More

    ಅ.6ರಂದು ಮಹದೇಶ್ವರ ಜ್ಯೋತಿಯಾತ್ರೆಗೆ ಚಾಲನೆ: ಕುಂಭಮೇಳದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಎಸ್.ಅಶ್ವಥಿ ಮಾಹಿತಿ

    ಮಂಡ್ಯ: ಕೆ.ಆರ್.ಪೇಟೆ ತಾಲೂಕು ಅಂಬಿಗರಹಳ್ಳಿಯಲ್ಲಿ ನಡೆಯಲಿರುವ ಮಹಾಕುಂಭಮೇಳದ ಅಂಗವಾಗಿ ಅ.6ರಿಂದ ಮಲೈ ಮಹದೇಶ್ವರ ಬೆಟ್ಟದಿಂದ ಮಹದೇಶ್ವರ ಜ್ಯೋತಿ ಯಾತ್ರೆಗೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಅಶ್ವಥಿ ತಿಳಿಸಿದರು.
    ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕುಂಭಮೇಳದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೂರು ಮಾರ್ಗಗಳಲ್ಲಿ ಸಾಗುವ ಜ್ಯೋತಿಯಾತ್ರೆಯು ಚಾಮರಾಜನಗರ, ಮೈಸೂರು ಹಾಗೂ ಮಂಡ್ಯ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಸಂಚರಿಸಿ ಅ.13ರಂದು ಕೆ.ಆರ್.ಪೇಟೆಗೆ ತಲುಪಲಿದೆ. ಈ ಹಿನ್ನೆಲೆಯಲ್ಲಿ ಜ್ಯೋತಿ ಸಂಚರಿಸುವ ಸ್ಥಳಗಳ ಸ್ಥಳೀಯ ಶಾಸಕರು ಹಾಗೂ ಜನಪ್ರತಿನಿಧಿಗಳಿಗೆ ಜ್ಯೋತಿ ಸಂಚರಿಸುವ ದಿನ, ಸಮಯದ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
    ಅ.13ರಂದು ಮಧ್ಯಾಹ್ನ 2.30 ರಿಂದ ಕೆ.ಆರ್.ಪೇಟೆ ಪಟ್ಟಣದಲ್ಲಿ ಮೂಡುಬಿದರೆ ಆಳ್ವಾಸ್ ಸಂಸ್ಥೆಯ ಸಾಂಸ್ಕೃತಿಕ ಮತ್ತು ಜಾನಪದ ಕಲಾತಂಡಗಳೊಂದಿಗೆ 3 ಜ್ಯೋತಿಗಳ ಮೆರವಣಿಗೆ ಸಾಗಲಿದೆ. ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಜಿಲ್ಲೆಯ 3 ಸಾವಿರ ವಿದ್ಯಾರ್ಥಿಗಳನ್ನು ಸಿದ್ಧತೆ ಮಾಡಿಕೊಳ್ಳಿ. ಸಂಜೆ 6.30ಕ್ಕೆ ಆಳ್ವಾಸ್ ಸಂಸ್ಥೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಕುಂಭಮೇಳದ ಪುಣ್ಯಸ್ನಾನದಲ್ಲಿ ಸಾರ್ವಜನಿಕರು ಭಾಗವಹಿಸುವುದರಿಂದ ಸ್ಥಳವನ್ನು ಗುರುತಿಸಬೇಕು. ಸುರಕ್ಷತೆಗಾಗಿ ಅಗ್ನಿಶಾಮಕ ದಳ, ದೋಣಿಗಳು ಹಾಗೂ ಈಜುಗಾರರನ್ನು ನಿಯೋಜಿಸುವಂತೆ ತಿಳಿಸಿದರು.
    ಇದಲ್ಲದೆ ಮೂಲ ಸೌಕರ್ಯಗಳಾದ ರಸ್ತೆ, ಶೌಚಗೃಹ, ಕುಡಿಯುವ ನೀರು, ನೈರ್ಮಲ್ಯ, ತಂಗುದಾಣ, ವೈದ್ಯಕೀಯ ಸೇವೆ ಮತ್ತು ತುರ್ತುಚಿಕಿತ್ಸೆ, ವಿದ್ಯುತ್ ದೀಪಗಳು, ಮಾಹಿತಿ ಕೇಂದ್ರಗಳ ವ್ಯವಸ್ಥೆಗಳಲ್ಲಿ ಯಾವುದೇ ಕೊರತೆಯಾಗದಂತೆ ಸಿದ್ಧತೆ ಮಾಡಿಕೊಳ್ಳಿ. ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಇನ್ನಿತರ ಇಲಾಖೆಗಳು ವಿವಿಧ ವಸ್ತು ಪ್ರದರ್ಶನ ಮಳಿಗೆ ನಿರ್ಮಿಸಿ. ಮಳಿಗೆಗಳು ಆಕರ್ಷಣೀಯ ಹಾಗೂ ವಿನೂತನತೆಯಿಂದ ಕೂಡಿರಲಿ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಮಾತನಾಡಿ, ವಾಹನ ನಿಲುಗಡೆ ಸ್ಥಳಗಳಲ್ಲಿ ಸ್ವಚ್ಛತೆ, ಮಾರ್ಗಸೂಚಕ, ಸಿ.ಸಿ ಕ್ಯಾಮೆರಾ, ವಿದ್ಯುತ್ ದೀಪಗಳ ವ್ಯವಸ್ಥೆ, ವಿವಿಐಪಿ, ವಿಐಪಿಗಳಿಗೆ ಪ್ರತ್ಯೇಕ ವಾಹನ ನಿಲುಗಡೆ ವ್ಯವಸ್ಥೆ, ಹೆಲಿ ಟೂರಿಸಂಗೆ ಬೇಕಿರುವ ಎಲ್ಲ ಸುರಕ್ಷಾ ಕ್ರಮಗಳು ಕೈಗೊಳ್ಳಬೇಕು ಎಂದರು.
    ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಿಪಂ ಸಿಇಒ ಶಾಂತಾ ಎಲ್.ಹುಲ್ಮನಿ, ಉಪವಿಭಾಗಾಧಿಕಾರಿಗಳಾದ ಬಿ.ಸಿ.ಶಿವಾನಂದಮೂರ್ತಿ, ಆರ್.ಐಶ್ವರ್ಯಾ, ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕ ಸ್ವಾಮಿಗೌಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts