More

    ಮಳೆ ಬಂದರಷ್ಟೇ ಕಡಲೆ-ಬಿಳಿಜೋಳ, ಹಿಂಗಾರು ಮಾರುತಕ್ಕಾಗಿ ರೈತರ ಜಪ

    ಕುಕನೂರು: ಪ್ರಸಕ್ತ ವರ್ಷ ಮುಂಗಾರು ಸಂಪೂರ್ಣ ಕೈಕೊಟ್ಟಿದ್ದರಿಂದ ಬರ ಆವರಿಸಿದ್ದು, ಹಿಂಗಾರು ಮಳೆ ಇದುವರೆಗೂ ಸುರಿಯದ ಕಾರಣ ರೈತರು ಆಕಾಶದತ್ತ ಮುಖ ಮಾಡುವಂತಾಗಿದೆ.

    ಕುಕನೂರು-ಯಲಬುರ್ಗಾ ತಾಲೂಕಿನಲ್ಲಿ ಹಿಂಗಾರು ಹಂಗಾಮಿನಲ್ಲಿ ಎರಿ (ಕಪ್ಪು) ಜಮೀನಿನಲ್ಲಿ ಕಡಲೆ, ಬಿಳಿಜೋಳ, ಗೋಧಿ ಬೆಳೆಯಲಾಗುತ್ತದೆ. ಈಗಾಗಲೆ ಕಡಲೆ, ಬಿಳಿಜೋಳ ಬಿತ್ತನೆ ಮಾಡಿದ್ದಾರೆ. ಆದರೆ ಹಿಂಗಾರಿನ ಚಿತ್ತ, ಸ್ವಾತಿ ಮಳೆ ಬಂದಿಲ್ಲ. ಇನ್ನೂ ವಿಶಾಖ ಮಳೆ ಮಾತ್ರ ಉಳಿದೆ. ಕೆಲವರು ಮಳೆ ಬಂದ ನಂತರ ಬಿತ್ತನೆ ಮಾಡುವ ಉದ್ದೇಶ ಹೊಂದಿದ್ದು, ರೈತರ ನಿರೀಕ್ಷೆ ಮೇಲೆ ಬರೆ ಹಾಕಿದಂತಾಗಿದೆ.

    ಈಗಾಗಲೇ ಬಿತ್ತನೆಯಾದ ಕಡಲೆ, ಬಿಳಿಜೋಳ ಬೆಳೆ ಉತ್ತಮವಾಗಿದ್ದು, ಮಳೆಯಾದರೆ ಮಾತ್ರ ರೈತರ ಕೈ ಸೇರುತ್ತದೆ. ಇದೇ ರೀತಿ ಮಳೆ ಕೊರತೆ ಉಂಟಾದಲ್ಲಿ ಮುಂಗಾರಿನ ಬರವೇ ಮುಂದುವರಿಯುತ್ತದೆ. ಅವಳಿ ತಾಲೂಕಿನಲ್ಲಿ ಹಿಂಗಾರು ಹಂಗಾಮಿನಲ್ಲಿ ಬೆಳೆಯುವ ಪ್ರದೇಶ ಹೆಚ್ಚಾಗಿದ್ದು, ಮುಂಗಾರು ಕೈ ಕೊಟ್ಟರೆ ಹಿಂಗಾರು ಬೆಳೆ ಪಡೆಯಬಹುದು ಎಂಬ ನಂಬಿಕೆ ರೈತ ಸಮುದಾಯ ಹೊಂದಿದೆ. ಆದರೆ, ಮಳೆಯಾಗುವ ವಾತಾವರಣ ಕಾಣುತ್ತ್ತಿಲ್ಲ. ಇದರಿಂದ ಬಿತ್ತನೆ ಮಾಡಿದ ರೈತರಲ್ಲಿ ಆತಂಕ ಸೃಷ್ಟಿಯಾಗಿದೆ.

    ಎಲ್ಲೆಲ್ಲಿ ಎಷ್ಟು ಬಿತ್ತನೆ

    ಯಲಬುರ್ಗಾ ತಾಲೂಕಿನಲ್ಲಿ ಕಡಲೆ 20,000 ಹೆಕ್ಟೇರ್ ಗುರಿ ನಿಗದಿಯಾಗಿದ್ದು, 14,610 ಹೆ. ಬಿತ್ತನೆಯಾಗಿದೆ. ಬಿಳಿಜೋಳ 3,400 ಹೆ. ಗುರಿಯಲ್ಲಿ 2,190 ಸಾಧನೆಯಾಗಿದೆ. ಗೋಧಿ 793 ಹೆ. ಗುರಿಯಲ್ಲಿ 250 ಹೆ. ಬಿತ್ತನೆಯಾಗಿದೆ. ಕುಕನೂರು ತಾಲೂಕಿನ ಕಡಲೆ 30,000 ಹೆಕ್ಟೇರ್ ಗುರಿಯಲ್ಲಿ 25,310 ಹೆ. ಸಾಧನೆಯಾಗಿದೆ. ಬಿಳಿಜೋಳ 4,000 ಹೆ. ಗುರಿಯಲ್ಲಿ 3710 ಹೆ, ಗೋಧಿ 1,200 ಹೆ. ಗುರಿಯಲ್ಲಿ 490 ಹೆಕ್ಟೇರ್ ಬಿತ್ತನೆಯಾಗಿದೆ.

    ಹಿಂಗಾರು ಹಂಗಾಮಿನ ಕಡಲೆ, ಬಿಳಿಜೋಳ ಬೆಳೆ ಉತ್ತಮವಾಗಿದ್ದು, ಮಳೆ ಬಂದರೆ ಹೆಚ್ಚು ಇಳುವರಿ ಪಡೆಯಬಹುದು.
    ಬಸವರಾಜ ತೇರಿನ್, ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ ಕುಕನೂರು

    ಕಡಲೆ, ಬಿಳಿಜೋಳ ಬಿತ್ತನೆ ಮಾಡಿದ್ದು, ಹಿಂಗಾರಿನ ಮಳೆ ಕೂಡ ಇದುವರೆಗೂ ಬಂದಿಲ್ಲ. ಆದರೂ ಮಳೆ ನಿರೀಕ್ಷೆಯಿಂದ ಬಿತ್ತನೆ ಮಾಡಲಾಗಿದೆ. ಮಳೆ ಬಂದರೆ ಮಾತ್ರ ಬೆಳೆ ಕೈ ಸೆರುತ್ತದೆ.
    ಅಂದಪ್ಪ ಕೋಳೂರು ರೈತ, ಯರೇಹಂಚಿನಾಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts