More

    ಮಕ್ಕಳ ಕವಯತ್ರಿಗೆ ಸಂದ ಗೌರವ: ಅರುಣಾ ನರೇಂದ್ರಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ

    ಕೊಪ್ಪಳ: ತಾಲೂಕಿನ ಕಿನ್ನಾಳ ಸರ್ಕಾರಿ ಪ್ರೌಢಶಾಲೆ ಸಹ ಶಿಕ್ಷಕಿ ಅರುಣಾ ನರೇಂದ್ರಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕಿ (ಸಾವಿತ್ರಿಬಾಯಿ ಫುಲೆ)ಪ್ರಶಸ್ತಿ ಲಭಿಸಿದೆ.

    ಇವರು ಸಹ ಶಿಕ್ಷಕಿಯಾಗಿದ್ದು, 1989ರಲ್ಲಿ ಸೇವೆಗೆ ಸೇರಿದ್ದಾರೆ. ಮಕ್ಕಳ ಕವಯತ್ರಿ ಎಂದೇ ರಾಜ್ಯಾದ್ಯಂತ ಪ್ರಸಿದ್ಧರಾಗಿದ್ದಾರೆ. ಮುದ್ದಿನ ಗಿಣಿ, ಪಾಟಿ ಚೀಲ, ಬೆಕ್ಕಣ್ಣನ ಉಪಾಯ, ಅಮ್ಮನ ಸೆರಗು ಸೇರಿದಂತೆ 15ಕ್ಕೂ ಮಕ್ಕಳ ಕವನ ಸಂಕಲನ ರಚಿಸಿದ್ದಾರೆ. ಚಿಗುರದ ಕವಲು, ಬೀದಿ ಮಕ್ಕಳು, ಆಸೆಯ ಕುಡಿ ಸೇರಿದಂತೆ ಆರು ಮಕ್ಕಳ ನಾಟಕಗಳನ್ನು ಪ್ರಕಟಿಸಿದ್ದಾರೆ. ಸ್ವತಃ ಐದು ನಾಟಕಗಳಲ್ಲಿ ಅಭಿನಯಿಸಿದ್ದು, ಕಲಾವಿದೆಯಾಗಿಯೂ ಗುರುತಿಸಿಕೊಂಡಿದ್ದಾರೆ. ಹಲವಾರು ಕೃತಿ ರಚಿಸುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೆ ಕೊಡುಗೆ ನೀಡುತ್ತಿದ್ದಾರೆ. ಇವರ ಸೇವೆ ಗುರುತಿಸಿ, ಅಖಿಲ ಕರ್ನಾಟಕ ಶಿಕ್ಷಕರ ಸಂಘದ ಪ್ರಶಸ್ತಿ, ಪಂಡಿತ ಪುಟ್ಟರಾಜ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ದತ್ತಿ ಪ್ರಶಸ್ತಿ, ಬಿ.ಎಂ.ಶ್ರೀ.ಪ್ರತಿಷ್ಠಾನದಿಂದ ಸಾವಿತ್ರಮ್ಮ ದತ್ತಿ ಪ್ರಶಸ್ತಿ, ಕೊಪ್ಪಳ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಮತ್ತು ಈವರೆಗೂ 15ಕ್ಕೂ ಹೆಚ್ಚು ರಾಜ್ಯ, ಜಿಲ್ಲಾ ಮಟ್ಟದ ಪ್ರಶಸ್ತಿಗಳು ಅರಸಿ ಬಂದಿವೆ.

    ಮೈಸೂರು ದಸರಾ ಕವಿಗೋಷ್ಠಿಯಲ್ಲಿ ಅರುಣಾ ನರೇಂದ್ರ ಕವನ ವಾಚಿಸಿದ್ದಾರೆ. ಆಂಗ್ಲ ಮಾಧ್ಯಮದ ಮೂರನೇ ಕನ್ನಡ ಪುಸ್ತಕದಲ್ಲಿ ಇವರ ಒಂದು ಕವಿತೆ ಸೇರ್ಪಡೆಗೊಂಡಿರುವುದು ವಿಶೇಷವಾಗಿದೆ. ಅಲ್ಲದೇ ಹಲವು ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದಾರೆ. ಅಲ್ಲದೆ ವಿದ್ಯಾರ್ಥಿಗಳಿಗೆ ಸಾಹಿತ್ಯಾಭಿರುಚಿ ಬೆಳೆಸುವ ಕಾರ್ಯ ಕೂಡ ಮಾಡುತ್ತಿದ್ದಾರೆ. ಮಕ್ಕಳಿಗೆ ಕಥೆ ಮೂಲಕವೇ ಅವರ ಪ್ರೀತಿಗೆ ಪಾತ್ರರಾಗಿದ್ದಾರೆ.

    ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಲಭಿಸಿದ್ದು ಸಂತಸ ತಂದಿದೆ. ಅಲ್ಲದೆ ಹೆಚ್ಚು ಜವಾಬ್ದಾರಿ ಬಂದಿದ್ದು, ಸರ್ಕಾರ ಗುರುತಿಸಿ ಈ ಪ್ರಶಸ್ತಿ ನೀಡಿದೆ.
    | ಅರುಣಾ ನರೇಂದ್ರ, ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತರು, ಕೊಪ್ಪಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts