More

    ಸೇವಾ ಮನೋಭಾವದಿಂದ ಕೆಲಸ ಮಾಡಲು ಉಸ್ತುವಾರಿ ಕಾರ್ಯದರ್ಶಿ ರಶ್ಮಿ ಮಹೇಶ ಸೂಚನೆ

    ಕೊಪ್ಪಳ: ಕೋವಿಡ್ ಕೇರ್ ಸೆಂಟರ್‌ಗಳ ಉಸ್ತುವಾರಿ ಸೇರಿದಂತೆ ಕೋವಿಡ್ ಕರ್ತವ್ಯಕ್ಕೆ ನಿಯೋಜಿಸಿದ ಅಧಿಕಾರಿಗಳು ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಿ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಶ್ಮಿ ಮಹೇಶ್ ಅಧಿಕಾರಿಗಳಿಗೆ ಸೂಚಿಸಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಕುರಿತು ಶುಕ್ರವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

    ಕೋವಿಡ್ ಪಾಸಿಟಿವ್ ಎಂದ ಕೂಡಲೇ ಸೋಂಕಿತರಲ್ಲಿ ಭಯ, ಆತಂಕ ಮೂಡಿರುತ್ತದೆ. ಒಂದೊಮ್ಮೆ ಸೂಕ್ತ ಚಿಕಿತ್ಸೆ ಅಥವಾ ಸ್ಪಂದನೆ ಸಿಗದಿದ್ದಲ್ಲಿ ಮಾನಸಿಕವಾಗಿ ಇನ್ನಷ್ಟು ಜರ್ಜರಿತರಾಗುತ್ತಾರೆ. ಆದ್ದರಿಂದ ಕೋವಿಡ್ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಸೋಂಕಿತರೊಂದಿಗೆ ಮಾನವೀಯತೆಯಿಂದ ವರ್ತಿಸಿ. ಕುಟುಂಬ ಸದಸ್ಯರಂತೆ ಸ್ಪಂದಿಸಿ. ಧೈರ್ಯ, ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿ. ಇದರಿಂದ ರೋಗಿಯು ಬೇಗ ಗುಣವಾಗಲು ಸಹಾಯವಾಗುತ್ತದೆ. ಹೋಂ ಐಸೋಲೇಷ್‌ನ್‌ನಲ್ಲಿರುವವರ ಮೇಲೆ ನಿಗಾವಹಿಸಿ. ರೋಗಿಗಳು ಚೇತರಿಸಿಕೊಂಡ ನಂತರವೂ ಕೆಲ ದಿನಗಳವರೆಗೆ ಕ್ವಾರಂಟೈನ್ ಮಾಡಿಸಿ ಎಂದು ಸೂಚಿಸಿದರು.

    ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್ ಮಾತನಾಡಿ, ಜಿಲ್ಲೆಯಲ್ಲಿ 106 ಕೋವಿಡ್ ಕೇರ್ ಸೆಂಟರ್‌ಗಳನ್ನು ತೆರೆಯಲಾಗಿದೆ. ಹೋಂ ಐಸೋಲೇಷ್‌ನ್‌ನಲ್ಲಿರುವವರನ್ನು ಮನವೊಲಿಸಿ ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ದಾಖಲಿಸುವ ಕಾರ್ಯ ನಡೆದಿದೆ. ಸೋಂಕಿತರ ಆರೈಕೆಗೆ ಕುಟುಂಬಸ್ಥರು, ಸಂಬಂಧಿಗಳು ಬರುವುದನ್ನು ನಿಷೇಧಿಸಲಾಗಿದೆ ಎಂದು ಮಾಹಿತಿ ನೀಡಿದರು.

    ಜಿಪಂ ಸಿಇಒ ರಘುನಂದನ್ ಮೂರ್ತಿ, ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಜಿಪಂ ಉಪಕಾರ್ಯದರ್ಶಿ ಶರಣಬಸವರಾಜ, ಡಿಎಚ್‌ಒ ಡಾ.ಟಿ.ಲಿಂಗರಾಜ ಸೇರಿ ಇತರ ಅಧಿಕಾರಿಗಳಿದ್ದರು.

    ಗವಿಮಠದ ಸೆಂಟರ್‌ಗೆ ಭೇಟಿ: ಗವಿಮಠ ಕೋವಿಡ್ ಕೇರ್ ಸೆಂಟರ್ ಹಾಗೂ ಆಸ್ಪತ್ರೆಗೆ ಉಸ್ತುವಾರಿ ಕಾರ್ಯದರ್ಶಿ ರಶ್ಮಿ ಮಹೇಶ ಭೇಟಿ ನೀಡಿ ಪರಿಶೀಲಿಸಿದರು. ಸೆಂಟರ್‌ನಲ್ಲಿ ಆಕ್ಸಿಜನ್, ವೆಂಟಿಲೇಟರ್ ಹಾಗೂ ಕೋವಿಡ್ ಚಿಕಿತ್ಸೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ತಹಸೀಲ್ದಾರ್ ಅಮರೇಶ ಬಿರಾದಾರ್, ಜಿಲ್ಲಾ ಕ್ಷಯ ನಿರ್ಮೂಲನಾ ಅಧಿಕಾರಿ ಡಾ.ಮಹೇಶ್ ಎಂ.ಜಿ. ಸೇರಿ ಇತರರಿದ್ದರು.

    60 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಪರೀಕ್ಷೆ, ಲಸಿಕೆ ಕಡ್ಡಾಯ

    ಗ್ರಾಮೀಣ ಮಟ್ಟದಲ್ಲಿ ಜಾಗೃತಿ ಹೆಚ್ಚಿಸಿ. 60 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಪರೀಕ್ಷೆ ಹಾಗೂ ಲಸಿಕೆ ನೀಡುವುದು ಕಡ್ಡಾಯಗೊಳಿಸಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಶ್ಮಿ ಮಹೇಶ್ ಹೇಳಿದರು. ಬೇರೆ ಜಿಲ್ಲೆ, ರಾಜ್ಯಗಳಿಂದ ಗ್ರಾಮಕ್ಕೆ ಮರಳುವವರು ಹಾಗೂ ವಲಸೆ ಕಾರ್ಮಿಕರನ್ನು ಗುರುತಿಸಿ ಅವರನ್ನು ಕ್ವಾರಂಟೈನ್ ಕೇಂದ್ರಗಳಿಗೆ ಕಳುಹಿಸಿ. ರೋಗ ಲಕ್ಷಣವುಳ್ಳವರನ್ನು ಪರೀಕ್ಷೆಗೆ ಒಳಪಡಿಸಿ. ಸೋಂಕು ಪತ್ತೆಯಾದಲ್ಲಿ ಅವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಪತ್ತೆ ಕಾರ್ಯವನ್ನು ಶೀಘ್ರವಾಗಿ ಮಾಡಿ. ಲಕ್ಷಣಗಳಿದ್ದೂ ವರದಿ ನೆಗೆಟಿವ್ ಬಂದಲ್ಲಿ ನಿರ್ಲಕ್ಷಿಸಿದೇ ಸಾಮಾನ್ಯ ವಾರ್ಡ್‌ಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts