More

    ದೇವರಾಜ ಅರಸು ಹಿಂದುಳಿದ ನಿಗಮ

    ಧಾರವಾಡ: ಅಗತ್ಯವುಳ್ಳ ವಿದ್ಯಾರ್ಥಿಗಳಿಗೆ ಸಾಲ ಸೌಲಭ್ಯ ನೀಡಿಲ್ಲ. ಗಂಗಾ ಕಲ್ಯಾಣ ಯೋಜನೆಯಡಿ ಒಂದೇಒಂದು ಕೊಳವೆಬಾವಿ ಕೊರೆಸಿಲ್ಲ. ಸ್ವಯಂ ಉದ್ಯೋಗ ಚಟುವಟಿಕೆಗಳಿಗೆ ಸಾಲ ಮತ್ತು ಸಹಾಯಧನ ವಿತರಿಸಿಲ್ಲ. ಇದು ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ 2020- 21ನೇ ಆರ್ಥಿಕ ವರ್ಷದ ಶೂನ್ಯ ಸಾಧನೆ!

    ಸಾಮಾಜಿಕ ನ್ಯಾಯದ ಹರಿಕಾರ, ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಹೆಸರಲ್ಲಿ ಸ್ಥಾಪಿತವಾದ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು ಸಾಧನೆಯಲ್ಲಿ ಹಿಂದುಳಿದಿದೆ. ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗಾಗಿ ಕಾರ್ಯನಿರ್ವಹಿಸುವುದನ್ನು ಮರೆತಂತಿದೆ.

    ನಿಗಮದ ಅಡಿ ಪ್ರತಿ ಜಿಲ್ಲೆಗೆ ಒಂದರಂತೆ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ. ವಿವಿಧ ಯೋಜನೆಗಳಡಿ ಅರ್ಹ ಫಲಾನುಭವಿಗಳು ನಿಗಮದ ಸಹಾಯಧನಕ್ಕಾಗಿ ವರ್ಷಪೂರ್ತಿ ಅಲೆದಾಡಿದರೂ ಪ್ರಯೋಜನವಾಗಿಲ್ಲ. ಆರ್ಥಿಕ ವರ್ಷ ಮುಗಿಯುತ್ತ ಬಂದರೂ ಸರ್ಕಾರ ಕರೊನಾ ನೆಪವೊಡ್ಡಿ ಅನಾದರ ತೋರಿದೆ.

    ಅರಿವು ಸಾಲಕ್ಕಾಗಿ ಅಲೆದಾಟ: ಪ್ರವರ್ಗ 1, 2ಎ, 3ಎ, 3ಬಿಗೆ ಸೇರಿದ ವಾರ್ಷಿಕ ಆದಾಯ 3.50 ಲಕ್ಷ ಮೀರದ ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ ವಿವಿಧ 28 ಪದವಿಗಳ ವ್ಯಾಸಂಗಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ‘ಅರಿವು- ಶೈಕ್ಷಣಿಕ ಸಾಲ’ ಯೋಜನೆಯಡಿ ಸಾಲ ಸೌಲಭ್ಯ ಒದಗಿಸಲಾಗುತ್ತದೆ. ಆದರೆ, ಈ ಕೋರ್ಸ್​ಗಳ ಒಂದು ವರ್ಷ ಮುಗಿಯುತ್ತ ಬಂದಿದೆ. ಸಾಲಕ್ಕಾಗಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ ಇಂದು- ನಾಳೆ ಎನ್ನುತ್ತ ವಿದ್ಯಾರ್ಥಿಗಳು ಕಚೇರಿಗೆ ಅಲೆದಾಡುವುದು ತಪ್ಪಿಲ್ಲ.

    ಗಂಗಾ ಕಲ್ಯಾಣವೂ ಸ್ಥಗಿತ: ಹಿಂದುಳಿದ ಸಣ್ಣ ಮತ್ತು ಅತಿ ಸಣ್ಣ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಯೋಜನೆಯೂ ಈ ಬಾರಿ ಸ್ಥಗಿತಗೊಂಡಿದೆ. ವೈಯಕ್ತಿಕ ನೀರಾವರಿ ಕೊಳವೆ ಬಾವಿ ಕೊರೆಯಲು ಘಟಕ ವೆಚ್ಚ 2.50 ಲಕ್ಷ ರೂ. ಮೀಸಲಿದೆ. 2 ಲಕ್ಷ ರೂ. ಸಹಾಯಧನ ಹಾಗೂ 50,000 ರೂ.ಗೆ ವಾರ್ಷಿಕ ಶೇ. 4ರ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿತ್ತು. ಅರ್ಹ ರೈತರು ಕೊಳವೆ ಬಾವಿ ಕೊರೆಸಲು ಯೋಜಿಸಿ ಅರ್ಜಿ ಸಲ್ಲಿಕೆಗಾಗಿ ಕಾದು ಕುಳಿತಿದ್ದಾರೆ.

    ಅದೇ ರೀತಿ ಚೈತನ್ಯ ಸಹಾಯಧನ ಯೋಜನೆ, ಸ್ವಯಂ ಉದ್ಯೋಗ ವೈಯಕ್ತಿಕ ಸಾಲ, ಕಿರುಸಾಲ, ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣಕ್ಕಾಗಿ ಬಡ್ಡಿರಹಿತ ಸಾಲ ಯೋಜನೆಗಳು ನಿಗಮದಿಂದ ಅನುಷ್ಠಾನಗೊಂಡಿಲ್ಲ. ಎಲ್ಲ ಯೋಜನೆಗಳಿಗೆ ಅರ್ಜಿ ಸ್ವೀಕಾರ ಕೂಡ ನಡೆದಿಲ್ಲ.

    ಗುರಿ- ಧ್ಯೇಯೋದ್ದೇಶ

    ನಿಗಮವು ಸ್ವಯಂ ಉದ್ಯೋಗ ಚಟುವಟಿಕೆಗಳಿಗೆ ಸಾಲ ಮತ್ತು ಸಹಾಯಧನ ರೂಪದಲ್ಲಿ ನೆರವು ನೀಡಬೇಕು. ಸಾಂಪ್ರದಾಯಿಕ ಕುಶಲಕರ್ವಿುಗಳು ಮತ್ತು ವೃತ್ತಿಪರ ಗುಂಪುಗಳ ಕೌಶಲ ಹೆಚ್ಚಿಸುವುದು ಮತ್ತು ಮಾರುಕಟ್ಟೆ ಸೌಲಭ್ಯ ಒದಗಿಸಬೇಕು. ಸಣ್ಣ ಮತ್ತು ಅತಿ ಸಣ್ಣ ರೈತರ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸುವ ಗುರಿ- ಧ್ಯೇಯೋದ್ದೇಶ ಹೊಂದಿದೆ. ಹಿಂದುಳಿದ ವರ್ಗಗಳ ಆರ್ಥಿಕ ಪ್ರಗತಿ, ಸ್ವಯಂ ಉದ್ಯೋಗಕ್ಕೆ ಉತ್ತೇಜನ ನೀಡಬೇಕಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿ ಒಂದೂ ಯೋಜನೆ ಕಾರ್ಯಗತಗೊಂಡಿಲ್ಲ.

    ದ್ವಿಚಕ್ರ ವಾಹನ ಖರೀದಿಗಷ್ಟೇ ಅನುದಾನ

    ನಿಗಮಕ್ಕೆ 2020- 21ನೇ ಸಾಲಿನಲ್ಲಿ ಕೇವಲ ಒಂದು ಯೋಜನೆಗೆ ಮಾತ್ರ ಅನುದಾನ ಬಿಡುಗಡೆಯಾಗಿದೆ. ಇದೇ ಮೊದಲ ಬಾರಿ ದ್ವಿಚಕ್ರ ವಾಹನಗಳ ಖರೀದಿಗೆ ಸಹಾಯಧನ ನೀಡಲಾಗುತ್ತಿದೆ. ಜೊಮ್ಯಾಟೋ, ಸ್ವಿಗ್ಗಿ, ಉಬೇರ್, ಅಮೇಜಾನ್, ಇತರ ಇ- ವಾಣಿಜ್ಯ ಸಂಸ್ಥೆಗಳಲ್ಲಿ ಉದ್ಯೋಗಿಗಳಾಗಿ ಮನೆ ಬಾಗಿಲಿಗೆ ಉತ್ಪನ್ನ ತಲುಪಿಸುತ್ತಿರುವವರು ಸಹಾಯಧನ ಪಡೆಯಲು ಅರ್ಹರು. ರಾಜ್ಯಾದ್ಯಂತ 1,000 ದ್ವಿಚಕ್ರ ವಾಹನ ಖರೀದಿಗೆ ಸಹಾಯಧನ ಮೀಸಲಿದೆ. ಹಲವು ಷರತ್ತುಗಳನ್ನು ವಿಧಿಸಿರುವುದರಿಂದ ಬಹುತೇಕ ಕಡೆಗಳಲ್ಲಿ ಈವರೆಗೆ ಅರ್ಹ ಫಲಾನುಭವಿಗಳ ಆಯ್ಕೆ ನಡೆದಿಲ್ಲ.

    2020- 21ನೇ ಆರ್ಥಿಕ ಸಾಲಿಗೆ ನಿಗಮಕ್ಕೆ 80 ಕೋಟಿ ರೂ. ಅನುದಾನ ಮೀಸಲಿತ್ತು. ಆದರೆ, ಕರೊನಾ ಹಿನ್ನೆಲೆಯಲ್ಲಿ ಬಹುತೇಕ ಯೋಜನೆಗಳ ಅನುಷ್ಠಾನ ಸಾಧ್ಯವಾಗಿಲ್ಲ. ಇದ್ದ ಅನುದಾನವನ್ನು ಬ್ಯಾಕ್​ಲಾಗ್ ಯೋಜನೆಗಳಿಗೆ ಬಟವಡೆ ಮಾಡಲಾಗಿದೆ. ಸದ್ಯ ಇ- ವಾಣಿಜ್ಯ ಸಂಸ್ಥೆಗಳಲ್ಲಿ ಉದ್ಯೋಗಿ ಗಳಾಗಿರುವ ಯುವಕರಿಗೆ 25,000 ರೂ. ಸಹಾಯಧನದಂತೆ ರಾಜ್ಯಾದ್ಯಂತ 1,000 ದ್ವಿಚಕ್ರ ವಾಹನ ವಿತರಣೆ ಮಾಡಲಾಗುತ್ತಿದೆ. ಮುಂದಿನ ಆರ್ಥಿಕ ವರ್ಷಕ್ಕೆ ಹೆಚ್ಚಿನ ಅನುದಾನಕ್ಕೆ ಬೇಡಿಕೆ ಇಡಲಾಗಿದೆ.

    | ರಘು ಕೌಟಿಲ್ಯ

    ಅಧ್ಯಕ್ಷರು, ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts