More

    ನೈಋತ್ಯ ರೈಲ್ವೆಗೆ ಕವಚ: ಹೊಸ ತಂತ್ರಜ್ಞಾನ ಅಳವಡಿಕೆಗೆ ಮಾರ್ಗಗಳ ಆಯ್ಕೆ

    | ಆನಂದ ಅಂಗಡಿ ಹುಬ್ಬಳ್ಳಿ

    ರೈಲುಗಳು ಡಿಕ್ಕಿ ಹೊಡೆಯುವುದನ್ನು ತಡೆಯುವುದಕ್ಕಾಗಿ ರೈಲ್ವೆ ಮಾರ್ಗದಲ್ಲಿ ಅಳವಡಿಸಲು ದೇಶೀಯವಾಗಿ ಕವಚ ತಂತ್ರಜ್ಞಾನವನ್ನು ವಿಶೇಷವಾಗಿ ಅಭಿವೃದ್ಧಿಪಡಿಸಲಾಗಿದೆ. ಮುಂಬರುವ ದಿನಗಳಲ್ಲಿ ನೈಋತ್ಯ ವಲಯದ ವ್ಯಾಪ್ತಿಯಲ್ಲಿಯೂ ಈ ತಂತ್ರಜ್ಞಾನ ಅಳವಡಿಸುವುದಕ್ಕಾಗಿ ರೈಲು ಮಾರ್ಗಗಳನ್ನು ಗುರುತಿಸಲಾಗಿದೆ. ರೈಲು ಹಳಿಗಳ ಪಕ್ಕದಲ್ಲಿ ಅಳವಡಿಸುವ ಈ ಕವಚ ತಂತ್ರಜ್ಞಾನದಿಂದ ರೈಲುಗಳ ಮಧ್ಯೆ ಸಂಭವಿಸುವ ಅಪಘಾತ ತಪ್ಪಲಿದೆ. ನೈಋತ್ಯ ರೈಲ್ವೆ ವಲಯದ ವ್ಯಾಪ್ತಿಯ ವಾಸ್ಕೊ-ಲೋಂಡಾ, ಧಾರವಾಡ-ಬಳ್ಳಾರಿ-ಗುಂತಕಲ್- ಗುಂಟೂರ- ವಿಜಯವಾಡ, ವಿಜಯವಾಡ- ಮಚಲಿಪಟ್ಟಣಂ, ಗುಂಟೂರ-ಬೀಬಿನಗರ, ಕಾಜಿಪೇಟ-ವಾಡಿ, ಪುಣೆ-ಮೀರಜ್-ಲೋಂಡಾ-ಹುಬ್ಬಳ್ಳಿ- ಹರಿಹರ-ಚಿಕ್ಕಜಾಜೂರ- ಬಿರೂರ-ಅರಸಿಕೆರೆ-ಯಶವಂತಪುರ- ಜೊಲಾರಪೆಟೈ- ಸಲೇಮ್ ಬೈಪನಹಳ್ಳಿ-ಹೊಸೂರ-ಸಲೇಮ್​ಕರೂರ-ದಿಂದಿಗುಲ್-ಮಧುರೈ- ಕನ್ಯಾಕುಮಾರಿ, ಬೆಂಗಳೂರು-ಮೈಸೂರು ಮಾರ್ಗಗಳಲ್ಲಿ ಕವಚ ತಂತ್ರಜ್ಞಾನ ಅಳವಡಿಸಲಾಗುತ್ತದೆ. ಮೊದಲ ಹಂತದಲ್ಲಿ ಹೆಚ್ಚು ರೈಲುಗಳ ದಟ್ಟಣೆ ಇರುವ ಮಾರ್ಗದಲ್ಲಿ ಕವಚ ತಂತ್ರಜ್ಞಾನ ಅಳವಡಿಕೆಯಾಗಲಿದ್ದು, ನಂತರ ಹಂತ ಹಂತವಾಗಿ ಎಲ್ಲ ಮಾರ್ಗಗಳಿಗೆ ಈ ತಂತ್ರಜ್ಞಾನ ಅಳವಡಿಕೆಯಾಗಲಿದೆ.

    ರೈಲ್ವೆ ಸಚಿವರಿಂದ ಪರೀಕ್ಷೆ: ಕವಚ ತಂತ್ರಜ್ಞಾನ ಅಳವಡಿಸಿರುವ ಮಾರ್ಗದಲ್ಲಿ ಪರೀಕ್ಷಾರ್ಥವಾಗಿ ಶುಕ್ರವಾರವಷ್ಟೇ ರೈಲು ಸಂಚರಿಸಿತ್ತು. ಸಿಕಂದರಾಬಾದ್ ಬಳಿಯ ಗುಲ್ಲಗೂಡ-ಚಿತಗಿಡ್ಡ ನಿಲ್ದಾಣಗಳ ಮಧ್ಯೆ ಸಂಚರಿಸಿದ್ದ ಈ ರೈಲಿನಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಪ್ರಯಾಣಿಸುವ ಮೂಲಕ ಈ ತಂತ್ರಜ್ಞಾನದ ಪ್ರಾತ್ಯಕ್ಷಿಕ ಪರಿಶೀಲನೆ ನಡೆಸಿದ್ದರು. ಪರೀಕ್ಷಾರ್ಥವಾಗಿ ಸಂಚರಿಸುತ್ತಿದ್ದ ರೈಲು ಪ್ರತಿ ಗಂಟೆಗೆ 160 ಕಿಮೀ ವೇಗದಲ್ಲಿ ಚಲಿಸುತ್ತಿತ್ತು. ಆ ರೈಲು ಸಂಚರಿಸುತ್ತಿದ್ದ ಹಳಿ ಮೇಲೆಯೇ ಎದುರಿನಿಂದ ಮತ್ತೊಂದು ರೈಲಿನ ಇಂಜಿನ್ ಬರುತ್ತಿತ್ತು. ರೈಲಿನ ಇಂಜಿನ್ ಇನ್ನೂ ಸಾಕಷ್ಟು ದೂರ ಇರುವಾಗಲೇ ರೈಲ್ವೆ ಸಚಿವರು ಇದ್ದ ರೈಲಿನ ವೇಗ ಏಕಾಏಕಿ ಕಡಿಮೆಯಾಯಿತು. ಎದುರಿನಿಂದ ಬರುತ್ತಿದ್ದ ರೈಲ್ವೆ ಇಂಜಿನ್ 386 ಮೀಟರ್ ದೂರ ಇರುತ್ತಿದ್ದಂತೆಯೇ ರೈಲ್ವೆ ಸಚಿವರು ಇದ್ದ ರೈಲು ತನ್ನಿಂದ ತಾನೇ ನಿಲುಗಡೆಗೊಂಡಿತು.

    ನೈಋತ್ಯ ರೈಲ್ವೆ ವಲಯದ ವ್ಯಾಪ್ತಿಯಲ್ಲಿ ಮುಂಬರುವ ದಿನಗಳಲ್ಲಿ ಕವಚ ತಂತ್ರಜ್ಞಾನ ಅಳವಡಿಸಲು ರೈಲು ಮಾರ್ಗಗಳನ್ನು ಗುರುತಿಸಲಾಗಿದೆ. ಈ ತಂತ್ರಜ್ಞಾನ ರೈಲುಗಳ ಮಧ್ಯೆ ಸಂಭವಿಸುವ ಅಪಘಾತ ತಡೆಯಲು ಸಹಾಯಕವಾಗಿದೆ.

    | ಅನೀಶ ಹೆಗಡೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ, ನೈಋತ್ಯ ರೈಲ್ವೆ ವಲಯ

    ವಿಶೇಷತೆಯೇನು?

    • ರೈಲುಗಳು ಒಂದೇ ಮಾರ್ಗದಲ್ಲಿ ಮುಖಾಮುಖಿ ಯಾಗಿ ಅಥವಾ ಒಂದೇ ಹಳಿಯಲ್ಲಿ ನಿಂತಿದ್ದ ರೈಲಿಗೆ ಹಿಂದಿನಿಂದ ಬಂದು ಡಿಕ್ಕಿ ಹೊಡೆಯುವುದನ್ನು ನೂತನ ತಂತ್ರಜ್ಞಾನ ತಡೆಹಿಡಿಯಲಿದೆ.
    • ರೈಲ್ವೆ ಹಳಿ ಪಕ್ಕದಲ್ಲಿ ಅಳವಡಿಸಿರುವ ಮಾರ್ಗದ ಲ್ಲಿರುವ ರೇಡಿಯೋ ಪ್ರಿಕ್ವೆನ್ಸಿ ತಂತ್ರಜ್ಞಾನದಿಂದಾಗಿ ರೈಲು ತನ್ನಿಂದ ತಾನೇ ವೇಗ ಕಡಿಮೆಗೊಂಡು, ನಿಲ್ಲುತ್ತದೆ.
    • ಕೆಂಪು ಸಿಗ್ನಲ್ ಇದ್ದರೆ ಲೋಕೊ ಪೈಲಟ್ ರೈಲಿನ ವೇಗ ಕಡಿಮೆಗೊಳಿಸಬೇಕು. ಆದರೆ, ಲೋಕೊಪೈಲಟ್ ನಿರ್ಲಕ್ಷ್ಯದಿಂದ ವೇಗ ಕಡಿಮೆಗೊಳಿಸದಿದ್ದರೂ ಈ ತಂತ್ರಜ್ಞಾನದ ಸಹಾಯದಿಂದ ತನ್ನಿಂದ ತಾನೇ ವೇಗ ಕಡಿಮೆಯಾಗುತ್ತದೆ.
    • 5 ಕಿಮೀ ವ್ಯಾಪ್ತಿಯಲ್ಲಿ ರೈಲು ಸಂಚರಿಸುವ ಒಂದೇ ಮಾರ್ಗದಲ್ಲಿ ಮತ್ತೊಂದು ರೈಲು ಇದ್ದರೂ ತನ್ನಿಂದ ತಾನೇ ವೇಗ ಕಡಿಮೆಗೊಂಡು, ನಿಲುಗಡೆಗೊಳ್ಳುತ್ತದೆ.
    • ಪ್ರಸಕ್ತ ಸಾಲಿನ ಬಜೆಟ್​ನಲ್ಲಿ ದಕ್ಷಿಣ ಮಧ್ಯೆ ರೈಲ್ವೆ ವ್ಯಾಪ್ತಿಯ ಹಾಗೂ ದೆಹಲಿ-ಮುಂಬೈ ಮತ್ತು ದೆಹಲಿ-ಕೋಲ್ಕತ್ತಾ ಕಾರಿಡಾರ್​ನ ಸುಮಾರು 2 ಸಾವಿರ ಕಿಮೀ ಮಾರ್ಗದಲ್ಲಿ ಕವಚ ತಂತ್ರಜ್ಞಾನ ಅಳವಡಿಸಲು ಘೋಷಣೆ ಮಾಡಲಾಗಿತ್ತು.

    ಒಂದು ಭೀಕರ ಸ್ಫೋಟ, ವಾರ ಕಳೆಯುವಷ್ಟರಲ್ಲಿ 14 ಸಾವು; ಸೀಮಂತದ ಬೆನ್ನಿಗೇ ಭಾರಿ ಸೂತಕ…

    52ನೇ ವಯಸ್ಸಲ್ಲಿ ಅಮ್ಮನಿಗೆ ಲವ್ ಮ್ಯಾರೇಜ್​; ಸಂತಸಪಟ್ಟ ಮಗನ ದೇಶವಿದು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts