More

    ಕರೊನಾ ಆತಂಕ ಮೂಡಿಸಿದ ಮದುವೆ

    ಕೊಳ್ಳೇಗಾಲ: ಪಟ್ಟಣದ ಭೀಮನಗರದ ಹೆಬ್ಬಾಗಿಲ ಬಳಿಯ ಇರುವ ಫಂಕ್ಷನ್ ಹಾಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ಮದುವೆ ಸಮಾರಂಭಕ್ಕೆ ತಮಿಳುನಾಡು ಸೇರಿದಂತೆ ಹೊರ ಜಿಲ್ಲೆಗಳಿಂದ 500ಕ್ಕೂ ಹೆಚ್ಚು ಜನರು ಆಗಮಿಸಿದ್ದರಿಂದ ನಿವಾಸಿಗಳು ಕೆಲ ಕಾಲ ಕರೊನಾ ಆತಂಕಕ್ಕೀಡಾಗಿದ್ದರು.
    ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಬೆಂಗಳೂರು, ರಾಮನಗರ, ಮೈಸೂರು ಹಾಗೂ ಬೆಂಗಳೂರು ಭಾಗದ ನೋಂದಣಿ ಸಂಖ್ಯೆಗಳ ವಿವಿಧ ಕಾರುಗಳಲ್ಲಿ ಫಂಕ್ಷನ್‌ಗೆ ಆಗಮಿಸಿದ್ದವರು ಫಂಕ್ಷನ್ ಹಾಲ್ ಮುಂಭಾಗದ ಹಳೇ ಬೆಂಗಳೂರು ರಸ್ತೆಯಲ್ಲಿ ನೂರು ಮೀಟರ್ ಉದ್ದಕ್ಕೆ ವಾಹನಗಳನ್ನು ನಿಲ್ಲಿಸಿದ್ದರು. ಪರಿಣಾಮ ಟ್ರಾಫಿಕ್ ಜಾಮ್ ಉಂಟಾಯಿತು.
    ಏತನ್ಮಧ್ಯೆ, ಕೋವಿಡ್ 19 ಹರಡುವಿಕೆ ಪ್ರಸ್ತುತ ಸಂದರ್ಭದಲ್ಲಿ ನೂರಾರು ಜನರು ಒಂದೆಡೆ ಸೇರಿದ ಕಾರಣ ಭೀಮನಗರದ ಹೊಸಬೀದಿ ನಿವಾಸಿಗಳು ಗಾಬರಿಗೊಂಡು ಗುಂಪು ಗುಂಪಾಗಿ ಸೇರಿ ವಿರೋಧ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಪಟ್ಟಣದ ಯಾವುದೇ ಕಲ್ಯಾಣ ಮಂಟಪ ಸೇರಿದಂತೆ ಇತರ ಫಂಕ್ಷನ್ ಹಾಲ್‌ಗಳು ಜಿಲ್ಲಾಡಳಿತದ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿಲ್ಲ. ಇಲ್ಲಿನ ಫಂಕ್ಷನ್ ಹಾಲ್‌ನಲ್ಲಿ ಕಳೆದೊಂದು ವಾರದಿಂದ 3 ಮದುವೆಗಳು ನಡೆದಿವೆ. ಪರಸ್ಪರ ಅಂತರ ಕಾಯ್ದುಕೊಳ್ಳದೆ ರಾಜಾರೋಷವಾಗಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಇದರಿಂದ ಈ ಭಾಗದ ಜನರಿಗೆ ಕರೊನಾ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ ಎಂದು ನಿವಾಸಿಗಳು ಪೊಲೀಸ್ ಅಧಿಕಾರಿಗಳ ಎದುರು ಅಳಲು ತೋಡಿಕೊಂಡರು.
    ಎಚ್ಚೆತ್ತ ಪೊಲೀಸರು ರಸ್ತೆಯಲ್ಲಿ ನಿಲ್ಲಿಸಿದ್ದ ಕಾರುಗಳನ್ನು ತೆರವುಗೊಳಿಸಿದರು. ಸ್ಥಳೀಯ ನಗರಸಭೆ ಮತ್ತು ತಾಲೂಕು ಆಡಳಿತದ ಸೂಚನೆಯಿಲ್ಲದೇ ಮದುವೆ ಸಮಾರಂಭಗಳನ್ನು ನಡೆಸದಂತೆ ಫಂಕ್ಷನ್ ಹಾಲ್ ವ್ಯವಸ್ಥಾಪಕರು ಹಾಗೂ ಮುಸ್ಮಿಮರು ಸಮುದಾಯದ ಹಿರಿಯ ಮುಖಂಡರಿಗೆ ಸೂಚಿಸಿದರು . ಅಲ್ಲಲ್ಲಿ ಗುಂಪು ಸೇರಿದ್ದ ನಿವಾಸಿಗಳನ್ನು ಸಮಾಧಾನಪಡಿಸಿ ಕರೊನಾ ಆತಂಕ ಕುರಿತು ತಹಸೀಲ್ದಾರ್ ಅವರ ಗಮನಕ್ಕೆ ತರುವ ಭರವಸೆ ನೀಡಿ ತೆರಳಿದರು.
    ಎಸಿಗೆ ದೂರು ನೀಡಲು ನಿರ್ಧಾರ: ಈ ನಡುವೆ ಭೀಮನಗರದ ಹೊಸ ಬೀದಿ ನಿವಾಸಿಗಳು ಜೂನ್ 29 ರಂದು ತಮ್ಮ ಬಡಾವಣೆಯಲ್ಲಿ ಕರೊನಾ ಭೀತಿಯಿಲ್ಲದೆ ಕಾರ್ಯನಿರ್ವಹಿಸುತ್ತಿರುವ ಫಂಕ್ಷನ್ ಹಾಲ್ ವಿರುದ್ಧ ಉಪವಿಭಾಗಾಧಿಕಾರಿ ನಿಖಿತ ಎಂ.ಚಿನ್ನಸ್ವಾಮಿ ಅವರಿಗೆ ದೂರು ನೀಡಲು ಮುಖಂಡ ರಾದ ಪಿ.ಕೃಷ್ಣರಾಜ್, ಜಗದೀಶ್, ಪ್ರಭಾಕರ್ ಅವರು ನಿರ್ಧರಿಸಿದ್ದಾರೆ. ಕರೊನಾ ಸೋಂಕು ಹೆಚ್ಚಾಗಿರುವ ಜಿಲ್ಲೆಗಳ ಜನರು ಇಲ್ಲಿನ ಫಂಕ್ಷನ್ ಹಾಲ್‌ಗೆ ಬರುವುದರಿಂದ ಸುತ್ತಲಿನ ನಿವಾಸಿಗಳಲ್ಲಿ ಕೋವಿಡ್ 19 ಭೀತಿ ಹುಟ್ಟಿಸುತ್ತಿದೆ. ಈ ನಡುವೆ ಈ ಭಾಗದ ಜನರಿಗೆ ಮುಂದಿನ ದಿನಗಳಲ್ಲಿ ಕರೊನಾ ಸೋಂಕು ಕಂಡು ಬಂದಲ್ಲಿ ಫಂಕ್ಷನ್‌ಹಾಲ್ ವ್ಯವಸ್ಥಾಪಕರನ್ನೇ ನೇರ ಹೊಣೆ ಮಾಡಬೇಕು ಎಂದು ಆಗ್ರಹಿಸಲು ಭಾನುವಾರ ಸಭೆ ನಡೆಸಿ ತೀರ್ಮಾನಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts