More

    ಕೊಪ್ಪಳ ಜಿಲ್ಲೆಯಲ್ಲಿ 333 ಜಾನುವಾರುಗಳಿಗೆ ಚರ್ಮಗಂಟು ರೋಗ: ಮುಂಜಾಗ್ರತೆ ವಹಿಸಲು ಪಶು ಇಲಾಖೆ ಡಿಡಿ ಡಾ.ನಾಗರಾಜ ಸಲಹೆ

    ಕೊಪ್ಪಳ: ಜಾನುವಾರುಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಳ್ಳುತ್ತಿದ್ದು, ರೈತರು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ.ಎಚ್.ನಾಗರಾಜ ತಿಳಿಸಿದ್ದಾರೆ.

    ಇದೊಂದು ಸಾಂಕ್ರಾಮಿಕ ರೋಗ. ಕ್ಯಾಪ್ರಿ ಫಾಕ್ಸ್ ಎಂಬ ವೈರಾಣುವಿನಿಂದ ದನ, ಎಮ್ಮೆಗಳಲ್ಲಿ ಕಂಡುಬರುತ್ತದೆ. ಅದರಲ್ಲೂ ಮಿಶ್ರತಳಿ ರಾಸುಗಳ ಕರುಗಳಲ್ಲಿ ಈ ಬಾಧೆ ಹೆಚ್ಚು. ಸೊಳ್ಳೆ, ನೊಣಗಳಿಂದ ಹರಡುತ್ತದೆ. ಜಿಲ್ಲೆಯ 29 ಗ್ರಾಮಗಳ 333 ಜಾನುವಾರುಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು, ಸೂಕ್ತ ಚಿಕಿತ್ಸೆ ನೀಡಲಾಗಿದೆ. ಅಳವಂಡಿ ಹಾಗೂ ಕುಕನೂರು ಹೋಬಳಿ ಗ್ರಾಮಗಳಲ್ಲಿ ಹೆಚ್ಚಾಗಿ ರೋಗ ಕಾಣಿಸಿಕೊಂಡಿದೆ. ಯಾವುದೇ ಜಾನುವಾರು ಮೃತಪಟ್ಟಿಲ್ಲ. ರೈತರು ಹೆದರದೇ ಸೂಕ್ತ ಚಿಕಿತ್ಸೆ ಕೊಡಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಅತಿಯಾದ ಜ್ವರ, ಕಣ್ಣುಗಳಿಂದ ನೀರು ಸೋರುವುದು, ನಿಶಕ್ತಿ, ಕಾಲುಗಳಲ್ಲಿ ಬಾವು ಹಾಗೂ ಕುಂಟುವಿಕೆ, ಚರ್ಮದ ಮೇಲೆ 2 ರಿಂದ 5 ಸೆಂ.ಮೀ. ಅಗಲವಿರುವ ಗಂಟುಗಳು ಅಥವಾ ಗುಳ್ಳೆಗಳು ಕಾಣಿಸಿಕೊಂಡು ನಂತರ ಒಡೆದು ಗಾಯವಾಗಿ ನೋವುಂಟಾಗುತ್ತದೆ. ರಾಸುಗಳಲ್ಲಿ ರೋಗಲಕ್ಷಣ ಕಾಣಿಸಿಕೊಂಡಲ್ಲಿ ತಕ್ಷಣ ಪಶು ವೈದ್ಯರನ್ನು ಸಂಪರ್ಕಿಸಬೇಕು ತಿಳಿಸಿದ್ದಾರೆ.

    ರೋಗಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಬದಲಿಗೆ ರೋಗ ಲಕ್ಷಣ ಆಧರಿಸಿ ಚಿಕಿತ್ಸೆ ನೀಡಲಾಗುವುದು. ಜಾನುವಾರುಗಳ ದೇಹ ತಂಪಾಗಿಸಲು ಮೈಮೇಲೆ ಹಸಿ ಬಟ್ಟೆ ಹಾಕಬೆಕು. ತಂಪಾದ ಜಾಗದಲ್ಲಿ ಕಟ್ಟಬೇಕು. ಚರ್ಮದ ಮೇಲಿನ ಗಾಯಗಳನ್ನು ಪೋಟ್ಯಾಷಿಯಂ ಪರಮ್ಯಾಂಗನೇಟ್ ದ್ರಾವಣದಿಂದ ತೊಳೆದು ಆಯೋಡಿನ್ ದ್ರಾವಣ, ಮುಲಾಮು ಹಾಗೂ ಬೇವಿನ ಎಣ್ಣೆ ಲೇಪಿಸಬೇಕು. ಪೌಷ್ಟಿಕ ಆಹಾರ ನೀಡಬೇಕು. ಕುಡಿವ ನೀರಿನಲ್ಲಿ ಬೆಲ್ಲ, ಉಪ್ಪು ಹಾಗೂ ಅಡುಗೆ ಸೋಡಾ ಹಾಕಿ ದಿನಕ್ಕೆ 5 ರಿಂದ 6 ಬಾರಿ ಕುಡಿಸಬೇಕು. ಕೀಟಗಳ ಹಾವಳಿ ತಪ್ಪಸಲು ಬೇವಿನ ಸೊಪ್ಪಿನ ಹೊಗೆ ಹಾಕಬೇಕು. ಕೊಟ್ಟಿಗೆಯ ಸುತ್ತ ಸ್ವಚ್ಛತೆ ಕಾಪಾಡಬೇಕು. ಫಾರ್ಮಾಲಿನ್(1%), ಫಿನೈಲ್(2%) ಅಥವಾ ಸೋಡಿಯಂ ಹೈಪೋಕ್ಲೋರೈಟ್(2%) ದ್ರಾವಣವನ್ನು ದಿನಕ್ಕೆ 2 ಬಾರಿ ಮೈಮೇಲೆ ಸಿಂಪಡಿಸಬೇಕೆಂದು ಸಲಹೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts