More

    ನೋಟ್​ ಬ್ಯಾನ್​ ಅರಿವಿಲ್ಲದೆ ಹಣ ಸಂಗ್ರಹ: ಅಜ್ಜಿಯ ಜೀವನ ಬದಲಿಸಿತು ಗಾಳಿಯಲ್ಲಿ ಹಾರಿದ ನೋಟು!

    ಕೊಚ್ಚಿ: ಜುಲೈ 10ರಂದು ಕೇರಳದ ಪಲಕ್ಕಾಡ್​ ಜಿಲ್ಲೆಯ ಕೊಟ್ಟಾಯಿಯ ಮೈದಾನದಲ್ಲಿ ಮಕ್ಕಳು ಆಟವಾಡುವಾಗ ಗಾಳಿಯಲ್ಲಿ ಕೆಲ ನೋಟುಗಳು ಹಾರಾಡುವುದನ್ನು ಗಮನಿಸಿ, ಅದರ ಬೆನ್ನತ್ತಿ ಹೋದಾಗ ಅಜ್ಜಿಯೊಬ್ಬಳು ನೆಲದ ಮೇಲೆ ರಾಶಿ ನೋಟುಗಳನ್ನಿಟ್ಟು ಒಣಗಿಸುವ ದೃಶ್ಯವನ್ನು ನೋಡಿ ತಕ್ಷಣ ಪೊಲೀಸರಿಗೆ ಮಾಹಿತಿ ಮುಟ್ಟಿಸುತ್ತಾರೆ.

    ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಜ್ಜಿಯ ವೃತ್ತಾಂತ ಕೇಳಿ ಸಹಾಯಾಹಸ್ತ ಚಾಚುತ್ತಾರೆ. ಅಷ್ಟಕ್ಕೂ ಆಗಿದ್ದೇನೆಂದರೆ, ಕೊಟ್ಟಾಯಿಯಲ್ಲಿನ ಮನೆಯೊಂದರಲ್ಲಿ ಅಜ್ಜಿಯು ಪ್ರತ್ಯೇಕವಾಗಿ ವಾಸಿಸುತ್ತಿದ್ದಾಳೆ. ಅಚ್ಚರಿಯೆಂದರೆ ಅದೇ ಮನೆಯಲ್ಲಿ ಆಕೆಯ ಸಂಬಂಧಿಕರಿದ್ದರೂ ಅವರೊಂದಿಗೆ ಯಾವುದೇ ಸಂಪರ್ಕವನ್ನು ಹೊಂದಿಲ್ಲ. ಅಲ್ಲದೆ, ತನ್ನ ಕೋಣೆಯೊಳಗೆ ಯಾರನ್ನೂ ಬಿಟ್ಟುಕೊಳ್ಳುವುದಿಲ್ಲ.

    ಹೀಗಿರುವಾಗ ಒಮ್ಮೆ ತನ್ನ ಕೋಣೆಯಲ್ಲಿ ಹಾವು ನೋಡುವ ಅಜ್ಜಿ, ಮನೆಯಲ್ಲಿದ್ದ ಒಂದು ಗಂಟಿನ ಚೀಲವನ್ನು ತೆಗೆದು ಹೊರಗಡೆ ಇಡುತ್ತಾಳೆ. ಆದರೆ, ದುರಾದೃಷ್ಟವಶಾತ್​ ಗೋಣಿ ಚೀಲದ ಗಂಟು ಮಳೆ ನೀರಿಗೆ ಒದ್ದೆಯಾಗಿಬಿಡುತ್ತದೆ. ಬಳಿಕ ಗೋಣಿ ಚೀಲವನ್ನು ತೆರೆದು ಅದರಲ್ಲಿದ್ದ ರಾಶಿ ಹಣವನ್ನು ಒಣಗಿಸುವಾಗ ಮಕ್ಕಳು ಅದನ್ನು ಗಮನಿಸುತ್ತಾರೆ.

    ಇದನ್ನೂ ಓದಿ: ರಾಜ್ಯಸಭಾ ಸದಸ್ಯರಾಗಿ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದ ಮಾಜಿ ಪ್ರಧಾನಿ ದೇವೇಗೌಡ

    ಮಕ್ಕಳ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದಾಗ ಅಜ್ಜಿ ರಾಶಿ ನೋಟಿಗಳನ್ನು ತನ್ನ ಮುಂದೆ ಇಟ್ಟುಕೊಂಡು ಒಣಗಿಸುತ್ತಿರುವ ದೃಶ್ಯವನ್ನು ಪೊಲೀಸರು ನೋಡುತ್ತಾರೆ. ರಾಶಿಯಲ್ಲಿ 5 ಮತ್ತು 10 ರೂ. ಸೇರಿದಂತೆ ಸಾಕಷ್ಟು ನಾಣ್ಯಗಳನ್ನು ಸಂಗ್ರಹಿಸಲಾಗಿರುತ್ತದೆ. ಇದನ್ನು ಹೊರತುಪಡಿಸಿದರೆ ಹಣದ ರಾಶಿಯಲ್ಲಿ ಅಮಾನ್ಯೀಕರಣ ನೋಟುಗಳ ಸಹ ಪತ್ತೆಯಾಗಿವೆ. ಬಳಿಕ ಪೊಲೀಸರು ಸ್ಥಳೀಯ ರಾಜಕಾರಣಿಯ ಸಹಾಯದೊಂದಿಗೆ ಅಜ್ಜಿಯ ಹಣವನ್ನು ಒಣಗಿಸಿ, ಲೆಕ್ಕ ಹಾಕಿ ಸ್ಥಳೀಯ ಬ್ಯಾಂಕ್​ನಲ್ಲಿ ಡೆಪಾಸಿಟ್​ ಮಾಡುತ್ತಾರೆ.

    ಹಣದ ರಾಶಿಯಲ್ಲಿ 5 ರೂ. ನಾಣ್ಯ ಮತ್ತು 10 ರೂ. ನೋಟುಗಳು ಹೆಚ್ಚಿಗೆ ಇದ್ದವು. ಇದನ್ನು ಹೊರತುಪಡಿಸಿದರೆ, 30 ಸಾವಿರ ಅಮಾನ್ಯೀಕರಣ ನೋಟುಗಳಿದ್ದವು. ಸುಮಾರು 1.5 ಲಕ್ಷ ರೂ. ಹಣವನ್ನು ಅಜ್ಜಿಯ ಹೆಸರಿನಲ್ಲಿ ಡೆಪಾಸಿಟ್​ ಮಾಡಲಾಗಿದೆ ಎಂದು ಪಲಕ್ಕಾಡ್​ ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಇನ್ನು ಅಜ್ಜಿ ಸಾಕಷ್ಟು ಕಷ್ಟಪಟ್ಟು ಬೇರೆ ಬೇರೆ ಕೆಲಸವನ್ನು ಮಾಡಿ ಹಣವನ್ನು ಸಂಪಾದಿಸಿ ಸಂಗ್ರಹಿಸಿ ಇಟ್ಟುಕೊಂಡಿದ್ದರು. ಮನೆಗೆಲಸ, ಚಿಂದಿ ಆಯುವುದು ಸೇರಿದಂತೆ ದಿನಗೂಲಿ ಕೆಲಸಗಳನ್ನು ಮಾಡಿ ಕಷ್ಟಪಟ್ಟು ಸೇರಿಸಿದ್ದ ಹಣವನ್ನು ಇದೀಗ ಪೊಲೀಸರು ಮಾನವೀಯತೆ ದೃಷ್ಠಿಯಿಂದ ಆಕೆಯ ಹೆಸರಿನಲ್ಲಿ ಬ್ಯಾಂಕ್​ನಲ್ಲಿ ಡೆಪಾಸಿಟ್​ ಮಾಡಿದ್ದಾರೆ.

    2016 ನವೆಂಬರ್​ 8ರಂದು ಕೇಂದ್ರ ಸರ್ಕಾರ ಹೊರಡಿಸಿದ ನೋಟ್​ ಬ್ಯಾನ್​ ಬಗ್ಗೆಯೂ ಅಜ್ಜಿಗೆ ಅರಿವಿಲ್ಲ. ಬ್ಯಾಂಕ್​ ಖಾತೆಯು ಇಲ್ಲದಿರುವುದರಿಂದ ತನ್ನ ಉಳಿತಾಯ ಹಣವನ್ನು ಗೋಣಿ ಚೀಲದಲ್ಲೇ ಸಂಗ್ರಹಿಸಿದ್ದಳು. ಆದರೆ, ಈ ಬಗ್ಗೆ ಆಕೆಯ ಸಂಬಂಧಿಕರಿಗೆ ಯಾವುದೇ ಸುಳಿವು ಇರಲಿಲ್ಲ ಎಂದು ಪೊಲೀಸ್​ ಅಧಿಕಾರಿಗಳು ಹೇಳಿದ್ದಾರೆ. (ಏಜೆನ್ಸೀಸ್​)

    ಟ್ರಂಪ್​ ಹೆಸರಲ್ಲಿ ಬಂದ ಪತ್ರದಲ್ಲಿ ಪ್ರಾಣಘಾತಕ ವಿಷ: ಕಳಿಸಿದ್ಯಾರು? ಆತಂಕದಲ್ಲಿ ಶ್ವೇತಭವನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts