More

    ಮಂಗಳೂರು- ಕಾಸರಗೋಡು ಪ್ರಯಾಣ ದುಬಾರಿ

    ಮಂಗಳೂರು: ಕಾಸರಗೋಡು-ಮಂಗಳೂರು ನಡುವೆ ಉಭಯ ರಾಜ್ಯಗಳ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರು ಈಗ ಕೇರಳ ಮಾರ್ಗದಲ್ಲಿ ದುಬಾರಿ ಟಿಕೆಟ್ ದರ ಪಾವತಿಸಬೇಕಾಗಿದೆ.
    ವಿಳಂಬದ ಬಳಿಕ ಗಡಿ ಪ್ರದೇಶದ ಉಭಯ ರಾಜ್ಯಗಳ ನಡುವೆ ನೇರ ಪ್ರಯಾಣಕ್ಕೆ ಕೇರಳ ಅವಕಾಶವೇನೋ ನೀಡಿದೆ. ಆದರೆ ತನ್ನ ರಾಜ್ಯದ ಮಾರ್ಗದ ಬಸ್ ಪ್ರಯಣಕ್ಕೆ ಶೇ.20ರಷ್ಟು ಪ್ರಯಾಣ ದರ ಏರಿಸುವ ಮೂಲಕ ಕೋವಿಡ್ ಸಂಕಷ್ಟದ ಕಾಲದಲ್ಲಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ.

    ಮಂಗಳೂರು ಮತ್ತು ಕೇರಳ ಗಡಿ ಪ್ರದೇಶ ತಲಪಾಡಿ ನಡುವಿನ ಪ್ರಯಾಣ ಟಿಕೆಟ್ ದರದಲ್ಲಿ ವ್ಯತ್ಯಾಸ ಆಗಿಲ್ಲ. ಆದರೆ ತಲಪಾಡಿ ಮತ್ತು ಕಾಸರಗೋಡು ನಡುವಿನ ಪ್ರಯಾಣ ದರದಲ್ಲಿ 11 ರೂ. ಏರಿಕೆಯಾಗಿದೆ. ಈ ಮೊದಲು ಕಾಸರಗೋಡು -ಮಂಗಳೂರು ನಡುವಿನ ಪ್ರಯಾಣದ ಟಿಕೆಟ್ ದರ 57 ರೂ. ಇತ್ತು, ಅದನ್ನು ಈಗ ಏಕಾಏಕಿ 68ಕ್ಕೆ ಹೆಚ್ಚಿಸಲಾಗಿದೆ.

    ಟಿಕೆಟ್ ದರ ಏರಿಸಿರುವುದರ ಬಗ್ಗೆ ಕೇರಳ ಹಾಗೂ ಕರ್ನಾಟಕ ಸಾರಿಗೆ ಸಂಸ್ಥೆಗಳಿಗೆ ಸಹಯಾತ್ರಿ ಸಂಘಟನೆಯು ಟ್ವೀಟ್ ಮೂಲಕ ಆಕ್ಷೇಪ ಸಲ್ಲಿಸಿತ್ತು. ಈ ಬಗ್ಗೆ ಟ್ವಿಟರ್‌ನಲ್ಲೇ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಕರ್ನಾಟಕ ಕೆಎಸ್‌ಆರ್‌ಟಿಸಿ ಡಿವಿಜನಲ್ ಟ್ರಾಫಿಕ್ ಕಂಟ್ರೋಲರ್ (ಡಿಟಿಒ), ಕೇರಳ ಕೆಎಸ್‌ಆರ್‌ಟಿಸಿ ಪ್ರಯಾಣ ದರ ಏರಿಸಿದೆ. ಆದ್ದರಿಂದ ಕೇರಳ ಕೆಎಸ್‌ಆರ್‌ಟಿಸಿಯ ಜತೆಗಿನ ಒಪ್ಪಂದದ ಅನ್ವಯ ಕರ್ನಾಟಕ ಕೆಎಸ್‌ಆರ್‌ಟಿಸಿ ಕೂಡ ಟಿಕೆಟ್ ದರ ಹೆಚ್ಚಿಸಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಕೇರಳ ಕೆಎಸ್‌ಆರ್‌ಟಿಸಿ ಕ್ರಮವನ್ನು ಕಾಸರಗೋಡು ಜಿಲ್ಲಾ ಬಿಜೆಪಿ ಸಮಿತಿ ತೀವ್ರವಾಗಿ ವಿರೋಧಿಸಿದೆ.
    ‘ಕೇರಳ ಮಾದರಿಗೆ ಸ್ವಾಗತ! ಮಂಗಳೂರು- ಕಾಸರಗೋಡು ನಿತ್ಯ ಪ್ರಯಾಣಿಕರಿಗೆ ಕೇರಳ ಸರ್ಕಾರ ವಿಶೇಷ ಕೊಡುಗೆ ನೀಡಿದೆ. ಕೋವಿಡ್ ಸಂದರ್ಭದಲ್ಲಿ ಸರ್ಕಾರದ ಈ ನಡೆ ಅತ್ಯಂತ ದುಃಖಕರ ಮತ್ತು ನಾಚಿಕೆಕೇಡು’ ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ಕೆ.ಶ್ರೀಕಾಂತ್ ಆಡಳಿತ ಪಕ್ಷವನ್ನು ಲೇವಡಿ ಮಾಡಿದ್ದಾರೆ.

    ಭಾಗಶಃ ಬಸ್‌ಗಳು ಆರಂಭ
    ಮಂಗಳೂರು ಮತ್ತು ಕಾಸರಗೋಡು ನಡುವೆ ಸಂಚರಿಸುತ್ತಿದ್ದ ಉಭಯ ರಾಜ್ಯಗಳ ಶೇ.60 ಕೆಎಸ್‌ಆರ್‌ಟಿಸಿ ಬಸ್‌ಗಳು ಪ್ರಯಾಣ ಮರು ಆರಂಭಿಸಿವೆ. ಕರ್ನಾಟಕದ 28 ಬಸ್‌ಗಳು ಗುರುವಾರ ಪ್ರಯಾಣಿಸಿವೆ. ಹಿಂದಿನ ಪ್ರಯಾಣಿಕರ ದಟ್ಟಣೆಗೆ ಹೋಲಿಸಿದರೆ ಈಗ ಸ್ವಲ್ಪ ಕಡಿಮೆ ಇದೆ. ದಿನದಿಂದ ದಿನಕ್ಕೆ ಸುಧಾರಣೆ ಕಾಣಿಸುತ್ತಿದೆ ಎಂದು ಕರ್ನಾಟಕ ಕೆಎಸ್‌ಆರ್‌ಟಿಸಿ ಕಾಸರಗೋಡು ಟ್ರಾಫಿಕ್ ಕಂಟ್ರೋಲರ್ ಶಾಂತಾರಾಮ ಪ್ರತಿಕ್ರಿಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts