More

    ಕುಡಿಬೈಲು ರಸ್ತೆ ಸಂಚಾರ ದುಸ್ತರ, ಪ್ರತಿ ಮಳೆಗಾಲದಲ್ಲೂ ಕೆಸರುಮಯ ಶಾಶ್ವತ ಪರಿಹಾರಕ್ಕೆ ಗ್ರಾಮಸ್ಥರ ಆಗ್ರಹ

    ಕೊಕ್ಕರ್ಣೆ: ಹೆಬ್ರಿ ತಾಲೂಕು ವ್ಯಾಪ್ತಿಯ ಕುಚ್ಚೂರು ಗ್ರಾಮದ ಕುಡಿಬೈಲು ಗ್ರಾಮೀಣ ರಸ್ತೆ ಇದುವರೆಗೆ ಡಾಂಬರು ಕಾಣದೆ ಸಂಪೂರ್ಣ ಹದಗೆಟ್ಟಿದ್ದು, ಸಂಚಾರಕ್ಕೆ ಸಮಸ್ಯೆಯಾಗಿದೆ. ಕುಚ್ಚೂರಿನಿಂದ ಸೊಳ್ಳೆಕಟ್ಟೆಗೆ ಸಂಪರ್ಕ ಕಲ್ಪಿಸುವ 2 ಕಿ.ಮೀ. ರಸ್ತೆ ಇದುವರೆಗೆ ಡಾಂಬರು ಕಂಡಿಲ್ಲ.

    ಈ ಭಾಗದಲ್ಲಿ ಹಲವಾರು ಮನೆಗಳಿವೆ. ಸ್ಥಳೀಯಾಡಳಿತ ರಸ್ತೆ ಗುಂಡಿಗಳಿಗೆ ಕೇವಲ ಮಣ್ಣು ಹಾಕಿ ತೇಪೆ ಹಚ್ಚುತ್ತದೆ. ಆದರೆ ಮಳೆಗಾಲದಲ್ಲಿ ನೀರು ರಸ್ತೆಯಲ್ಲಿ ಹರಿದು ಮಣ್ಣು ಸಂಪೂರ್ಣ ಕೊಚ್ಚಿ ಹೋಗಿ ಕೆಸರು ಗದ್ದೆಯಾಗುತ್ತದೆ. ಈ ರಸ್ತೆ ಗುಂಡಿಗಳಿಂದ ಅನೇಕ ಅಪಘಾತಗಳಾಗಿವೆ. ಈ ಬಗ್ಗೆ ಸ್ಥಳೀಯರು ಹಾಗೂ ಕುಚ್ಚೂರು ಕುಡಿಬೈಲು ಶಾಂತಿನಿಕೇತನ ತಂಡದ ಸದಸ್ಯರು ಶ್ರಮದಾನ ಮಾಡುವ ಮೂಲಕ ರಸ್ತೆಗೆ ಕಾಯಕಲ್ಪ ನೀಡಲು ಮುಂದಾಗಿದ್ದಾರೆ.

    ಪ್ರತಿ ಮಳೆಗಾಲದಲ್ಲಿ ಇಲ್ಲಿನ ರಸ್ತೆಗಳು ಕೆಸರುಮಯವಾಗುತ್ತದೆ. ಈ ರಸ್ತೆಗೆ ಡಾಂಬರು ಹಾಕುವ ಮೂಲಕ ಶಾಶ್ವತವಾದ ಪರಿಹಾರ ಕಲ್ಪಿಸಲು ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಪಂದಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ಈ ಪರಿಸರದಲ್ಲಿ 500ಕ್ಕೂ ಹೆಚ್ಚು ನಿವಾಸಿಗಳು ವಾಸಿಸುತ್ತಿದ್ದಾರೆ. ಪ್ರತಿನಿತ್ಯ ವಿದ್ಯಾರ್ಥಿಗಳು, ಕಾರ್ಮಿಕರು, ಕೂಲಿ ಕೆಲಸಕ್ಕೆ ಹೋಗುವವರು ಇದೇ ಮಾರ್ಗವಾಗಿ ಸಂಚರಿಸುತ್ತಾರೆ. ಶೀಘ್ರದಲ್ಲೇ ಸಂಬಂಧಪಟ್ಟವರು ಡಾಂಬರು ರಸ್ತೆ ನಿರ್ಮಿಸಬೇಕು.
    – ರಾಜೇಶ್, ಅಧ್ಯಕ್ಷರು ಶಾಂತಿನಿಕೇತನ ಯುವ ವೃಂದ ಕುಚ್ಚೂರು ಕುಡಿಬೈಲು

    ಕುಚ್ಚೂರು ಕುಡಿಬೈಲು ಮತ್ತು ಸೊಳ್ಳೆಕಟ್ಟು ಸಂಪರ್ಕಿಸುವ ರಸ್ತೆ 500 ಮೀಟರ್ ಕಾಂಕ್ರೀಟ್ ಕಾಮಗಾರಿ ನಡೆದಿದೆ. ಪಿಆರ್‌ಡಿ ಯೋಜನೆಯಿಂದ 1.15 ಕೋಟಿ ರೂ. ಮಂಜೂರುಗೊಂಡಿದ್ದು, ಕರೊನಾ ಹಿನ್ನೆಲೆಯಲ್ಲಿ ಕಾಮಗಾರಿ ನಡೆಸಲು ಸಾಧ್ಯವಾಗಿಲ್ಲ. ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಗೊಳ್ಳಲಿದ್ದು, ಸಮಸ್ಯೆ ಬಗೆಹರಿಯಲಿದೆ.
    – ರಾಜೇಂದ್ರ, ಕುಚ್ಚೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts