More

    ತುಂಗಭದ್ರಾ ಸಮಸ್ಯೆಗೆ ಶೀಘ್ರ ಪರಿಹಾರವೆಂದು ಭರವಸೆ ನೀಡಿದ ಸಚಿವ ರಮೇಶ ಜಾರಕಿಹೊಳಿ

    ಕೊಪ್ಪಳ: ತುಂಗಭದ್ರಾ ಜಲಾಶಯದಲ್ಲಿನ ಹೂಳಿಗೆ ಪರ್ಯಾಯ ಮಾರ್ಗವಾಗಿ ಸಮಾನಾಂತರ ಜಲಾಶಯ ನಿರ್ಮಿಸಲಿದ್ದು, ರೈತರ ಹಿತ ಕಾಪಾಡಲಾಗುವುದೆಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

    ತಾಲೂಕಿನ ಮುನಿರಾಬಾದ್ ಕಾಡಾ ಕಚೇರಿಯಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಶನಿವಾರ ಸಭೆ ನಡೆಸಿದ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದರು.
    ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳಲು ರಾಜ್ಯಮಟ್ಟದ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಡ್ಯಾಂ ಅಭಿವೃದ್ಧಿಗಾಗಿ ಅಂತರ್ ರಾಜ್ಯ ವ್ಯಾಪ್ತಿಯ ವಿಷಯಗಳ ಬಗ್ಗೆಯೂ ಇಂದು ಸಭೆಯಲ್ಲಿ ಚರ್ಚಿಸಲಾಗಿದೆ. ಜಲಾಶಯದಲ್ಲಿ ಹೂಳು ತುಂಬಿದ್ದು, ಪರ್ಯಾಯವಾಗಿ ಸಮಾನಾಂತರ ಜಲಾಶಯ ನಿರ್ಮಿಸಲು ಯೋಜಿಸಲಾಗಿದೆ. ಈ ಬಗ್ಗೆ ತೆಲಂಗಾಣ, ಆಂಧ್ರಪ್ರದೇಶ ಸರ್ಕಾರದೊಂದಿಗೆ ಚರ್ಚಿಸಿ ಮನವೊಲಿಸಲಾಗುವುದು.

    ಎಡದಂಡೆ ಕಾಲುವೆ ಸ್ಥಿತಿ-ಗತಿ ಬಗ್ಗೆ ವರದಿ ಸಲ್ಲಿಸುವಂತೆ ಸಿಇಗೆ ಸೂಚಿಸಿರುವೆ. ಸಿಎಂ ಬಿ.ಎಸ್.ಯಡಿಯೂರಪ್ಪ ಈ ಬಾರಿ ಬಜೆಟ್‌ನಲ್ಲಿ ಏತ ನೀರಾವರಿಗಾಗಿ 5 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದಾರೆ. ಇದರಲ್ಲಿ ಅಗತ್ಯತೆ ಆಧಾರದಲ್ಲಿ ರಾಜ್ಯದ ಎಲ್ಲ ಏತ ನೀರಾವರಿಗಳಿಗೆ ಅನುದಾನ ನೀಡಲಾಗುವುದು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ನೀಡಲಾಗುವುದು. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೊಪ್ಪಳ, ಬಳ್ಳಾರಿ ಹಾಗೂ ರಾಯಚೂರು ಮೂರು ಜಿಲ್ಲೆಗಳ ಜನ-ಜಾನುವಾರುಗಳಿಗೆ ತುಂಗಭದ್ರಾ ಜಲಾಶಯದ ನೀರು ಒದಗಿಸಲಾಗುವುದು. ಸದ್ಯ ಜಲಾಶಯದಲ್ಲಿ ಇದ್ದ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಕಾರ್ಖಾನೆಗಳಿಗೆ ಅನಧಿಕೃತವಾಗಿ ನೀರು ಬಿಡುತ್ತಿದ್ದಲ್ಲಿ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

    ಸಂಸದ ವೈ.ದೇವೇಂದ್ರಪ್ಪ, ಕಾಡಾ ಅಧ್ಯಕ್ಷ ಬಸನಗೌಡ ತುರ್ವಿಹಾಳ, ಶಾಸಕರಾದ ವೆಂಕಟರಾವ ನಾಡಗೌಡ, ರಾಘವೇಂದ್ರ ಹಿಟ್ನಾಳ್, ಪರಣ್ಣ ಮುನವಳ್ಳಿ, ಬಸವರಾಜ ದಢೇಸೂಗುರು, ಜೆ.ಎನ್.ಗಣೇಶ್, ಜಿಪಂ ಅಧ್ಯಕ್ಷ ವಿಶ್ವನಾಥರಡ್ಡಿ, ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ್ ಗುಂಗೆ, ಮುನಿರಾಬಾದ್ ನೀರಾವರಿ ನಿಗಮದ ಸಿಇ ಎಸ್.ಎಚ್.ಮಂಜಪ್ಪ ಸೇರಿ ಇತರ ಅಧಿಕಾರಿಗಳಿದ್ದರು.

    ಐಸಿಸಿ ಸಭೆ ನಿರ್ಣಯದಂತೆ ನೀರು: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಎಡ ಮತ್ತು ಬಲ ದಂಡೆ ಕಾಲುವೆಗಳ ವ್ಯಾಪ್ತಿಯ ರೈತರ ಎರಡನೇ ಬೆಳೆಗೆ 113ನೇ ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಣಯದಂತೆ ನೀರು ಒದಗಿಸಲಾಗುವುದು. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಎರಡನೇ ಬೆಳೆಗೆ ಎಷ್ಟು ಪ್ರದೇಶಗಳಿಗೆ ನೀರನ್ನು ಕೊಡುವುದಕ್ಕೆ ಸಾಧ್ಯವೋ ಅಷ್ಟನ್ನು ನೀಡಲಾಗುವುದು. ಅಚ್ಚುಕಟ್ಟು ಪ್ರದೇಶದ ರೈತರಿಗೆ ಯಾವುದೇ ರೀತಿ ತೊಂದರೆಯಾಗಬಾರದು ಮತ್ತು ನೀರು ಪೋಲಾಗಬಾರದು. ನೀರನ್ನು ಸರಿಯಾಗಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾಗಿ ಸಚಿವರು ತಿಳಿಸಿದರು.

    ಹುಲಿಗಿಗೆ ಭೇಟಿ : ಸಭೆಗೂ ಮುನ್ನ ಸಚಿವ ರಮೇಶ ಜಾರಕಿಹೊಳಿ ಹುಲಿಗಿ ಗ್ರಾಮದ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಿ ದರ್ಶನ ಪಡೆದರು. ಸಚಿವರ ಆಗಮನ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ, ಅರ್ಚಕರು ಆಶೀರ್ವಾದ ಮಾಡಿದರು. ಬಳಿಕ ಸಚಿವರು ದೇವಿ ಮಹಿಮೆ, ದೇವಾಲಯ ಬಗ್ಗೆ ಮಾಹಿತಿ ಪಡೆದುಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts