More

    ಸ್ವರೂಪ ಕಳೆದುಕೊಂಡ ಮುಳಬಾಗಿಲು ನಗರದ ಸು ಕೆರೆಗಳು

    ಎ.ಅಪ್ಪಾಜಿಗೌಡ, ಮುಳಬಾಗಿಲು
    ನಗರದ ಸುತ್ತಮುತ್ತಲಿರುವ ಕೆರೆ-ಕುಂಟೆ ಅಭಿವೃದ್ಧಿ ಕಾಣದೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಒತ್ತುವರಿ, ಸವಕಳಿಯಿಂದ ಮೂಲ ಸ್ವರೂಪವೇ ಬದಲಾಗಿ ಅಂತರ್ಜಲ ವೃದ್ಧಿಯಾಗದೆ ಕುಡಿಯುವ ನೀರಿಗೂ ಅಭಾವ ಉಂಟಾಗಿದೆ.

    ನಗರದ ಬಹುತೇಕ ಕೆರೆಯಂಗಳದಲ್ಲಿ ಕಳೆ ಸೇರಿ ಗಿಡ-ಗಂಟಿ, ಮುಳ್ಳಿನ ಮರಗಳು ಆವರಿಸಿದ್ದು ಕೆರೆಯಲ್ಲಿ ಹೂಳು ತೆಗೆದು ಹಲವಾರು ದಶಕಗಳೇ ಕಳೆದಿವೆ. ಈ ಬಗ್ಗೆ ಗಮನ ಹರಿಸದಿರುವುದರಿಂದ ಪುರಾತನ ಕಾಲದ ಕೆರೆಗಳು ಜನರ ಪಾಲಿಗೆ ಇದ್ದೂ ಇಲ್ಲದಂತಾಗಿದೆ.

    ಮುಳಬಾಗಿಲು ನಗರದ ಅಂಜನಾದ್ರಿ ಬೆಟ್ಟದ ತಪ್ಪಲಿನಲ್ಲಿರುವ ಹೊಸಕೆರೆ, ಸೋಮೇಶ್ವರ ಕೆರೆ, ಇಂಡ್ಲು ಕೆರೆ, ದೊಡ್ಡಪಾಪನ ಕೆರೆ, ಸೀಗೇನಹಳ್ಳಿ ಕೆರೆಗಳು ನೀರಿನ ಜೀವಸೆಲೆಯಾಗಿವೆ. ಇದಲ್ಲದೆ ಕುರುಡಮಲೈ ಕೂಟಾದ್ರಿ ಬೆಟ್ಟ ಮತ್ತು ಮುಳಬಾಗಿಲಿನ ಅಂಜನಾದ್ರಿ ಬೆಟ್ಟದ ನಡುವೆ ಇರುವ ಹಲವಾರು ಕೆರೆ ಕುಂಟೆಗಳಲ್ಲಿ ಗಿಡಗಂಟಿ, ಮುಳ್ಳಿನ ಮರ ಆವರಿಸಿದ್ದು ಕೆರೆ ಸ್ವರೂಪ ಕಳೆದುಕೊಂಡು ದಿನದಿಂದ ದಿನಕ್ಕೆ ನೀರಿನ ಮಟ್ಟ ಕ್ಷೀಣಿಸುತ್ತಿದೆ.

    ಜನಪ್ರತಿನಿಧಿಗಳ ನಿರ್ಲಕ್ಷ್ಯ: ಕೆರೆಗಳಲ್ಲಿ ಬೆಳೆದಿದ್ದ ಗಿಡಗಂಟಿ ಮತ್ತು ಮುಳ್ಳಿನ ಮರ ತೆರವು ಮಾಡಿ ಅಭಿವೃದ್ಧಿ ಮಾಡುವ ಜತೆಗೆ ಈ ಭಾಗದಲ್ಲಿ ಬೀಳುವ ಮಳೆ ನೀರು ಸಂಗ್ರಹಣೆ ಮಾಡುವ ಸಣ್ಣ ಪ್ರಮಾಣದ ಡ್ಯಾಂ ನಿರ್ಮಿಸಿದರೆ ನಗರ ಸೇರಿ ಸುತ್ತಮುತ್ತಲಿರುವ ಹತ್ತಾರು ಹಳ್ಳಿಗಳಿಗೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬಹುದು. ಆದರೆ ಈ ಬಗ್ಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸರ್ಕಾರದ ಗಮನ ಸೆಳೆದು ನೀರಾವರಿ ಯೋಜನೆಗಳನ್ನು ಸ್ಥಳೀಯವಾಗಿಯೇ ಅನುಷ್ಠಾನ ಮಾಡುವಲ್ಲಿ ನಿರ್ಲಕ್ಷ್ಯ ವಹಿಸಿದ್ದರಿಂದ ಕೆರೆಗಳು ಅವನತಿಯತ್ತ ಸಾಗುತ್ತಿವೆ.

    ಕೆರೆ ಇದ್ದರೂ ನೀರಿಲ್ಲ: ಮುಳಬಾಗಿಲು ನಗರದ ಜನಸಂಖ್ಯೆ 70 ಸಾವಿರಕ್ಕೆ ತಲುಪಿದ್ದು, ಪ್ರತಿನಿತ್ಯ ನಗರಕ್ಕೆ ಬಂದು ಹೋಗುವವರ ಸಂಖ್ಯೆಯೂ ಅಧಿಕವಾಗಿದೆ. ಕನಿಷ್ಠ ಮೂಲ ಸೌಲಭ್ಯವಿಲ್ಲದ ತಾಲೂಕು ಕೇಂದ್ರದ ಅಭಿವೃದ್ಧಿಗೆ ಪೂರಕ ಚಟುವಟಿಕೆ ಆರಂಭವಾಗಿಲ್ಲ. ಕೆರೆ-ಕುಂಟೆ ಅಭಿವೃದ್ಧಿ ಮಾಡಿ ಮಳೆನೀರು ಸಂಗ್ರಹಣೆಗೆ ಅವಕಾಶ ಮಾಡಿಕೊಟ್ಟರೆ ನಗರದಲ್ಲಿ ನೀರಿನ ಅಭಾವ ಕಾಡುವುದಿಲ್ಲ.

    ಕೆರೆ ಅಭಿವೃದ್ಧಿ ಬಗ್ಗೆ ಗಮನ ಸೆಳೆದಿರುವುದು ಸ್ವಾಗತಾರ್ಹ. ಮುಳಬಾಗಿಲಿನ ಇಂಡ್ಲು ಕೆರೆ ಮತ್ತು ಅಂಜನಾದ್ರಿ ಬೆಟ್ಟದ ತಪ್ಪಲಿನಲ್ಲಿರುವ ಹೊಸಕೆರೆಯನ್ನು ಒಂದೆರಡು ದಿನದಲ್ಲೇ ವೈಯಕ್ತಿಕ ವೆಚ್ಚದಲ್ಲಿ ಸ್ವಚ್ಛಗೊಳಿಸಿ ಕೇಂದ್ರ ಸರ್ಕಾರದ ಅಟಲ್ ಭೂಜಲ್ ಯೋಜನೆಯಡಿ ಅಭಿವೃದ್ಧಿ ಪಡಿಸಲಾಗುವುದು.
    ಎಸ್. ಮುನಿಸ್ವಾಮಿ, ಸಂಸದ

    ನಗರಸಭೆ ಪೌರಾಯುಕ್ತ ಮತ್ತು ತಹಸೀಲ್ದಾರ್ ಜತೆ ಸಂಸದರು ಚರ್ಚಿಸಿದ್ದು, ಕೆರೆ ಸ್ವಚ್ಛತೆ ಕಾರ್ಯವನ್ನು ಸೋಮವಾರ ಅಥವಾ ಬುಧವಾರ ಆರಂಭಿಸಲಿದ್ದಾರೆ.
    ಪಿ.ಎಂ.ಕೃಷ್ಣಮೂರ್ತಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಮುಳಬಾಗಿಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts