More

    ಕುಕ್ಕೆ ಸುಬ್ರಹ್ಮಣ್ಯ ಅಭಿವೃದ್ಧಿ ಸಮಿತಿ ಅಸ್ತಿತ್ವಕ್ಕೆ

    ಸುಬ್ರಹ್ಮಣ್ಯ: ರಾಜ್ಯದ ನಂ.1 ಶ್ರೀಮಂತ ದೇವಳ ಕುಕ್ಕೆ ಸುಬ್ರಹ್ಮಣ್ಯದ ಆಡಳಿತ ಅಭಿವೃದ್ಧಿ ಸಮಿತಿ ಅಥವಾ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ತರಬೇಕೇ ಎನ್ನುವ ವಿಚಾರಕ್ಕೆ ತೆರೆಬಿದ್ದಿದೆ. ರಾಜ್ಯ ಸರ್ಕಾರ ಧಾರ್ಮಿಕ ದತ್ತಿ ಇಲಾಖೆ ಮೂಲಕ ಕುಕ್ಕೆ ಸುಬ್ರಹ್ಮಣ್ಯಕ್ಕೆ ಅಭಿವೃದ್ಧಿ ಸಮಿತಿಯನ್ನು ಅಸ್ತಿತ್ವಕ್ಕೆ ತಂದಿದೆ.

    ಮೋಹನ್‌ರಾಮ್ ಸುಳ್ಳಿ, ಪಿ.ಜಿ.ಎಸ್.ಎನ್.ಪ್ರಸಾದ್, ಪ್ರಸನ್ನ ದರ್ಬೆ, ಕೃಷ್ಣ ಶೆಟ್ಟಿ ಕಡಬ, ವನಜಾ ವಿ. ಭಟ್ ಅಭಿವೃದ್ಧಿ ಸಮಿತಿ ಸದಸ್ಯರು. ಕಾರ್ಯದರ್ಶಿಯಾಗಿ ಕುಕ್ಕೆ ದೇವಳದ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್. ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಆದರೆ ಈ ಆದೇಶದಲ್ಲಿ ಶಾಸಕರ ಹೆಸರು ಇಲ್ಲದಿರುವುದರಿಂದ ಸದಸ್ಯರಾಗಿರುವ ಮೋಹನ್‌ರಾಮ್ ಸುಳ್ಳಿಯವರನ್ನು ಅಧ್ಯಕ್ಷರನ್ನಾಗಿ ನೇಮಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

    ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅವಧಿ ಮುಗಿದು ಒಂದು ವರ್ಷ ಪೂರ್ಣಗೊಂಡಿದ್ದು, ದೇಗುಲದಲ್ಲಿ ನೂತನ ಆಡಳಿತ ಸಮಿತಿ ನೇಮಕಾತಿ ವಿಚಾರ ಆಗಾಗ್ಗೆ ಪ್ರಸ್ತಾಪವಾಗುತ್ತಾದರೂ ಸರ್ಕಾರ ಮಾತ್ರ ಈ ಬಗ್ಗೆ ಸಮರ್ಪಕ ತೀರ್ಮಾನ ತೆಗೆದುಕೊಂಡಿರಲಿಲ್ಲ.
    ಸುಬ್ರಹ್ಮಣ್ಯ ಕ್ಷೇತ್ರವನ್ನು ಪ್ರಾಧಿಕಾರ ಮಾಡಬೇಕೆಂಬ ಚಿಂತನೆ ಬಗ್ಗೆ ಇಲಾಖೆ, ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಇದರ ಮುಂದುವರೆದ ಭಾಗವಾಗಿ ಸದ್ಯ ಪ್ರಾಧಿಕಾರ ರಚಿಸದೆ ಅಭಿವೃದ್ಧಿ ಸಮಿತಿ ರಚಿಸಲು ಸರ್ಕಾರ ನಿರ್ಧರಿಸಿತ್ತು.

    ದೇವಳದ ಆಡಳಿತ ನೋಡಿಕೊಳ್ಳುವ ದೃಷ್ಟಿಯಿಂದ ಇಲಾಖೆ ವತಿಯಿಂದ ಸಾರ್ವಜನಿಕವಾಗಿ ಅರ್ಜಿ ಕರೆದು, ಬಳಿಕ ಅವುಗಳ ಪರಿಶೀಲನೆ ನಡೆಸಿ, 8 ಮಂದಿ ಸದಸ್ಯರನ್ನು ಒಳಗೊಂಡ ವ್ಯವಸ್ಥಾಪನಾ ಸಮಿತಿ ರಚನೆಯಾಗುತ್ತಿತ್ತು. ಆ ಬಳಿಕ ಕ್ಷೇತ್ರದ ಅಭಿವೃದ್ಧಿ, ಚಟುವಟಿಕೆಗಳು ವ್ಯವಸ್ಥಾಪನಾ ಸಮಿತಿ ಸದಸ್ಯರ, ಸಮಿತಿಯ ನಿರ್ಣಯದಂತೆ ನಡೆಯುತ್ತದೆ. ಆದರೆ ಸರ್ಕಾರ ಈವರೆಗೆ ವ್ಯವಸ್ಥಾಪನಾ ಸಮಿತಿ ರಚನೆ ಬಗ್ಗೆ ಯಾವುದೇ ಸೂಚನೆ ನೀಡದಿರುವ ಹಿನ್ನೆಲೆ ಕ್ಷೇತ್ರದಲ್ಲಿ ಅಭಿವೃದ್ಧಿ ಸಮಿತಿ ಅಥವಾ ಅಭಿವೃದ್ಧಿ ಪ್ರಾಧಿಕಾರದ ರಚನೆಯಾಗುವುದು ಬಹುತೇಕ ಸ್ಪಷ್ಟವಾಗಿತ್ತು.

    ಸರ್ಕಾರ ಅಭಿವೃದ್ಧಿ ಪ್ರಾಧಿಕಾರ ರಚಿಸುತ್ತದೆ ಎಂದಾದಲ್ಲಿ ಪ್ರಾಧಿಕಾರ ರಚನೆ ಆಗುವಲ್ಲಿವರೆಗೆ ಸರ್ಕಾರ ಅಭಿವೃದ್ಧಿ ಸಮಿತಿ ರಚಿಸುತ್ತದೆ. ಇದರಲ್ಲಿ ಐವರು ಸದಸ್ಯರನ್ನು ಒಳಗೊಳ್ಳಲಿದ್ದು, ಪ್ರಾಧಿಕಾರ ರಚನೆ ಆಗುವಲ್ಲಿವರೆಗೆ ಕ್ಷೇತ್ರದ ಆಡಳಿತ, ಅಭಿವೃದ್ಧಿ ಕೆಲಸಗಳ ಬಗ್ಗೆ ಈ ಸಮಿತಿ ಜವಾಬ್ದಾರಿ ವಹಿಸಿಕೊಳ್ಳಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts