಯಕ್ತಗೊಂಡಿದ್ದು, ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದಾರೆ. ಈ ಹಿಂದೆ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿ ಅಜೇಂದ್ರ ಹಾಗೂ ಅನುಪ್ ಮಧ್ಯೆ ಗಲಾಟೆಯಾಗಿತ್ತು. ಹೊಸ ಕಾರು ಖರೀದಿ ಬಳಿಕ ಅನುಪ್ ಶೆಟ್ಟಿ ತಮ್ಮನ ಬಗ್ಗೆ ಮತ್ತಷ್ಟು ಅಸಮಾಧಾನಗೊಂಡಿದ್ದರು ಎಂದು ಮೃತನ ಸಹೋದರ ಮಹೇಂದ್ರ ಶೆಟ್ಟಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.







    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts