More

    ‘ಲೋಪ’ಸೇವಾ ಆಯೋಗಕ್ಕೆ ಬೇಕು ಸರ್ಜರಿ: ಹೊಂದಾಣಿಕೆ ಆಡಳಿತದಿಂದ ಕೆಪಿಎಸ್​ಸಿಗೆ ಅಪಖ್ಯಾತಿ 

    | ಶ್ರೀಕಾಂತ ಶೇಷಾದ್ರಿ ಬೆಂಗಳೂರು

    ಪ್ರಥಮ ದರ್ಜೆ ಸಹಾಯಕ (ಎಫ್​ಡಿಎ) ಪರೀಕ್ಷೆ ಪ್ರಶ್ನೆಪತ್ರಿಕೆ ಬಹಿರಂಗವಾದ ಬೆನ್ನಲ್ಲೇ, ಕರ್ನಾಟಕ ಲೋಕಸೇವಾ ಆಯೋಗ ‘ಲೋಪ’ ಸೇವಾ ಆಯೋಗ ಎಂಬ ಅಪಖ್ಯಾತಿಗೆ ಗುರಿಯಾಗುವ ಸಂದರ್ಭವನ್ನು ಮತ್ತೊಮ್ಮೆ ಸೃಷ್ಟಿಸಿಕೊಂಡಿದೆ.

    ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಜವಾಬ್ದಾರಿ ಈಗ ಮುಖ್ಯಮಂತ್ರಿ ಹಾಗೂ ಮುಖ್ಯಕಾರ್ಯದರ್ಶಿ ವ್ಯಾಪ್ತಿಯಲ್ಲಿರುವ ಕಾರಣ ಲೋಕಸೇವಾ ಆಯೋಗವು ಮಾದರಿ ಎನಿಸಿಕೊಳ್ಳಬೇಕಿತ್ತು. ಆದರೆ, ಸ್ವಜನ ಪಕ್ಷಪಾತ, ಸ್ವಜಾತಿ ಪ್ರೇಮ, ಸ್ವ ಹಿತಾಸಕ್ತಿ, ರಾಜಕೀಯ ಹಸ್ತಕ್ಷೇಪವೇ ಇಲ್ಲಿ ಹೆಚ್ಚಾಗಿದೆ. ನಂಬಿಕೆ ವಿಶ್ವಾಸವನ್ನು ಪಾತಾಳ ಗರಡಿ ಹಾಕಿ ಹುಡುಕಿದರೂ ಸಿಗದ ಪರಿಸ್ಥಿತಿ ಈಗಿದೆ. ಪ್ರಶ್ನೆಪತ್ರಿಕೆ ಬಹಿರಂಗ ಇನ್ನಿತರ ಪ್ರಕರಣ ನಡೆದ ಬಳಿಕ ಒಂದೆರಡು ತಿಂಗಳು ಚರ್ಚೆಯಾಗುತ್ತದೆ. ಬಳಿಕ ಆಯೋಗ ಹಳೆಯ ಹಾದಿಯಲ್ಲಿ ನಡೆದುಬಿಡುತ್ತದೆ. ಇದಕ್ಕೆ ಕಳೆದೊಂದು ವರ್ಷದ ಉದಾಹರಣೆ ಎದುರಿಗಿದೆ.

    ಕೆಎಎಸ್ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲು ಮೂರು ಪರೀಕ್ಷೆಗಳು 2011, 2014-15 ಮತ್ತು 2017ರಲ್ಲಿ ನಡೆದಿವೆ. 2011ರ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಪರೀಕ್ಷೆಯನ್ನೇ ನ್ಯಾಯಾಲಯ ರದ್ದುಪಡಿಸಿತು. 2014-15ರ ಡಿಜಿಟಲ್ ಮೌಲ್ಯಮಾಪನ ಇನ್ನೂ ವಿವಾದವಾಗಿ ಕುಳಿತಿದೆ. 2017ರ ಪರೀಕ್ಷೆ ಪ್ರಕ್ರಿಯೆ ಇನ್ನೂ ತೆವಳುತ್ತಾ ಸಾಗುತ್ತಿದೆ. ಮುಖ್ಯ ಪರೀಕ್ಷೆ ದಿನಾಂಕ ಕೂಡ ಪ್ರಕಟಿಸಿಲ್ಲ. ವಿವಿಧ ಇಲಾಖೆಯ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಬಹಿರಂಗವಾಗಿದ್ದಿದೆ. ಪರೀಕ್ಷೆ ಯಾವುದೋ ಪ್ರಶ್ನೆಪತ್ರಿಕೆ ವಿತರಣೆ ಇನ್ಯಾವುದೊ ಆದ ಉದಾಹರಣೆಗಳು ನಡೆದಿದೆ. ಐಎಎಸ್ ಅಧಿಕಾರಿ ಸುಭೋದ್ ಯಾದವ್ ಆಯೋಗದ ಕಾರ್ಯದರ್ಶಿಯಾಗಿ ಒಂದಷ್ಟು ಮಾರ್ಪಾಡಿಗೆ ಪ್ರಯತ್ನಿಸಿದ್ದು ಬಿಟ್ಟರೆ ಮತ್ತೆಲ್ಲ ಕಾಲಕ್ಕೂ ‘ಹೊಂದಾಣಿಕೆ’ ಆಡಳಿತ ನಡೆದಿದ್ದೇ ಹೆಚ್ಚು.

    ಸಾಮಾಜಿಕ ನ್ಯಾಯದ ನೆಪ: ಕೇಂದ್ರ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಹೋಟಾ ನೇತೃತ್ವದ ಸಮಿತಿಯು ಕೆಪಿಎಸ್ಸಿ ಸುಧಾರಣೆಗೆ ವರದಿಯನ್ನು ಸಿದ್ಧಪಡಿಸಿಕೊಟ್ಟಿದೆ. ಪಾರದರ್ಶಕ ಮತ್ತು ಭ್ರಷ್ಟಾಚಾರ ರಹಿತ ನೇಮಕ ಪ್ರಕ್ರಿಯೆ ನಡೆಸುವುದಕ್ಕೆ ಪೂರಕವಾಗಿ ಸುಧಾರಣೆ ಕ್ರಮಗಳ ಶಿಫಾರಸು ಮಾಡಲಾಗಿತ್ತು. ಈ ಪೈಕಿ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ನೇಮಕವನ್ನು ಶೋಧನಾ ಸಮಿತಿ ಮೂಲಕ ಮಾಡಬೇಕೆಂಬ ಶಿಫಾರಸು ಸೇರಿತ್ತು. ಆದರೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯ ಕಾಪಾಡುವ ಉದ್ದೇಶದಿಂದ ಈ ಶಿಫಾರಸು ಒಪ್ಪಲ್ಲವೆಂದರು. ಸತ್ಯಶೋಧನಾ ಸಮಿತಿ ಮೂಲಕ ಅಧ್ಯಕ್ಷರು, ಸದಸ್ಯರ ನೇಮಕವಾದರೆ ರಾಜಕೀಯ ಹಸ್ತಕ್ಷೇಪ ತಗ್ಗಿ, ತಕ್ಕಮಟ್ಟಿಗೆ ಭ್ರಷ್ಟಾಚಾರ ನಿಯಂತ್ರಣಕ್ಕೆ ಬರಬಹುದೆಂದು ಹೋಟಾ ಅಭಿಪ್ರಾಯಿಸಿದ್ದರು.

    ಅಭ್ಯರ್ಥಿಗಳ ಅಂಕ ಬಹಿರಂಗ ಇಲ್ಲ

    ಕೆಪಿಎಸ್ಸಿ- ಪತ್ರಾಂಕಿತ ಹುದ್ದೆಗೆ ಪ್ರಾಥಮಿಕ ಪರೀಕ್ಷೆ, ಮುಖ್ಯ ಪರೀಕ್ಷೆ, ವ್ಯಕ್ತಿತ್ವ ಪರೀಕ್ಷೆ ಮೂಲಕ ನೇಮಕ ನಡೆಸಲಾಗುತ್ತದೆ. ಒಂದಲ್ಲ ಒಂದು ಹಂತದಲ್ಲಿ ಸ್ವಜನಪಕ್ಷಪಾತ, ಸ್ವಜಾತಿ ಪ್ರೇಮ ಮೆರೆದಾಡುತ್ತದೆ. ತಹಸೀಲ್ದಾರ್, ಎಸಿ ಹುದ್ದೆಗಳನ್ನು ಹೊರತುಪಡಿಸಿ ಅಷ್ಟೇ ಪ್ರಭಾವ ಹೊಂದಿದ ವಿವಿಧ ಇಲಾಖೆಗಳಲ್ಲಿನ ಹುದ್ದೆಗಳನ್ನು ಪ್ರತ್ಯೇಕವಾಗಿ ಅರ್ಜಿ ಕರೆದು ನೇಮಕ ಪ್ರಕ್ರಿಯೆ ಮಾಡುವ ಕೆಪಿಎಸ್ಸಿ, ಹೋಟಾ ವರದಿಯ ಪ್ರಮುಖ ಶಿಫಾರಸನ್ನು ಮರೆತಿದೆ. ಎಸ್​ಎಸ್​ಎಲ್​ಸಿ, ಪಿಯುಸಿ ಉತ್ತರ ಪತ್ರಿಕೆಗಳ ಛಾಯಾ ಪ್ರತಿಯನ್ನು ಮಕ್ಕಳು ಪಡೆದುಕೊಳ್ಳಲು ಅವಕಾಶವಿದೆ. ಕೆಪಿಎಸ್ಸಿ ನಡೆಸುವ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ನೀಡಲು ಕೋರ್ಟ್​ನ ಯಾವುದೋ ಒಂದು ತೀರ್ಪಿನ ನೆಪ ಹುಡುಕುತ್ತದೆ. ಅಂಕಗಳನ್ನು ಬಹಿರಂಗಪಡಿಸಬಾರದೆಂಬ ಹೋಟಾ ಸಮಿತಿ ವರದಿಯ ಸಲಹೆಯನ್ನು ಮಾತ್ರ ಗುರಾಣಿಯಾಗಿ ಬಳಸಿ ಅಭ್ಯರ್ಥಿಗಳನ್ನು ಅಕ್ಷರಶಃ ಕತ್ತಲಲ್ಲಿ ಇಡುತ್ತದೆ.

    ಎಫ್​ಡಿಎ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯ ಸುದ್ದಿ ತಿಳಿಯಿತು. ಈ ಘಟನೆಯನ್ನು ಆಯೋಗದ ಕಾರ್ಯಚಟುವಟಿಕೆ ಸುಧಾರಿಸುವ ಅವಕಾಶವಾಗಿ ಬಳಸಲಾಗುವುದು ಎಂದು ಭಾವಿಸುತ್ತೇನೆ.
    | ಸುಭೋದ್ ಯಾದವ್ ಕೇಂದ್ರ ಜಲಸಂಪನ್ಮೂಲ ಇಲಾಖೆ ಜಂಟಿ ಕಾರ್ಯದರ್ಶಿ

    ಠಿಕಾಣಿ ಹೂಡಿದ ಸಿಬ್ಬಂದಿ

    ಕೆಪಿಎಸ್ಸಿ ಸಿಬ್ಬಂದಿ ಕಾಲಕಾಲಕ್ಕೆ ಬದಲಾವಣೆ ಆಗಬೇಕು. ಆಗ ಒಂದಷ್ಟು ಪಾರದರ್ಶಕತೆ ನಿರೀಕ್ಷಿಸಬಹುದು ಎಂದು ಪಿ.ಸಿ. ಹೋಟಾ ಅಭಿಪ್ರಾಯಪಟ್ಟಿದ್ದರು. ರಾಜ್ಯದಲ್ಲಿರುವ ಕಾನೂನು ಮತ್ತು ವೈದ್ಯಕೀಯ ವಿಶ್ವವಿದ್ಯಾಲಯ ಮೌಲ್ಯಮಾಪನ ವಿಭಾಗದ ಸಿಬ್ಬಂದಿಯನ್ನು ಇಲ್ಲಿ ಬಳಸಿಕೊಳ್ಳಬಹುದು. ಇಲ್ಲಿದ್ದವರನ್ನು ಅಲ್ಲಿಗೆ ನಿಯೋಜನೆ ಮೇಲೆ ಕಳಿಸಬಹುದು. ಹೀಗೆ ಮಾಡುವುದರಿಂದ ವರ್ಷಾನುಗಟ್ಟಲೆ ಠಿಕಾಣಿ ಹೂಡುವ ಸಿಬ್ಬಂದಿಯಿಂದ ಆಗುವ ಲೋಪ ತಪ್ಪಲಿದೆ ಎಂಬ ಅಭಿಪ್ರಾಯವಿತ್ತು.

    ತಕ್ಷಣ ಆಗಬೇಕಾದ್ದೇನು?

    • ಹೋಟಾ ಸಮಿತಿ ಒಂದು ದಶಕದ ಹಿಂದೆ ನೀಡಿದ ವರದಿ. ಈಗಿನ ಕಾಲಕ್ಕೆ ತಕ್ಕಂತೆ ಆಗಬೇಕಾದ ಸುಧಾರಣೆಗೆ ತಕ್ಷಣ ತಜ್ಞರ ಸಮಿತಿ ರಚಿಸಿ ವರದಿ ಪಡೆದುಕೊಳ್ಳಬೇಕು. ಪರೀಕ್ಷಾ ವ್ಯವಸ್ಥೆಯನ್ನು ಹೈಟೆಕ್ ಮಾಡಿ ಅನುಷ್ಠಾನ ಮಾಡಬೇಕು.
    • ಮೊದಲ ಆದ್ಯತೆಯಾಗಿ ಸಿಬ್ಬಂದಿಯನ್ನು ಬದಲಿಸಿ ವ್ಯವಸ್ಥೆ ಸ್ವಚ್ಛಗೊಳಿಸಬೇಕು. ಖುದ್ದು ಮುಖ್ಯಕಾರ್ಯದರ್ಶಿ ಗಮನ ಕೊಡಬೇಕು.
    • ಪಾರದರ್ಶಕತೆ ತರಲು ಕಾಯ್ದೆಗೆ ಅಗತ್ಯ ತಿದ್ದುಪಡಿಗೆ ಪ್ರಯತ್ನಿಸಬೇಕು. ಶಾಸನ ಸಭೆಯಲ್ಲಿ ವಿಸ್ತೃ ಚರ್ಚೆಗೆ ಅವಕಾಶ ಮಾಡಿಕೊಡಬೇಕು.
    • ಪ್ರತಿ ವರ್ಷ ಐಎಎಸ್, ಐಪಿಎಸ್ ನೇಮಕ ಪ್ರಕ್ರಿಯೆ ನಡೆಯುವಂತೆ ಕೆಎಎಸ್, ಎಫ್​ಡಿಎ, ಎಸ್​ಡಿಎ ಹುದ್ದೆಗಳು ನಿಗದಿತ ಕಾಲಮಿತಿಯಲ್ಲಿ ಮುಗಿಯಬೇಕು.
    ಎಫ್​ಡಿಎ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ಮಾಹಿತಿ ಪಡೆದಿದ್ದೇನೆ. ಪ್ರಕರಣದ ಸಮಗ್ರ ತನಿಖೆ ನಡೆಸಲಾಗುವುದು. ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಇದೊಂದು ಅಕ್ಷಮ್ಯ ಅಪರಾಧ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಗತ್ಯಬಿದ್ದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಲಾಗುವುದು.
    | ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ

    ಪ್ರಶ್ನೆಪತ್ರಿಕೆ ಲೀಕ್ ಕೇಸಲ್ಲಿ 15 ಜನರ ಸೆರೆ

    ಬೆಂಗಳೂರು: ಎಫ್​ಡಿಎ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಮೂವರು ಸರ್ಕಾರಿ ಅಧಿಕಾರಿಗಳು ಹಾಗೂ 12 ಅಭ್ಯರ್ಥಿಗಳು ಖಾಕಿ ಬಲೆಗೆ ಬಿದ್ದಿದ್ದಾರೆ. ಸಿಸಿಬಿ ಪೊಲೀಸರ ಕಾರ್ಯಾಚರಣೆ ಮುಂದುವರಿದಿದ್ದು, ಬಂಧಿತರ ಸಂಖ್ಯೆ ಇನ್ನಷ್ಟು ಹೆಚ್ಚುವುದು ನಿಶ್ಚಿತ. ಕೆಪಿಎಸ್ಸಿಯ ಎಫ್​ಡಿಎ ದರ್ಜೆ ನೌಕರರೇ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ. ಬೆಂಗಳೂರಿನ ವಾಣಿಜ್ಯ ತೆರಿಗೆ ಇನ್​ಸ್ಪೆಕ್ಟರ್ ಜಿ.ಎಸ್.ಚಂದ್ರು, ಕೆಪಿಎಸ್ಸಿ ಎಸ್​ಡಿಎ ರಾಚಪ್ಪ ಮತ್ತು ಕೆಪಿಎಸ್ಸಿ ಗೌಪ್ಯತೆ ವಿಭಾಗದ ನೌಕರ, ಬಾಗಲಕೋಟೆಯ ರಾಮಪ್ಪ ಎರಕಲ್ ಹಾಗೂ 12 ಎಫ್​ಡಿಎ ಅಭ್ಯರ್ಥಿಗಳನ್ನು ಬಂಧಿಸಲಾಗಿದೆ. ಸೋರಿಕೆ ಪ್ರಕರಣದ ಕಿಂಗ್​ಪಿನ್​ಗಳು ಎನ್ನಲಾದ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಹುಡುಕಾಟ ಮುಂದುವರಿದಿದೆ. ಶನಿವಾರ 6 ಮಂದಿಯನ್ನು ಬಂಧಿಸಿದ್ದು, ಭಾನುವಾರ 9 ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳಿಂದ 35 ಲಕ್ಷ ನಗದು, ಒಂದು ಎರ್ಟಿಗಾ, ಒಂದು ಬೊಲೇರೋ ಸೇರಿ 5 ವಾಹನ ವಶಕ್ಕೆ ಪಡೆಯಲಾಗಿದೆ.

    ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ. ಇದರಲ್ಲಿ ಶಾಮೀಲಾದ ಇನ್ನಷ್ಟು ಜನರನ್ನು ಸದ್ಯದಲ್ಲೇ ಬಂಧಿಸಲಾಗುವುದು.
    | ಸಂದೀಪ್ ಪಾಟೀಲ್ ಜಂಟಿ ಪೊಲೀಸ್ ಆಯುಕ್ತ, ಸಿಸಿಬಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts