More

    ವಿಜಯ್ ಹಜಾರೆ ಟ್ರೋಫಿ; ಕಡೇ ಪಂದ್ಯದಲ್ಲಿ ಸೋತರೂ ನಾಕೌಟ್ ಹಂತಕ್ಕೇರಿದ ಕರ್ನಾಟಕ

    ತಿರುವನಂತಪುರ: ನಾಲ್ಕು ಬಾರಿಯ ಚಾಂಪಿಯನ್ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ದೇಶೀಯ ಏಕದಿನ ಕ್ರಿಕೆಟ್ ಟೂರ್ನಿಯ ಲೀಗ್ ಹಂತದ ತನ್ನ 5ನೇ ಹಾಗೂ ಕಡೇ ಪಂದ್ಯದಲ್ಲಿ ಬಂಗಾಳ ಎದುರು ಸೋಲನುಭವಿಸಿದರೂ ನಾಕೌಟ್ ಹಂತಕ್ಕೇರುವಲ್ಲಿ ಯಶಸ್ವಿಯಾಗಿದೆ. ಮಂಗಳವಾರ ನಡೆದ ಪಂದ್ಯದಲ್ಲಿ ಮನೀಷ್ ಪಾಂಡೆ ಬಳಗ ಬಂಗಾಳ ತಂಡಕ್ಕೆ 4 ವಿಕೆಟ್‌ಗಳಿಂದ ಶರಣಾಯಿತು. ಈ ಸೋಲಿನೊಂದಿಗೆ ಕರ್ನಾಟಕ ತಂಡ ಎಲೈಟ್ ಬಿ ಗುಂಪಿನಿಂದ ಅಗ್ರಸ್ಥಾನಿಯಾಗಿ ನೇರ ಕ್ವಾರ್ಟರ್ ಫೈನಲ್ ಪ್ರವೇಶಿಸಲು ವಿಫಲವಾಯಿತು. 2ನೇ ಸ್ಥಾನದಲ್ಲೇ ಉಳಿದ ಕರ್ನಾಟಕ ತಂಡ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಆಡಲಿದೆ. ಸತತ ಎರಡು ಸೋಲಿನ ನಡುವೆಯೂ ಉತ್ತಮ ರನ್‌ರೇಟ್ ಹೊಂದಿದ್ದ ತಮಿಳುನಾಡು ಅಗ್ರಸ್ಥಾನದೊಂದಿಗೆ ಎಂಟರ ಘಟ್ಟಕ್ಕೇರಿತು. ಡಿಸೆಂಬರ್ 19 ರಂದು ಜೈಪುರದಲ್ಲಿ ನಡೆಯಲಿರುವ ಪ್ರೀ ಕ್ವಾರ್ಟರ್ ಫೈನಲ್ ನಲ್ಲಿ ಕರ್ನಾಟಕ ತಂಡ ರಾಜಸ್ಥಾನ ತಂಡವನ್ನು ಎದುರಿಸಲಿದೆ.

    ಸೇಂಟ್ ಜೇವಿಯರ್ ಕೆಸಿಎ ಕ್ರಿಕೆಟ್ ಮೈದಾನದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ, ನಾಯಕ ಮನೀಷ್ ಪಾಂಡೆ (90 ರನ್, 85 ಎಸೆತ, 4 ಬೌಂಡರಿ, 4 ಸಿಕ್ಸರ್) ಏಕಾಂಗಿ ಹೋರಾಟದ ಫಲವಾಗಿ 8 ವಿಕೆಟ್‌ಗೆ 252 ರನ್ ಪೇರಿಸಿತು. ಪ್ರತಿಯಾಗಿ ಬಂಗಾಳ ತಂಡ, ಸುದೀಪ್ ಚಟರ್ಜಿ (63 ರನ್, 56 ಎಸೆತ, 6 ಬೌಂಡರಿ, 1 ಸಿಕ್ಸರ್) ಹಾಗೂ ರಿತ್ವಿಕ್ ರಾಯ್ ಚೌಧರಿ (49 ರನ್, 62 ಎಸೆತ, 4 ಬೌಂಡರಿ) ಸಮಯೋಚಿತ ಬ್ಯಾಟಿಂಗ್‌ನಿಂದ 48.3 ಓವರ್‌ಗಳಲ್ಲಿ 6 ವಿಕೆಟ್‌ಗೆ 253 ರನ್‌ಗಳಿಸಿ ಜಯದ ಬಗೆ ಬೀರಿತು.

    ಕರ್ನಾಟಕ: 8 ವಿಕೆಟ್‌ಗೆ 252 (ಸಮರ್ಥ್.ಆರ್ 17, ರೋಹನ್ ಕದಂ 37, ಮನೀಷ್ ಪಾಂಡೆ 90, ಕರುಣ್ ನಾಯರ್ 25, ಪ್ರವೀಣ್ ದುಬೆ 37*, ಪ್ರದೀಪ್ತಾ ಪ್ರಾಮಾಣಿಕ್ 48ಕ್ಕೆ 4, ವೃತ್ತಿಕ್ ಬಿಜೋಯ್ 51ಕ್ಕೆ 2), ಬಂಗಾಳ: 48.3 ಓವರ್‌ಗಳಲ್ಲಿ 6 ವಿಕೆಟ್‌ಗೆ 253 (ಅಭಿಶೇಕ್ ದಾಸ್ 58, ಸುದೀಪ್ ಚಟರ್ಜಿ 63, ರಿತ್ವಿಕ್ ರಾಯ್ ಚೌಧರಿ 49, ಶಹಬಾಜ್ 26*, ಪ್ರತೀಕ್ ಜೈನ್ 56ಕ್ಕೆ 3, ಸುಚಿತ್ 43ಕ್ಕೆ 1, ಕೆಸಿ ಕಾರ್ಯಪ್ಪ 42ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts