More

    ಕೀ ತೆರೆಯದ ಖಾಸಗಿ ಆಸ್ಪತ್ರೆಗಳು

    ಬೆಳಗಾವಿ: ಕರೊನಾ ಸೋಂಕು ಹರಡುವಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಜಿಲ್ಲಾದ್ಯಂತ ಖಾಸಗಿ ವೈದ್ಯರು ನಡೆಸುತ್ತಿದ್ದ ಕ್ಲಿನಿಕ್‌ಗಳು ಹಾಗೂ ಆಸ್ಪತ್ರೆಗಳು ಬಾಗಿಲು ಮುಚ್ಚಿವೆ. ಪರಿಣಾಮ ಜನರು ಆರೋಗ್ಯ ಸೇವೆ ಪಡೆಯಲು ಪರದಾಡುವಂತಾಗಿದೆ.

    ಕರೊನಾ ಭೀತಿಯ ಜತೆಗೆ ಲಾಕ್‌ಡೌನ್ ಘೋಷಣೆಯಿಂದಾಗಿ ಹಳ್ಳಿಗಳಿಗೆ ಭೇಟಿ ನೀಡಿ ಉಪಚರಿಸುತ್ತಿದ್ದ ಬಹುತೇಕ ಎಲ್ಲ ಖಾಸಗಿ ವೈದ್ಯರು ಇದೀಗ ಮನೆ ಬಿಟ್ಟು ಹೊರಗೆ ಬರುತ್ತಿಲ್ಲ. ಇನ್ನು, ನಗರ ಪ್ರದೇಶಗಳಲ್ಲಿ ಕೆಲ ದೊಡ್ಡ ಖಾಸಗಿ ಆಸ್ಪತ್ರೆ ಹೊರತುಪಡಿಸಿದರೆ ಸಣ್ಣ-ಪುಟ್ಟ ಖಾಸಗಿ ಕ್ಲಿನಿಕ್‌ಗಳ ಬಾಗಿಲು ಬಂದ್ ಆಗಿವೆ.

    ಸರಿಯಾಗಿ ಹಾಗೂ ಸೂಕ್ತ ಸಮಯಕ್ಕೆ ಖಾಸಗಿ ವೈದ್ಯರಿಂದ ಚಿಕಿತ್ಸೆ ಸಿಗದೆ ಸಾರ್ವಜನಿಕರು ಅಲೆದಾಟ ನಡೆಸುತ್ತಿದ್ದಾರೆ. ನಗರ, ಪಟ್ಟಣಗಳಲ್ಲಿರುವ ಸರ್ಕಾರಿ ಆಸ್ಪತ್ರೆಗಳತ್ತ ಹೆಜ್ಜೆ ಇಡುತ್ತಿದ್ದಾರೆ. ಆದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಈಗ ಕರೊನಾ ದೃಢಪಟ್ಟ ಹಾಗೂ ಶಂಕಿತ ರೋಗಿಗಳಿಗೆ ಹಾಗೂ ವೈದ್ಯಕೀಯ ತುರ್ತು ಆರೋಗ್ಯ ಸೇವೆ ಇರುವವರಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿದೆ. ಹಾಗಾಗಿ ಜ್ವರ, ಕೆಮ್ಮು, ಶೀತ, ದಮ್ಮು, ತಲೆನೋವು ಹಾಗೂ ಸಣ್ಣ ಪುಟ್ಟ ಗಾಯಗಳಿಂದ ಬಳಲುತ್ತಿರುವವರು ಚಿಕಿತ್ಸೆಗಾಗಿ ಪರದಾಡುತ್ತಿದ್ದಾರೆ. ಅದರಲ್ಲೂ ರಕ್ತದೊತ್ತಡ, ಮಧುಮೇಹ, ಮೂಲವ್ಯಾಧಿಯಂತಹ ಕಾಯಿಲೆಗೆ ತುತ್ತಾದವರು ಖಾಸಗಿ ವೈದ್ಯರ ಬಳಿ ನಿಯಮಿತ ತಪಾಸಣೆ ಮಾಡಿಸಿಕೊಳ್ಳುತ್ತಿದ್ದವರೆಲ್ಲ ಸದ್ಯ ಚಿಂತೆಗೀಡಾಗಿದ್ದಾರೆ.

    ಹೊರರೋಗಿಗಳ ವಿಭಾಗ ಬಂದ್: ನಗರ ಹಾಗೂ ಪಟ್ಟಣಗಳಲ್ಲಿ ಬಾಗಿಲು ತೆರೆದಿರುವ ಬೆರಳೆಣಿಕೆಯಷ್ಟು ಖಾಸಗಿ ಆಸ್ಪತ್ರೆಗಳು ಹೊರರೋಗಿಗಳ ವಿಭಾಗ ಬಂದ್ ಮಾಡಿವೆ. ಆಸ್ಪತ್ರೆಗೆ ದಾಖಲಾದ ಒಳರೋಗಿಗಳು ಹಾಗೂ ತುರ್ತು ಚಿಕಿತ್ಸೆಗಾಗಿ ಬಂದವರಿಗಷ್ಟೇ ವೈದ್ಯಕೀಯ ಸೇವೆ ನೀಡುತ್ತಿವೆ. ಇಂತಹ ಆಸ್ಪತ್ರೆಗಳಲ್ಲೂ ಕೂಡ ಕೆಮ್ಮು ಮತ್ತು ಜ್ವರದಿಂದ ಬಳಲುವವರು ಹೋದರೆ ವೈದ್ಯರು ಕರೊನಾ ಸೋಂಕಿನ ಭೀತಿಯಿಂದ ಅವರನ್ನು ಆಸ್ಪತ್ರೆ ಒಳಗೆ ಪ್ರವೇಶಿಸಲು ಬಿಡದೆ ಸರ್ಕಾರಿ ಆಸ್ಪತ್ರೆಗೆ ಕಳುಹಿಸುತ್ತಿದ್ದಾರೆ.

    ಮಾತ್ರೆಗಳೇ ಗತಿ!: ಬೆಳಗಾವಿ ಜಿಲ್ಲೆಯಲ್ಲಿ 10 ಜನರಿಗೆ ಕರೊನಾ ಸೋಂಕು ದೃಢವಾಗಿದ್ದರಿಂದ ಸರ್ಕಾರಿ ವೈದ್ಯರಿಗೆ ಸೋಂಕು ನಿಯಂತ್ರಣದ ಹೊಣೆಗಾರಿಕೆ ಮತ್ತು ಕೆಲಸದ ಒತ್ತಡವನ್ನೂ ಹೆಚ್ಚಿಸಿದೆ. ಹೀಗಾಗಿ ಸರ್ಕಾರಿ ಆಸ್ಪತ್ರೆಗಳಿಗೆ ತೆರಳುವ ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ ದೊರಕುತ್ತಿಲ್ಲ. ಅನಾರೋಗ್ಯದಿಂದ ಬಳಲುವವರು ಮನೆಯಿಂದ ಹೊರಗೆ ಹೋದರೆ, ‘ಲಾಕ್‌ಡೌನ್ ಸಂಕಷ್ಟ’ಕ್ಕೆ ಸಿಲುಕಬೇಕಾಗುತ್ತದೆ. ಹೀಗಾಗಿ ಎದುರಾಗುವ ಸಮಸ್ಯೆ ತಪ್ಪಿಸಿಕೊಳ್ಳಲು ಅನಿವಾರ್ಯವಾಗಿ ಸ್ಥಳೀಯ ಔಷಧ ಮಳಿಗೆಗಳಲ್ಲಿ ದೊರೆಯುವ ಮಾತ್ರೆಗಳನ್ನೇ ಸೇವಿಸಿ ತಾತ್ಕಾಲಿಕ ಉಪಶಮನ ಕಂಡುಕೊಳ್ಳುತ್ತಿದ್ದಾರೆ. ಆದರೆ, ತಿಂಗಳಿಗೊಮ್ಮೆ ರಕ್ತ ಪರೀಕ್ಷೆ, ನಿತ್ಯವೂ ಮಾತ್ರೆ ತೆಗೆದುಕೊಳ್ಳುತ್ತಿದ್ದ ಮಧುಮೇಹಿಗಳ ಸಂಕಟ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

    ವೃದ್ಧರ ಅಳಲು: ನನಗೆ ಬಿಪಿ, ಶುಗರ್ ಇದೆ. 15 ದಿನಕ್ಕೊಮ್ಮೆ ಬೆಳಗಾವಿ ಅಥವಾ ಗೋಕಾಕ ಖಾಸಗಿ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳುತ್ತಿದ್ದೆ. ವೈದ್ಯರ ಸಲಹೆ ಮೇರೆಗೆ ಆಹಾರ ಕ್ರಮ, ಮಾತ್ರೆ ಬದಲಾಸಿಕೊಂಡು ಬರುತ್ತಿದ್ದೆ. ಆದರೆ, ಇತ್ತೀಚೆಗೆ ಮನೆಯಿಂದ ಹೊರಗೆ ಹೋಗಲಾಗುತ್ತಿಲ್ಲ. ಲಾಕ್‌ಡೌನ್ ಕೊನೆಗೊಳ್ಳುವ ಏ. 14ರ ವರೆಗೆ ಹೇಗಪ್ಪಾ ಅನಾರೋಗ್ಯ ಸಹಿಸಿಕೊಳ್ಳುವುದು ಎಂದು ಹೆಸರು ಹೇಳಲಿಚ್ಛಿಸದ ವಯೋವೃದ್ಧರು ಅಳಲು ತೋಡಿಕೊಳ್ಳುತ್ತಾರೆ. ಲಾಕ್‌ಡೌನ್ ಆದೇಶ ಜನಜೀವನವನ್ನೇ ಸಂಪೂರ್ಣ ಕಟ್ಟಿಹಾಕಿದ್ದು, ಜನತೆ ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದಾರೆ.

    ಸರ್ಕಾರದ ಆದೇಶಕ್ಕಿಲ್ಲ ಕಿಮ್ಮತ್ತು

    ಕಳೆದ ವಾರವಷ್ಟೇ ಎಲ್ಲ ಜಿಲ್ಲಾಡಳಿತ ಜಿಲ್ಲೆಯಲ್ಲಿರುವ ಎಲ್ಲ ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳ ವೈದ್ಯರು ಕಡ್ಡಾಯವಾಗಿ ಬಾಗಿಲು ತೆರೆದು ತಪಾಸಣೆ ನಡೆಸಿ ಔಷಧ ನೀಡಬೇಕು. ಬೆಡ್ ಹೊಂದಿರುವ ಆಸ್ಪತ್ರೆಗಳು ಐಸೋಲೇಷನ್ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿತ್ತು. ಆದರೆ, ಡಿಸಿ ಆದೇಶವನ್ನು ಬಹುತೇಕ ಆಸ್ಪತ್ರೆ, ಕ್ಲಿನಿಕ್‌ಗಳ ವೈದ್ಯರು ಪಾಲಿಸುತ್ತಿಲ್ಲ. ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರೂ ಸಹ ರಾಜ್ಯದ ಎಲ್ಲ ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳು ಬಾಗಿಲು ತೆರೆಯಬೇಕು. ಬಾಗಿಲು ಮುಚ್ಚಿದರೆ ಅಂತಹ ಆಸ್ಪತ್ರೆಗಳ ವೈದ್ಯಕೀಯ ಮಾನ್ಯತೆ ರದ್ದು ಮಾಡುವುದಾಗಿ ಎಚ್ಚರಿಸಿದ್ದರು. ಆದರೆ, ಬೆಳಗಾವಿ ಸೇರಿ ರಾಜ್ಯದ ಬಹುತೇಕ ಜಿಲ್ಲೆಯ ಕೆಲ ಖಾಸಗಿ ಆಸ್ಪತ್ರೆಗಳ ವೈದ್ಯರು ಸರ್ಕಾರದ ಆದೇಶಕ್ಕೆ ಕಿಮ್ಮತ್ತು ನೀಡದಿರುವುದು ಸ್ಪಷ್ಟವಾಗಿದೆ.

    ವಿವಿಧ ಕಾಯಿಲೆಗೆ ತುತ್ತಾದ ಜನರು ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳಗೆ ಹೋಗುತ್ತಿದ್ದಾರೆ. ಆದರೆ, ಕರೊನಾ ಭೀತಿಯಿಂದ ವೈದ್ಯರು ಕ್ಲಿನಿಕ್ ಬಂದ್ ಮಾಡಿದ್ದಾರೆ. ಕೆಲ ವೈದರು ಆಸ್ಪತ್ರೆಯ ಬಾಗಿಲು ತೆರೆದರೂ ಬೇರೆ ಬೇರೆ ನೆಪ ಹೇಳಿಕೊಂಡು ಸಾರ್ವಜನಿಕರಿಗೆ ಚಿಕಿತ್ಸೆ ನೀಡುತ್ತಿಲ್ಲ. ಹಾಗಾಗಿ ಬಡಜನರಿಗೆ ಔಷಧ ಅಂಗಡಿಗಳೇ ಗತಿಯಾಗಿವೆ.
    | ಬಸವರಾಜ ನಾಗಪ್ಪ ಖಾನಪ್ಪನವರ, ಗೋಕಾಕ ನಗರದ ನಿವಾಸಿ

    | ಅಕ್ಕಪ್ಪ ಮಗದುಮ್ಮ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts