More

    ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲಿ ಒಂದೇ ಕುಟುಂಬದ ಮೂವರಿಗೆ ಕರೊನಾ

    ಕೊಪ್ಪಳ: ಊರೂರು ಅಲೆದು ಹೂ ಮಾರುವಾತ ಸೇರಿದಂತೆ ಆರು ಜನರಿಗೆ ಶುಕ್ರವಾರ ಕರೊನಾ ಸೋಂಕು ದೃಢಪಟ್ಟಿದೆ. ದಿನ ಕಳೆದಂತೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ.

    ಗಂಗಾವತಿ ತಾಲೂಕಿನ ಮರಳಿಯಲ್ಲಿ ಈಗಾಗಲೇ ಇಬ್ಬರಿಗೆ ಕರೊನಾ ಬಂದಿದ್ದು, ಮತ್ತೆ ಶ್ರೀರಾಮನಗರದಲ್ಲಿ ಒಂದೇ ಕುಟುಂಬದ ಮೂವರಿಗೆ ಸೋಂಕು ಹರಡಿದೆ. ಗ್ರಾಮದ 45 ವರ್ಷದ ವ್ಯಕ್ತಿ, 40 ವರ್ಷದ ಮಹಿಳೆ ಹಾಗೂ 17 ವರ್ಷದ ಯುವತಿ ಸೋಂಕಿಗೆ ತುತ್ತಾಗಿದ್ದಾರೆ. ಮೂವರು ಜೂ.16 ರಂದು ಆಂಧ್ರಪ್ರದೇಶದ ವಿಜಯವಾಡ ನಗರದಿಂದ ಶ್ರೀರಾಮನಗರಕ್ಕೆ ಬಂದಿದ್ದಾರೆ. ಅವರನ್ನು ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಕುಕನೂರು ತಾಲೂಕಿನಲ್ಲೂ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಬೆಂಗಳೂರಿನಿಂದ ಜೂ.14ರಂದು ಕಕ್ಕಿಹಳ್ಳಿಗೆ ಆಗಮಿಸಿದ್ದ 14 ವರ್ಷದ ಬಾಲಕನಿಗೆ ಕರೊನಾ ದೃಢಪಟ್ಟಿದೆ. ಸೋಂಕು ದೃಢಪಡುತ್ತಿದ್ದಂತೆ ಐಸೋಲೇಟ್ ಮಾಡಲು ಅಧಿಕಾರಿಗಳು ಯತ್ನಿಸಿದ್ದಾರೆ. ಆದರೆ, ಈತನ ಪಾಲಕರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡ ಕಾರಣ ಕೊಂಚ ತಡವಾಗಿದೆ. ಆದರೆ, ಮಾದರಿ ಸಂಗ್ರಹ ವೇಳೆ ಪಡೆದ ಮಾಹಿತಿ ಆಧರಿಸಿ ಗ್ರಾಮ ಮತ್ತು ವಿಳಾಸ ವಿವರ ಖಚಿತಪಡಿಸಿಕೊಂಡು ಪತ್ತೆ ಮಾಡಲಾಗಿದೆ. ಬಳಿಕ ಜಿಲ್ಲಾಸ್ಪತ್ರೆಗೆ ಕರೆತರಲಾಗಿದೆ. ಜಿಲ್ಲೆಯಲ್ಲಿ ಒಟ್ಟು 28 ಜನರಿಗೆ ಸೋಂಕು ತಗುಲಿದ್ದು, ಈ ಪೈಕಿ 11 ಜನ ಚೇತರಿಸಿಕೊಂಡಿದ್ದಾರೆ. ಒಬ್ಬರು ಮೃತಪಟ್ಟಿದ್ದು, 16 ಸಕ್ರಿಯ ಪ್ರಕರಣಗಳಿವೆ.

    ಹೂ ಮಾರುವವನಿಗೂ ಸೋಂಕು
    ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ 65 ವರ್ಷದ ವೃದ್ಧನಿಗೆ ಕೋವಿಡ್-19 ಪತ್ತೆಯಾಗಿದೆ. ಈತ ಹೂ ಮಾರಾಟಗಾರನಾಗಿದ್ದು, ನಿತ್ಯ ಹೊಸಪೇಟೆ – ಹುಲಿಗಿ – ಮಲಪನಗುಡಿ ಸೇರಿ ಇತರ ಪ್ರದೇಶಗಳಲ್ಲಿ ಓಡಾಡಿದ್ದಾನೆ. ಹೀಗಾಗಿ ಎಲ್ಲಿಂದ ಸೋಂಕು ಬಂದಿದೆ ಎಂಬುದು ಪ್ರಶ್ನೆಯಾಗಿದೆ. ಈತನ ಸಂಪರ್ಕಕ್ಕೆ ಅನೇಕ ಜನರು ಬಂದಿರುವ ಸಾಧ್ಯತೆಯಿದ್ದು, ಗ್ರಾಮದ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

    ಬಿಡದ ಜಿಂದಾಲ್ ನಂಜು
    ಈಗಾಗಲೇ ಜಿಂದಾಲ್ ಉದ್ಯೋಗಿಯೊಬ್ಬನ ಪಾಲಕರಿಗೆ ಸೋಂಕು ಕಾಣಿಸಿಕೊಂಡಿದ್ದು, ಈ ಪೈಕಿ ಮಹಿಳೆಯೊಬ್ಬಳು ಮೃತಪಟ್ಟಿದ್ದಾಳೆ. ಶುಕ್ರವಾರ ಕೊಪ್ಪಳ ತಾಲೂಕಿನ ಹೊಸಲಿಂಗಾಪುರ ಗ್ರಾಮ ನಿವಾಸಿ 38 ವರ್ಷದ ಜಿಂದಾಲ್ ಕಾರ್ಮಿಕನಿಗೂ ಕರೊನಾ ದೃಢಪಟ್ಟಿದೆ. ಈತನಲ್ಲಿ ಯಾವುದೇ ರೋಗ ಲಕ್ಷಣಗಳಿರಲಿಲ್ಲ. ಆದರೂ, ಪರೀಕ್ಷೆ ನಡೆಸಿದ್ದು, ಕರೊನಾ ಕಾಣಿಸಿಕೊಂಡಿದೆ. ಜಿಲ್ಲೆಯಲ್ಲೂ ಅನೇಕರು ಜಿಂದಾಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಎಷ್ಟು ಜನರಿದ್ದಾರೆಂಬ ಮಾಹಿತಿ ಇಲ್ಲ. ಹೀಗಾಗಿ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ್ ಜಿಂದಾಲ್ ಕಂಪನಿಗೆ ಪತ್ರ ಬರೆದಿದ್ದಾರೆ. ಅಲ್ಲದೇ ಕಾರ್ಮಿಕರು ಹಾಗೂ ಅವರ ಕುಟುಂಬದವರು ಕೊಪ್ಪಳದಲ್ಲಿ ಇದ್ದಲ್ಲಿ ಸ್ವಯಂಪ್ರೇರಿತವಾಗಿ ಮಾಹಿತಿ ನೀಡುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.

    ಜಿಲ್ಲೆಯಲ್ಲಿ ಶುಕ್ರವಾರ 6 ಜನರಿಗೆ ಸೋಂಕು ದೃಢಪಟ್ಟಿದೆ. ಇದರಲ್ಲಿ ಒಬ್ಬ ಜಿಂದಾಲ್ ಕಾರ್ಮಿಕ, ಹೂ ಮಾರಾಟಗಾರ ಮತ್ತು ಒಂದೇ ಕುಟುಂಬದ ಮೂವರು ಇದ್ದಾರೆ. ಎಲ್ಲರನ್ನು ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದೇವೆ. ಅವರು ವಾಸಿಸುವ ಸ್ಥಳದಲ್ಲಿ ಕಂಟೇನ್ಮೆಂಟ್ ರೆನ್ ಮಾಡಿದ್ದೇವೆ. ನಮ್ಮ ಜಿಲ್ಲೆಯಲ್ಲಿರುವ ಜಿಂದಾಲ್ ಕಾರ್ಮಿಕರ ವಿವರ ನೀಡುವಂತೆ ಜಿಂದಾಲ್ ಕಂಪನಿಗೆ ಪತ್ರ ಬರೆದಿರುವೆ.
    | ಪಿ.ಸುನಿಲ್ ಕುಮಾರ್, ಜಿಲ್ಲಾದಿಕಾರಿ ಕೊಪ್ಪಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts