More

    ಸದಭಿರುಚಿಯ ಸಿನಿಮಾಗಳಿಗೆ ಪ್ರೋತ್ಸಾಹ ಅಗತ್ಯ

    ಕೊಪ್ಪಳ: ಸದಭಿರುಚಿಯ ಕನ್ನಡ ಚಲನಚಿತ್ರಗಳನ್ನು ಪ್ರೇಕ್ಷಕರು ಪ್ರೋತ್ಸಾಹಿಸಬೇಕು. ಸಿನಿಮಾ ಮಂದಿರಗಳಲ್ಲಿ ಸಮೂಹದೊಂದಿಗೆ ಚಲನಚಿತ್ರ ಆಸ್ವಾದಿಸುವ ಅನುಭವ, ವೈಯಕ್ತಿಕವಾಗಿ ಆನ್‌ಲೈನ್ ವೇದಿಕೆಗಳಲ್ಲಿ ದಕ್ಕುವುದಿಲ್ಲ ಎಂದು ಪತ್ರಕರ್ತ ಬಸವರಾಜ ಕರುಗಲ್ ಹೇಳಿದರು.

    ಭಾಗ್ಯನಗರದಲ್ಲಿ ಶಕ್ತಿ ಶಾರದೆಯ ಮೇಳದಿಂದ ಶನಿವಾರ ಆಯೋಜಿಸಿದ್ದ 37ನೇ ವಿಚಾರಮಂಥನ ಕೂಟದಲ್ಲಿ ‘ಮಿನುಗುತ್ತಿರುವ ಕನ್ನಡ ಚಿತ್ರರಂಗ; ಪ್ರೇಕ್ಷಕ ಬಾರದೇ ಕರಗುತ್ತಿರುವ ಚಿತ್ರಮಂದಿರ’ ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿದರು. 1895ರಲ್ಲಿ ಪ್ಯಾರಿಸ್‌ನ ಲ್ಯೂಮಿಯರ್ ಸಹೋದರರಿಂದ ಚಲನಚಿತ್ರ ಮಾಧ್ಯಮ ಜನ್ಮಪಡೆಯಿತು. ಕಾಲಾನುಕ್ರಮದಲ್ಲಿ ಭಾರತೀಯ ಹಾಗೂ ಕನ್ನಡ ಚಿತ್ರರಂಗಗಳು ಆ ನಿಟ್ಟಿನಲ್ಲಿ ಸಾಗಿದವು. ತಂತ್ರಜ್ಞಾನದ ಆವಿಷ್ಕಾರಗಳು ಈ ರಂಗದ ಮೇಲೆ ಪ್ರಭಾವ ಬೀರಿವೆ. ಬದಲಾಗುತ್ತಿರುವ ದಿನಗಳಲ್ಲಿ ಸಿನಿಮಾ ಟಾಕೀಸ್‌ಗಳು ಕಲ್ಯಾಣಮಂಟಪ, ಸಭಾಂಗಣಗಳಾಗಿ ಪರಿವರ್ತನೆಯಾಗುತ್ತಿರುವುದು ಉದ್ಯಮವಷ್ಟೇ ಅಲ್ಲ, ಸಮಸ್ತ ಕನ್ನಡಿಗರು ಆತಂಕ ಪಡಬೇಕಾದ ಸಂಗತಿ ಎಂದರು.

    ವಾರ್ತಾ ಇಲಾಖೆ ಉಪನಿರ್ದೇಶಕ ಮಂಜುನಾಥ ಡೊಳ್ಳಿನ ಮಾತನಾಡಿ, ಚಲನಚಿತ್ರ ಎನ್ನುವುದು ಕಥೆ, ಚಿತ್ರಕಥೆ, ಸಂಭಾಷಣೆ, ಹಾಡುಗಳು, ಹಿನ್ನೆಲೆ ಸಂಗೀತ, ಸಿನಿಮಾಟೋಗ್ರಫಿ, ಸಂಕಲನ ಹೀಗೆ ಹತ್ತಾರು ತಂತ್ರಜ್ಞರು ಸಮೀಕರಣಗೊಂಡು ಸಿದ್ಧವಾಗುವ ಮಾಧ್ಯಮ ಎಂದರು.

    ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತೆ ಅರುಣಾ ನರೇಂದ್ರ ಪಾಟೀಲರನ್ನು ಸನ್ಮಾನಿಸಲಾಯಿತು. ಸಾಹಿತಿ ವಿಜಯ್ ಅಮೃತರಾಜ್, ಪತ್ರಕರ್ತ ಆನಂದತೀರ್ಥ ಪ್ಯಾಟಿ, ಚಲನಚಿತ್ರ ಪ್ರದರ್ಶಕ ವೀರೇಶ ಮಹಾಂತಯ್ಯನಮಠ, ಲೇಖಕಿ ಸಾವಿತ್ರಿ ಮುಜುಂದಾರ್, ಡಿ.ಎಂ.ಬಡಿಗೇರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts